Onion Chutney: ಈರುಳ್ಳಿ ಚಟ್ನಿ ಈ ರೀತಿ ಮಾಡಿದ್ರೆ ಇಡ್ಲಿ-ದೋಸೆ, ಅನ್ನ ಎಲ್ಲಕ್ಕೂ ಹೊಂದುತ್ತೆ; ಮಕ್ಕಳೂ ಇಷ್ಟಪಟ್ಟು ತಿಂತಾರೆ
ಕನ್ನಡ ಸುದ್ದಿ  /  ಜೀವನಶೈಲಿ  /  Onion Chutney: ಈರುಳ್ಳಿ ಚಟ್ನಿ ಈ ರೀತಿ ಮಾಡಿದ್ರೆ ಇಡ್ಲಿ-ದೋಸೆ, ಅನ್ನ ಎಲ್ಲಕ್ಕೂ ಹೊಂದುತ್ತೆ; ಮಕ್ಕಳೂ ಇಷ್ಟಪಟ್ಟು ತಿಂತಾರೆ

Onion Chutney: ಈರುಳ್ಳಿ ಚಟ್ನಿ ಈ ರೀತಿ ಮಾಡಿದ್ರೆ ಇಡ್ಲಿ-ದೋಸೆ, ಅನ್ನ ಎಲ್ಲಕ್ಕೂ ಹೊಂದುತ್ತೆ; ಮಕ್ಕಳೂ ಇಷ್ಟಪಟ್ಟು ತಿಂತಾರೆ

ಈರುಳ್ಳಿಯಿಂದ ತಯಾರಿಸುವ ಉತ್ಪನ್ನಗಳು ಬಾಯಲ್ಲಿ ನೀರೂರಿಸುವುದು ಸುಳ್ಳಲ್ಲ. ಮಾವಿನಕಾಯಿ, ಟೊಮೆಟೊ, ಬದನೆಕಾಯಿ ಚಟ್ನಿಯಂತೆ ಈರುಳ್ಳಿ ಚಟ್ನಿಯನ್ನು ಈ ವಿಧಾನದಲ್ಲಿ ಮಾಡಿದ್ರೆ ದೋಸೆ, ಇಡ್ಲಿ, ಅನ್ನ ಎಲ್ಲದ್ದಕ್ಕೂ ಹೊಂದುತ್ತೆ, ಮಾತ್ರವಲ್ಲ ಮಕ್ಕಳು ಸೇರಿದಂತೆ ದೊಡ್ಡವರು ಕೂಡ ಇದನ್ನು ಇಷ್ಟಪಟ್ಟು ತಿಂತಾರೆ.

ಇಡ್ಲಿ, ದೋಸೆ, ಅನ್ನಕ್ಕೆ ಹೊಂದುವ ಈರುಳ್ಳಿ ಚಟ್ನಿ ರೆಸಿಪಿ
ಇಡ್ಲಿ, ದೋಸೆ, ಅನ್ನಕ್ಕೆ ಹೊಂದುವ ಈರುಳ್ಳಿ ಚಟ್ನಿ ರೆಸಿಪಿ

ಈರುಳ್ಳಿ ನಮ್ಮ ಆರೋಗ್ಯಕ್ಕೆ ತುಂಬಾ ಉತ್ತಮ. ಇದು ಜೀರ್ಣಕ್ರಿಯೆಯನ್ನು ವೃದ್ಧಿಸುವ ಜೊತೆಗೆ ಹಲವು ಸಮಸ್ಯೆಗಳನ್ನು ನಿವಾರಿಸುತ್ತದೆ. ಇದರಲ್ಲಿ ಅಗತ್ಯ ಪೋಷಕಾಂಶಗಳು ಇರುವ ಕಾರಣಕ್ಕೆ ಈರುಳ್ಳಿಯನ್ನು ಪ್ರತಿನಿತ್ಯ ಸೇವಿಸಬೇಕು ಎಂದು ಪೌಷ್ಟಿಕತಜ್ಞರು ಸಲಹೆ ನೀಡುತ್ತಾರೆ. ನಿಮಗೆ ಈರುಳ್ಳಿಯನ್ನು ನೇರವಾಗಿ ತಿನ್ನುವುದು ಇಷ್ಟವಿಲ್ಲ ಎಂದರೆ ಇದರಿಂದ ವಿವಿಧ ಬಗೆಯ ಖಾದ್ಯಗಳನ್ನು ತಯಾರಿಸಿ ತಿನ್ನಬಹುದು. ಅದರಲ್ಲಿ ಈರುಳ್ಳಿ ಚಟ್ನಿ ಕೂಡ ಒಂದು. ಕೆಲವು ಭಾಗದಲ್ಲಿ ಇದಕ್ಕೆ ಪಚಡಿ ಎಂದೂ ಕರೆಯುತ್ತಾರೆ. ಇದನ್ನು ಒಮ್ಮೆ ಮಾಡಿಟ್ಟುಕೊಂಡರೆ ಎರಡು ತಿಂಗಳವರೆಗೆ ಬಳಸಬಹುದು.

