ಒಂದೇ ಥರದ ಇಡ್ಲಿ ತಿಂದು ಬೇಸರ ಬಂದಿದ್ರೆ ಕುಂಬಳಕಾಯಿ ಇಡ್ಲಿ ಟ್ರೈ ಮಾಡಿ, ಡಿಫ್ರೆಂಟ್ ರುಚಿಯ ಈ ತಿಂಡಿ ಆರೋಗ್ಯಕ್ಕೂ ಬೆಸ್ಟ್
ಕನ್ನಡ ಸುದ್ದಿ  /  ಜೀವನಶೈಲಿ  /  ಒಂದೇ ಥರದ ಇಡ್ಲಿ ತಿಂದು ಬೇಸರ ಬಂದಿದ್ರೆ ಕುಂಬಳಕಾಯಿ ಇಡ್ಲಿ ಟ್ರೈ ಮಾಡಿ, ಡಿಫ್ರೆಂಟ್ ರುಚಿಯ ಈ ತಿಂಡಿ ಆರೋಗ್ಯಕ್ಕೂ ಬೆಸ್ಟ್

ಒಂದೇ ಥರದ ಇಡ್ಲಿ ತಿಂದು ಬೇಸರ ಬಂದಿದ್ರೆ ಕುಂಬಳಕಾಯಿ ಇಡ್ಲಿ ಟ್ರೈ ಮಾಡಿ, ಡಿಫ್ರೆಂಟ್ ರುಚಿಯ ಈ ತಿಂಡಿ ಆರೋಗ್ಯಕ್ಕೂ ಬೆಸ್ಟ್

ದಕ್ಷಿಣ ಭಾರತದಲ್ಲಿ ಬೆಳಗಿನ ಉಪಾಹಾರಕ್ಕೆ ಇಡ್ಲಿ ತಿನ್ನುವುದು ಸಾಮಾನ್ಯ. ಆದರೆ ಒಂದೇ ರುಚಿಯ ಇಡ್ಲಿ ತಿಂದು ನಿಮಗೆ ಬೇಸರ ಬಂದಿದ್ದರೆ ಕುಂಬಳಕಾಯಿ ಇಡ್ಲಿ ಒಮ್ಮೆ ಟ್ರೈ ಮಾಡಿ. ಇದು ಟೇಸ್ಟ್‌ನಷ್ಟೇ ಆರೋಗ್ಯಕ್ಕೂ ಬೆಸ್ಟ್ ಎನ್ನಿಸುವ ರೆಸಿಪಿ. ಇದನ್ನು ಮಾಡೋದು ಹೇಗೆ, ಏನೆಲ್ಲಾ ಸಾಮಗ್ರಿಗಳು ಬೇಕು ನೋಡಿ.

ಕುಂಬಳಕಾಯಿ ಇಡ್ಲಿ
ಕುಂಬಳಕಾಯಿ ಇಡ್ಲಿ

ಬಹುತೇಕ ಎಲ್ಲ ಕಾಲದಲ್ಲೂ ಲಭ್ಯವಿರುವ ಕುಂಬಳಕಾಯಿ ಸೇವನೆಯಿಂದ ಆರೋಗ್ಯಕ್ಕೆ ನೂರಾರು ಪ್ರಯೋಜನಗಳಿವೆ. ಇದು ಪೋಷಕಾಂಶಗಳಿಂದ ಸಮೃದ್ಧವಾಗಿದೆ. ಸಾಮಾನ್ಯವಾಗಿ ಕುಂಬಳಕಾಯಿಯಿಂದ ಸಾಂಬಾರ್ ಹಾಗೂ ಹಲ್ವಾ ಮಾಡುವುದನ್ನ ನೀವು ನೋಡಿರಬಹುದು ಹಾಗೂ ತಿಂದಿರಬಹುದು. ಆದರೆ ಕುಂಬಳಕಾಯಿಯಿಂದ ಇಡ್ಲಿಯನ್ನೂ ಮಾಡಬಹುದು ಎಂಬುದು ನಿಮಗೆ ತಿಳಿದಿರಲಿಕ್ಕಿಲ್ಲ. ಬೆಳಗಿನ ಉಪಾಹಾರಕ್ಕೆ ಇದು ಹೇಳಿ ಮಾಡಿಸಿದ ತಿಂಡಿ.

ಸುಲಭವಾಗಿ ತಯಾರಿಸಬಹುದಾದ ಕುಂಬಳಕಾಯಿ ಇಡ್ಲಿಯ ರುಚಿಯೂ ಭಿನ್ನವಾಗಿರುತ್ತದೆ. ಆರೋಗ್ಯಕ್ಕೂ ಉತ್ತಮವಾಗಿರುವ ಕಾರಣ ಈ ಇದನ್ನು ಮಕ್ಕಳಿಂದ ಹಿಡಿದು ದೊಡ್ಡವರವರೆಗೆ ಎಲ್ಲರೂ ತಿನ್ನಬಹುದು. ಕುಂಬಳಕಾಯಿ ಇಡ್ಲಿ ಮಾಡುವುದು ಹೇಗೆ ನೋಡಿ. ಈ ಇಡ್ಲಿಯನ್ನು ಸಿಹಿಗುಂಬಳ ಹಾಗೂ ಸಾಮಾನ್ಯ ಕುಂಬಳಕಾಯಿ ಎರಡರಿಂದಲೂ ಮಾಡಬಹುದು.

