ಕನ್ನಡ ಸುದ್ದಿ  /  Lifestyle  /  Food Orange Chutney Recipe How To Make Orange Chutney Recipe Of Making Orange Chutney Combination For Edli Dosa Rst

Orange Chutney: ಒಂದೇ ರೀತಿ ಚಟ್ನಿ ತಿಂದು ಬೋರಾಗಿದ್ರೆ ಆರೆಂಜ್‌ ಚಟ್ನಿ ಟ್ರೈ ಮಾಡಿ; ಇದರ ಟೇಸ್ಟಂತೂ ಸಿಕ್ಕಾಪಟ್ಟೆ ಸೂಪರ್‌

ಬೆಳಗಿನ ತಿಂಡಿಗೆ ದೋಸೆ, ಇಡ್ಲಿ ಮಾಡಿದಾಗ ಜೊತೆಗೆ ನೆಂಜಿಕೊಳ್ಳಲು ಏನು ಮಾಡೋದು ಅಂತ ಯೋಚ್ನೇ ಮಾಡೋರೆ ಜಾಸ್ತಿ. ಯಾವಾಗ್ಲೂ ಒಂದೇ ಥರ ಚಟ್ನಿ ತಿಂದೂ ನಾಲಿಗೆ ಬೇರೆ ರುಚಿ ಕೇಳ್ತಿದೆ ಅಂದ್ರೆ ನೀವು ಆರೆಂಜ್‌ ಚಟ್ನಿ ಟ್ರೈ ಮಾಡಬಹುದು. ಇದನ್ನು ಟೇಸ್ಟ್‌ ಅಂತೂ ಸಖತ್‌ ಡಿಫ್ರೆಂಟ್‌, ಆದ್ರೆ ಇದನ್ನು ಮಾಡೋದು ಬಲು ಸುಲಭ. ರೆಸಿಪಿ ಇಲ್ಲಿದೆ ಕಲಿಯಿರಿ.

ಒಂದೇ ರೀತಿ ಚಟ್ನಿ ತಿಂದು ಬೋರಾಗಿದ್ರೆ ಆರೆಂಜ್‌ ಚಟ್ನಿ ಟ್ರೈ ಮಾಡಿ; ಇದ್ರ ಟೇಸ್ಟಂತೂ ಸಿಕ್ಕಾಪಟ್ಟೆ ಸೂಪರ್‌
ಒಂದೇ ರೀತಿ ಚಟ್ನಿ ತಿಂದು ಬೋರಾಗಿದ್ರೆ ಆರೆಂಜ್‌ ಚಟ್ನಿ ಟ್ರೈ ಮಾಡಿ; ಇದ್ರ ಟೇಸ್ಟಂತೂ ಸಿಕ್ಕಾಪಟ್ಟೆ ಸೂಪರ್‌ (Istock )

ಭಾರತೀಯರು ತಮ್ಮ ಬೆಳಗಿನ ಉಪಾಹಾರಕ್ಕೆ ಸಾಮಾನ್ಯವಾಗಿ ಇಡ್ಲಿ, ದೋಸೆಯನ್ನು ಹೆಚ್ಚು ಆಯ್ಕೆ ಮಾಡಿಕೊಳ್ಳುತ್ತಾರೆ, ಅದಿಲ್ಲ ಅಂದ್ರೆ ರೈಸ್‌ ಬಾತ್‌ಗಳು. ಅದರಲ್ಲೂ ದಕ್ಷಿಣ ಭಾರತದಲ್ಲಿ ಈ ತಿನಿಸುಗಳು ನಮ್ಮ ದೈನಂದಿನ ಬದುಕಿನ ಭಾಗವಾಗಿದೆ. ಈ ದೋಸೆ, ಇಡ್ಲಿ ಮಾಡಿದಾಗ ಜೊತೆಗೆ ನೆಂಜಿಕೊಳ್ಳಲು ಏನು ಮಾಡೋದು ಎಂಬ ಚಿಂತೆ ಕಾಡೋದು ಸಹಜ. ಯಾವಾಗ್ಲೂ ಅದೇ ಕೊಬ್ಬರಿ ಚಟ್ನಿ, ಶೇಂಗಾ ಚಟ್ನಿ, ಟೊಮೆಟೊ ಚಟ್ನಿ ಅಂದ್ರೆ ಮಕ್ಕಳೂ ಸೇರಿ ಮನೆಯವರು ಬೇಸರ ಮಾಡಿಕೊಳ್ತಾರೆ. ಹಾಗಂತ ಸಾಂಬಾರ್‌ ಮಾಡೋಣ ಅಂದ್ರೆ ಹಲವರಿಗೆ ತಿಂಡಿ ಜೊತೆಗೆ ಸಾಂಬಾರ್‌ಗಿಂತ ಚಟ್ನಿಯೇ ಹೆಚ್ಚು ಇಷ್ಟವಾಗುತ್ತದೆ. ನೀವು ಏನಾದ್ರೂ ಡಿಫ್ರೆಂಟಾಗಿ ಚಟ್ನಿ ಟ್ರೈ ಮಾಡ್ಬೇಕು ಅಂದ್ಕೋತಾ ಇದ್ರೆ ನಿಮಗಾಗಿ ಇಲ್ಲಿದೆ ಒಂದು ಸ್ಪೆಷಲ್‌ ಚಟ್ನಿ ರೆಸಿಪಿ.