ಈರುಳ್ಳಿ ಚಟ್ನಿಯನ್ನು ಇಡ್ಲಿ, ದೋಸೆ, ಅನ್ನ ಹೀಗೆ ಎಲ್ಲದರೊಂದಿಗೆ ನೆಂಜಿಕೊಂಡು ತಿನ್ನಬಹುದು. ಬಿಸಿ ಬಿಸಿ ಅನ್ನದೊಂದಿಗೆ ಈರುಳ್ಳಿ ಚಟ್ನಿ ನೆಂಜಿಕೊಂಡು ತಿನ್ನುವ ರುಚಿಯೇ ಬೇರೆ. ಹಾಗಾದರೆ ಈರುಳ್ಳಿ ಚಟ್ನಿ ತಯಾರಿಸುವುದು ಹೇಗೆ, ಇದಕ್ಕೆ ಏನೇನು ಸಾಮಗ್ರಿಗಳು ಬೇಕು ಎಂಬುದನ್ನು ನೋಡಿ.

ಈರುಳ್ಳಿ ಚಟ್ನಿ ಮಾಡುವ ವಿಧಾನ

ಬೇಕಾಗುವ ಸಾಮಗ್ರಿಗಳು: ಈರುಳ್ಳಿ - ಅರ್ಧ ಕೆಜಿ, ಹುಣಸೆಹಣ್ಣು - ಸುಮಾರು ನಿಂಬೆಹಣ್ಣಿನ ಗಾತ್ರದ್ದು, ಜೀರಿಗೆ - 1 ಚಮಚ, ಸಾಸಿವೆ - 1 ಚಮಚ, ಮೆಂತ್ಯೆ - 1 ಚಮಚ, ಎಣ್ಣೆ - 1 ಕಪ್, ಕಾಳುಮೆಣಸು - ಐದು, ಬೆಳ್ಳುಳ್ಳಿ ಎಸಳು - 15, ಅರಿಶಿನ - ಒಂದು ಚಮಚ, ಖಾರದಪುಡಿ - 5 ಚಮಚ, ಉಪ್ಪು - ರುಚಿಗೆ, ಕೊತ್ತಂಬರಿ ಕಾಳು -1 ಚಮಚ

