Mango Recipe: ಬಾಯಲ್ಲಿ ನೀರೂರಿಸುತ್ತೆ ಮಾವಿನಹಣ್ಣಿನ ರಸಗುಲ್ಲ; ಈ ಮ್ಯಾಂಗೋ ಸೀಸನ್‌ನಲ್ಲಿ ತಪ್ಪದೇ ಮಾಡಿ ತಿನ್ನಿ, ರೆಸಿಪಿ ಇಲ್ಲಿದೆ
ಕನ್ನಡ ಸುದ್ದಿ  /  ಜೀವನಶೈಲಿ  /  Mango Recipe: ಬಾಯಲ್ಲಿ ನೀರೂರಿಸುತ್ತೆ ಮಾವಿನಹಣ್ಣಿನ ರಸಗುಲ್ಲ; ಈ ಮ್ಯಾಂಗೋ ಸೀಸನ್‌ನಲ್ಲಿ ತಪ್ಪದೇ ಮಾಡಿ ತಿನ್ನಿ, ರೆಸಿಪಿ ಇಲ್ಲಿದೆ

Mango Recipe: ಬಾಯಲ್ಲಿ ನೀರೂರಿಸುತ್ತೆ ಮಾವಿನಹಣ್ಣಿನ ರಸಗುಲ್ಲ; ಈ ಮ್ಯಾಂಗೋ ಸೀಸನ್‌ನಲ್ಲಿ ತಪ್ಪದೇ ಮಾಡಿ ತಿನ್ನಿ, ರೆಸಿಪಿ ಇಲ್ಲಿದೆ

ಮಾವಿನಹಣ್ಣಿನ ಸೀಸನ್‌ನಲ್ಲಿ ಅದೆಷ್ಟು ಬಗೆಯ ಸಿಹಿತಿನಿಸುಗಳನ್ನು ಮಾಡಿದ್ರೂ ಕಡಿಮೆಯೇ. ಅದರಲ್ಲೂ ಹೊಸ ಬಗೆಯ ಸಿಹಿಖಾದ್ಯವನ್ನು ಸವಿಯಬೇಕು ಅಂದುಕೊಂಡವರು ಮಾವಿನಹಣ್ಣಿನ ರಸಗುಲ್ಲವನ್ನು ಒಮ್ಮೆಯಾದರೂ ತಯಾರಿಸಿ ತಿನ್ನಬೇಕು. ಇದರ ರುಚಿಗೆ ನೀವು ಫಿದಾ ಆಗೋದು ಪಕ್ಕಾ. ಅದನ್ನು ತಯಾರಿಸುವ ವಿಧಾನ ಇಲ್ಲಿದೆ. (ಬರಹ: ಭಾಗ್ಯ ದಿವಾಣ)

ಬಾಯಲ್ಲಿ ನೀರೂರಿಸುತ್ತೆ ಮಾವಿನಹಣ್ಣಿನ ರಸಗುಲ್ಲ
ಬಾಯಲ್ಲಿ ನೀರೂರಿಸುತ್ತೆ ಮಾವಿನಹಣ್ಣಿನ ರಸಗುಲ್ಲ

ಬಾಯಿ ಸಿಹಿ ಮಾಡೋದಕ್ಕೆ ಹಬ್ಬ ಹರಿದಿನಗಳು, ಶುಭ ಕಾರ್ಯಗಳೇ ಇರಬೇಕೆಂದೇನಿಲ್ಲ. ಮನೆಗೆ ಅತಿಥಿಗಳು ಬಂದಾಗ, ಇಲ್ಲವೇ ಭಾನುವಾರದಂದು ಬಿಡುವಾದಾಗ ಏನಾದರೂ ತಿನ್ನಬೇಕೆಂದಾಗಲೂ ಸುಲಭದಲ್ಲಿ ಸಿಹಿತಿನಿಸುಗಳನ್ನು ತಯಾರಿಸಿಕೊಳ್ಳಬಹುದು. ಅದೂ ಸಹ ಕಡಿಮೆ ಸಾಮಗ್ರಿಗಳನ್ನು ಬಳಸಿಕೊಂಡು. ಹೌದು, ಅತಿ ಕಡಿಮೆ ವಸ್ತುಗಳನ್ನು ಬಳಸಿಕೊಂಡು ಸ್ವಾದಿಷ್ಟಕರವಾದ ಸ್ವೀಟ್‌ಗಳನ್ನು ಮಾಡಿಕೊಳ್ಳಬಹುದು. ಅಂತಹ ಸಿಹಿಖಾದ್ಯಗಳ ಪೈಕಿ ರಸಗುಲ್ಲ ಪ್ರಮುಖವಾದುದು.