ಈಗಂತೂ ಬೇಸಿಗೆಕಾಲ ಆರಂಭವಾಗಿದೆ. ಬೇಸಿಗೆ ಆರಂಭವಾಗಿದೆ ಎಂದರೆ ಈ ಋತುಮಾನಕ್ಕೆ ಲಭ್ಯವಾಗುವ ಹಣ್ಣುಗಳು ಮಾರುಕಟ್ಟೆಯಲ್ಲಿ ಕಣ್ಣಿಗೆ ರಾರಾಜಿಸುತ್ತವೆ. ಅವುಗಳಲ್ಲಿ ಕಿತ್ತಳೆ ಹಣ್ಣು ಕೂಡ ಒಂದು. ಕಿತ್ತಳೆ ಹಣ್ಣು ಸೇವನೆಯಿಂದ ಆರೋಗ್ಯಕ್ಕೆ ಸಾಕಷ್ಟು ಪ್ರಯೋಜನಗಳಿವೆ. ನಾವು ಚಟ್ನಿ ಬಗ್ಗೆ ಮಾತಾಡಿದ್ರೆ ಇವರ್ಯಾಕೆ ಕಿತ್ತಳೆ ಹಣ್ಣಿನ ಬಗ್ಗೆ ಮಾತನಾಡ್ತಾರೆ ಅಂದ್ಕೋಬೇಡಿ, ನಾವು ಇವತ್ತು ಹೇಳ್ತಾ ಇರೋ ರೆಸಿಪಿ ಕಿತ್ತಳೆ ಹಣ್ಣಿನ ಚಟ್ನಿ. ಸಿಹಿ, ಹುಳಿ, ಒಗರು ರುಚಿಯ ಕಿತ್ತಳೆ ಹಣ್ಣಿನ ಚಟ್ನಿ ಟೇಸ್ಟ್‌ ಅಂತೂ ಸೂಪರ್‌ ಆಗಿರುತ್ತೆ. ಈ ಚಟ್ನಿ ಮಾಡಿದ್ರೆ ಮಕ್ಕಳೂ ಕೂಡ ಎರಡು ಇಡ್ಲಿ ಜಾಸ್ತಿ ತಿನ್ನೋದ್ರಲ್ಲಿ ಅನುಮಾನವಿಲ್ಲ. ಹಾಗಾದ್ರೆ ಕಿತ್ತಳೆ ಹಣ್ಣಿನ ಚಟ್ನಿ ಮಾಡೋದು ಹೇಗೆ ನೋಡೋಣ.

ಕಿತ್ತಳೆ ಹಣ್ಣಿನ ಚಟ್ನಿ

ಬೇಕಾಗುವ ಸಾಮಗ್ರಿಗಳು: ಕಿತ್ತಳೆ ಹಣ್ಣು - 4, ಎಣ್ಣೆ - 1 ಚಮಚ, ಸಾಸಿವೆ - 1 ಚಮಚ, ಜೀರಿಗೆ - 1 ಚಮಚ, ಅರಿಸಿನ ಪುಡಿ - ಚಿಟಿಕೆ, ಖಾರದಪುಡಿ - 1/2 ಚಮಚ, ಇಂಗು - ಚಿಟಿಕೆ, ಉಪ್ಪು - ರುಚಿಗೆ ತಕ್ಕಷ್ಟು, ಸಕ್ಕರೆ - ಅರ್ಧ ಕಪ್‌, ಒಣ ಮೆಣಸು - 2, ವಿನೆಗರ್‌ - 2 ಚಮಚ

