ಚಪಾತಿ, ರೋಟಿ ಜೊತೆ ನೆಂಜಿಕೊಳ್ಳಲು ಸಖತ್ ಆಗಿರುತ್ತೆ ಆಲೂ ಪನೀರ್ ಮಸಾಲ; ಮಕ್ಕಳು ಕೂಡ ಖುಷಿಯಿಂದ ತಿಂತಾರೆ, ಒಮ್ಮೆ ಮನೆಯಲ್ಲಿ ಮಾಡಿ ನೋಡಿ
ಕನ್ನಡ ಸುದ್ದಿ  /  ಜೀವನಶೈಲಿ  /  ಚಪಾತಿ, ರೋಟಿ ಜೊತೆ ನೆಂಜಿಕೊಳ್ಳಲು ಸಖತ್ ಆಗಿರುತ್ತೆ ಆಲೂ ಪನೀರ್ ಮಸಾಲ; ಮಕ್ಕಳು ಕೂಡ ಖುಷಿಯಿಂದ ತಿಂತಾರೆ, ಒಮ್ಮೆ ಮನೆಯಲ್ಲಿ ಮಾಡಿ ನೋಡಿ

ಚಪಾತಿ, ರೋಟಿ ಜೊತೆ ನೆಂಜಿಕೊಳ್ಳಲು ಸಖತ್ ಆಗಿರುತ್ತೆ ಆಲೂ ಪನೀರ್ ಮಸಾಲ; ಮಕ್ಕಳು ಕೂಡ ಖುಷಿಯಿಂದ ತಿಂತಾರೆ, ಒಮ್ಮೆ ಮನೆಯಲ್ಲಿ ಮಾಡಿ ನೋಡಿ

ಹೋಟೆಲ್‌ಗಳಲ್ಲಿ ಆಲೂ ಪನೀರ್ ಮಸಾಲಾ ತಿಂದಾಗ ಆಹಾ ಎಷ್ಟು ಸಖತ್ ಆಗಿದೆ ಅಂತ ನಿಮಗೆ ಅನ್ನಿಸಿ ಇರಬಹುದು. ಆದರೆ ಇದನ್ನ ಮಾಡೋದು ಹೇಗೆ ಅಂತ ಬಹುತೇಕರಿಗೆ ಗೊತ್ತಿಲ್ಲ. ಚಪಾತಿ, ರೋಟಿ ಜೊತೆ ಸಖತ್ ಆಗಿರುತ್ತೆ ಈ ಆಲೂ ಪನೀರ್ ಮಸಾಲ. ಮಕ್ಕಳಿಗೂ ಇಷ್ಟವಾಗುವ ಈ ರೆಸಿಪಿ ಮಾಡೋದು ಹೇಗೆ ನೋಡಿ.

ಆಲೂ ಪನೀರ್ ಮಸಾಲ
ಆಲೂ ಪನೀರ್ ಮಸಾಲ

ಪನೀರ್‌ನಿಂದ ತಯಾರಿಸಿದ ಖಾದ್ಯಗಳು ಬಹುತೇಕರಿಗೆ ಇಷ್ಟವಾಗುತ್ತದೆ. ಪನೀರ್‌ ಬಟರ್ ಮಸಾಲ, ಪಾಲಕ್ ಪನೀರ್ ಹೆಚ್ಚಾಗಿ ಮಾಡಲಾಗುತ್ತೆ. ಅದರಷ್ಟೇ ರುಚಿ ಹೊಂದಿರುತ್ತೆ ಆಲೂ ಪನೀರ್ ಮಸಾಲ ಕರಿ. ಇದು ಚಪಾತಿ, ರೋಟಿ ಜೊತೆ ತಿನ್ನೋಕೆ ಸಖತ್ ಆಗಿರುತ್ತೆ. ಅನ್ನಕ್ಕೂ ಹೊಂದುವ ಈ ರೆಸಿಪಿ ಮಕ್ಕಳಿಗಂತೂ ತುಂಬಾನೇ ಇಷ್ಟವಾಗುತ್ತೆ.