ಸಾಮಾನ್ಯವಾಗಿ ಒಂದೇ ರುಚಿಯ ರಸಗುಲ್ಲ ತಿಂದು ಬೇಸರವಾಗಿದ್ದರೆ, ಈಗ ಮಾರುಕಟ್ಟೆಯಲ್ಲಿ ಲಭ್ಯವಿರುವ ಮಾವಿನ ಹಣ್ಣುಗಳನ್ನು ಬಳಕೆ ಮಾಡಿ ವಿಭಿನ್ನವಾದ ರಸಗುಲ್ಲವನ್ನು ತಯಾರಿಸಿಕೊಳ್ಳಬಹುದು. ಹಾಗಾದ್ರೆ ಮನೆಯಲ್ಲಿ ನಾವು ಸುಲಭವಾಗಿ ಮಾವಿನಹಣ್ಣಿನ ರಸಗುಲ್ಲ ಮಾಡುವುದು ಹೇಗೆ? ಅದನ್ನು ಮಾಡಲು ಯಾವೆಲ್ಲಾ ಪದಾರ್ಥಗಳು ಬೇಕು? ಮಾಡುವ ವಿಧಾನವೇನು? ಹೇಗೆ ಮಾಡಿದರ ಅದರ ರುಚಿ ಚೆನ್ನಾಗಿರುತ್ತದೆ ಎಂಬುದನ್ನು ಸರಳವಾಗಿ ತಿಳಿದುಕೊಳ್ಳೋಣ.

ಮಾವಿನಹಣ್ಣಿನ ರಸಗುಲ್ಲ

ಮಾವಿನಹಣ್ಣಿನ ರಸಗುಲ್ಲ ತಯಾರಿಸಲು ಬೇಕಾಗುವ ಸಾಮಗ್ರಿಗಳು: 2 ರಿಂದ 3 ಮಾವಿನಹಣ್ಣಿನ ಪ್ಯೂರಿ, ಹಾಲು - 1/2 ಲೀಟರ್, 1 ಕಪ್ ಸಕ್ಕರೆ, 3 ರಿಂದ 4 ಕಪ್ ನೀರು, 7 ರಿಂದ 8 ಹನಿ ನಿಂಬೆ ರಸ

ರಾಬ್ಡಿಗೆ ಬೇಕಾಗುವ ಸಾಮಗ್ರಿಗಳು: 1/2 ಲೀಟರ್ ಕೆನೆಯಿರುವ ಹಾಲು, 1 ಕಪ್ ಮಾವಿನ ಪ್ಯೂರಿ, 2 ಚಮಚ ಸಕ್ಕರೆ, 1/2 ಚಮಚ ಏಲಕ್ಕಿ ಪುಡಿ, ಅಲಂಕಾರಕ್ಕಾಗಿ ಗೋಡಂಬಿ

ತಯಾರಿಸುವ ವಿಧಾನ: ಮಾವಿನಹಣ್ಣಿನ ತಿರುಳನ್ನು ತೆಗೆದುಕೊಂಡು ಚೆನ್ನಾಗಿ ಪ್ಯೂರಿ ತಯಾರಿಸಿಟ್ಟುಕೊಳ್ಳಿ. ಅದನ್ನು ಅರ್ಧ ಲೀಟರ್‌ ಹಾಲಿನೊಂದಿಗೆ ಗಂಟುಗಳಿಲ್ಲದಂತೆ ಮಿಶ್ರ ಮಾಡಿಕೊಳ್ಳಿ. ನಂತರ ಆ ಹಾಲನ್ನು ಮಧ್ಯಮ ಉರಿಯಲ್ಲಿ ಕುದಿಸಿದರೆ, ಹಾಲು ಒಡೆಯಲು ಪ್ರಾರಂಭವಾಗುತ್ತದೆ. ಆಗ 7 ರಿಂದ 8 ಹನಿ ನಿಂಬೆ ರಸವನ್ನು ಅದಕ್ಕೆ ಸೇರಿಸಿಕೊಳ್ಳಿ. ಒಡೆದ ಹಾಲಿನಿಂದ ಚೀಸ್ ಅನ್ನು ಪ್ರತ್ಯೇಕಿಸಿ ನೀರಿನಿಂದ ತೊಳೆದುಕೊಳ್ಳಿ. ಉಳಿದಿರುವ ನೀರನ್ನು ಸೋಸಿಕೊಳ್ಳುವುದಕ್ಕಾಗಿ ಅದನ್ನು ಬಟ್ಟೆಯಲ್ಲಿ ಗಟ್ಟಿಯಾಗಿ ಕಟ್ಟಿ ಸ್ವಲ್ಪ ಹೊತ್ತು ಹಾಗೆಯೇ ಬಿಡಿ. ಈಗ ನೀರಿನ ಅಂಶವೇ ಇಲ್ಲದಿರುವ ಚೀಸ್ ಲಭ್ಯವಾಗುತ್ತದೆ. ಇದು ಮೃದುವಾಗುವ ತನಕ ಚೆನ್ನಾಗಿ ನಾದಿಕೊಳ್ಳಿ. ನಂತರ ಅದರಿಂದ ಚಿಕ್ಕಚಿಕ್ಕ ಉಂಡೆಗಳನ್ನು ತಯಾರಿಸಿ.