ತಯಾರಿಸುವ ವಿಧಾನ: ಕಿತ್ತಳೆ ಹಣ್ಣನ್ನು ಸಿಪ್ಪೆ ತೆಗೆದು ಬೀಜಗಳನ್ನು ಬೇರ್ಪಡಿಸಿ ಚಿಕ್ಕದಾಗಿ ಹೆಚ್ಚಿಕೊಳ್ಳಿ. ಪ್ಯಾನ್‌ವೊಂದರಲ್ಲಿ ಎಣ್ಣೆ ಹಾಕಿ ಬಿಸಿಯಾದ ಮೇಲೆ ಸಾಸಿವೆ ಹಾಕಿ ಸಿಡಿಸಿ, ನಂತರ ಅದಕ್ಕೆ ಜೀರಿಗೆ ಹಾಕಿ. ಪರಿಮಳ ಬರುವವರೆಗೂ ಹುರಿದುಕೊಳ್ಳಿ. ಈಗ ಸ್ಟೌ ಉರಿ ಕಡಿಮೆ ಮಾಡಿ ಅರಿಸಿನ ಪುಡಿ, ಖಾರದಪುಡಿ, ಇಂಗು ಸೇರಿಸಿ ಈ ಎಲ್ಲವನ್ನೂ ಹುರಿದುಕೊಳ್ಳಿ. ನಂತರ ಕತ್ತರಿಸಿಟ್ಟುಕೊಂಡ ಕಿತ್ತಳೆ ಹಣ್ಣಿನ ತುಂಡುಗಳನ್ನು ಸೇರಿಸಿ ಎಲ್ಲವನ್ನೂ ಚೆನ್ನಾಗಿ ಮಿಶ್ರಣ ಮಾಡಿ. ಆರೆಂಜ್‌ ಬೇಯುವವರೆಗೆ ಅಂದರೆ 15 ರಿಂದ 20 ನಿಮಿಷಗಳ ಕಾಲ ಕೈಯಾಡಿಸಿ, ಈ ಮಿಶ್ರಣ ದಪ್ಪವಾಗಬೇಕು. ನಂತರ ಸಕ್ಕರೆ ಹಾಗೂ ಉಪ್ಪು ಸೇರಿಸಿ, ಸಕ್ಕರೆ ಕರಗುವವರೆಗೆ ಮತ್ತೆ ಕೈಯಾಡಿಸಿ. ನಂತರ ಅದಕ್ಕೆ ಹುರಿದುಕೊಂಡ ಒಣಮೆಣಸು ಸೇರಿಸಿ. ಪುನಃ 10 ನಿಮಿಷಗಳ ಕಾಲ ಕೈಯಾಡಿಸುತ್ತಿರಿ. ಚಟ್ನಿ ದಪ್ಪಗಾಗಿದೆ ಎನ್ನಿಸಿದಾಗ ಸ್ವಲ್ಪ ವಿನೇಗರ್‌ ಸೇರಿಸಿ, ತಿರುಗಿಸಿ. ಉಪ್ಪು ನೋಡಿಕೊಂಡು ಬೇಕಿದ್ದರೆ ರುಚಿಗೆ ತಕ್ಕಷ್ಟು ಉಪ್ಪು ಸೇರಿಸಿ. ನಂತರ ಸ್ಟೌ ಆಫ್‌ ಮಾಡಿ ಚಟ್ನಿ ತಣಿಯಲು ಬಿಡಿ.

ಈ ಆರೆಂಜ್‌ ಚಟ್ನಿ ಹೆಸರಿನಷ್ಟೇ ಟೇಸ್ಟ್‌ ಕೂಡ ಡಿಫ್ರೆಂಟ್‌ ಆಗಿರುತ್ತದೆ. ಹುಳಿ-ಸಿಹಿ ರುಚಿ ಸಾಮಾನ್ಯವಾಗಿ ಮಕ್ಕಳಿಗೆ ಇಷ್ಟವಾಗುವ ಕಾರಣ ಅವರು ಇದನ್ನು ಹೆಚ್ಚು ಖುಷಿಯಿಂದ ತಿನ್ನಬಹುದು.