ಮಕ್ಕಳು ಚಪಾತಿ ತಿನ್ನೊಲ್ಲ ಅಂತ ದೂರುವ ಪೋಷಕರು ಒಮ್ಮೆ ಮನೆಯಲ್ಲಿ ಹೋಟೆಲ್‌ ಶೈಲಿಯ ಆಲೂ ಪನೀರ್ ಮಸಾಲ ಮಾಡಿಕೊಡಿ. ಅವರು ಇದನ್ನ ತುಂಬಾನೇ ಇಷ್ಟಪಟ್ಟು ತಿನ್ನದೇ ಇದ್ದರೆ ಕೇಳಿ. ಒಂದು ಚಪಾತಿ ತಿನ್ನುವ ಮಕ್ಕಳು ಕೇಳಿ ಇನ್ನೊಂದು ಹಾಕಿಸಿಕೊಂಡು ತಿಂತಾರೆ. ಆಲೂ ಪನೀರ್ ಮಸಾಲ ದೋಸೆ, ಇಡ್ಲಿ ಜೊತೆಗೂ ಹೊಂದುತ್ತೆ. ಇದನ್ನು ಮಾಡೋದು ಹೇಗೆ ನೋಡಿ.

ಆಲೂ ಪನೀರ್ ಮಸಾಲಾ ಕರಿ ರೆಸಿಪಿ

ಬೇಕಾಗುವ ಪದಾರ್ಥಗಳು: ಪನೀರ್ ತುಂಡುಗಳು - ಕಾಲು ಕೆಜಿ, ಆಲೂಗಡ್ಡೆ - ಎರಡು, ಖಾರದಪುಡಿ– ಒಂದೂವರೆ ಚಮಚ, ಅರಿಸಿನ – ಅರ್ಧ ಚಮಚ, ಶುಂಠಿ–ಬೆಳ್ಳುಳ್ಳಿ ಪೇಸ್ಟ್ – 2 ಚಮಚ, ದಾಲ್ಚಿನ್ನಿ ಎಲೆ – 1, ಜೀರಿಗೆ – 1 ಚಮಚ, ಉಪ್ಪು – ರುಚಿಗೆ, ಈರುಳ್ಳಿ – 2, ಟೊಮೆಟೊ – 2, ಕೊತ್ತಂಬರಿ ಪುಡಿ – 2 ಚಮಚ, ಕೊತ್ತಂಬರಿ ಸೊಪ್ಪು – 2 ಚಮಚ, ದಾಲ್ಚಿನ್ನಿ – 1 ಸಣ್ಣ ತುಂಡು, ತುಪ್ಪ– ಒಂದೂವರೆ ಚಮಚ,