ಕುಂಬಳಕಾಯಿ ಇಡ್ಲಿ

ಬೇಕಾಗುವ ಸಾಮಗ್ರಿಗಳು: ಇಡ್ಲಿ ರವೆ – 1ಕಪ್‌, ಕುಂಬಳಕಾಯಿ – 1 ಕಪ್‌, ಕಡಲೆಬೇಳೆ – 1ಚಮಚ, ಕಾಳುಮೆಣಸು – ಅರ್ಧ ಚಮಚ, ಜೀರಿಗೆ – ಅರ್ಧ ಟೀ ಚಮಚ, ಹಸಿಮೆಣಸು – 2 ತೆಳುವಾಗಿ ಕತ್ತರಿಸಿದ್ದು, ಕೊತ್ತಂಬರಿ ಸೊಪ್ಪು – 1 ಗೊಂಚಲು, ಕರಿಬೇವು – 1 ಮುಷ್ಟಿ, ಉಪ್ಪು – ರುಚಿಗೆ, ಎಣ್ಣೆ – 1 ಚಮಚ

ಕುಂಬಳಕಾಯಿ ಇಡ್ಲಿ ಮಾಡುವ ವಿಧಾನ

ಮೊದಲು ಇಡ್ಲಿ ರವೆಯನ್ನು ತೊಳೆದು ಪಕ್ಕಕ್ಕೆ ಇಡಿ. ಕಡಲೆಬೇಳೆ ಬೇಡ ಎಂದರೆ ಬಿಡಬಹುದು, ಕಡಲಬೇಳೆ ಸೇರಿಸಿದರೆ ಇಡ್ಲಿ ರುಚಿ ಭಿನ್ನವಾಗಿ ಚೆನ್ನಾಗಿರುತ್ತದೆ. ತೊಳೆದಿಟ್ಟುಕೊಂಡ ರವೆಯನ್ನು ಒಂದು ದೊಡ್ಡ ಪಾತ್ರೆಗೆ ಹಾಕಿ ಅದಕ್ಕೆ ತುರಿದ ಕುಂಬಳಕಾಯಿ, ಉಪ್ಪು, ಜೀರಿಗೆ, ಹಸಿರು ಮೆಣಸಿನಕಾಯಿ ತುಂಡುಗಳು, ಮೆಣಸು ಪುಡಿ, ಕೊತ್ತಂಬರಿ ಸೊಪ್ಪು ಮತ್ತು ಕರಿಬೇವಿನ ಸೊಪ್ಪು ಸೇರಿಸಿ. ಈ ಎಲ್ಲವನ್ನೂ ಚೆನ್ನಾಗಿ ಮಿಶ್ರಣ ಮಾಡಿ. ಕನಿಷ್ಟ ಒಂದರಿಂದ ಎರಡು ಗಂಟೆಗಳ ಕಾಲ ಈ ಮಿಶ್ರಣವನ್ನು ನೆನೆಯಲು ಬಿಡಿ. ಈಗ ರವೆ ಎಲ್ಲಾ ಮಿಶ್ರಣವನ್ನು ಚೆನ್ನಾಗಿ ಹೀರಿಕೊಳ್ಳುತ್ತದೆ. ಈಗ ನೆನೆಸಿಟ್ಟುಕೊಂಡ ಕಡಲೆಬೇಳೆಯನ್ನು ಇಡ್ಲಿ ಹಿಟ್ಟಿನ ಮಿಶ್ರಣದಲ್ಲಿ ಹಾಕಿ ಈ ಎಲ್ಲವನ್ನೂ ಚೆನ್ನಾಗಿ ಮಿಶ್ರಣ ಮಾಡಿ. ಈ ಇಡ್ಲಿ ಹಿಟ್ಟನ್ನು ಇಡ್ಲಿ ಕುಕ್ಕರ್‌ಗೆ ಹಾಕಿ ಹಬೆಯಲ್ಲಿ ಬೇಯಿಸಿ. ಈಗ ನಿಮ್ಮ ಮುಂದೆ ಭಿನ್ನ ರುಚಿಯ ಕುಂಬಳಕಾಯಿ ಇಡ್ಲಿ ತಿನ್ನಲು ಸಿದ್ಧ. ಇದನ್ನ ಇಡ್ಲಿ ಅಥವಾ ಸಾಂಬಾರ್ ಜೊತೆ ತಿನ್ನಲು ಚೆನ್ನಾಗಿರುತ್ತದೆ.

ಕುಂಬಳಕಾಯಿಯಲ್ಲಿ ವಿಟಮಿನ್ ಎ, ನಾರಿನಾಂಶ, ಪೊಟ್ಯಾಶಿಯಂ, ವಿಟಮಿನ್ ಸಿ, ಆಂಟಿಆ್ಯಕ್ಸಿಡೆಂಟ್‌ನಂತಹ ಹಲವು ಪೋಷಕಾಂಶಗಳಿದ್ದು ಇದು ಜೀರ್ಣಕ್ರಿಯೆಯನ್ನ ಸುಧಾರಿಸುತ್ತದೆ. ಲಿವರ್‌ನ ಕಾರ್ಯುಸುಧಾರಣೆಗೂ ಕುಂಬಳಕಾಯಿ ಉತ್ತಮ, ಈ ಕುಂಬಳಕಾಯಿಯಿಂದ ದೋಸೆಯನ್ನೂ ಮಾಡಬಹುದು. ಕೆಲವರಿಗೆ ಸಿಹಿ ಕುಂಬಳ ಅಥವಾ ಚೀನಿಕಾಯಿ ಇಷ್ಟ ಇರುವುದಿಲ್ಲ, ಅವರು ಬೂದುಗುಂಬಳಕಾಯಿ ಹಾಕಿ ಇಡ್ಲಿ ಅಥವಾ ದೋಸೆ ತಯಾರಿಸಬಹುದು.

Whats_app_banner