Deepawali 2023: ದೀಪಾವಳಿ ಹಬ್ಬದ ಖುಷಿ ಹೆಚ್ಚಿಸಿ, ನಾಲಿಗೆ ಚಾಪಲ್ಯ ತಣಿಸುವ ಬಗೆ ಬಗೆ ಸಾಂಪ್ರದಾಯಿಕ ತಿನಿಸುಗಳ ರೆಸಿಪಿ ಇಲ್ಲಿದೆ
ಕನ್ನಡ ಸುದ್ದಿ  /  ಜೀವನಶೈಲಿ  /  Deepawali 2023: ದೀಪಾವಳಿ ಹಬ್ಬದ ಖುಷಿ ಹೆಚ್ಚಿಸಿ, ನಾಲಿಗೆ ಚಾಪಲ್ಯ ತಣಿಸುವ ಬಗೆ ಬಗೆ ಸಾಂಪ್ರದಾಯಿಕ ತಿನಿಸುಗಳ ರೆಸಿಪಿ ಇಲ್ಲಿದೆ

Deepawali 2023: ದೀಪಾವಳಿ ಹಬ್ಬದ ಖುಷಿ ಹೆಚ್ಚಿಸಿ, ನಾಲಿಗೆ ಚಾಪಲ್ಯ ತಣಿಸುವ ಬಗೆ ಬಗೆ ಸಾಂಪ್ರದಾಯಿಕ ತಿನಿಸುಗಳ ರೆಸಿಪಿ ಇಲ್ಲಿದೆ

ದೀಪಾವಳಿ ಹಬ್ಬ ಎಂದರೆ ಹಣತೆ, ಪಟಾಕಿ, ಗೂಡುದೀಪ ಇಷ್ಟೇ ಅಲ್ಲ, ಬೆಳಕಿನ ಹಬ್ಬದ ಸಂಭ್ರಮ ಹೆಚ್ಚಿಸುವುದರಲ್ಲಿ ಕೆಲವು ಸಾಂಪ್ರದಾಯಿಕ ತಿನಿಸುಗಳ ಪಾಲೂ ಇದೆ. ಅಂತಹ ಕೆಲವು ತಿನಿಸುಗಳ ರೆಸಿಪಿ ಹಾಗೂ ತಯಾರಿಸುವ ವಿಧಾನ ಇಲ್ಲಿದೆ.

ದೀಪಾವಳಿ ಹಬ್ಬದ ಖುಷಿ ಹೆಚ್ಚಿಸಿ, ನಾಲಿಗೆ ಚಾಪಲ್ಯ ತಣಿಸುವ ಬಗೆ ಬಗೆ ಸಾಂಪ್ರದಾಯಿಕ ತಿನಿಸುಗಳ ರೆಸಿಪಿಗಳು
ದೀಪಾವಳಿ ಹಬ್ಬದ ಖುಷಿ ಹೆಚ್ಚಿಸಿ, ನಾಲಿಗೆ ಚಾಪಲ್ಯ ತಣಿಸುವ ಬಗೆ ಬಗೆ ಸಾಂಪ್ರದಾಯಿಕ ತಿನಿಸುಗಳ ರೆಸಿಪಿಗಳು