ಇನ್ನೊಂದು ಕಡೆ ಸಿರಪ್‌ ತಯಾರಿಸಿಕೊಳ್ಳುವುದಕ್ಕಾಗಿ - ಬಾಣಲೆಯಲ್ಲಿ 1 ಕಪ್ ಸಕ್ಕರೆ ಮತ್ತು 5 ಕಪ್ ನೀರನ್ನು ತೆಗೆದುಕೊಳ್ಳಿ. (ನಿಮಗೆ ಬೇಕಾದಷ್ಟು ಸಿಹಿಯನ್ನು ಆಧರಿಸಿ ಅನುಪಾತದಲ್ಲಿ ವ್ಯತ್ಯಾಸ ಮಾಡಿಕೊಳ್ಳಿ) ಸಕ್ಕರೆ ಸಂಪೂರ್ಣವಾಗಿ ನೀರಿನಲ್ಲಿ ಕರಗುವವರೆಗೆ ಕಾದು ನಂತರ, ಸಕ್ಕರೆ ಪಾಕದಲ್ಲಿ ಈಗಾಗಲೇ ತಯಾರಿಸಿಕೊಂಡಿರುವ ಉಂಡೆಗಳನ್ನು ಸೇರಿಸಿ ಪ್ಯಾನ್‌ ಮುಚ್ಚಳ ಮುಚ್ಚಿ ಸುಮಾರು 15 ರಿಂದ 20 ನಿಮಿಷಗಳ ಕಾಲ ಕುದಿಸಿ.

ರಾಬ್ಡಿ ತಯಾರಿಸುವುದಕ್ಕಾಗಿ: ಒಂದು ಅಗಲವಾದ ಪಾತ್ರೆಯಲ್ಲಿ ಹಾಲನ್ನು ಕುದಿಯಲು ಇಟ್ಟುಕೊಳ್ಳಿ. ಸಣ್ಣ ಉರಿಯಲ್ಲಿ ಅದು ಕುದಿದು ಅರ್ಧದಷ್ಟು ಬತ್ತಿದ ನಂತರ ಅದಕ್ಕೆ ಸಕ್ಕರೆ ಸೇರಿಸಿ ಕರಗಲು ಬಿಡಿ. ನಂತರ ಈ ಮಿಶ್ರಣವು ಅದರ ಅರ್ಧದಷ್ಟು ಬತ್ತಲು ಬಿಡಿ. ನಂತರ ಏಲಕ್ಕಿ ಪುಡಿಯನ್ನು ಸೇರಿಸಿ ಸ್ಟೌವ್‌ ಆಫ್‌ ಮಾಡಿಕೊಳ್ಳಿ. ಕೋಣೆಯ ಉಷ್ಣಾಂಶಕ್ಕೆ ಬಂದ ನಂತರವಷ್ಟೇ ಮಾವಿನ ಪ್ಯೂರಿಯನ್ನು ಸೇರಿಸಿ. ರಾಬ್ಡಿಯನ್ನು ಮಿಶ್ರಣ ಮಾಡಿ ಮತ್ತು ಫ್ರಿಜ್ ಒಳಗೆ ತಣ್ಣಗಾಗಲು ಬಿಡಿ. ಈಗ ರಾಬ್ಡಿಯ ಮೇಲೆ ರಸಗುಲ್ಲಾವನ್ನು ಇರಿಸಿ, ಸಣ್ಣಗೆ ಹೆಚ್ಚಿದ ಗೋಡಂಬಿಯಿಂದ ಅಲಂಕರಿಸಿಕೊಂಡರೆ ರುಚಿಕರವಾದ ಮಾವಿನಹಣ್ಣಿನ ರಸಗುಲ್ಲ ಸವಿಯಲು ಸಿದ್ಧ.

ಕಡಿಮೆ ವಸ್ತುಗಳನ್ನು ಬಳಸಿಕೊಂಡು ಆರೋಗ್ಯಕ್ಕೆ ಉತ್ತಮವಾದ ಹಾಗೂ ರುಚಿಕರವೂ ಆದ ಸಿಹಿ ತಿನಿಸನ್ನು ತಯಾರಿಸಿಕೊಳ್ಳಬೇಕು ಅಂದುಕೊಂಡಿದ್ದರೆ ಮಾವಿನಹಣ್ಣಿನ ರಸಗುಲ್ಲ ನಿಮ್ಮ ಮೊದಲ ಆಯ್ಕೆಯಾಗಿರಲಿ.

Whats_app_banner