ನಾನ್‌ವೆಜ್‌ನಲ್ಲಿ ಏನಾದ್ರೂ ಸ್ಪೆಷಲ್ ತಿನ್ಬೇಕು ಅಂತಿದ್ರೆ ಚಿಕನ್ ಪಕೋಡ ಟ್ರೈ ಮಾಡಿ; ಸಖತ್ ಸಿಂಪಲ್, ಟೇಸ್ಟಿ ರೆಸಿಪಿಯಿದು
ನಾನ್‌ವೆಜ್ ಪ್ರಿಯರಿಗೆ ಚಿಕನ್ ಮೇಲೆ ವಿಶೇಷ ಪ್ರೀತಿ. ಕೋಳಿ ಮಾಂಸದಿಂದ ವೆರೈಟಿ ಖಾದ್ಯಗಳನ್ನು ತಿನ್ನಬೇಕು ಎನ್ನುವ ಬಯಕೆ ಹಲವರದ್ದು. ನಿಮ್ಮ ಮನೆಯಲ್ಲೂ ಚಿಕನ್ ಪ್ರಿಯರಿದ್ದರೆ ಅವರಿಗೆ ಈ ಸ್ಪೆಷಲ್ ಚಿಕನ್ ಪಕೋಡಾ ಮಾಡಿಕೊಡಿ. ಇದರ ರುಚಿಗೆ ನಿಮ್ಮ ಮನೆಮಂದಿಯೆಲ್ಲಾ ಫಿದಾ ಆಗೋದು ಪಕ್ಕಾ, ಇದನ್ನು ಮಾಡೋದು ಸುಲಭ.
ಚಿಕನ್‌ನಿಂದ ಎಷ್ಟೆಲ್ಲಾ ವೆರೈಟಿ ಖಾದ್ಯಗಳನ್ನು ಮಾಡಬಹುದು ಎಂಬುದು ಹಲವರಿಗೆ ತಿಳಿದಿಲ್ಲ. ಚಿಕನ್ ಕಬಾಬ್, ಚಿಕನ್ ಲಾಲಿಪಾಪ್ ಅಂದೆಲ್ಲಾ ನೀವು ತಿಂದಿರುತ್ತೀರಿ. ಆದರೆ ಚಿಕನ್‌ನಿಂದ ಸಖತ್ ಟೇಸ್ಟಿ ಆಗಿರೋ ಪಕೋಡ ಕೂಡ ಮಾಡಬಹುದು. ಈರುಳ್ಳಿ ಪಕೋಡ ತಿಂದವರಿಗೆ ಚಿಕನ್ ಪಕೋಡ ರುಚಿ ಅದ್ಭುತ ಎನ್ನಿಸೋದು ಸುಳ್ಳಲ್ಲ.
ನಿಮ್ಮ ಮನೆಯಲ್ಲಿ ಏನಾದ್ರೂ ವಿಶೇಷ ಕಾರ್ಯಕ್ರಮಗಳು ಇದ್ದಾಗ ನೀವು ಈ ಚಿಕನ್ ಪಕೋಡಾ ಮಾಡಲು ಟ್ರೈ ಮಾಡಬಹುದು. ಇದರಿಂದ ನಿಮ್ಮ ಮನೆಯ ಕಾರ್ಯಕ್ರಮಕ್ಕೆ ಬಂದವರೆಲ್ಲಾ ಖುಷಿಯಾಗೋದು ಖಂಡಿತ. ಸಖತ್ ಟೇಸ್ಟಿಯಾಗಿ, ಗರಿಗರಿಯಾಗಿರುವ ಈ ಪಕೋಡ ಮಾಡುವುದು ಕೂಡ ಸುಲಭ. ಕೇವಲ 6 ಹಂತ ಪಾಲಿಸಿದ್ರೆ ಸ್ಪೆಷಲ್ ಚಿಕನ್ ಪಕೋಡ ನಿಮ್ಮ ಮುಂದೆ ರೆಡಿ ಇರುತ್ತೆ. ಇದಕ್ಕೆ ಏನೆಲ್ಲಾ ಬೇಕು, ಮಾಡೋದು ಹೇಗೆ ನೋಡಿ.