ದೀಪಾವಳಿ ದೇಶದಾದ್ಯಂತ ಆಚರಿಸುವ ಹಿಂದೂಗಳ ಪ್ರಮುಖ ಹಬ್ಬಗಳಲ್ಲಿ ಒಂದು. ದೀಪಾವಳಿ ಎಂದರೆ ಬೆಳಕು. ಇದನ್ನು ಬೆಳಕಿನ ಹಬ್ಬ ಎಂದೂ ಕರೆಯುತ್ತಾರೆ. ದೀಪಾವಳಿಯಲ್ಲಿ ದೀಪ, ಹಣತೆ, ಪಟಾಕಿಯೊಂದಿಗೆ ತಿನಿಸುಗಳ ಅಷ್ಟೇ ಮುಖ್ಯ ಎನ್ನಿಸಿಕೊಳ್ಳುತ್ತವೆ. ದೀಪಾವಳಿ ಸಂಭ್ರಮವನ್ನು ಒಂದೊಂದು ಕಡೆ ಒಂದೊಂದು ರೀತಿ ಆಚರಿಸುತ್ತಾರೆ. ಕೆಲವು ಭಾಗದಲ್ಲಿ ದೀಪಾವಳಿ ಆಚರಣೆಯಲ್ಲಿ ಕೆಲವು ವಿಶೇಷ ತಿನಿಸುಗಳನ್ನು ತಯಾರಿಸಿ ನೇವೈದ್ಯ ಮಾಡುತ್ತಾರೆ. ಅಂತಹ ಕೆಲವು ಪ್ರಸಿದ್ಧ ತಿನಿಸುಗಳ ರೆಸಿಪಿ ಹಾಗೂ ತಯಾರಿಸುವ ವಿಧಾನ ಇಲ್ಲಿದೆ. ನಿಮ್ಮಲ್ಲಿ ಈ ತಿನಿಸುಗಳನ್ನು ಮಾಡುವ ಅಭ್ಯಾಸ ಇಲ್ಲದಿದ್ದರೆ, ಈ ದೀಪಾವಳಿಯಂದು ತಯಾರಿಸಿ, ಹಬ್ಬದ ಸಂಭ್ರಮ ಇನ್ನಷ್ಟು ಹೆಚ್ಚುವಂತೆ ಮಾಡಿ.

ಕರ್ಜಿಕಾಯಿ

ಬೇಕಾಗುವ ಸಾಮಗ್ರಿಗಳು: ಮೈದಾಹಿಟ್ಟು - 400 ಗ್ರಾಂ, ರವೆ - 100 ಗ್ರಾಂ, ತುಪ್ಪ - 2 ಚಮಚ, ಬೆಲ್ಲ - 400 ಗ್ರಾಂ, ಗೋಡಂಬಿ - 100 ಗ್ರಾಂ, ದ್ರಾಕ್ಷಿ - 50 ಗ್ರಾಂ, ಏಲಕ್ಕಿ - 7 ರಿಂದ, ಒಣಕೊಬ್ಬರಿ - 100 ಗ್ರಾಂ

ತಯಾರಿಸುವ ವಿಧಾನ: ದಪ್ಪ ತಳದ ಪಾತ್ರೆಗೆ ಎರಡು ಚಮಚ ತುಪ್ಪ ಹಾಕಿ ಬಿಸಿಯಾದ ಮೇಲೆ ರವೆ ಸೇರಿಸಿ ರವೆಯನ್ನು ಕೆಂಬಣ್ಣಕ್ಕೆ ಬರುವವರೆಗೂ ಹುರಿದುಕೊಳ್ಳಿ ಬದಿಗಿರಿಸಿಕೊಳ್ಳಿ. ನಂತರ ಒಣಹಣ್ಣುಗಳು, ತೆಂಗಿನತುರಿ, ಏಲಕ್ಕಿ ಪುಡಿ ಸೇರಿಸಿ ತೆಂಗಿನಕಾಯಿ ಹಸಿವಾಸನೆ ಹೋಗುವವರೆಗೂ ಚೆನ್ನಾಗಿ ಹುರಿಯಿರಿ. ಅದಕ್ಕೆ ಬೆಲ್ಲ ಸೇರಿಸಿ ಬೆಲ್ಲ ಕರಗುವವರೆಗೂ ಮಿಶ್ರಣ ಮಾಡಿ. ಒಂದು ಅಗಲವಾದ ಪಾತ್ರೆಯಲ್ಲಿ ಮೈದಾಹಿಟ್ಟು ಹಾಕಿ, ಅದಕ್ಕೆ ಸ್ವಲ್ಪ ತುಪ್ಪ ಹಾಗೂ ನೀರು ಸೇರಿಸಿ ಹಿಟ್ಟು ನಾದಿಟ್ಟುಕೊಳ್ಳಿ. ಇದನ್ನು 20 ನಿಮಿಷಗಳ ಕಾಲ ಹಾಗೆ ಇಡಿ.

