Ragi Idli: ಆರೋಗ್ಯದ ಬಗ್ಗೆ ಕಾಳಜಿ ಇರುವವರಿಗಾಗಿ ರಾಗಿ ಇಡ್ಲಿ ರೆಸಿಪಿ ಇಲ್ಲಿದೆ
ಕನ್ನಡ ಸುದ್ದಿ  /  ಜೀವನಶೈಲಿ  /  Ragi Idli: ಆರೋಗ್ಯದ ಬಗ್ಗೆ ಕಾಳಜಿ ಇರುವವರಿಗಾಗಿ ರಾಗಿ ಇಡ್ಲಿ ರೆಸಿಪಿ ಇಲ್ಲಿದೆ

Ragi Idli: ಆರೋಗ್ಯದ ಬಗ್ಗೆ ಕಾಳಜಿ ಇರುವವರಿಗಾಗಿ ರಾಗಿ ಇಡ್ಲಿ ರೆಸಿಪಿ ಇಲ್ಲಿದೆ

Ragi Idli Recipe in Kannada: ರಾಗಿಯನ್ನು ಅಂಬಲಿ, ಮುದ್ದೆ, ರೊಟ್ಟಿ, ಇಡ್ಲಿ ರೂಪದಲ್ಲಿ ಸೇವಿಸಬಹುದು. ನಾವು ನಿಮಗಿಲ್ಲಿ ರಾಗಿ ಇಡ್ಲಿ ಮಾಡುವ ವಿಧಾನವನ್ನು ಹೇಳುತ್ತಿದ್ದೇವೆ. ಆರೋಗ್ಯದ ಬಗ್ಗೆ ಕಾಳಜಿ ಇರುವವರಿಗಾಗಿ ರಾಗಿ ಇಡ್ಲಿ ರೆಸಿಪಿ ಇಲ್ಲಿದೆ.

ರಾಗಿ ಇಡ್ಲಿ (twitter/@vinayak_karigar)
ರಾಗಿ ಇಡ್ಲಿ (twitter/@vinayak_karigar)

ನಿಮ್ಮ ಬೆಳಗಿನ ಉಪಹಾರ ಯಾವಾಗಲೂ ಪ್ರೋಟಿನ್​ ಮತ್ತು ಫೈಬರ್​​ನಿಂದ ಕೂಡಿರಬೇಕು. ಇದು ನಿಮ್ಮ ತೂಕ ನಿಯಂತ್ರಿಸಲು, ರಕ್ತದಲ್ಲಿನ ಸಕ್ಕರೆ ಮಟ್ಟ ನಿಯಂತ್ರಣದಲ್ಲಿಡಲು ಮತ್ತು ಜೀರ್ಣಕ್ರಿಯೆ ಸರಾಗವಾಗಿ ಆಗಲು ಸಹಾಯ ಮಾಡುತ್ತದೆ. ರಾಗಿಯು ಪ್ರೋಟಿನ್​, ಫೈಬರ್​​, ಕ್ಯಾಲ್ಸಿಯಂ, ಕಬ್ಬಿಣಾಂಶ ದಲ್ಲಿ ಸಮೃದ್ಧವಾಗಿದೆ. ಹೀಗಾಗಿ ಪ್ರತಿದಿನ ಮುಂಜಾನೆ ರಾಗಿಯಿಂದ ತಯಾರಿಸಿದ ಆಹಾರ ಪದಾರ್ಥ ಸೇವಿಸುವುದರಿಂದ ನಿಮಗೆ ಅನೇಕ ಆರೋಗ್ಯ ಪ್ರಯೋಜನಗಳಿವೆ.

