Palak Idly: ನಾಲಗೆಗೂ ರುಚಿ, ಆರೋಗ್ಯಕ್ಕೂ ಹಿತ ಪಾಲಕ್‌ ಇಡ್ಲಿ; ತಯಾರಿಸುವ ವಿಧಾನ ಹೀಗಿದೆ
ಕನ್ನಡ ಸುದ್ದಿ  /  ಜೀವನಶೈಲಿ  /  Palak Idly: ನಾಲಗೆಗೂ ರುಚಿ, ಆರೋಗ್ಯಕ್ಕೂ ಹಿತ ಪಾಲಕ್‌ ಇಡ್ಲಿ; ತಯಾರಿಸುವ ವಿಧಾನ ಹೀಗಿದೆ

Palak Idly: ನಾಲಗೆಗೂ ರುಚಿ, ಆರೋಗ್ಯಕ್ಕೂ ಹಿತ ಪಾಲಕ್‌ ಇಡ್ಲಿ; ತಯಾರಿಸುವ ವಿಧಾನ ಹೀಗಿದೆ

ಅಧಿಕ ಫೈಬರ್‌, ಕಬ್ಬಿಣಾಂಶ, ಪೋಷಕಾಂಶಗಳು ಇರುವ ಪಾಲಕನ್ನು ನೀವು ಪಲ್ಯ ಮಾಡಿ ತಿನ್ನಲು ಇಷ್ಟವಿಲ್ಲದಿದ್ದರೆ ಅದನ್ನು ಇಡ್ಲಿ ರೂಪದಲ್ಲೂ ಸೇವಿಸಬಹುದು. ಪಾಲಕ್‌ ಇಡ್ಲಿ ತಯಾರಿಸುವ ವಿಧಾನ ಇಲ್ಲಿದೆ.

ಪಾಲಕ್‌ ಇಡ್ಲಿ ರೆಸಿಪಿ
ಪಾಲಕ್‌ ಇಡ್ಲಿ ರೆಸಿಪಿ

Palak Idly: ಹಸಿರು ಸೊಪ್ಪುಗಳು ದೇಹಕ್ಕೆ ಬಹಳ ಆರೋಗ್ಯಕರ. ಪ್ರತಿದಿನದ ಆಹಾರ ಪದ್ದತಿಯಲ್ಲಿ ಸೊಪ್ಪು ಸೇವಿಸಿದರೆ ದೇಹಕ್ಕೆ ಬೇಕಾದ ಅಗತ್ಯ ಪೋಷಕಾಂಶಗಳು ದೊರೆಯುತ್ತದೆ. ಇದರಿಂದ ರೋಗ ನಿರೋಧಕ ಶಕ್ತಿ ಹೆಚ್ಚುತ್ತದೆ. ಅನೇಕ ರೋಗಗಳನ್ನು ದೂರ ಇಡಬಹುದು.

ಹಾಗೇ ಪಾಲಕ್‌ನಲ್ಲಿ ಕೂಡಾ ಆರೋಗ್ಯಕ್ಕೆ ಬಹಳ ಒಳ್ಳೆಯದು. ಇದರಲ್ಲಿ ಹೇರಳವಾದ ಪ್ರೋಟೀನ್‌, ನಾರಿನಾಂಶ, ಫೈಬರ್‌ ಇದೆ. ಚರ್ಮಕ್ಕೆ ಕೂಡಾ ಇದು ಬಹಳ ಒಳ್ಳೆಯದು. ಪಾಲಕ್‌ ಸೇವಿಸಿದರೆ ಸೋರಿಯಾಸಿಸ್, ತುರಿಕೆಯಂಥ ಸಮಸ್ಯೆ ಕಡಿಮೆ ಆಗುತ್ತದೆ. ಮತ್ತು ಒಣಚರ್ಮವನ್ನು ತಡೆಯುತ್ತದೆ. ಕೂದಲ ಬೆಳವಣಿಗೆಗೆ ಬಹಳ ಒಳ್ಳೆಯದು. ಒಂದು ವೇಳೆ ನಿಮಗೆ ಪಾಲಕ್‌ ಸೊಪ್ಪನ್ನು ಪಲ್ಯ ತಯಾರಿಸಿ ತಿನ್ನಲು ಇಷ್ಟವಿಲ್ಲದಿದ್ದರೆ ಅದನ್ನು ಇಡ್ಲಿಯೊಂದಿಗೆ ಸೇರಿಸಿ ತಿನ್ನಬಹುದು. ಇದನ್ನು ಮಕ್ಕಳು ಕೂಡಾ ಬಹಳ ಇಷ್ಟಪಟ್ಟು ತಿನ್ನುತ್ತಾರೆ.

