ರುಚಿಗೂ ಸೈ, ಆರೋಗ್ಯಕ್ಕೂ ಸೈ ರಾಗಿ ಇಡ್ಲಿ; ಬೆಳಗಿನ ಉಪಾಹಾರಕ್ಕೆ ಹೇಳಿ ಮಾಡಿಸಿದ ಈ ರೆಸಿಪಿಯಿದು, ಹೇಗೆ ಮಾಡೋದು ನೋಡಿ
ಪೌಷ್ಟಿಕ ಆಹಾರಗಳ ಪಟ್ಟಿಯಲ್ಲಿ ರಾಗಿಗೂ ಅಗ್ರಸ್ಥಾನವಿದೆ. ಮಧುಮೇಹಿಗಳಿಗೂ ಸಲ್ಲುವ ರಾಗಿಯಿಂದ ಅಂಬಲಿ, ಮುದ್ದೆ ಮಾಡುವುದನ್ನು ನೀವು ಕೇಳಿರಬಹುದು, ತಿಂದಿರಬಹುದು. ಆದರೆ ರಾಗಿಯಿಂದ ಇಡ್ಲಿಯನ್ನೂ ಕೂಡ ಮಾಡಬಹುದು. ಬೆಳಗಿನ ಉಪಾಹಾರಕ್ಕೆ ಇದು ಹೇಳಿ ಮಾಡಿಸಿದ ರೆಸಿಪಿ, ಇದನ್ನ ಮಾಡೋದು ಹೇಗೆ ನೋಡಿ.

ರಾಗಿ ಸೇವನೆಯಿಂದ ಆರೋಗ್ಯಕ್ಕೆ ನೂರಾರು ಪ್ರಯೋಜನಗಳಿವೆ. ರಾಗಿಯಲ್ಲಿ ನಾರಿನಾಂಶ ಸಮೃದ್ಧವಾಗಿದೆ. ಇದು ಜೀರ್ಣಕ್ರಿಯೆಯನ್ನು ಸುಧಾರಿಸಿ ಮಲಬದ್ಧತೆಯನ್ನು ತಡೆಯತ್ತದೆ. ರಕ್ತದಲ್ಲಿನ ಸಕ್ಕರೆ ಅಂಶ ನಿಯಂತ್ರಣಕ್ಕೂ ರಾಗಿ ಉತ್ತಮ. ಇದು ಕರುಳಿನಲ್ಲಿ ಆರೋಗ್ಯಕರ ಬ್ಯಾಕ್ಟೀರಿಯಾಗಳು ಬೆಳೆಯಲು ಸಹಾಯ ಮಾಡುತ್ತದೆ. ಹೃದಯದ ಆರೋಗ್ಯ ಸುಧಾರಿಸಲು ಹಾಗೂ ತೂಕ ಇಳಿಕೆಗೂ ರಾಗಿ ಸೇವನೆ ಉತ್ತಮ.
ದೇಹಾರೋಗ್ಯಕ್ಕೆ ಹತ್ತು ಹಲವು ರೀತಿಯಲ್ಲಿ ಸಹಾಯ ಮಾಡುವ ಸಹಾಯ ಮಾಡುವ ರಾಗಿಯಿಂದ ವಿವಿಧ ರೀತಿಯ ಖಾದ್ಯಗಳನ್ನ ತಯಾರಿಸಬಹುದು. ಕರ್ನಾಟಕದಲ್ಲಿ ರಾಗಿ ರೊಟ್ಟಿ, ರಾಗಿ ಮುದ್ದೆ, ರಾಗಿ ಅಂಬಲಿ ಫೇಮಸ್. ಆದರೆ ರಾಗಿಯಿಂದ ಸಖತ್ ಟೇಸ್ಟಿ ಆಗಿರೋ ಇಡ್ಲಿಯನ್ನು ಕೂಡ ಮಾಡಬಹುದು ಎಂಬುದು ಹಲವರಿಗೆ ತಿಳಿದಿಲ್ಲ. ರಾಗಿ ಇಡ್ಲಿ ಮಾಡುವುದು ಹೇಗೆ, ಇದಕ್ಕೆ ಏನೆಲ್ಲಾ ಬೇಕು ಎಂಬ ವಿವರ ಇಲ್ಲಿದೆ ನೋಡಿ.