ರವೆ ಹಾಗೂ ಹುರಿದುಕೊಂಡ ತೆಂಗಿನತುರಿ ಮಿಶ್ರಣವನ್ನು ಚೆನ್ನಾಗಿ ಕಲೆಸಿ. ಈಗ ಮೈದಾಹಿಟ್ಟನ್ನು ಉಂಡೆ ಮಾಡಿ ಅದನ್ನು ಚಿಕ್ಕ ಚಿಕ್ಕ ಚಪಾತಿಯಂತೆ ಲಟ್ಟಿಸಿ. ಅದರೊಳಗೆ ತೆಂಗಿನತುರಿ ಹಾಗೂ ರವೆ ಮಿಶ್ರಣವನ್ನು ಸೇರಿಸಿ ಕರ್ಜಿಕಾಯಿ ಆಕಾರಕ್ಕೆ ಮಡಿಚಿ ಅಥವಾ ಕರ್ಜಿಕಾಯಿ ಮೇಕರ್‌ ಇದ್ದರೆ ಇನ್ನೂ ಸುಲಭ. ನಂತರ ಬಾಣಲೆಯಲ್ಲಿ ಎಣ್ಣೆ ಬಿಸಿ ಮಾಡಿ ಕರ್ಜಿಕಾಯಿಯನ್ನು ಕರಿಯಿರಿ. ಒಣಹಣ್ಣುಗಳ ಕರ್ಜಿಕಾಯಿ ಬಾಯಿಗೆ ಸಿಹಿ ಮಾತ್ರವಲ್ಲ, ಇದು ಆರೋಗ್ಯಕ್ಕೂ ಉತ್ತಮ.

ಚಕ್ಕುಲಿ

ದೀಪಾವಳಿ ಹಬ್ಬಕ್ಕೆ ಬಹುತೇಕ ಕಡೆ ಚಕ್ಕುಲಿಯನ್ನು ನೈವೇದ್ಯಕ್ಕೆ ಇಡುವುದು ವಾಡಿಕೆ. ಇದನ್ನು ಮನೆಯಲ್ಲೂ ಸುಲಭವಾಗಿ ಮಾಡಿಕೊಳ್ಳಬಹುದು.

ಬೇಕಾಗುವ ಸಾಮಗ್ರಿಗಳು: ಅಕ್ಕಿಹಿಟ್ಟು - 1ಕಪ್‌, ಬೆಣ್ಣೆ - 1 ಚಮಚ, ಜೀರಿಗೆ - 1/2 ಚಮಚ, ಕರಿಎಳ್ಳು - 1/2 ಚಮಚ, ಉಪ್ಪು - ರುಚಿಗೆ, ಎಣ್ಣೆ - ಕರಿಯಲು

