Chicken Wrap: ವೀಕೆಂಡ್ಗೆ ಹೇಳಿ ಮಾಡಿಸಿದ ರೆಸಿಪಿ ತಂದೂರಿ ಚಿಕನ್ ವ್ರ್ಯಾಪ್ಸ್: ಸಿಂಪಲ್ ಆಗಿ ಮನೆಯಲ್ಲೇ ಮಾಡೋದ್ ಹೇಗೆ ನೋಡಿ
Tandoori Chicken Wraps Recipe: ಮಾಂಸ ಪ್ರಿಯರು ಚಿಕನ್ ಖಾದ್ಯಗಳು ಎಂದರೆ ಬೇಡ ಎನ್ನಲು ಸಾಧ್ಯವೇ ಇಲ್ಲ. ಆದರೆ ಒಂದೇ ರೀತಿಯ ಭಕ್ಷ್ಯಗಳನ್ನು ತಿಂದು ಬೋರಾಗಿದ್ರೆ ಈ ವೀಕೆಂಡ್ಗೆ ನೀವು ಹೊಸ ಮಾದರಿಯ ಹಾಗೂ ಅತಿ ಸುಲಭವಾದ ತಂದೂರಿ ಚಿಕನ್ ವ್ರ್ಯಾಪ್ಸ್ ಅನ್ನು ಮನೆಯಲ್ಲೇ ತಯಾರಿಸಿ ತಿನ್ನಬಹುದು.
ವೀಕೆಂಡ್ ಬಂದಿದೆ, ಈ ಬಾರಿ ಮನೆಯಲ್ಲಿಯೇ ಏನಾದ್ರೂ ವಿಶೇಷವಾದ ಅಡುಗೆ ತಯಾರಿಸಬೇಕು ಎಂದುಕೊಂಡಿದ್ದರೆ ಇಲ್ಲೊಂದು ಸರಳವಾದ ಹಾಗೂ ಅತ್ಯಂತ ರುಚಿಕರವಾದ ಚಿಕನ್ ರೆಸಿಪಿಯಿದೆ. ತಂದೂರಿ ಚಿಕನ್ ವ್ರ್ಯಾಪ್ ನೀವು ಅತ್ಯಂತ ಸುಲಭವಾಗಿ ತಯಾರಿಸಬಹುದಾದ ರುಚಿಕರ ಖಾದ್ಯ. ಇದನ್ನು ಸಂಜೆಯ ಸಮಯದಲ್ಲಿ ಸ್ನ್ಯಾಕ್ನ ರೀತಿಯಲ್ಲಿ ಸೇವಿಸಬಹುದು. ಚಿಕನ್ ಅನ್ನು ಮೊದಲು ಮೊಸರು ಹಾಗೂ ಮಸಾಲೆಗಳ ಜೊತೆಯಲ್ಲಿ ಮ್ಯಾರಿನೇಟ್ ಮಾಡಿ ಬಳಿಕ ಇದನ್ನು ವ್ರ್ಯಾಪ್ ಮಾಡುವ ಮೂಲಕ ತಯಾರಿಸಬಹುದು. ಪಾರ್ಟಿಗಳಲ್ಲಿ , ಪಿಕ್ನಿಕ್ಗಳು ಅಥವಾ ಮನೆಯಲ್ಲಿ ನಡೆಯುವ ಗೆಟ್ ಟು ಗೆದರ್ ಕಾರ್ಯಕ್ರಮಗಳಲ್ಲಿ ಈ ರೆಸಿಪಿಯನ್ನು ನೀವು ತಯಾರಿಸಬಹುದಾಗಿದೆ . ಹಾಗಾದರೆ ಇನ್ಯಾಕೆ ತಡ ಚಿಕನ್ ವ್ರ್ಯಾಪ್ ತಯಾರಿಸುವ ಅತ್ಯಂತ ಸುಲಭದ ವಿಧಾನವನ್ನು ನಾವು ಕಲಿಯೋಣ
ಬೇಕಾಗುವ ಸಾಮಗ್ರಿಗಳು: ಚಿಕನ್ ತುಂಡುಗಳು (ಮೂಳೆ ರಹಿತ)- 200 ಗ್ರಾಂ, ಉಪ್ಪು ರುಚಿಗೆ ತಕ್ಕಷ್ಟು, ತರಕಾರಿ ಎಣ್ಣೆ - 4 ದೊಡ್ಡ ಚಮಚ, ಕಾಳು ಮೆಣಸು - ನಿಮ್ಮ ಅಗತ್ಯಕ್ಕೆ ತಕ್ಕಷ್ಟು, ಟೋರ್ಟಿಲ್ಲಾಗಳು (ಚಪಾತಿ ಅಥವಾ ರೋಲ್) 6 (ಇದು ನಿಮಗೆ ಮಾರುಕಟ್ಟೆಗಳಲ್ಲಿ ಸಿಗಲಿದೆ) , ಅಡುಗೆ ಎಣ್ಣೆ 2 ದೊಡ್ಡ ಚಮಚ,
