Banarasi Paan: ಪಾನ್ ಪ್ರಿಯರಿಗೆ ಬಲು ಇಷ್ಟ ಬನಾರಸಿ ಪಾನ್; ಈ 10 ಪದಾರ್ಥ ಇದ್ರೆ ಸಾಕು ಮನೆಯಲ್ಲೇ ಸುಲಭವಾಗಿ ತಯಾರಿಸಬಹುದು
ಭಾರತದಲ್ಲಿ ವಿಶೇಷ ಸಂದರ್ಭಗಳಲ್ಲಿ ಬನಾರಸಿ ಪಾನ್ ಅನ್ನು ನೀಡಲಾಗುತ್ತದೆ. ಇದು ಹಲವರಿಗೆ ಅಚ್ಚುಮೆಚ್ಚು. ಇದನ್ನು ನೀವೂ ಕೂಡಾ ತಯಾರಿಸಬಹುದು. ಇಲ್ಲಿ ಹೇಳಿರುವ 10 ಪದಾರ್ಥಗಳಿದ್ದರೆ ಸಾಕು, ನೀವೂ ಮನೆಯಲ್ಲಿಯೇ ಸುಲಭವಾಗಿ ಬನಾರಸಿ ಪಾನ್ ತಯಾರಿಸಿ ಸವಿಯಬಹುದು.
ವಾರಣಾಸಿ ಅಥವಾ ಬನಾರಸ್ ಇದು ಉತ್ತರ ಪ್ರದೇಶದ ಅತ್ಯಂತ ಜನಪ್ರಿಯ ನಗರ. ಉತ್ತರ ಭಾರತದ ಈ ನಗರ ಬಹಳಷ್ಟು ವಿಷಯಗಳಿಗೆ ಪ್ರಸಿದ್ಧಿ ಪಡೆದಿದೆ. ಶ್ರೀಮಂತ ಸಂಸ್ಕೃತಿ, ಅಡುಗೆ, ಸೀರೆಗಳಿಗೆ ಬನಾರಸ್ ಹೆಸರುವಾಸಿ. ಬನಾರಸ್‌ನ ಚಾಟ್, ಕಚೋರಿ ಮತ್ತು ಲಸ್ಸಿ ಕೇಳುಗರ ಬಾಯಲ್ಲಿ ನೀರೂರಿಸುತ್ತದೆ. ಬನಾರಸ್‌ನ ಮತ್ತೊಂದು ಪ್ರಮುಖ ಆಕರ್ಷಣೆ ಅಲ್ಲಿಯ ಪಾನ್. ಬಾಲಿವುಡ್‌ನ ಪ್ರಸಿದ್ಧ ‘ಕೈಕೆ ಪಾನ ಬನಾರಸ್ ವಾಲಾ..’ ಹಾಡು ಆ ಕಾಲದಲ್ಲಿಯೇ ಬನಾರಸ್ ಪಾನ್‌ನ ಘಮಲನ್ನು ಹಾಡಿನ ಮುಖಾಂತರ ಭಾರತದಲ್ಲೆಡೆ ಹರಡುವಂತೆ ಮಾಡಿತ್ತು. ಇಷ್ಟೇ ಅಲ್ಲದೇ ಅನೇಕ ಜನಪ್ರಿಯ ಕಾದಂಬರಿಗಳಲ್ಲಿಯೂ ನಾವು ಇದರ ಬಗ್ಗೆ ಓದಬಹುದು. ಈ ಬನಾರಸ್ ಪಾನ್ ಜಿಐ ಟ್ಯಾಗ್ ಅನ್ನು ಸಹ ಪಡೆದುಕೊಂಡಿದೆ. ಪಾನ್ ಪ್ರಿಯರಷ್ಟೇ ಅಲ್ಲದೇ ಇತರರು ವಾಹ್! ಅನ್ನುವಷ್ಟು ರುಚಿಯಾಗಿರುವ ಇದನ್ನು ತಯಾರಿಸಲು 10 ವಿಶೇಷ ಪದಾರ್ಥಗಳನ್ನು ಬಳಸಲಾಗುತ್ತದೆ. ಹಾಗಾದ್ರೆ ಅಷ್ಟೊಂದು ಜನಪ್ರಿಯತೆಯನ್ನು ತಂದುಕೊಟ್ಟಿರುವ ಬನಾರಸ್ ಪಾನ್ ತಯಾರಿಕೆಯಲ್ಲಿ ಬಳಕೆಯಾಗುವ ಪದಾರ್ಥಗಳು ಯಾವವು ಮತ್ತು ಅದನ್ನು ಮನೆಯಲ್ಲಿಯೇ ಸುಲಭವಾಗಿ ತಯಾರಿಸುವುದು ಹೇಗೆ ಇಲ್ಲಿದೆ ನೋಡಿ.
