Premix Sambar Powder: ಈ ರೀತಿ ಪುಡಿ ರೆಡಿ ಮಾಡಿಟ್ಟುಕೊಳ್ಳಿ; ಅರ್ಧಗಂಟೆಯಲ್ಲಿ ಸಾಂಬಾರ್ ತಯಾರಾಗುತ್ತೆ, ರುಚಿಯೂ ಸೂಪರ್
ಕನ್ನಡ ಸುದ್ದಿ  /  ಜೀವನಶೈಲಿ  /  Premix Sambar Powder: ಈ ರೀತಿ ಪುಡಿ ರೆಡಿ ಮಾಡಿಟ್ಟುಕೊಳ್ಳಿ; ಅರ್ಧಗಂಟೆಯಲ್ಲಿ ಸಾಂಬಾರ್ ತಯಾರಾಗುತ್ತೆ, ರುಚಿಯೂ ಸೂಪರ್

Premix Sambar Powder: ಈ ರೀತಿ ಪುಡಿ ರೆಡಿ ಮಾಡಿಟ್ಟುಕೊಳ್ಳಿ; ಅರ್ಧಗಂಟೆಯಲ್ಲಿ ಸಾಂಬಾರ್ ತಯಾರಾಗುತ್ತೆ, ರುಚಿಯೂ ಸೂಪರ್

ಇಂದಿನ ಬ್ಯುಸಿ ಜಮಾನದಲ್ಲಿ ಎಲ್ಲವೂ ಥಟ್ಟಂತ ರೆಡಿ ಆಗ್ಬೇಕು, ಇದು ನಮಗೆ ಅವಶ್ಯ ಕೂಡ. ಸಾಂಬಾರ್ ಕೂಡ ಅತ್ಯಂತ ಕಡಿಮೆ ಸಮಯದಲ್ಲಿ ತಯಾರಾಗಬೇಕು ಅಂದ್ರೆ ನೀವು ಪ್ರಿಮಿಕ್ಸ್ ಸಾಂಬಾರ್‌ ಪೌಡರ್ ರೆಡಿ ಮಾಡಿಟ್ಟುಕೊಳ್ಳಬೇಕು. ಇದರಿಂದ ಇಡ್ಲಿ, ದೋಸೆ, ಅನ್ನಕ್ಕೆ ಥಟ್ಟಂತ ಸಾಂಬಾರ್ ರೆಡಿ ಆಗುತ್ತೆ, ಇದರ ರುಚಿ ಕೂಡ ಸೂಪರ್‌ ಆಗಿರುತ್ತೆ. ಇದನ್ನು ಮಾಡೋದು ಹೇಗೆ ನೋಡಿ.

ಪ್ರಿಮಿಕ್ಸ್ ಸಾಂಬಾರ್ ಪೌಡರ್ (ಸಾಂಕೇತಿಕ ಚಿತ್ರ)
ಪ್ರಿಮಿಕ್ಸ್ ಸಾಂಬಾರ್ ಪೌಡರ್ (ಸಾಂಕೇತಿಕ ಚಿತ್ರ) (PC: HT File Photo )

ಮನೆಯಲ್ಲಿ ದೋಸೆ, ಇಡ್ಲಿಯಂತಹ ತಿಂಡಿ ಮಾಡಿದಾಗ ಸಾಂಬಾರ್ ಇಲ್ಲ ಅಂದ್ರೆ ತಿನ್ನೋಕೆ ಮನಸ್ಸು ಬರೋಲ್ಲ. ಯಾವಾಗ್ಲೂ ಚಟ್ನಿ ಮಾಡಿದ್ರೆ ಮನೆಯವರು ಗೊಣಗುತ್ತಾರೆ. ಹಾಗಂತ ಸಾಂಬಾರ್ ಮಾಡೋಕೆ ಕೂತ್ರೆ ತುಂಬಾ ಸಮಯ ಹಿಡಿಯುತ್ತೆ. ಅದಕ್ಕಾಗಿ ನೀವು ಯೋಚಿಸುವ ಅಗತ್ಯವಿಲ್ಲ. ಮನೆಯಲ್ಲೇ ಒಂದಿಷ್ಟು ಪ್ರೀಮಿಕ್ಸ್ ಸಾಂಬಾರ್ ಪುಡಿಯನ್ನು ರೆಡಿ ಮಾಡಿಟ್ಟುಕೊಳ್ಳಬಹುದು. ಇದರಿಂದ ಬಹಳ ಬೇಗ, ರುಚಿಯಾದ ಸಾಂಬಾರ್ ತಯಾರಿಸಬಹುದು. ಇದನ್ನು ಮಾಡೋದು ಹೇಗೆ, ಇದಕ್ಕೆ ಏನೆಲ್ಲಾ ಬೇಕು ಎನ್ನುವ ವಿವರ ಇಲ್ಲಿದೆ.

