Mango Peda: ಧಾರವಾಡ ಪೇಡವನ್ನೇ ಮರೆಸುವ ಮಾವಿನಹಣ್ಣಿನ ಪೇಡಾ; ಕೆಲವೇ ನಿಮಿಷಗಳಲ್ಲಿ ತಯಾರಾಗುವ ಈ ಸ್ಪೆಷಲ್ ರೆಸಿಪಿಯಿದು
ಮಾವಿನಹಣ್ಣಿನಿಂದ ಬಗೆಬಗೆ ಸಿಹಿ ತಿನಿಸುಗಳನ್ನು ತಯಾರಿಸಬಹುದು, ಅವುಗಳಲ್ಲಿ ಮ್ಯಾಂಗೋ ಪೇಡಾ ಕೂಡ ಒಂದು. ಇದು ಧಾರಾವಾಡ ಪೇಡಾದ ರುಚಿಯನ್ನೂ ಮೀರಿಸುವ ಸಿಹಿತಿಂಡಿ. ಇದನ್ನು ಕೆಲವೇ ನಿಮಿಷಗಳಲ್ಲಿ ಸುಲಭವಾಗಿ ಮನೆಯಲ್ಲೇ ತಯಾರಿಸಿಕೊಳ್ಳಬಹುದು. ರೆಸಿಪಿ ಇಲ್ಲಿದೆ ನೋಡಿ, ಇದನ್ನ ನಿಮ್ಮ ಮನೆಯವರೆಲ್ಲಾ ಮೆಚ್ಚು ತಿನ್ನೋದು ಖಂಡಿತ. (ಬರಹ: ಭಾಗ್ಯ ದಿವಾಣ)

ಭಾರತದ ಸಾಂಪ್ರದಾಯಿಕ ಸಿಹಿತಿನಿಸುಗಳ ಪೈಕಿ ಪ್ರಮುಖವಾದ ಪೇಡವನ್ನು ಇಷ್ಟಪಡದವರು ಯಾರಿದ್ದಾರೆ ಹೇಳಿ. ಹಾಲಿನಿಂದ ತಯಾರಿಸುವ ಈ ಆರೋಗ್ಯಕರ ಪೇಡವು ಮೃದು ಹಾಗೂ ತಾಜಾ ಗುಣದಿಂದಲೇ ಎಲ್ಲರಿಗೂ ಮೆಚ್ಚುಗೆಯಾಗಿಬಿಡುತ್ತದೆ. ಅದರಲ್ಲೂ ಹುಬ್ಬಳ್ಳಿ-ಧಾರವಾಡದಲ್ಲಿ ಪ್ರಸಿದ್ಧವಾಗಿರುವ ಸಿಹಿತಿಂಡಿ ಧಾರವಾಡ ಪೇಡವಂತೂ ಇನ್ನಷ್ಟು ಮತ್ತಷ್ಟು ತಿನ್ನಬೇಕು ಎಂಬ ಬಯಕೆಯನ್ನು ಹುಟ್ಟಿಸುತ್ತದೆ. ಇನ್ನು ಜಮಖಂಡಿ ಪೇಡ ಸೇರಿದಂತೆ ಬಗೆಬಗೆಯ ಪೇಡಗಳು ಮಾರುಕಟ್ಟೆಯಲ್ಲಿ ಲಭ್ಯವಿದ್ದು, ಒಂದಕ್ಕಿಂತ ಒಂದು ವಿಭಿನ್ನ ರುಚಿಯನ್ನು ಹೊಂದಿದೆ. ಪೇಡ ಪ್ರಿಯರು ಸದ್ಯ ಸವಿಯಲೇ ಬೇಕಾದ ಮತ್ತೊಂದು ಸಿಹಿಖಾದ್ಯ ಮಾವಿನ ಹಣ್ಣಿನ ಪೇಡ..