ಸಾಮಾನ್ಯವಾಗಿ ಭಾರತದಲ್ಲಿ ಬನಾರಸಿ ಪಾನ್ ಅನ್ನು ವಿಶೇಷ ಸಂದರ್ಭಗಳಲ್ಲಿ ಊಟದ ನಂತರ ತಿನ್ನಲಾಗುತ್ತದೆ. ಬನಾರಸ್ ಪಾನ್ ತಯಾರಿಸಲು ಬೇಕಾದ ಮೊಟ್ಟಮೊದಲ ಪದಾರ್ಥ ಎಂದರೆ ಅದು ವೀಳ್ಯದೆಲೆ. ಅದರ ಮೇಲೆ ಅಡಿಕೆ, ಗುಲ್ಕಂದ್, ಸೋಂಪು, ಸುಣ್ಣ, ಕಟ್ಟಾ , ಕೇಸರ್ ಚಟ್ನಿ, ಚುವಾರಾ, ತೆಂಗಿನ ತುರಿ, ಟೂಟಿ–ಫ್ರೂಟಿ ಅಥವಾ ಸಕ್ಕರೆ, ಏಲಕ್ಕಿ, ಜಾಯಕಾಯಿ ಪುಡಿ ಹರಡಿ, ಅದನ್ನು ಮಡಚಲಾಗುತ್ತದೆ. ಅದಕ್ಕೊಂದು ಟೂತ್ ಪಿಕ್ಕರ್ ಚುಚ್ಚಲಾಗುತ್ತದೆ. ಇವೆಲ್ಲ ಪದಾರ್ಥಗಳನ್ನು ಬಳಸುವುದರಿಂದ ಇದನ್ನು ಜೀರ್ಣಾಕಾರಿ ಎನ್ನಲಾಗುತ್ತದೆ. ಹಾಗಾಗಿಯೇ ಭಾರಿ ಊಟದ ನಂತರ ಅದನ್ನು ತಿನ್ನಲಾಗುತ್ತದೆ. ಇದನ್ನು ನೀವೂ ಸಹ ನಿಮಗೆ ತಿನ್ನಬೇಕೆನಿಸಿದಾಗ ಮನೆಯಲ್ಲಿಯೇ ತಯಾರಿಸಿ ಸವಿಯಬಹುದು.
ಬನಾರಸ್ ಪಾನ್ ತಯಾರಿಸಲು ಬೇಕಾಗುವ ಪದಾರ್ಥಗಳು
ವೀಳ್ಯದೆಲೆ
2 ಚಮಚ ಅಡಿಕೆ (ಚಿಕ್ಕದಾಗಿ ಕತ್ತರಿಸಿದ)
2 ಚಮಚ ಗುಲ್ಕಂದ್
4 ಚಮಚ ಸೋಂಪು
2 ಚಮಚ ಸಕ್ಕರೆ
1/4 ಚಮಚ ಏಲಕ್ಕಿ ಪುಡಿ
1/4 ಚಮಚ ಜಾಯಕಾಯಿ ಪುಡಿ
1 ಚಮಚ ಕೊಬ್ಬರಿ ಪುಡಿ (ಕೋಪ್ರಾ)
2 ಚಮಚ ಟೂಟಿ–ಫ್ರೂಟಿ
1/4 ಚಮಚ ಕೇಸರ್ ಚಟ್ನಿ
1/4 ಚಮಚ ಕಟ್ಟಾ
1/4 ಚಮಚ ಉತ್ತುತ್ತೆ (ಚಿಕ್ಕದಾಗಿ ಕತ್ತರಿಸಿದ)
ತಯಾರಿಸುವ ವಿಧಾನ
* ಮೊದಲಿಗೆ ಬನಾರಸ್ ಪಾನ್ ವೀಳ್ಯದೆಲೆಯನ್ನು ಸ್ವಚ್ಛಗೊಳಿಸಿಕೊಳ್ಳಿ.
* ಮೇಲೆ ಹೇಳಿರುವ ಎಲ್ಲಾ ಪದಾರ್ಥಗಳನ್ನು ಸ್ವಲ್ಪ ಸ್ವಲ್ಪವೇ ತೆಗೆದುಕೊಳ್ಳಿ (ಸುಣ್ಣವನ್ನು ಬಿಟ್ಟು). ಅವೆಲ್ಲವನ್ನು ಸೇರಿಸಿದಾಗ ಅದರ ಅಳತೆಯು ಒಂದು ದೊಡ್ಡ ಚಮಚದಷ್ಟಾಗಿರಬೇಕು.
* ನಂತರ ವೀಳ್ಯದೆಲೆ ಹಿಂಬದಿಗೆ ಸ್ವಲ್ಪ ಸುಣ್ಣ ಹಚ್ಚಿ. ಚಮಚದಲ್ಲಿ ತೆಗೆದಿಟ್ಟುಕೊಂಡ ಪದಾರ್ಥಗಳನ್ನು ಇದರ ಮೇಲೆ ಹರಡಿ.
* ಈಗ ವೀಳ್ಯದೆಲೆಯನ್ನು ತ್ರಿಕೋನಾಕೃತಿಯಲ್ಲಿ ಮಡಚಿ. ಅದಕ್ಕೆ ಟೂತ್ ಪಿಕ್ಕರ್ ಸಿಕ್ಕಿಸಿ. ಬನಾರಸ್ ಪಾನ್ ಅನ್ನು ಈಗ ನೀವು ಸವಿಯಬಹುದು.
* ಮೇಲೆ ಹೇಳಿದ ಪದಾರ್ಥಗಳ ಅಳತೆಯಲ್ಲಿ ಸುಮಾರು 4 ರಿಂದ 6 ಪಾನ್ ತಯಾರಿಸಬಹುದು.
ಇದನ್ನೂ ಓದಿ: Kitchen Tips: ಅನ್ನ ಸೀದು ಹೋಯ್ತಾ, ಹಾಗಂತ ಎಸೆಯಬೇಡಿ; ಸುಟ್ಟ ವಾಸನೆ ಹೋಗಲಾಡಿಸಲು ಇಲ್ಲಿದೆ ಟಿಪ್ಸ್
(This copy first appeared in Hindustan Times Kannada website. To read more like this please logon to kannada.hindustantimes.com)