ಉಳಿದ ಚಪಾತಿಯಿಂದ ಈ ರೀತಿ ರೆಸಿಪಿ ಮಾಡಿ ನೋಡಿ: ಮಕ್ಕಳು ಮಾತ್ರವಲ್ಲ ಮನೆ ಮಂದಿಯೆಲ್ಲಾ ಇಷ್ಟಪಟ್ಟು ತಿಂತಾರೆ
ಕನ್ನಡ ಸುದ್ದಿ  /  ಜೀವನಶೈಲಿ  /  ಉಳಿದ ಚಪಾತಿಯಿಂದ ಈ ರೀತಿ ರೆಸಿಪಿ ಮಾಡಿ ನೋಡಿ: ಮಕ್ಕಳು ಮಾತ್ರವಲ್ಲ ಮನೆ ಮಂದಿಯೆಲ್ಲಾ ಇಷ್ಟಪಟ್ಟು ತಿಂತಾರೆ

ಉಳಿದ ಚಪಾತಿಯಿಂದ ಈ ರೀತಿ ರೆಸಿಪಿ ಮಾಡಿ ನೋಡಿ: ಮಕ್ಕಳು ಮಾತ್ರವಲ್ಲ ಮನೆ ಮಂದಿಯೆಲ್ಲಾ ಇಷ್ಟಪಟ್ಟು ತಿಂತಾರೆ

ಚಪಾತಿ ಮಾಡುವಾಗ ಕೆಲವೊಮ್ಮೆ ಎರಡು-ಮೂರು ಚಪಾತಿಗಳು ಉಳಿಯುವುದು ಸಾಮಾನ್ಯ. ಇವು ಕೊನೆಗೆ ಡಸ್ಟ್ ಬಿನ್ ಸೇರುತ್ತವೆ. ಆದರೆ, ಉಳಿದ ಚಪಾತಿಯಿಂದ ರುಚಿಕರವಾದ ಖಾದ್ಯಗಳನ್ನು ತಯಾರಿಸಬಹುದು. ಮಕ್ಕಳು ಮಾತ್ರವಲ್ಲ ಮನೆಮಂದಿಯೆಲ್ಲಾ ಇಷ್ಟಪಟ್ಟು ತಿಂತಾರೆ. ಇಲ್ಲಿದೆ ರೆಸಿಪಿ.

ಉಳಿದ ಚಪಾತಿಯಿಂದ ರುಚಿಕರವಾದ ಖಾದ್ಯಗಳನ್ನು ತಯಾರಿಸಬಹುದು.
ಉಳಿದ ಚಪಾತಿಯಿಂದ ರುಚಿಕರವಾದ ಖಾದ್ಯಗಳನ್ನು ತಯಾರಿಸಬಹುದು.

ಭಾರತೀಯರು ಚಪಾತಿಯನ್ನು ಹೆಚ್ಚಾಗಿ ಸೇವಿಸುತ್ತಾರೆ. ಮಧ್ಯಾಹ್ನದ ಊಟದ ಜತೆ ಅಥವಾ ರಾತ್ರಿ ಊಟದ ಜತೆ ಚಪಾತಿಯನ್ನು ಪಲ್ಯದೊಂದಿಗೆ ಸವಿಯುತ್ತಾರೆ. ಬೆಳಗ್ಗೆ ಉಪಹಾರವಾಗಿಯೂ ಚಪಾತಿಯನ್ನು ಸೇವಿಸಲಾಗುತ್ತದೆ. ಚಪಾತಿಯಲ್ಲಿ ಕಾರ್ಬೋಹೈಡ್ರೇಟ್‌ಗಳ ಉತ್ತಮ ಮೂಲವೆಂದು ಪರಿಗಣಿಸಲಾಗುತ್ತದೆ. ಇದನ್ನು ಯಾವುದೇ ತರಕಾರಿಗಳ ಪಲ್ಯ, ತುಪ್ಪ ಅಥವಾ ಸಾಂಬಾರ್‌ನಲ್ಲೂ ಸವಿಯಬಹುದು. ರಾತ್ರಿ ಚಪಾತಿ ಉಳಿದಿದ್ದರೆ ಅದು ಡಸ್ಟ್ ಬಿನ್ ಸೇರುತ್ತದೆ. ಆದರೆ, ಇದನ್ನು ಎಸೆಯದೆ ಆರೋಗ್ಯಕರ ತಿಂಡಿಗಳನ್ನು ತಯಾರಿಸಬಹುದು. ಮಕ್ಕಳಿಗೆ ಬೆಳಗ್ಗೆ ತಿಂಡಿಗೆ ಅಥವಾ ಲಂಚ್ ಬಾಕ್ಸ್‌ಗೂ ಹಾಕಿ ಕಳುಹಿಸಬಹುದು. ಮಕ್ಕಳು ಮಾತ್ರವಲ್ಲ ದೊಡ್ಡವರು ಕೂಡ ಖಂಡಿತಾ ಇಷ್ಟಪಟ್ಟು ತಿನ್ನುವುದರಲ್ಲಿ ಡೌಟಿಲ್ಲ. ಹಾಗಿದ್ದರೆ ಯಾವೆಲ್ಲಾ ತಿಂಡಿಗಳನ್ನು ತಯಾರಿಸಬಹುದು ಇಲ್ಲಿದೆ ಮಾಹಿತಿ.