ರಾಗಿ ಸೇವನೆಯಿಂದ ಮೂಳೆಗಳು ಬಲಗೊಳ್ಳುತ್ತವೆ. ಇದು ಮಕ್ಕಳಲ್ಲಿ ತೂಕ ಹೆಚ್ಚಿಸಿದರೆ, ದೊಡ್ಡವರಲ್ಲಿ ಬೊಜ್ಜು ನಿಯಂತ್ರಿಸಿ ತೂಕ ಇಳಿಕೆಗೆ ಸಹಕಾರಿಯಾಗಿದೆ. ದೀರ್ಘಕಾಲದವರೆಗೆ ಹಸಿವಾಗುವುದಿಲ್ಲ, ಆದರೆ ನಿಮ್ಮ ದೈಹಿಕ ಸಾಮರ್ಥ್ಯ ಹೆಚ್ಚುತ್ತದೆ. ಹಿಮೋಗ್ಲೋಬಿನ್ ಮಟ್ಟವನ್ನು ಸುಧಾರಿಸುತ್ತದೆ. ಮೆದುಳಿಕ ಆರೋಗ್ಯಕ್ಕೂ ಒಳ್ಳೆಯದು. ರಾಗಿಯನ್ನು ಅಂಬಲಿ, ಮುದ್ದೆ, ರೊಟ್ಟಿ, ಇಡ್ಲಿ ರೂಪದಲ್ಲಿ ಸೇವಿಸಬಹುದು. ನಾವು ನಿಮಗಿಲ್ಲಿ ರಾಗಿ ಇಡ್ಲಿ ಮಾಡುವ ವಿಧಾನವನ್ನು ಹೇಳುತ್ತಿದ್ದೇವೆ. ಆರೋಗ್ಯದ ಬಗ್ಗೆ ಕಾಳಜಿ ಇರುವವರಿಗಾಗಿ ರಾಗಿ ಇಡ್ಲಿ ರೆಸಿಪಿ ಇಲ್ಲಿದೆ.

ರಾಗಿ ಇಡ್ಲಿ ಮಾಡಲು ಬೇಕಾಗುವ ಸಾಮಗ್ರಿಗಳು

ರಾಗಿ

ಉದ್ದಿನ ಬೇಳೆ

ಮೊಸರು

ಉಪ್ಪು

ನೀರು

ತುಪ್ಪ/ಎಣ್ಣೆ

ರಾಗಿ ಇಡ್ಲಿ ಮಾಡುವ ವಿಧಾನ

3 ಗಂಟೆಗಳ ಕಾಲ ನೀರಿನಲ್ಲಿ ನೆನೆಸಿಟ್ಟ ಅರ್ಧ ಕಪ್​ ಉದ್ದಿನ ಬೇಳೆಯನ್ನು ಮಿಕ್ಸಿ ಜಾರ್​ಗೆ ಹಾಕಿ ಸ್ವಲ್ಪ ನೀರು ಅಥವಾ ಮೊಸರು ಸೇರಿಸಿ ನುಣ್ಣಗೆ ರುಬ್ಬಿಕೊಳ್ಳಬೇಕು. ರುಬ್ಬಿದ ಉದ್ದನ್ನು ಒಂದು ಬೌಲ್​​ಗೆ ಹಾಕಿ. ಈಗ ಅದೇ ಮಿಕ್ಸಿ ಜಾರ್​ಗೆ 4 ಗಂಟೆಗಳ ಕಾಲ ನೆನೆಸಿಟ್ಟ ಒಂದು ಕಪ್​ ರಾಗಿಯನ್ನು ಹಾಕಿ. ಸ್ವಲ್ಪ ಮೊಸರು ಬೆರೆಸಿ ಇದನ್ನು ರುಬ್ಬಿಕೊಳ್ಳಬೇಕು. ತುಂಬಾ ನುಣ್ಣಗೆ ರುಬ್ಬಬೇಡಿ, ಸ್ವಲ್ಪ ತರಿತರಿಯಾಗಿರಬೇಕು. ಈಗ ಇದನ್ನು ಉದ್ದು ಹಾಕಿಟ್ಟಿದ್ದ ಬೌಲ್​​ಗೆ ಸೇರಿಸಿ. ಹಾಗೆ ಸ್ವಲ್ಪ ಉಪ್ಪು ಸೇರಿಸಿ. ಈಗ ಇವೆರಡನ್ನೂ ಚೆನ್ನಾಗಿ ಮಿಕ್ಸ್ ಮಾಡಿ ಮುಚ್ಚಿಡಿ. ಈ ಹಿಟ್ಟನ್ನು 10 ರಿಂದ 12 ಗಂಟೆಗಳ ಕಾಲ ಹೀಗೆ ಮುಚ್ಚಿಡಬೇಕು.