ರಾಗಿ ಇಡ್ಲಿ
ಬೇಕಾಗುವ ಸಾಮಗ್ರಿಗಳು: ರಾಗಿ ಹಿಟ್ಟು – 2ಕಪ್, ರವೆ – 1ಕಪ್, ಎಣ್ಣೆ – 2 ಚಮಚ, ಕಡಲೆಬೇಳೆ – 1ಕಪ್, ಈರುಳ್ಳಿ – 1 ದೊಡ್ಡದು, ಹಸಿಮೆಣಸು – 1, ಕರಿಬೇವು – ಐದಾರು ಎಳಸು, ಕೊತ್ತಂಬರಿ ಸೊಪ್ಪು – ಸ್ವಲ್ಪ, ಉಪ್ಪು – ರುಚಿಗೆ, ಮೊಸರು – 1 ಕಪ್, ಅಡುಗೆ ಸೋಡಾ – ಚಿಟಿಕೆ, ನೀರು
ರಾಗಿ ಇಡ್ಲಿ ಮಾಡುವ ವಿಧಾನ
ಮೊದಲು ರಾಗಿಯನ್ನು ಘಮ್ಮೆಂದು ಪರಿಮಳ ಬರುವವರೆಗೂ ಹುರಿದುಕೊಳ್ಳಿ. ನಂತರ ರವೆಯನ್ನು ಚೆನ್ನಾಗಿ ಹುರಿದುಕೊಳ್ಳಿ. ಈ ಎರಡನ್ನು ಒಂದು ಅಗಲವಾದ ಪಾತ್ರೆಗೆ ಹಾಕಿಟ್ಟುಕೊಳ್ಳಿ. ನಂತರ ಇನ್ನೊಂದು ಪಾತ್ರೆಗೆ ಎಣ್ಣೆ ಹಾಕಿ ಬಿಸಿ ಮಾಡಿ. ಅದಕ್ಕೆ ಕಡಲೆಬೇಳೆ, ಈರುಳ್ಳಿ ಹಾಕಿ ಹುರಿಯಿರಿ. ನಂತರ ಕರಿಬೇವು, ಹಸಿಮೆಣಸು ಮತ್ತು ಕೊತ್ತಂಬರಿ ಸೊಪ್ಪು ಸೇರಿಸಿ. ಈ ಎಲ್ಲವನ್ನು ಚೆನ್ನಾಗಿ ಹುರಿದುಕೊಂಡು ರವೆ–ರಾಗಿ ಮಿಶ್ರಣಕ್ಕೆ ಸೇರಿಸಿ. ಅದಕ್ಕೆ ಮೊಸರು ಕೂಡ ಹಾಕಿ,ಕೊನೆಯಲ್ಲಿ ರುಚಿಗೆ ತಕ್ಕಷ್ಟು ಉಪ್ಪು, ಚಿಟಿಕೆ ಅಡುಗೆ ಸೋಡಾ ಹಾಗೂ ನೀರು ಸೇರಿಸಿ ಎಲ್ಲವನ್ನೂ ಚೆನ್ನಾಗಿ ಮಿಶ್ರಣ ಮಾಡಿ. ಇದನ್ನು ಇಡ್ಲಿಹಿಟ್ಟಿನ ಹದಕ್ಕೆ ಕಲೆಸಿಟ್ಟುಕೊಳ್ಳಿ. ನಂತರ ಇಡ್ಲಿ ಪಾತ್ರೆಗೆ ಹಾಕಿ ಇದನ್ನು ಅರ್ಧ ಗಂಟೆ ಬೇಯಿಸಿದರೆ ರುಚಿಯಾದ ರಾಗಿ ಇಡ್ಲಿ ತಿನ್ನಲು ಸಿದ್ಧ, ಇಡ್ಲಿ ರುಚಿ ಹೆಚ್ಚಲು ಹಿಟ್ಟಿಗೆ ಒಂದೆರಡು ಚಮಚ ತುಪ್ಪ ಸೇರಿಸಿ. ಈ ಇಡ್ಲಿಯನ್ನು ಕಾಯಿ ಚಟ್ನಿ ಅಥವಾ ಟೊಮೆಟೊ ಚಟ್ನಿ ಜೊತೆ ತಿನ್ನಲು ಚೆನ್ನಾಗಿರುತ್ತದೆ.
Selvi Amma Samayal ಎನ್ನುವ ಫೇಸ್‌ಬುಕ್ ಪುಟದಲ್ಲಿ ಪೋಸ್ಟ್ ಮಾಡಲಾಗಿರುವ ಈ ರೆಸಿಪಿ ವಿಡಿಯೊವನ್ನು 1ಲಕ್ಷಕ್ಕೂ ಅಧಿಕ ಮಂದಿ ವೀಕ್ಷಿಸಿದ್ದಾರೆ. ರಾಗಿ ಇಡ್ಲಿನೂ ಮಾಡಬಹುದಾ ಅನ್ನೋರು ಒಮ್ಮೆ ಈ ರೆಸಿಪಿ ಮಾಡಿ ಮನೆಯವರಿಗೂ ತಿನ್ನಿಸಿ.

ವಿಭಾಗ