ಚಪಾತಿ ನೂಡಲ್ಸ್

ಬೇಕಾಗುವ ಪದಾರ್ಥಗಳು: ಹಳಸಿದ ಚಪಾತಿ: 5, ಎಣ್ಣೆ: 2 ಚಮಚ, ಬೆಳ್ಳುಳ್ಳಿ: 4, ಲವಂಗ-2, ತುರಿದ ಶುಂಠಿ: 1 ತುಂಡು, ಹಸಿರು ಮೆಣಸಿನಕಾಯಿ- 2, ಸಣ್ಣದಾಗಿ ಕೊಚ್ಚಿದ ಈರುಳ್ಳಿ: 2, ಕ್ಯಾರೆಟ್: 1, ಕ್ಯಾಪ್ಸಿಕಂ: 1/2 ಕಪ್, ತುರಿದ ಎಲೆಕೋಸು: 1/2 ಕಪ್, ಉಪ್ಪು ರುಚಿಗೆ ತಕ್ಕಷ್ಟು, ಟೊಮೆಟೊ ಕೆಚಪ್: 4 ಟೀ ಚಮಚ, ಸೋಯಾ ಸಾಸ್: 2 ಟೀ ಚಮಚ, ವಿನೆಗರ್: 1 ಟೀ ಚಮಚ, ಸ್ಪ್ರಿಂಗ್ ಈರುಳ್ಳಿ: ಸ್ವಲ್ಪ

ಮಾಡುವ ವಿಧಾನ: ಚಪಾತಿಯನ್ನು ರೋಲ್ ಮಾಡಿ ಮತ್ತು ಕತ್ತರಿಯಿಂದ ನೂಡಲ್ಸ್‌ನಂತೆ ತೆಳುವಾಗಿ ಕತ್ತರಿಸಿ ಇಡಿ. ಈಗ ಬಾಣಲೆಯಲ್ಲಿ ಎಣ್ಣೆ ಬಿಸಿ ಮಾಡಿ ಅದಕ್ಕೆ ಬೆಳ್ಳುಳ್ಳಿ, ಮೆಣಸಿನಕಾಯಿ, ಸಣ್ಣಗೆ ಹೆಚ್ಚಿದ ಈರುಳ್ಳಿ, ಸಣ್ಣಗೆ ಹಾಗೂ ಉದ್ದಕ್ಕೆ ಹೆಚ್ಚಿದ ಕ್ಯಾರೆಟ್, ಎಲೆಕೋಸು ಮತ್ತು ಕ್ಯಾಪ್ಸಿಕಂ ಅನ್ನು ಸೇರಿಸಿ. ಒಂದರಿಂದ ಎರಡು ನಿಮಿಷಗಳ ಕಾಲ ಹೆಚ್ಚಿನ ಉರಿಯಲ್ಲಿ ಬೇಯಿಸಿ. ತರಕಾರಿಗಳು ಸ್ವಲ್ಪ ಬೆಂದಾಗ ಅದಕ್ಕೆ ಉಪ್ಪು, ಟೊಮೆಟೊ ಕೆಚಪ್, ವಿನೆಗರ್ ಮತ್ತು ಸೋಯಾ ಸಾಸ್ ಅನ್ನು ಹಾಕಿ ಚೆನ್ನಾಗಿ ಮಿಶ್ರಣ ಮಾಡಿ. ಕೊನೆಯದಾಗಿ, ಪ್ಯಾನ್‌ಗೆ ಚಪಾತಿ ನೂಡಲ್ಸ್ ಸೇರಿಸಿ ಎರಡರಿಂದ ಮೂರು ನಿಮಿಷಗಳ ಕಾಲ ಹೆಚ್ಚಿನ ಉರಿಯಲ್ಲಿ ಬೇಯಿಸಿ. ನುಣ್ಣಗೆ ಕತ್ತರಿಸಿದ ಹಸಿರು ಈರುಳ್ಳಿಯೊಂದಿಗೆ (spring onion) ಹಾಕಿ ಮಿಶ್ರಣ ಮಾಡಿದರೆ ಸವಿಯಲು ರುಚಿಕರವಾದ ಚಪಾತಿ ನೂಡಲ್ಸ್ ರೆಡಿ.