ಈರುಳ್ಳಿ ಪಚಡಿ ತಯಾರಿಸುವ ಬಗೆ 

 ಈರುಳ್ಳಿ ಪಚಡಿ ಮಾಡಲು ಮೊದಲು ಹುಣಸೆಹಣ್ಣನ್ನು ನೀರಿನಲ್ಲಿ ನೆನೆಸಿ, ದಪ್ಪ ಪೇಸ್ಟ್ ಮಾಡಿ ಪಕ್ಕಕ್ಕೆ ಇಡಿ. ಈಗ ಒಲೆಯ ಮೇಲೆ ಬಾಣಲೆ ಇಟ್ಟು ಸಾಸಿವೆ, ಮೆಂತ್ಯ, ಕೊತ್ತಂಬರಿ ಮತ್ತು ಜೀರಿಗೆಯನ್ನು ಹುರಿದುಕೊಳ್ಳಿ. ಅವುಗಳನ್ನು ಮಿಕ್ಸರ್‌ ಜಾರ್‌ನಲ್ಲಿ ನುಣ್ಣಗೆ ರುಬ್ಬಿಕೊಂಡು ಪಕ್ಕಕ್ಕೆ ಇರಿಸಿಕೊಳ್ಳಿ. ಈಗ ಅದೇ ಬಾಣಲೆಯಲ್ಲಿ ಒಂದು ಕಪ್ ಎಣ್ಣೆ ಹಾಕಿ ಸಾಸಿವೆ ಮತ್ತು ಜೀರಿಗೆಯನ್ನು ಹುರಿಯಿರಿ. ನಂತರ ಕರಿಮೆಣಸು ಸೇರಿಸಿ ಫ್ರೈ ಮಾಡಿ. ಸಿಪ್ಪೆ ಸುಲಿದ ಬೆಳ್ಳುಳ್ಳಿ ಎಸಳು ಸೇರಿಸಿ ಕೈಯಾಡಿಸಿ. ನಂತರ ಲಂಬವಾಗಿ ಕತ್ತರಿಸಿದ ಈರುಳ್ಳಿ ಚೂರುಗಳನ್ನು ಸೇರಿಸಿ ಮತ್ತು ಅವು ಮೃದುವಾಗುವವರೆಗೆ ಹುರಿದುಕೊಳ್ಳಿ. ಈರುಳ್ಳಿ ಮೃದುವಾದಾಗ ಉರಿ ಕಡಿಮೆ ಮಾಡಿ. ಈಗ ಅದಕ್ಕೆ ಉಪ್ಪು, ಖಾರದಪುಡಿ ಮತ್ತು ಅರಿಶಿನ ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿ. ನಂತರ ಪುಡಿ ಮಾಡಿಟ್ಟುಕೊಂಡು ಮಿಶ್ರಣ ಸೇರಿಸಿ. ನಂತರ ದಪ್ಪ ಹುಣಸೆ ಹಣ್ಣಿನ ರಸ ಸೇರಿಸಿ ಈ ಎಲ್ಲವನ್ನೂ ಚೆನ್ನಾಗಿ ಮಿಶ್ರಣ ಮಾಡಿ. ಕಡಿಮೆ ಉರಿಯಲ್ಲಿ ಇರಿಸಿ, ಎಣ್ಣೆ ಮೇಲೆ ತೇಲುವವರೆಗೆ ಇರಿಸಿ. ಎಣ್ಣೆ ಮೇಲಕ್ಕೆ ತೇಲಿದರೆ, ನಂತರ ಪೇಸ್ಟ್ ಸಿದ್ಧವಾಗಿದೆ ಎಂದರ್ಥ. ಇದನ್ನು ಗಾಳಿಯಾಡದ ಗಾಜಿನ ಬಾಟಲಿಯಲ್ಲಿ ಸಂಗ್ರಹಿಸಿ. ಹೊರಗೆ ಇಟ್ಟರೆ ಹತ್ತು ದಿನ ಫ್ರೆಶ್ ಆಗಿರುತ್ತದೆ. ಇದೇ ಈರುಳ್ಳಿ ಚಟ್ನಿ ತಿಂಗಳಿನಿಂದ ಎರಡು ತಿಂಗಳು ತಾಜಾವಾಗಿರಲು, ಅದನ್ನು ಫ್ರಿಜ್‌ನಲ್ಲಿ ಇಡಬೇಕು. ಇದನ್ನು ದೋಸೆ, ಇಡ್ಲಿ, ಅನ್ನದ ಜೊತೆ ತಿಂದರೆ ಇನ್ನಷ್ಟು ಸೇರುತ್ತದೆ. ಮಕ್ಕಳು ಕೂಡ ಬೇಡವೆನ್ನದೇ ಈ ದೋಸೆ, ಇಡ್ಲಿ ತಿಂತಾರೆ, ಬೇಕಿದ್ರೆ ಟ್ರೈ ಮಾಡಿ. ಈ ರೆಸಿಪಿಯನ್ನು ನೀವು ಮನೆಯಲ್ಲಿ ತಯಾರಿಸಿ ಡಬ್ಬಿಯಲ್ಲಿ ಹಾಕಿಟ್ಟರೆ ನಿಮಗೆ ಪದೇ ಪದೇ ಚಟ್ನಿ ಮಾಡುವ ಕೆಲಸವೂ ಉಳಿಯುತ್ತದೆ.

Whats_app_banner