ಬಾಯಲ್ಲಿ ನೀರೂರಿಸುವ ಪ್ರಾನ್ಸ್ ಫ್ರೈಡ್ ರೈಸ್; ಸಿಗಡಿ ಇಷ್ಟ ಇಲ್ಲ ಅನ್ನೋರಿಗೂ ಇಷ್ಟವಾಗುವ ರೆಸಿಪಿ, ಒಮ್ಮೆ ಮನೆಯಲ್ಲಿ ಮಾಡಿ ತಿನ್ನಿ
ಹಲವರಿಗೆ ಮೀನಿಗಿಂತ ಸಿಗಡಿ ಇಷ್ಟವಾಗುತ್ತೆ, ಸಿಗಡಿ ಖಾದ್ಯಗಳನ್ನು ಬಾಯಿ ಚಪ್ಪರಿಸಿಕೊಂಡು ತಿನ್ನುತ್ತಾರೆ. ನೀವು ಸಿಗಡಿ ಪ್ರೇಮಿಯಾಗಿದ್ರೆ ಪ್ರಾನ್ಸ್ ಫ್ರೈಡ್ ರೈಸ್ ಒಮ್ಮೆ ಮನೆಯಲ್ಲಿ ಟ್ರೈ ಮಾಡಿ. ಸುಲಭವಾಗಿ ತಯಾರಿಸಬಹುದಾದ ಈ ರೆಸಿಪಿ ರುಚಿಗೆ ನೀವು ಕಳೆದುಹೋಗ್ತೀರಾ. ಮಕ್ಕಳಿಂದ ದೊಡ್ಡವರವರೆಗೂ ಇಷ್ಟವಾಗುವ ಈ ರೆಸಿಪಿ ಸ್ಪೆಷಲ್ ಅನ್ನಿಸದೇ ಇರಲು ಸಾಧ್ಯವಿಲ್ಲ.
ಇದು ಸಿಗಡಿ ಸೀಸನ್, ಅಗ್ಗದ ದರದಲ್ಲಿ ಸಿಗಡಿ ಸಿಗುವ ಕಾಲ. ಹಲವರಿಗೆ ಮೀನಿಗಿಂತ ಸಿಗಡಿ ಇಷ್ಟ, ಇದರ ರುಚಿಗೆ ಫಿದಾ ಆಗದವರಿಲ್ಲ. ಇದು ಆರೋಗ್ಯಕ್ಕೂ ಉತ್ತಮ. ಇದನ್ನ ತಿಂದ್ರೆ ತೂಕ ಹೆಚ್ಚುತ್ತೆ ಎನ್ನುವ ಭಯವೂ ಇರುವುದಿಲ್ಲ. ಸಿಗಡಿ ಸಾರು, ಸಿಗಡಿ ಫ್ರೈ, ಸಿಗಡಿ ಘೀ ರೋಸ್ಟ್ ತಿಂದು ಬೇಸರ ಆಗಿದ್ರೆ ನೀವು ಒಮ್ಮೆ ಫ್ರೈಡ್ ರೈಸ್ ಟ್ರೈ ಮಾಡಬಹುದು.
ಸಿಗಡಿ ಫ್ರೈಡ್ ರೈಸ್ ತಯಾರಿಸೋದು ಸುಲಭ. ಮಕ್ಕಳಿಗೂ ಇಷ್ಟವಾಗುವ ರೆಸಿಪಿ ಇದು. ಲಂಚ್ ಬಾಕ್ಸ್‌ಗೂ ಇದನ್ನು ಮಾಡಿ ಕೊಡಬಹುದು. ಸಿಗಡಿ ಫ್ರೈಡ್ ರೈಸ್ ಮಾಡೋದು ಹೇಗೆ, ಇದನ್ನು ತಯಾರಿಸಲು ಏನೆಲ್ಲಾ ಸಾಮಗ್ರಿಗಳು ಬೇಕು ಎಂಬ ವಿವರ ಇಲ್ಲಿದೆ.