ವೆಜ್ ಚಪಾತಿ ರೋಲ್

ಬೇಕಾಗುವ ಸಾಮಗ್ರಿಗಳು: ಚಪಾತಿ, ರೆಡ್ ಚಿಲ್ಲಿ ಸಾಸ್: 4 ಟೀ ಚಮಚ, ತುಪ್ಪ: ಸ್ವಲ್ಪ, ಸಣ್ಣದಾಗಿ ಕೊಚ್ಚಿದ ಸೌತೆಕಾಯಿ: 1/4 ಕಪ್, ಸಣ್ಣದಾಗಿ ಕೊಚ್ಚಿದ ಟೊಮೆಟೊ: 1/4 ಕಪ್, ನುಣ್ಣಗೆ ಕತ್ತರಿಸಿದ ಕೊತ್ತಂಬರಿ ಸೊಪ್ಪು: ಸ್ವಲ್ಪ, ತುರಿದ ಕ್ಯಾರೆಟ್: 1/4 ಕಪ್, ನುಣ್ಣಗೆ ಕತ್ತರಿಸಿದ ಎಲೆಕೋಸು: 1/4 ಕಪ್, ಸಣ್ಣದಾಗಿ ಹೆಚ್ಚಿದ ಸ್ಪ್ರಿಂಗ್ ಆನಿಯನ್: 1/4 ಕಪ್, ಟೊಮೆಟೊ ಕೆಚಪ್: 1 ಟೀ ಚಮಚ, ಮೇಯನೇಸ್: 2 ಟೀ ಚಮಚ. ಚೀಸ್: 6, ಚೀಸ್ ಸ್ಪ್ರೆಡ್: 2 ಟೀ ಚಮಚ, ಉಪ್ಪು ರುಚಿಗೆ ತಕ್ಕಷ್ಟು.

ಮಾಡುವ ವಿಧಾನ: ಚಪಾತಿ ರೋಲ್ ಮಾಡಲು, ಮೊದಲಿಗೆ ಒಂದು ದೊಡ್ಡ ಪಾತ್ರೆಯಲ್ಲಿ ಎಲ್ಲಾ ಸಾಮಗ್ರಿಗಳನ್ನು ಹಾಕಿ ಚೆನ್ನಾಗಿ ಮಿಶ್ರಣ ಮಾಡಿ. ಪ್ರತಿ ಚಪಾತಿಗೆ ಅರ್ಧ ಟೀ ಚಮಚ ರೆಡ್ ಚಿಲ್ಲಿ ಸಾಸ್ ಅನ್ನು ಹಾಕಿ. ಚಪಾತಿ ಮಧ್ಯಕ್ಕೆ ಈ ಹೂರಣವನ್ನು ಹಾಕಿ ರೋಲ್ ಮಾಡಿ. ನಂತರ ತವಾಗೆ ಸ್ವಲ್ಪ ಎಣ್ಣೆ ಅಥವಾ ತುಪ್ಪ ಹಾಕಿ ಈ ರೋಲ್ ಮಾಡಿದ ಚಪಾತಿಯನ್ನು ಬೇಯಿಸಿ.