ತಯಾರಿಸುವ ವಿಧಾನ: ಇನ್‌ಸ್ಟಂಟ್‌ ಚಕ್ಕಲು ತಯಾರಿಸಲು ದಪ್ಪದ ತಳದ ಪಾತ್ರೆಯೊಂದರಲ್ಲಿ 1 ಕಪ್‌ ನೀರು ಹಾಕಿ ಚೆನ್ನಾಗಿ ಕುದಿಸಿ. ನೀರು ಕುದಿಯಲು ಆರಂಭಿಸಿದಾಗ ಬೆಣ್ಣೆ, ಜೀರಿಗೆ, ಎಳ್ಳು ಹಾಗೂ ರುಚಿಗೆ ತಕ್ಕಷ್ಟು ಉಪ್ಪು ಸೇರಿಸಿ. ಅದಕ್ಕೆ ಅಕ್ಕಿಹಿಟ್ಟು ಹಾಕಿ ಮಧ್ಯಮ ಉರಿಯಲ್ಲಿ 2 ನಿಮಿಷಗಳ ಕಾಲ ಚೆನ್ನಾಗಿ ಕೈಯಾಡಿಸಿ. ನಂತರ ಸ್ಟೌ ಆಫ್‌ ಮಾಡಿ ಪಾತ್ರೆಯನ್ನು 5 ನಿಮಿಷಗಳ ಕಾಲ ಮುಚ್ಚಿಡಿ. ಇದನ್ನು ಅಗಲವಾದ ಪಾತ್ರೆಗೆ ಹಾಕಿ ಚೆನ್ನಾಗಿ ತಿರುಗಿಸಿ ಹಿಟ್ಟು ತಯಾರಿಸಿಕೊಳ್ಳಿ. ನಂತರ ಈ ಹಿಟ್ಟನ್ನು ಚಕ್ಕುಲಿ ಅಚ್ಚಿಗೆ ಹಾಕಿ ನಿಮಗೆ ಬೇಕಾದಷ್ಟು ಸುತ್ತಿನ ಚಕ್ಕುಲಿ ತಯಾರಿಸಿ. ಇನ್ನೊಂದು ಪಾತ್ರೆಯಲ್ಲಿ ಎಣ್ಣೆ ಬಿಸಿ ಮಾಡಿ, ಇದರಲ್ಲಿ ತಯಾರಿಸಿಕೊಂಡ ಚಕ್ಕುಲಿಗಳನ್ನು ಹಾಕಿ, ಸ್ಟೌ ಮಧ್ಯಮ ಉರಿಯಲ್ಲಿ ಇರಲಿ. ಚಕ್ಕುಲಿಗಳನ್ನು ಎರಡೂ ಕಡೆ ಕೆಂಬಣ್ಣ ಬರುವವರೆಗೂ ಹುರಿದುಕೊಳ್ಳಿ. ನಂತರ ಅದನ್ನು ಟಿಶ್ಯೂ ಪೇಪರ್‌ ಮೇಲೆ ಹರಡಿ. ಹೀಗೆ ಮಾಡುವುದರಿಂದ ಎಣ್ಣೆಯಂಶ ಉಳಿಯುವುದಿಲ್ಲ.

ಗುಲಾಬ್‌ ಜಾಮೂನ್‌

ಬೇಕಾಗುವ ಸಾಮಗ್ರಿಗಳು: ಹರಿಯಾಲಿ ಖೋವಾ - 2 ಕಪ್‌, ಮೈದಾಹಿಟ್ಟು - 1/4 ಕಪ್‌, ಹಾಲಿನ ಹುಡಿ - ಟೇಬಲ್‌ ಚಮಚ, ಅರರೂಟ್‌ - 3 ಚಮಚ, ತುಪ್ಪ.

ಸಕ್ಕರೆ ಪಾಕಕ್ಕೆ: ಸಕ್ಕರೆ - 5 ಕಪ್‌, ಕೇಸರಿ - 1/4 ಚಮಚ, ಏಲಕ್ಕಿ - 1/4 ಚಮಚ.

