ಕನ್ನಡ ಸುದ್ದಿ  /  ಜೀವನಶೈಲಿ  /  ಮೋತಿಚೂರ್‌ ಲಡ್ಡು ಅಂದ್ರೆ ಬಾಯಲ್ಲಿ ನೀರು ಬರುತ್ತಾ? ಇದನ್ನು ಮನೆಯಲ್ಲೇ ಸುಲಭವಾಗಿ ತಯಾರಿಸಬಹುದು, ಇಲ್ಲಿದೆ ಪಾಕವಿಧಾನ

ಮೋತಿಚೂರ್‌ ಲಡ್ಡು ಅಂದ್ರೆ ಬಾಯಲ್ಲಿ ನೀರು ಬರುತ್ತಾ? ಇದನ್ನು ಮನೆಯಲ್ಲೇ ಸುಲಭವಾಗಿ ತಯಾರಿಸಬಹುದು, ಇಲ್ಲಿದೆ ಪಾಕವಿಧಾನ

ಭಾರತದಲ್ಲಿ ಹಲವು ಬಗೆಯ ಸಿಹಿತಿಂಡಿಗಳಿದ್ದರೂ ಮೋತಿಚೂರು ಲಡ್ಡುಗೆ ತನ್ನದೇ ಪ್ರಾಮುಖ್ಯವಿದೆ. ಪ್ರತಿಯೊಂದು ಶುಭ ಸಮಾರಂಭದಲ್ಲೂ ಈ ಸಿಹಿ ಖಾದ್ಯ ಇರುತ್ತದೆ. ಈ ತಿನಿಸು ಮೊಘಲರ ಕಾಲದಲ್ಲಿ ರಾಜಮನೆತನದ ಅಡುಗೆಮನೆಯಲ್ಲಿ ನುರಿತ ಬಾಣಸಿಗರಿಂದ ತಯಾರಾಯ್ತು ಎಂದು ಹೇಳಲಾಗುತ್ತದೆ. ಹಾಗಿದ್ದರೆ ಮೋತಿಚೂರ್‌ ಲಾಡನ್ನು ಮಾಡುವುದು ಹೇಗೆ, ಏನೆಲ್ಲಾ ಸಾಮಗ್ರಿ ಬೇಕು ನೋಡಿ.

ಮೋತಿಚೂರ್‌ ಲಡ್ಡು ಮನೆಯಲ್ಲೇ ಸುಲಭವಾಗಿ ತಯಾರಿಸಬಹುದು, ಇಲ್ಲಿದೆ ಪಾಕವಿಧಾನ
ಮೋತಿಚೂರ್‌ ಲಡ್ಡು ಮನೆಯಲ್ಲೇ ಸುಲಭವಾಗಿ ತಯಾರಿಸಬಹುದು, ಇಲ್ಲಿದೆ ಪಾಕವಿಧಾನ

ಯಾವುದೇ ಹಬ್ಬವಿರಲಿ, ಶುಭ ಕಾರ್ಯಕ್ರಮವಿರಲಿ, ಬರ್ತ್ ಡೇ ಪಾರ್ಟಿ ಇರಲಿ, ಸಿಹಿ ತಿಂಡಿ ಇಲ್ಲದಿದ್ದರೆ ಹೇಗೆ ಹೇಳಿ? ಯಾವುದೇ ಶುಭ ಸಮಾರಂಭದಲ್ಲೂ ಸಾಂಪ್ರದಾಯಿಕ ಸಿಹಿತಿಂಡಿ ಇದ್ದೇ ಇರುತ್ತದೆ. ಸಿಹಿ ತಿನಿಸು ಇಲ್ಲದಿದ್ದರೆ ಆ ಸಮಾರಂಭಕ್ಕೆ ಕಳೆಯೇ ಇಲ್ಲದಂತೆ ಭಾಸವಾಗುತ್ತದೆ. ನೀವು ಸಾಂಪ್ರದಾಯಿಕ ಸಿಹಿತಿಂಡಿಗಳನ್ನು ಪ್ರೀತಿಸುತ್ತಿದ್ದರೆ, ಮೋತಿಚೂರ್ ಲಾಡು ಅನ್ನು ಖಂಡಿತ ಇಷ್ಟಪಡುತ್ತೀರಿ.