ಆಲೂ ಪನೀರ್ ಮಸಾಲಾ ರೆಸಿಪಿ

ಆಲೂಗಡ್ಡೆಯನ್ನು ಬೇಯಿಸಿ, ಸಿಪ್ಪೆ ತೆಗೆದು ಚಿಕ್ಕ ತುಂಡುಗಳಾಗಿ ಕತ್ತರಿಸಿ ಇಡಿ. ಈರುಳ್ಳಿಯನ್ನು ಮಿಕ್ಸಿಯಲ್ಲಿ ರುಬ್ಬಿಕೊಳ್ಳಿ ಮತ್ತು ಮಿಶ್ರಣವನ್ನು ಪಕ್ಕಕ್ಕೆ ಇರಿಸಿ. ಈಗ ಬಾಣಲಿಯನ್ನು ಒಲೆಯ ಮೇಲೆ ಇಟ್ಟು ತುಪ್ಪವನ್ನು ಹಾಕಿ. ತುಪ್ಪ ಬಿಸಿಯಾದ ನಂತರ ಜೀರಿಗೆ, ಬಿರಿಯಾನಿ ಎಲೆ ಮತ್ತು ದಾಲ್ಚಿನ್ನಿ ಹಾಕಿ ಫ್ರೈ ಮಾಡಿ. ನಂತರ ರುಬ್ಬಿದ ಈರುಳ್ಳಿ ಹಾಕಿ ಚೆನ್ನಾಗಿ ಬೇಯಲು ಬಿಡಿ. ಹಸಿ ವಾಸನೆ ಹೋಗಲಾಡಿಸಲು ಎರಡು ನಿಮಿಷಗಳ ಕಾಲ ಫ್ರೈ ಮಾಡಿ. ನಂತರ ಶುಂಠಿ–ಬೆಳ್ಳುಳ್ಳಿ ಪೇಸ್ಟ್ ಸೇರಿಸಿ ಮತ್ತು ಮಿಶ್ರಣವನ್ನು ಕಡಿಮೆ ಉರಿಯಲ್ಲಿ ಫ್ರೈ ಮಾಡಿ.ಅರಿಸಿನ, ಖಾರದಪುಡಿ, ಕೊತ್ತಂಬರಿ ಪುಡಿ ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿ. ಟೊಮೆಟೊ ಪ್ಯೂರಿ ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿ. ಈಗ ಮುಚ್ಚಳ ಮುಚ್ಚಿ ಐದು ನಿಮಿಷ ಬೇಯಿಸಿ. ನಂತರ ಕತ್ತರಿಸಿದ ಆಲೂಗೆಡ್ಡೆ ತುಂಡುಗಳನ್ನು ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿ. ರುಚಿಗೆ ತಕ್ಕಷ್ಟು ಉಪ್ಪು ಸೇರಿಸಿ. ಇದಕ್ಕೆ ಎರಡು ಕಪ್ ನೀರು ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿ ಇದನ್ನು ಕುದಿಯಲು ಬಿಡಿ. ಹತ್ತು ನಿಮಿಷದ ನಂತರ ಪನೀರ್ ತುಂಡುಗಳನ್ನು ಸೇರಿಸಿ ಮಿಕ್ಸ್ ಮಾಡಿ ಮತ್ತೆ ಮುಚ್ಚಳ ಮುಚ್ಚಿ ಕುದಿಸಿ. ಇದನ್ನು ಕಡಿಮೆ ಉರಿಯಲ್ಲಿ ಕನಿಷ್ಠ 10 ನಿಮಿಷ ಬೇಯಿಸಿ. ಕೊನೆಯಲ್ಲಿ ಕೊತ್ತಂಬರಿ ಸೊಪ್ಪು ಉದುರಿಸಿ ಸ್ಟೌ ಆಫ್ ಮಾಡಿ. ಈಗ ರುಚಿಯಾದ ಆಲೂ ಪನೀರ್ ಕರಿ ತಿನ್ನಲು ಸಿದ್ಧವಾಗುತ್ತದೆ.

ಈ ಆಲೂ ಪನೀರ್ ಕರಿಯು ಪನೀರ್ ಬಟರ್ ಮಸಾಲಾದಂತೆ ರುಚಿಕರವಾಗಿರುತ್ತದೆ. ಚಪಾತಿ ಮತ್ತು ರೊಟ್ಟಿಯೊಂದಿಗೆ ತಿಂದರೆ ಅದ್ಭುತ ರುಚಿ. ಇದನ್ನು ಬಿಸಿ ಅನ್ನಕ್ಕೆ ಸೇರಿಸಿದರೆ ಒಳ್ಳೆಯದು. ವೆಜ್ ಬಿರಿಯಾನಿ ಮಾಡುವಾಗ ಪಕ್ಕದಲ್ಲಿ ಈ ಆಲೂ ಪನೀರ್ ಕರಿ ಇದ್ದರೆ ಅದರ ರುಚಿಯೇ ಬೇರೆ. ಈ ಪನೀರ್ ಗ್ರೇವಿ ಕರಿ ಘೀ ರೈಸ್‌ ಜೊತೆ ಕೂಡ ರುಚಿಯಾಗಿರುತ್ತೆ.

Whats_app_banner