ಕಿತ್ತಳೆ ಸೇವನೆಯ ಪ್ರಯೋಜನಗಳು

ಕಿತ್ತಳೆ ಹಣ್ಣಿನಲ್ಲಿ ವಿಟಮಿನ್‌ ಸಿ ಸಮೃದ್ಧವಾಗಿರುವುದರಿಂದ ಇದು ದೇಹದ ಆರೋಗ್ಯಕ್ಕೆ ಹಲವು ಪ್ರಯೋಜನಗಳನ್ನು ನೀಡಲಿದೆ. ದೇಹದ ಅಂಗಾಶಗಳಿಗೆ ಹಾನಿಯಾಗುವುದನ್ನು ತಡೆಯುವ ಕೆಲಸ ಮಾಡುತ್ತದೆ. ಚರ್ಮದಲ್ಲಿ ಕೊಲಾಜನ್‌ ಉತ್ಪತ್ತಿಗೆ ಸಹಾಯ ಮಾಡುವ ಮೂಲಕ ಚರ್ಮದ ಆರೋಗ್ಯವನ್ನು ಕಾಪಾಡುವುದು ಮಾತ್ರವಲ್ಲ, ಕಾಂತಿ ಹೆಚ್ಚಲು ಸಹಾಯ ಮಾಡುತ್ತದೆ. ಇದರಲ್ಲಿ ಕಬ್ಬಿಣಾಂಶ ಸಮೃದ್ಧವಾಗಿರುವ ಕಾರಣ ಅನಿಮಿಯಾದ ವಿರುದ್ಧ ಹೋರಾಡಲು ಕೂಡ ಸಹಾಯ ಮಾಡುತ್ತದೆ. ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುವ ಜೊತೆಗೆ ದೇಹವನ್ನು ಸೋಂಕುಗಳಿಂದ ರಕ್ಷಿಸುತ್ತದೆ. ಫ್ರಿ ರಾಡಿಕಲ್ಸ್‌ಗಳ ವಿರುದ್ಧ ಹೋರಾಡುವ ಮೂಲಕ ಕ್ಯಾನ್ಸರ್‌ ಎದುರಿಸಲು ಸಹಾಯ ಮಾಡುತ್ತದೆ.

ಕಿತ್ತಳೆ ಹಣ್ಣಿನಲ್ಲಿ ನಾರಿನಾಂಶ ಸಮೃದ್ಧವಾಗಿದ್ದು, ಇದು ಜೀರ್ಣಕ್ರಿಯೆಗೆ ಸಹಾಯ ಮಾಡುತ್ತದೆ. ಆ ಮೂಲಕ ತೂಕ ಇಳಿಕೆಗೂ ಇದು ಸಹಕಾರಿ. ಕ್ಯಾಲ್ಸಿಯಂ ಅಂಶವು ಇದರಲ್ಲಿ ಹೇರಳವಾಗಿ ಇರುವುದರಿಂದ ಮೂಳೆಗಳು, ಅಂಗಾಂಶಗಳು ಹಾಗೂ ಸ್ನಾಯುಗಳನ್ನು ಸದೃಢವಾಗಿಸಲು ಇದು ಸಹಾಯ ಮಾಡುತ್ತದೆ. ಕಿತ್ತಳೆ ಹಣ್ಣಿನಲ್ಲಿ ಫೋಲೇಟ್‌ ಅಂಶ ಸಮೃದ್ಧವಾಗಿದ್ದು, ಇದು ಗರ್ಭಿಣಿ ಮಹಿಳೆಯರು ಹಾಗೂ ಗರ್ಭದಲ್ಲಿರುವ ಮಗುವಿನ ಬೆಳವಣಿಗೆಯಲ್ಲೂ ಸಹಾಯ ಮಾಡುತ್ತದೆ. ಇದರಲ್ಲಿ ಸಿಟ್ರಸ್‌ ಅಂಶವು ಕಿಡ್ನಿ ಸ್ಟೋನ್‌ ತಡೆಯಲು ಸಹಕಾರಿ.

(This copy first appeared in Hindustan Times Kannada website. To read more like this please logon to kannada.hindustantimes.com)

ವಿಭಾಗ