ಚಪಾತಿ ಪಿಜ್ಜಾ

ಬೇಕಾಗುವ ಪದಾರ್ಥಗಳು: ಬೆಣ್ಣೆ: 1/2 ಟೀ ಚಮಚ, ಚಪಾತಿ: 1, ಪಿಜ್ಜಾ ಸಾಸ್: 4 ಟೀ ಚಮಚ, ಕ್ಯಾಪ್ಸಿಕಂ: 1, ಈರುಳ್ಳಿ: 1, ಪಾಲಕ್: ಸ್ವಲ್ಪ, ಪನ್ನೀರ್- ಅರ್ಧ ಕಪ್, ಚೀಸ್: 1/2 ಕಪ್, ಚಿಲ್ಲಿ ಫ್ಲೇಕ್ಸ್: 1/4 ಟೀ ಚಮಚ,

ಮಾಡುವ ವಿಧಾನ: ತವಾ ಬಿಸಿ ಮಾಡಿ ಅದರ ಮೇಲೆ ಅರ್ಧ ಚಮಚ ಬೆಣ್ಣೆಯನ್ನು ಹಾಕಿ. ಬೆಣ್ಣೆ ಕರಗಿದಾಗ, ಚಪಾತಿಯನ್ನು ಬಾಣಲೆಯ ಮೇಲೆ ಹಾಕಿ, ಎರಡೂ ಬದಿಗಳಿಂದ ಲಘುವಾಗಿ ಬಿಸಿ ಮಾಡಿ. ನಂತರ ಗ್ಯಾಸ್ ಆಫ್ ಮಾಡಿ. ನಾಲ್ಕು ಚಮಚ ಪಿಜ್ಜಾ ಸಾಸ್ ಅನ್ನು ಚಪಾತಿಯ ಮೇಲೆ ಚೆನ್ನಾಗಿ ಹರಡಿ. ಕ್ಯಾಪ್ಸಿಕಂ, ಪಾಲಕ್, ಈರುಳ್ಳಿ ಮತ್ತು ಪನ್ನೀರ್ ತುಂಡುಗಳನ್ನು ಸಂಪೂರ್ಣ ಚಪಾತಿಯ ಮೇಲೆ ಹರಡಿ. ಇದರ ಮೇಲೆ ಅರ್ಧ ಕಪ್ ಮೊಝ್ಝಾರೆಲ್ಲಾ ಚೀಸ್ ಅನ್ನು ಹಾಕಿ, ಮೇಲೆ ಚಿಲ್ಲಿ ಫ್ಲೇಕ್ಸ್ ಸೇರಿಸಿ. ಈ ಚಪಾತಿಯನ್ನು ಮತ್ತೆ ತವಾದ ಮೇಲೆ ಎಚ್ಚರಿಕೆಯಿಂದ ಇರಿಸಿ. ತವಾಗೆ ಮುಚ್ಚಳವನ್ನು ಮುಚ್ಚಿ. ಈ ಚಪಾತಿ ಪಿಜ್ಜಾವನ್ನು ಮೂರರಿಂದ ನಾಲ್ಕು ನಿಮಿಷಗಳ ಕಾಲ ಮಧ್ಯಮ ಉರಿಯಲ್ಲಿ ಬೇಯಿಸಿ. ಚೀಸ್ ಕರಗಿದಾಗ, ಗ್ಯಾಸ್ ಆಫ್ ಮಾಡಿ. ಚಪಾತಿ ಪಿಜ್ಜಾವನ್ನು ಪಿಜ್ಜಾ ಕಟ್ಟರ್‌ನಿಂದ ಕತ್ತರಿಸಿ ಬಿಸಿಯಾಗಿ ಬಡಿಸಿ.

Whats_app_banner