ಹೀಗಾಗಿ ನೀವು ಏನು ಮಾಡಬೇಕು ಅಂದ್ರೆ ಇಂದು ಮಧ್ಯಾಹ್ನ ಉದ್ದು ಮತ್ತು ರಾಗಿಯನ್ನು ನೆನೆಸಿಟ್ಟು, ಇಂದು ರಾತ್ರಿ ರುಬ್ಬಿಟ್ಟುಕೊಂಡು ಆ ಮಿಶ್ರಣವನ್ನು ಮುಚ್ಚಿಟ್ಟರೆ ನಾಳೆ ಬೆಳಗ್ಗೆ ತಿಂಡಿ ಮಾಡಲು ಸರಿಯಾಗುತ್ತದೆ. ಈಗ 12 ಗಂಟೆಗಳ ನಂತರ ಮುಚ್ಚುಳ ತೆಗೆದು ಮತ್ತೊಮ್ಮೆ ಚೆನ್ನಾಗಿ ಕಲಸಿ. ಹಿಟ್ಟು ದಪ್ಪ ಅನಿಸಿದರೆ ಸ್ವಲ್ಪ ನೀರು ಸೇರಿಸಿ ಕಲಸಿ. ನಂತರ ಇಡ್ಲಿ ಪಾತ್ರೆಗೆ ಸ್ವಲ್ಪ ನೀರು ಹಾಕಿ ಕಾಯಲು ಇಡಿ. ಬಳಿಕ ಇಡ್ಲಿ ಪ್ಲೇಟ್​​ಗೆ ತುಪ್ಪ ಅಥವಾ ಎಣ್ಣೆ ಸವರಿ ಹಿಟ್ಟು ಹಾಕಿ ಬೇಯಲು ಇಡಿ. 25 ನಿಮಿಷಗಳ ಕಾಲ ಬೇಯಿಸಿ ಇಡ್ಲಿಯನ್ನು ತೆಗೆಯಿರಿ. ಈಗ ನಿಮ್ಮ ರಾಗಿ ಇಡ್ಲಿ ರೆಡಿ.

ತ್ವರಿತ ರಾಗಿ ಇಡ್ಲಿ - ಸುಲಭ ವಿಧಾನ

ನಿಮಗೆ ತ್ವರಿತವಾಗಿ ರಾಗಿ ಇಡ್ಲಿ ಮಾಡಬೇಕು ಅಂದ್ರೆ ಕಚ್ಛಾ ರಾಗಿ ಬದಲು ರಾಗಿ ಹಿಟ್ಟು ಬಳಸಿ. ಒಂದು ಪಾತ್ರೆಗೆ ರಾಗಿ ಹಿಟ್ಟು, ಅಕ್ಕಿ ಹಿಟ್ಟು, ಚಿರೋಟಿ ರವೆ, ಮೊಸರು, ಬೇಕಿಂಗ್​ ಸೋಡಾ, ಉಪ್ಪು ಎಲ್ಲವನ್ನೂ ಹಾಕಿ ಚೆನ್ನಾಗಿ ಕಸಲಿ 20 ನಿಮಿಷಗಳ ಕಾಲ ಮುಚ್ಚಿಡಿ. ನಂತರ ಮೇಲಿನಂತೆಯೇ ಇಡ್ಲಿ ಪ್ಲೇಟ್​ಗೆ ಹಿಟ್ಟು ಹಾಕಿ ಬೇಯಿಸಿ. ರಾಗಿ ಇಡ್ಲಿಯನ್ನು ಚಟ್ನಿ ಅಥವಾ ಸಾಂಬಾರ್​​ ಜೊತೆ ಸವಿಯಿರಿ.

Whats_app_banner