ಕಾಡಿನ ರಾಜ ಸಿಂಹವಾದರೆ ಸಿಹಿ ತಿನಿಸುಗಳ ರಾಜ ಮೋತಿಚೂರು ಲಾಡು ಅಂದರೂ ತಪ್ಪಿಲ್ಲ. ಕಡಲೆಹಿಟ್ಟಿನಿಂದ ಈ ಸಿಹಿ ತಿಂಡಿಯನ್ನು ತಯಾರಿಸಲಾಗುತ್ತದೆ. ಮಕ್ಕಳಿಂದ ಹಿಡಿದು ವೃದ್ಧರವರೆಗೂ ಈ ಸಿಹಿ ತಿಂಡಿಯನ್ನು ಎಲ್ಲರೂ ಇಷ್ಟಪಟ್ಟು ತಿನ್ನುತ್ತಾರೆ. ಮನೆಯಲ್ಲೇ ಮೋತಿಚೂರು ಲಾಡೂವನ್ನು ತಯಾರಿಸುವುದು ಹೇಗೆ ಅಂತ ನೀವು ಎಂದಾದರೂ ಯೋಚಿಸಿದ್ದೀರಾ. ಬಹಳ ಸಿಂಪಲ್ ಆಗಿ ಮನೆಯಲ್ಲೇ ಹೇಗೆ ತಯಾರಿಸಬಹುದು ಅನ್ನೋ ಬಗ್ಗೆ ಇಲ್ಲಿದೆ ಪಾಕ ವಿಧಾನ..

ಮೂತಿಚೂರ್‌ ಲಡ್ಡುಗೆ ಬೇಕಾಗುವ ಸಾಮಗ್ರಿಗಳು

ಕಡಲೆಬೇಳೆ - 2 ಕಪ್, ಸಕ್ಕರೆ - 2 ಕಪ್, ಕೇಸರಿ ಪುಡಿ - 1/2 ಟೀ ಚಮಚ, ಏಲಕ್ಕಿ ಪುಡಿ - 1 ಟೀ ಚಮಚ, ದ್ರಾಕ್ಷಿ - 3 ಟೀ ಸ್ಪೂನ್, ಗೋಡಂಬಿ - 3 ಟೀ ಚಮಚ, ಲವಂಗ - 6, ತುಪ್ಪ - 4 ಟೀ ಸ್ಪೂನ್, ಎಣ್ಣೆ - ಸ್ವಲ್ಪ, ನೀರು - ಸ್ವಲ್ಪ, ಅಡುಗೆ ಸೋಡಾ- ಚಿಟಿಕೆ