ಮ್ಯಾರಿನೇಟ್ ಮಾಡಲು ಬೇಕಾಗುವ ಸಾಮಗ್ರಿಗಳು: ಮೊಸರು - 4 ದೊಡ್ಡ ಚಮಚ, ಬೆಳ್ಳುಳ್ಳಿ ಪೇಸ್ಟ್ - 2 ಚಮಚ, ಕೊತ್ತಂಬರಿ ಪುಡಿ - 1 ಚಮಚ, ಖಾರದ ಪುಡಿ - 1 ಚಮಚ, ಶುಂಠಿ ಪೇಸ್ಟ್ - 2 ಚಮಚ, ಗರಂ ಮಸಾಲಾ - 2 ಚಮಚ, ನಿಂಬೆರಸ - 1 ಚಮಚ
ತಯಾರಿಸುವ ವಿಧಾನ: ಒಂದು ಮಧ್ಯಮ ಗಾತ್ರದ ಬೌಲ್‌ನಲ್ಲಿ ಮೊಸರು, ಶುಂಠಿ-ಬೆಳ್ಳುಳ್ಳಿ ಪೇಸ್ಟ್, ಖಾರದ ಪುಡಿ, ಕೊತ್ತಂಬರಿ ಪುಡಿ, ಗರಂ ಮಸಾಲಾ ಪುಡಿ ಹಾಗೂ ನಿಂಬೆ ರಸವನ್ನು ಮಿಶ್ರಣ ಮಾಡಿ. ಇದಕ್ಕೆ ನೀವು ರುಚಿಗೆ ತಕ್ಕಷ್ಟು ಉಪ್ಪು ಹಾಗೂ ಕಾಳು ಮೆಣಸಿನ ಪುಡಿಯನ್ನು ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿ.
ಈಗ ಚಿಕನ್ ತುಂಡುಗಳನ್ನು ಚಿಕ್ಕದಾಗಿ ಕತ್ತರಿಸಿ ಇದನ್ನು ಪಾತ್ರೆಗೆ ಹಾಕಿ ಇದಕ್ಕೆ ಮೊಸರನ್ನು ಸೇರಿಸಿ ಚೆನ್ನಾಗಿ ಮಿಕ್ಸ್ ಮಾಡಿ ಚಿಕನ್ ಮ್ಯಾರಿನೇಟ್ ಆಗಲು ಬಿಡಿ. ಮತ್ತೊಂದು ಪಾತ್ರೆಯಲ್ಲಿ ಎಣ್ಣೆ ಹಾಕಿ, ಅದನ್ನು ಮಧ್ಯಮ ಉರಿ ಕಾಯಲು ಬಿಡಿ.
ಈಗ ನೀವು ಮ್ಯಾರಿನೇಟ್ ಮಾಡಿದ ಚಿಕನ್ ತುಂಡುಗಳನ್ನು ಪ್ಯಾನ್ಗೆ ಹಾಕಿ ಗರಿಗರಿಯಾಗುವವರೆಗೂ ಚೆನ್ನಾಗಿ ಹುರಿದುಕೊಳ್ಳಿ. ಇದಾದ ಬಳಿ ನೀವು ಮಾರುಕಟ್ಟೆಯಿಂದ ತಂದ ಟೋರ್ಟಿಲ್ಲಾಗಳನ್ನು ಚಪಾತಿಯಂತೆ ಎರಡೂ ಕಡೆ ಕಾಯಿಸಿಕೊಳ್ಳಿ.
ಈಗ ಮ್ಯಾರಿನೇಟ್ ಮಾಡಲಾದ ಚಿಕನ್ ತುಂಡುಗಳನ್ನು ಟೋರ್ಟಿಲ್ಲಾದ ಒಳಗೆ ಇಟ್ಟು ಸುತ್ತಿ. ಈಗ ನಿಮ್ಮ ಮುಂದೆ ಬಿಸಿ ಬಿಸಿಯಾದ ತಂದೂರಿ ಚಿಕನ್ ವ್ರ್ಯಾಪ್ಸ್ ಸವಿಯಲು ಸಿದ್ಧ.
ಈ ತಂದೂರಿ ಚಿಕನ್ ವ್ರ್ಯಾಪ್‌ಗಳು ಸವಿಯಲು ಇನ್ನೂ ಖುಷಿ ಎನಿಸಬೇಕು ಎಂದರೆ ಇದನ್ನು ನೀವು ಮಯೋನೀಸ್ಗಳ ಜೊತೆಯಲ್ಲಿ ತಿನ್ನಬಹುದು. ಚಿಕನ್ ವ್ರ್ಯಾಪ್ ಮಾಡುವ ಸಂದರ್ಭದಲ್ಲಿ ನೀವು ಟೋರ್ಟಿಲ್ಲಾದ ಒಳಗೆ ವಿವಿಧ ತರಕಾರಿಗಳನ್ನು ನೀವು ಬೇಕೆಂದರೆ ಸೇರಿಸಿಕೊಳ್ಳಬಹುದು.ಇದು ಕೂಡ ನಿಮಗೆ ವಿಭಿನ್ನವಾದ ರುಚಿಯನ್ನು ನೀಡಲಿದೆ.