ಪ್ರಿಮಿಕ್ಸ್ ಸಾಂಬಾರ್‌ ಪುಡಿ

ಬೇಕಾಗುವ ಪದಾರ್ಥಗಳು: ಕಡಲೆಬೇಳೆ – 2 ಚಮಚ, ತೊಗರಿಬೇಳೆ – ಮುಕ್ಕಾಲು ಕಪ್‌, ಉದ್ದಿನಬೇಳೆ – 2 ಚಮಚ, ಅಕ್ಕಿ – 1 ಚಮಚ, ಕಾಶ್ಮೀರಿ ಒಣಮೆಣಸು – 4, ಕರಿಬೇವಿನ ಎಲೆ – 10, ಕೊತ್ತಂಬರಿ – 3 ಚಮಚ, ಸಾಸಿವೆ – ಅರ್ಧ ಚಮಚ, ಮೆಂತ್ಯ – ಅರ್ಧ ಚಮಚ, ಹುಣಸೆಹಣ್ಣು – ಅರ್ಧ ನಿಂಬೆ ಗಾತ್ರದ್ದು, ಅರಿಶಿನ – ಅರ್ಧ ಚಮಚ, ಉಪ್ಪು – ಅರ್ಧ ಚಮಚ, ಕಾಳುಮೆಣಸು, ಉಪ್ಪು

ಪ್ರಿಮಿಕ್ಸ್ ಸಾಂಬಾರ್ ಪುಡಿ ಮಾಡುವ ವಿಧಾನ

ಸ್ಟೌ ಮೇಲೆ ಬಾಣಲೆಯಿಟ್ಟು ಅದಕ್ಕೆ ಬೇಳೆ, ಅಕ್ಕಿಯನ್ನು ಹಾಕಿ ಹುರಿದುಕೊಳ್ಳಿ. ಅವುಗಳನ್ನು ಒಂದು ತಟ್ಟೆಗೆ ವರ್ಗಾಯಿಸಿ ಅದೇ ಬಾಣಲಿಯಲ್ಲಿ ಮೆಣಸು, ಕೊತ್ತಂಬರಿ, ಸಾಸಿವೆ, ಕಾಳುಮೆಣಸು, ಮೆಂತ್ಯ, ಹುಣಸೆಹಣ್ಣು, ಕರಿಬೇವು ಸೇರಿಸಿ ಎಲ್ಲವನ್ನೂ ಹುರಿದುಕೊಳ್ಳಿ. ಇದಕ್ಕೆ ಸ್ವಲ್ಪ ಉಪ್ಪು ಹಾಗೂ ಅರಿಶಿನ ಕೂಡ ಸೇರಿಸಿ, ಕೈಯಾಡಿಸಿ. ನಂತರ ಸ್ಟೌ ಆಫ್ ಮಾಡಿ ಈ ಸಾಮಗ್ರಿಗಳನ್ನು ಬೇರೆ ಪಾತ್ರೆಗೆ ವರ್ಗಾಯಿಸಿ. ಈ ಎಲ್ಲವೂ ತಣ್ಣಗಾದ ಮೇಲೆ ಮಿಕ್ಸಿಯಲ್ಲಿ ಹಾಕಿ ನುಣ್ಣಗೆ ಪುಡಿ ಮಾಡಿಕೊಳ್ಳಿ. ಈ ಬೆಳ್ಳುಳ್ಳಿ ಎಸಳು ಹಾಗೂ ಒಣಮೆಣಸು ಕೂಡ ಹುರಿದುಕೊಂಡು ಇದರ ಜತೆ ಮೊದಲೇ ಮಾಡಿಟ್ಟುಕೊಂಡ ಪುಡಿ ಸೇರಿಸಿ ಮತ್ತೆ ಪುಡಿ ಮಾಡಿಕೊಳ್ಳಿ. ಈಗ ನಿಮ್ಮ ಮುಂದೆ ರುಚಿಯಾದ ಪ್ರಿಮಿಕ್ಸ್ ಸಾಂಬಾರ್ ಪುಡಿ ತಿನ್ನಲು ಸಿದ್ಧ.

ಯಾವುದೇ ತರಕಾರಿ ಸಾಂಬಾರ್‌ ಮಾಡುವಾಗ ಈ ತರಕಾರಿಗಳನ್ನು ಬೇಯಿಸಿಕೊಂಡು ಈ ಪುಡಿ ಸೇರಿಸಿದ್ರೆ ಸಾಕು ಸಖತ್ ಟೇಸ್ಟಿ ಆಗಿರೋ ಸಾಂಬಾರ್ ರೆಡಿ ಆಗುತ್ತೆ. ಬ್ಯಾಚುಲರ್‌ಗಳು, ವರ್ಕಿಂಗ್ ವುಮೆನ್‌ಗಳು ಇದನ್ನು ಮಾಡಿಟ್ಟುಕೊಂಡರೆ ಉತ್ತಮ. ಇದನ್ನು ಹಲವು ದಿನಗಳವರೆಗೆ ಡಬ್ಬಿಯಲ್ಲಿಟ್ಟು ಬಳಸಬಹುದು. ಇದು ಬಹಳ ಸುಲಭವಾಗಿ ಸಾಂಬಾರ್‌ ರೆಸಿಪಿಗಳನ್ನು ತಯಾರಿಸಲು ಹೇಳಿ ಮಾಡಿಸಿದ್ದು. 

Whats_app_banner