ಟ್ರೆಂಡಿಂಗ್​ ಸುದ್ದಿ

ಮೋತಿಚೂರ್‌ ಲಡ್ಡು ಮಾಡುವ ವಿಧಾನ

ಮೊದಲಿಗೆ ಕಡಲೆಬೇಳೆಯನ್ನು 2 ಗಂಟೆಗಳ ಕಾಲ ನೀರಿನಲ್ಲಿ ನೆನೆಸಿಡಿ. ಬಳಿಕ ಇದನ್ನು ಮಿಕ್ಸಿಯಲ್ಲಿ ತರಿತರಿಯಾಗಿ ರುಬ್ಬಿಕೊಳ್ಳಿ. ನಂತರ ಒಂದು ಬಾಣಲೆಯಲ್ಲಿ ಎಣ್ಣೆ ಬಿಸಿ ಮಾಡಿ. ಅದು ಚೆನ್ನಾಗಿ ಕಾದ ನಂತರ ಪಕೋಡಾ ಮಾಡುವಂತೆ, ಇದನ್ನು ಚಿಕ್ಕ-ಚಿಕ್ಕ ಉಂಡೆಗಳಂತೆ ಮಾಡಿ ಕರಿಯಿರಿ. ಇನ್ನೊಂದೆಡೆ ಎರಡು ಕಪ್ ಸಕ್ಕರೆಗೆ ಒಂದು ಕಪ್ ನೀರು ಹಾಕಿ ಸಕ್ಕರೆ ಪಾಕ ಮಾಡಲು ಸ್ಟೌವ್‌ನಲ್ಲಿ ಇಡಿ. ಈ ವೇಳೆ ಫ್ರೈ (ಕರಿದ) ಮಾಡಿಟ್ಟ ಉಂಡೆಗಳನ್ನು ಮಿಕ್ಸಿಯಲ್ಲಿ ಹಾಕಿ ದಪ್ಪ ರವೆಯಷ್ಟು ದೊಡ್ಡ ಸೈಜ್‌ಗೆ ರುಬ್ಬಿಕೊಳ್ಳಿ. ಸಕ್ಕರೆ ಪಾಕ ಒಂದೆಳೆ ಪಾಕ ಬಂದಿದ್ದರೆ ಮಿಕ್ಸಿಯಲ್ಲಿ ರುಬ್ಬಿರುವ ಮಿಶ್ರಣವನ್ನು ಪಾಕಕ್ಕೆ ಹಾಕಿ ಚೆನ್ನಾಗಿ ಮಿಶ್ರಣ ಮಾಡಿ. ಇದಕ್ಕೆ ಕೇಸರಿ ಬಣ್ಣವನ್ನು ಬೇಕಿದ್ದರೆ ಸೇರಿಸಿ. ಈ ಮಿಶ್ರಣಕ್ಕೆ ಏಲಕ್ಕಿ ಪುಡಿ ಹಾಕಿ ಚೆನ್ನಾಗಿ ಮಿಕ್ಸ್ ಮಾಡಿ. 5 ನಿಮಿಷಗಳ ಕಾಲವಾದ್ರೂ ಚೆನ್ನಾಗಿ ಮಿಕ್ಸ್ ಮಾಡಬೇಕು. ಬೆಂದ ನಂತರ ಈ ಮಿಶ್ರಣವನ್ನು ಪಕ್ಕಕ್ಕಿಡಿ.

ಇನ್ನೊಂದು ಪ್ಯಾನ್‌ನಲ್ಲಿ ಗೋಡಂಬಿ, ಲವಂಗ, ದ್ರಾಕ್ಷಿ ಹಾಕಿ ಫ್ರೈ ಮಾಡಿ. ಇದನ್ನು ಮಾಡಿಟ್ಟ ಮಿಶ್ರಣಕ್ಕೆ ಚೆನ್ನಾಗಿ ಬೆರೆಸಿ. ಸ್ವಲ್ಪ ಆರಿದ ನಂತರ ಕೈಗಳಿಗೆ ತುಪ್ಪ ಸವರಿ ಲಾಡೂಗಳ ಆಕಾರ ಮಾಡಿಟ್ಟರೆ ಸವಿಯಲು ಬಾಯಲ್ಲಿ ನೀರೂರಿಸುವ ರುಚಿಕರವಾದ ಮೋತಿಚೂರು ಲಾಡು ರೆಡಿ.

ಮೋತಿಚೂರು ಲಾಡೂವನ್ನು ತಯಾರಿಸುವುದು ಎಷ್ಟು ಸಿಂಪಲ್ ಅಲ್ವಾ. ಹಾಗಿದ್ರೆ ಇನ್ಯಾಕೆ ತಡ ನೀವು ಇದನ್ನು ಮನೆಯಲ್ಲೇ ತಯಾರಿಸಿ, ಆನಂದಿಸಿ.

ಬರಹ: ಪ್ರಿಯಾಂಕ ಗೌಡ