ಪಾಲಕ್‌ ಇಡ್ಲಿ ತಯಾರಿಸಲು ಬೇಕಾದ ಸಾಮಗ್ರಿಗಳು

  • ಪಾಲಕ್‌ ಸೊಪ್ಪು - 2 ಕಟ್ಟು
  • ಹೆಸರು ಬೇಳೆ- 1/2 ಕಪ್‌
  • ರವೆ - 2 ಟೇಬಲ್‌ ಸ್ಪೂನ್‌
  • ಹಸಿಮೆಣಸಿನಕಾಯಿ - 1
  • ಮೊಸರು - 1 ಟೇಬಲ್‌ ಸ್ಪೂನ್‌
  • ಉಪ್ಪು - ರುಚಿಗೆ ತಕ್ಕಷ್ಟು

ಪಾಲಕ್‌ ಇಡ್ಲಿ ತಯಾರಿಸುವ ವಿಧಾನ

1. ಪಾಲಕ್‌ ಸೊಪ್ಪನ್ನು ಬಿಡಿಸಿ 2-3 ಬಾರಿ ತೊಳೆದು ನೀರು ಸೋರಲು ಬಿಡಿ.

2. ಮೊದಲು ಹೆಸರುಬೇಳೆಯನ್ನು ತೊಳೆದು ಒಂದು ಗಂಟೆ ಕಾಲ ನೆನೆಸಬೇಕು.

3. ಸ್ಟೌವ್‌ ಮೇಲೆ ಪಾತ್ರೆಯಲ್ಲಿ ಎಣ್ಣೆ ಬಿಸಿ ಮಾಡಿಕೊಂಡು ಪಾಲಕ್‌ ಸೊಪ್ಪನ್ನು ಬಾಡಿಸಿಕೊಳ್ಳಿ.

4. ಬಾಡಿಸಿಕೊಂಡ ಪಾಲಕ್‌ ಸೊಪ್ಪು ತಣ್ಣಗಾದ ನಂತರ ನೆನೆಸಿದ ಹೆಸರು ಬೇಳೆ ಹಾಗೂ ಪಾಲಕ್‌ ಎರಡನ್ನೂ ಗ್ರೈಂಡ್‌ ಮಾಡಿಕೊಳ್ಳಿ.

5. ಈ ಮಿಶ್ರಣವನ್ನು ಒಂದು ಬೌಲ್‌ನಲ್ಲಿ ಸೇರಿಸಿ, ಅದರೊಂದಿಗೆ ರುಚಿಗೆ ತಕ್ಕಷ್ಟು ಉಪ್ಪು, ಮೊಸರು ಸೇರಿಸಿ ಮಿಕ್ಸ್‌ ಮಾಡಿ.

6. ನಂತರ ಇದಕ್ಕೆ ರವೆ ಸೇರಿಸಿ ಮಿಕ್ಸ್‌ ಮಾಡಿ, ಈ ಮಿಶ್ರಣ ಇಡ್ಲಿ ಹಿಟ್ಟಿನ ಹದದಲ್ಲಿ ಇರಬೇಕು.

7. ಇಡ್ಲಿ ಪಾತ್ರೆಗೆ ಎಣ್ಣೆ ಸವರಿ ಮುಕ್ಕಾಲು ಭಾಗ ಇಡ್ಲಿ ಬ್ಯಾಟರ್‌ ಸೇರಿಸಿ

8. ಸುಮಾರು 7-8 ನಿಮಿಷ ಹಬೆಯಲ್ಲಿ ಬೇಯಿಸಿದರೆ ಪಾಲಕ್‌ ಇಡ್ಲಿ ರೆಡಿ.