ಪ್ರಾನ್ಸ್ ಫ್ರೈಡ್ ರೈಸ್‌ಗೆ ಬೇಕಾಗುವ ಪದಾರ್ಥಗಳು
ಸಿಗಡಿ - ಅರ್ಧ ಕೆಜಿ, ಬಾಸ್ಮತಿ ಅಕ್ಕಿ - ಅರ್ಧ ಕೆಜಿ, ಅರಿಸಿನ - ಅರ್ಧ ಚಮಚ, ಶುಂಠಿ ಬೆಳ್ಳುಳ್ಳಿ ಪೇಸ್ಟ್ - ಒಂದು ಚಮಚ, ಚಿಲ್ಲಿ ಪೇಸ್ಟ್ - ಒಂದು ಚಮಚ, ಕಾಳುಮೆಣಸಿನ ಪುಡಿ - ಅರ್ಧ ಚಮಚ, ಉಪ್ಪು - ರುಚಿಗೆ, ಕೊತ್ತಂಬರಿ ಪುಡಿ - ಮೂರು ಚಮಚ, ಕರಿಬೇವು - ಒಂದು ಮುಷ್ಟಿ, ಸೋಯಾ ಸಾಸ್ - ಒಂದು ಚಮಚ, ಎಣ್ಣೆ - ಸಾಕಷ್ಟು, ಮೊಟ್ಟೆ - ಎರಡು, ಈರುಳ್ಳಿ - ಎರಡು, ಕ್ಯಾರೆಟ್ ತುರಿ - ಅರ್ಧ ಕಪ್, ಬೀನ್ಸ್ - ಅರ್ಧ ಕಪ್ (ಚಿಕ್ಕದಾಗಿ ಹೆಚ್ಚಿಕೊಂಡು)
ಪ್ರಾನ್ಸ್ ಫ್ರೈಡ್ ರೈಸ್ ಮಾಡುವ ವಿಧಾನ
ಕ್ಯಾರೆಟ್ ತುರಿದುಕೊಳ್ಳಿ ಮತ್ತು ಬೀನ್ಸ್ ಅನ್ನು ಚಿಕ್ಕದಾಗಿ ಹೆಚ್ಚಿಕೊಂಡು ಪಕ್ಕಕ್ಕೆ ಇರಿಸಿಕೊಳ್ಳಿ. ಅವುಗಳನ್ನು ಒಂದು ಪಾತ್ರೆಯಲ್ಲಿ ಹಾಕಿ ಮತ್ತು ನೀರು ಸೇರಿಸಿ ಮತ್ತು 10 ನಿಮಿಷ ಬೇಯಿಸಿ.ನೀರನ್ನು ಸೋಸಿ ಪಕ್ಕಕ್ಕೆ ಇರಿಸಿ. ಈಗ ಒಂದು ಬೌಲ್‌ನಲ್ಲಿ ಮೊಟ್ಟೆಗಳನ್ನು ಒಡೆದು, ಉಪ್ಪು ಮತ್ತು ಕಾಳುಮೆಣಸಿನ ಪುಡಿಯನ್ನು ಸೇರಿಸಿ ಮತ್ತು ಚೆನ್ನಾಗಿ ವಿಸ್ಕ್ ಮಾಡಿ ಮತ್ತು ಆಮ್ಲೆಟ್ ಮಾಡಿ. ಆಮ್ಲೆಟ್ ಅನ್ನು ಚಿಕ್ಕ ಚಿಕ್ಕ ತುಂಡುಗಳಾಗಿ ಕತ್ತರಿಸಿ ಪಕ್ಕಕ್ಕೆ ಇರಿಸಿ. ಈಗ ಸೀಗಡಿಗಳನ್ನು ಒಂದು ಬೌಲ್‌ಗೆ ಹಾಕಿ ಸ್ವಲ್ಪ ಉಪ್ಪು ಮತ್ತು ಕಾಳುಮೆಣಸಿನ ಪುಡಿಯನ್ನು ಹಾಕಿ ನೀರು ಸೇರಿಸಿ. ಸ್ವಲ್ಪ ಸಮಯದವರೆಗೆ ಅವುಗಳನ್ನು ಬೇಯಿಸಿ. ಸೀಗಡಿಗಳು ಶೇ 90 ರಷ್ಟು ಬೆಂದಿರಬೇಕು. ಉದುರುದುರಾಗಿ ಅನ್ನ ಮಾಡಿಟ್ಟುಕೊಳ್ಳಿ.
ಬಾಣಲೆಯನ್ನು ಒಲೆಯ ಮೇಲಿಟ್ಟು ಎಣ್ಣೆ ಹಾಕಿ. ಎಣ್ಣೆ ಬಿಸಿಯಾದ ಮೇಲೆ ಉದ್ದಕ್ಕೆ ಕತ್ತರಿಸಿಟ್ಟುಕೊಂಡ ಈರುಳ್ಳಿ ಸೇರಿಸಿ. ಬಣ್ಣ ಬದಲಾಗುವವರೆಗೂ ಹುರಿದುಕೊಂಡು ಶುಂಠಿ–ಬೆಳ್ಳುಳ್ಳಿ ಪೇಸ್ಟ್ ತಯಾರಿಸಿ. ಮೊದಲೇ ಬೇಯಿಸಿಟ್ಟುಕೊಂಡ ಸಿಗಡಿಗಳನ್ನು ಈ ಮಿಶ್ರಣಕ್ಕೆ ಸೇರಿಸಿ. ಜೊತೆಗೆ ಹಸಿರು ಮೆಣಸಿನಕಾಯಿ ಪೇಸ್ಟ್ ಸೇರಿಸಿ. ಉಪ್ಪು, ಮೆಣಸು ಪುಡಿ ಮತ್ತು ಸೋಯಾ ಸಾಸ್ ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿ.ಮೊದಲೇ ಬೇಯಿಸಿದ ಕ್ಯಾರೆಟ್ ಮತ್ತು ಬೀನ್ಸ್ ತುಂಡುಗಳನ್ನು ಸೇರಿಸಿ ಎಲ್ಲವನ್ನೂ ಮಿಶ್ರಣ ಮಾಡಿ. ನಂತರ ಬೇಯಿಸಿಟ್ಟುಕೊಂಡ ಅನ್ನ ಸೇರಿಸಿ. ಜೊತೆಗೆ ಮೊದಲೇ ಮಾಡಿಟ್ಟುಕೊಂಡ ಆಮ್ಲೆಟ್ ತುಂಡು ಸೇರಿಸಿ. ಮೇಲೆ ಕೊತ್ತಂಬರಿ ಸೊಪ್ಪು ಉದುರಿಸಿ. ಈಗ ನಿಮ್ಮ ಮುಂದೆ ರುಚಿಯಾದ ಸಿಗಡಿ ಫ್ರೈಡ್ ರೈಸ್ ತಿನ್ನಲು ಸಿದ್ಧ.