ಚಿಕನ್ ಪಕೋಡಕ್ಕೆ ಬೇಕಾಗುವ ಸಾಮಗ್ರಿಗಳು
ಚಿಕನ್ – ಅರ್ಧ ಕೆಜಿ (ಮೂಳೆ ರಹಿತ, ಚಿಕ್ಕದಾಗಿ ಕತ್ತರಿಸಿದ್ದು), ಮೊಸರು – 1 ಕಪ್, ಶುಂಠಿ–ಬೆಳ್ಳುಳ್ಳಿ ಪೇಸ್ಟ್ – 1 ಚಮಚ, ಅರಿಸಿನ – ಚಿಟಿಕೆ, ಖಾರದ ಪುಡಿ – 1 ಚಮಚ, ಗರಂ ಮಸಾಲ – ಅರ್ಧ ಚಮಚ, ಜೀರಿಗೆ ಪುಡಿ – 1 ಚಮಚ, ಕೊತ್ತಂಬರಿ ಪುಡಿ – 1 ಚಮಚ, ನಿಂಬೆರಸ – 1 ಚಮಚ, ಉಪ್ಪು – ರುಚಿಗೆ
ಮಸಾಲೆಗೆ: ಕಡಲೆಹಿಟ್ಟು – 1ಕಪ್, ಅಕ್ಕಿಹಿಟ್ಟು – 2 ಚಮಚ, ಅಜ್ವಾನ – 1 ಚಮಚ, ಜೀರಿಗೆ – 1 ಚಮಚ, ಖಾರದಪುಡಿ – 1 ಚಮಚ, ಅರಿಸಿನ – ಅರ್ಧ ಚಮಚ, ಉಪ್ಪು – ರುಚಿಗೆ, ನೀರು ಹದಕ್ಕೆ ತಕ್ಕಷ್ಟು
ಕರಿಯಲು ಎಣ್ಣೆ
ತಯಾರಿಸುವ ವಿಧಾನ: ದೊಡ್ಡ ಅಗಲವಾದ ಬೌಲ್‌ವೊಂದರಲ್ಲಿ ಮೊಸರು, ಶುಂಠಿ–ಬೆಳ್ಳುಳ್ಳಿ ಪೇಸ್ಟ್, ಅರಿಸಿನ ಪುಡಿ, ಖಾರದ ಪುಡಿ, ಗರಂ ಮಸಾಲ, ಜೀರಿಗೆ ಪುಡಿ, ಕೊತ್ತಂಬರಿ ಪುಡಿ, ನಿಂಬೆ ರಸ ಮತ್ತು ಉಪ್ಪು ಸೇರಿಸಿ ಎಲ್ಲವನ್ನೂ ಮಿಶ್ರಣ ಮಾಡಿ. ಈ ಮಿಶ್ರಣಕ್ಕೆ ಚಿಕನ್ ತುಂಡುಗಳನ್ನು ಹಾಕಿ. ಇದನ್ನು ಕನಿಷ್ಠ 1 ಗಂಟೆಗಳ ಕಾಲ ಫ್ರಿಜ್‌ನಲ್ಲಿಡಿ. ಸಾಧ್ಯವಾದರೆ ರಾತ್ರಿಯಿಡಿ ನೆನೆಸಿಡಿ. ಇನ್ನೊಂದು ಬೌಲ್‌ನಲ್ಲಿ ಕಡಲೆಹಿಟ್ಟು, ಅಕ್ಕಿಹಿಟ್ಟು, ಅಜ್ವಾನ, ಜೀರಿಗೆ, ಅರಿಸಿನ, ಖಾರದಪುಡಿ ಮತ್ತು ಉಪ್ಪು ಸೇರಿಸಿ. ಇದಕ್ಕೆ ಸ್ವಲ್ಪ ನೀರು ಸೇರಿಸಿ ದಪ್ಪ ಹಿಟ್ಟಿನ ಹದಕ್ಕೆ ಕಲೆಸಿಕೊಳ್ಳಿ. ಈ ಹಿಟ್ಟು ಮ್ಯಾರಿನೇಟ್ ಮಾಡಿರುವ ಚಿಕನ್ ತುಂಡುಗಳಿಗೆ ಚೆನ್ನಾಗಿ ಹಿಡಿಯವಂತಿರಬೇಕು. ಈಗ ಫ್ರಿಜ್‌ನಲ್ಲಿರುವ ಚಿಕನ್ ತುಂಡುಗಳನ್ನು ಹಿಟ್ಟಿನಲ್ಲಿ ಹಾಕಿ ಕಲೆಸಿ. ಎಲ್ಲ ತುಂಡುಗಳಿಗೂ ಮಸಾಲೆ ಚೆನ್ನಾಗಿ ಹಿಡಿದಿರಬೇಕು. ಬಾಣಲಿಯಲ್ಲಿ ಎಣ್ಣೆ ಬಿಸಿ ಮಾಡಿ, ಚಿಕನ್ ತುಂಡುಗಳನ್ನು ಎಣ್ಣೆಗೆ ಬಿಡಿ. ಅತಿಯಾಗಿ ತುಂಬಿಸಬೇಡಿ. ನಿಮ್ಮ ಪಾತ್ರೆಯ ಹದಕ್ಕೆ ತಕ್ಕಂತೆ ಚಿಕನ್ ತುಂಡುಗಳನ್ನು ಹಾಕಿ. ಚೆನ್ನಾಗಿ ಬೆಂದ ಮೇಲೆ ಎಣ್ಣೆಯಿಂದ ಹೊರ ತೆಗೆದು ಟಿಶ್ಯೂ ಪೇಪರ್ ಮೇಲೆ ಹರಡಿ. ಇದನ್ನು ಗ್ರೀನ್ ಚಟ್ನಿ ಜೊತೆ ನೆಂಜಿಕೊಳ್ಳಲು ಕೊಡಿ. ಈ ರೆಸಿಪಿ ಸಖತ್ ಟೇಸ್ಟಿ ಆಗಿರುತ್ತೆ, ಚಿಕನ್ ಪ್ರಿಯರಿಗಂತೂ ಇದು ಮತ್ತೆ ಮತ್ತೆ ತಿನ್ನಬೇಕು ಅನ್ನಿಸುವುದು ಖಂಡಿತ.