ಪಾಲಕ್‌ ಸೊಪ್ಪಿನ ಪ್ರಯೋಜನಗಳು

ಪಾಲಕ್‌ ತಿನ್ನುವುದರಿಂದ ನಮ್ಮ ದೇಹಕ್ಕೆ ಸಾಕಷ್ಟು ಅಗತ್ಯವಾದ ಪೋಷಕಾಂಶಗಳು ದೊರೆಯುತ್ತವೆ. ರಕ್ತಹೀನತೆಯಿಂದ ಬಳಲುವವರು ಸೊಪ್ಪನ್ನು ತಿಂದರೆ ಆ ಸಮಸ್ಯೆಯಿಂದ ಮುಕ್ತಿ ಪಡೆಯಬಹುದು. ಇದರಲ್ಲಿ ಕಬ್ಬಿಣಾಂಶ ಹೇರಳವಾಗಿದೆ. ಪಾಲಕ್ ಸೊಪ್ಪನ್ನು ತಿನ್ನುವುದರಿಂದ ರೋಗ ನಿರೋಧಕ ಶಕ್ತಿ ಹೆಚ್ಚುತ್ತದೆ. ಇದು ರಕ್ತವನ್ನು ಶುದ್ಧೀಕರಿಸುವ ಶಕ್ತಿ ಹೊಂದಿದೆ. ಪ್ರತಿದಿನ ಪಾಲಕ್‌ ತಿಂದರೆ ಮೆದುಳಿನ ಆರೋಗ್ಯಕ್ಕೂ ಇದು ಅವಶ್ಯಕ. ಉತ್ಕರ್ಷಣ ನಿರೋಧಕಗಳು ಮತ್ತು ಆಂಟಿ ಡಿಜೆನೆರೇಟಿವ್ ಗುಣಲಕ್ಷಣಗಳು ಹೆಚ್ಚಾಗಿದೆ. ಇದು ಮೆದುಳಿನಲ್ಲಿರುವ ನ್ಯೂರಾನ್‌ಗಳು ಕ್ಷೀಣಿಸುವುದನ್ನು ತಡೆಯುತ್ತದೆ.

ಅಲ್ಲದೆ ಪಾಲಕ್‌ ತಿನ್ನುವುದರಿಂದ ಮೆದುಳಿಗೆ ರಕ್ತ ಮತ್ತು ಆಮ್ಲಜನಕದ ಪೂರೈಕೆಯು ಸರಿಯಾಗಿ ನಡೆಯುತ್ತದೆ. ಇದರಲ್ಲಿ ಫೈಬರ್ ಮತ್ತು ವಿಟಮಿನ್‌ ಸಮೃದ್ಧವಾಗಿದೆ. ಪಾಲಕ್‌ ತಿನ್ನುವುದರಿಂದ ತೂಕ ಕಡಿಮೆಯಾಗುವ ಸಾಧ್ಯತೆ ಹೆಚ್ಚು. ಆದರೆ ಪಾಲಕ್‌ ಸೊಪ್ಪನ್ನು ಪ್ರತಿದಿನ ಮಿತವಾಗಿ ತಿನ್ನಬೇಕು. ಪಾಲಕ್‌, ಕೆಲವು ರೀತಿಯ ಕ್ಯಾನ್ಸರ್‌ನಿಂದ ನಮ್ಮನ್ನು ರಕ್ಷಿಸುತ್ತದೆ. ಅದರಲ್ಲೂ ಚರ್ಮದ ಕ್ಯಾನ್ಸರ್ ಬರದಂತೆ ತಡೆಯುತ್ತದೆ. ಅಧಿಕ ರಕ್ತದೊತ್ತಡ ಇರುವವರು ಪ್ರತಿದಿನ ಪಾಲಕ್‌ ಸೊಪ್ಪನ್ನು ಸೇವಿಸಿದರೆ ರಕ್ತದೊತ್ತಡವನ್ನು ನಿಯಂತ್ರಣದಲ್ಲಿಟ್ಟುಕೊಳ್ಳಬಹುದು. ಇದರಿಂದ ಕಣ್ಣಿನ ಆರೋಗ್ಯಕ್ಕೂ ಬಹಳ ಒಳ್ಳೆಯದು.

Whats_app_banner