ತಯಾರಿಸುವ ವಿಧಾನ: ಸಕ್ಕರೆ ಪಾಕಕ್ಕೆ ಹೇಳಿ ಸಾಮಗ್ರಿಗಳನ್ನು ಬಿಟ್ಟು ಉಳಿದ ಎಲ್ಲಾ ಸಾಮಗ್ರಿಗಳನ್ನು ಒಂದು ಅಗಲವಾದ ಬೌಲ್‌ನಲ್ಲಿ ಹಾಕಿ, ಚೆನ್ನಾಗಿ ನಾದಿ ಹಿಟ್ಟು ತಯಾರಿಸಿಕೊಳ್ಳಿ. ಇದನ್ನು ಚೆನ್ನಾಗಿ ಉಂಡೆ ಕಟ್ಟಿ. ಉಂಡೆಯಲ್ಲಿ ಯಾವುದೇ ಬಿರುಕುಗಳು ಇರಬಾರದು. ನಂತರ ಪಾತ್ರೆಯಲ್ಲಿ ತುಪ್ಪ ಬಿಸಿ ಮಾಡಿ ಉಂಡೆ ಮಾಡಿಟ್ಟುಕೊಂಡ ಗುಲಾಬ್‌ ಜಾಮೂನ್‌ಗಳನ್ನು ತುಪ್ಪದಲ್ಲಿ ಕರಿದು ತೆಗೆದು ಪೇಪರ್‌ ಮೇಲೆ ಹರಡಿ. ಮೊದಲೇ ಸಕ್ಕರೆ ಪಾಕ ತಯಾರಿಸಿಟ್ಟುಕೊಂಡರೆ ಉತ್ತಮ. ಕರಿದ ಉಂಡೆಗಳನ್ನು ಸಕ್ಕರೆ ಪಾಕಕ್ಕೆ ಹಾಕಿ ಸುಮಾರು 1 ಗಂಟೆಗಳ ಕಾಲ ನೆನೆಯಲು ಬಿಡಿ. ಈಗ ನಿಮ್ಮ ಮುಂದೆ ರುಚಿ ರುಚಿಯಾದ ಗುಲಾಬ್‌ ಜಾಮೂನ್‌ ಸವಿಯಲು ಸಿದ್ಧ.

ಬೇಸನ್‌ ಲಡ್ಡು

ಬೇಕಾಗುವ ಸಾಮಗ್ರಿಗಳು: ಕಡಲೆಹಿಟ್ಟು - 2 ಕಪ್‌, ತುಪ್ಪು - 1/2 ಕಪ್‌, ಸಕ್ಕರೆ ಪುಡಿ - ಕಪ್‌, ತರಿತರಿಯಾಗಿ ಪುಡಿ ಮಾಡಿದ ಬಾದಾಮಿ - 2 ಚಮಚ, ಏಲಕ್ಕಿ ಪುಡಿ - 1/2 ಚಮಚ.

ತಯಾರಿಸುವ ವಿಧಾನ: ದಪ್ಪ ತಳದ ಪಾತ್ರೆಯಲ್ಲಿ ತುಪ್ಪವನ್ನು ಬಿಸಿ ಮಾಡಿ. ಅದಕ್ಕೆ ಕಡಲೆಹಿಟ್ಟು ಸೇರಿಸಿ ಚೆನ್ನಾಗಿ ಹುರಿದುಕೊಳ್ಳಿ. ಕಡಲೆಹಿಟ್ಟು ಘಮ ಬರುವವರೆಗೂ ಹುರಿದುಕೊಳ್ಳಬೇಕು. ಸರಿ ಸುಮಾರು 10 ನಿಮಿಷಗಳ ಕಾಲ ಹುರಿಯಬೇಕು. ನಂತರ ಸ್ಟೌ ಆಪ್‌ ಮಾಡಿ ತಣ್ಣಗಾಗಲು ಬಿಡಿ. ಇದಕ್ಕೆ ಸಕ್ಕರೆ ಪುಡಿ, ಏಲಕ್ಕಿ, ಬಾದಾಮಿ ಸೇರಿಸಿ ಮಿಶ್ರಣ ಮಾಡಿ. ಈ ಮಿಶ್ರಣ ಯಾವುದೇ ಕಾರಣಕ್ಕೂ ಕೈಗೆ ಅಂಟಬಾರದು. ನಂತರ ಚಿಕ್ಕ ಚಿಕ್ಕ ಲಾಡಿನ ಗಾತ್ರಕ್ಕೆ ಉಂಡೆ ಕಟ್ಟಿ.

Whats_app_banner