ಮಾವಿನ ಹಣ್ಣಿನ ಸೀಸನ್ ಪ್ರಾರಂಭವಾಗಿ ಮುಗಿಯುವ ತನಕವೂ ಪ್ರತಿ ಮನೆಯಲ್ಲೂ ಮಾವಿನಹಣ್ಣು ಇದ್ದೇ ಇರುತ್ತದೆ. ಆದರೆ ಬರಿಯ ಮಾವಿನ ಹಣ್ಣನ್ನು ತಿಂದು ಬೇಜಾರಾಗಿದ್ದರೆ, ಮಾವಿನ ಹಣ್ಣಿನ ಪೇಡವನ್ನು ನೀವು ತಯಾರಿಸಿಕೊಳ್ಳಬಹುದು. ಕೆಲವೇ ಸಾಮಗ್ರಿಗಳನ್ನು ಬಳಸಿಕೊಂಡು ಕಡಿಮೆ ಸಮಯದಲ್ಲಿ ಸಿದ್ಧಪಡಿಸಬಹುದಾದ ಆರೋಗ್ಯಕರ ಮಾವಿನಹಣ್ಣಿನ ಪೇಡವು ಮಕ್ಕಳಿಂದ ತೊಡಗಿ ವಯಸ್ಸಾದವರೂ ಸಹ ಬಾಯಿ ಚಪ್ಪರಿಸಿಕೊಂಡು ತಿನ್ನಬಹುದು.
ಮಾವಿನಹಣ್ಣಿನ ಪೇಡ
ಮಾವಿನಹಣ್ಣಿನ ಪೇಡ ತಯಾರಿಸಲು ಬೇಕಾಗಿರುವ ಸಾಮಗ್ರಿಗಳು: ಮಾವಿನಹಣ್ಣು 2 ಕಪ್, ಹಾಲಿನ ಪುಡಿ 2 ಕಪ್, ಅರ್ಧ ಕಪ್ ಸಕ್ಕರೆ, 3-4 ಚಮಚ ತುಪ್ಪ, ಏಲಕ್ಕಿ ಪುಡಿ ಒಂದು ಚಿಟಿಕೆ, ನಿಮ್ಮ ಆಯ್ಕೆ ಡ್ರೈ ಫ್ರುಟ್ಸ್
ತಯಾರಿಯ ವಿಧಾನ: 2 ಕಪ್ ಮಾವಿನ ಹಣ್ಣನ್ನು ಸಿಪ್ಪೆ ತೆಗೆದು ಗಂಟುಗಳಿಲ್ಲದೆ ಚೆನ್ನಾಗಿ ಗ್ರೈಂಡ್ ಮಾಡಿ ಪ್ಯೂರಿ ತಯಾರಿಸಿಕೊಳ್ಳಿ. ಈ ಮಿಶ್ರಣಕ್ಕೆ 2 ಕಪ್ ಹಾಲಿನ ಪೌಡರ್ ಹಾಕಿ ಮತ್ತೊಂದು ಸಲ ಗ್ರೈಂಡ್ ಮಾಡಿಕೊಳ್ಳಿ. ಈಗ ಪ್ಯಾನ್ ಬಿಸಿ ಮಾಡಿಕೊಂಡು 2 ಚಮಚ ತುಪ್ಪ ಹಾಕಿ ಅದು ಕರಗಿದ ನಂತರ ಪ್ಯೂರಿ ಸೇರಿಸಿ 2 ನಿಮಿಷಗಳ ಕಾಲ ಚೆನ್ನಾಗಿ ಬೆರೆಸಿ. ಇದಕ್ಕೆ ಅರ್ಧ ಕಪ್ ಸಕ್ಕರೆ ಹಾಗೂ ಒಂದು ಚಿಟಿಕೆ ಕೇಸರಿ ಹಾಕಿಕೊಂಡು ಮಧ್ಯಮ ಉರಿಯಲ್ಲಿ ಕೈಬಿಡದೆ ಮಿಶ್ರ ಮಾಡಿಕೊಳ್ಳಿ. 10 ನಿಮಿಷಗಳ ನಂತರ ಇದಕ್ಕೆ ಒಂದು ಚಿಟಿಕೆ ಏಲಕ್ಕಿ ಪುಡಿ ಹಾಗೂ ಅರ್ಧ ಚಮಚ ತುಪ್ಪ ಹಾಕಿಕೊಂಡು ಗಟ್ಟಿಯಾದ ಹದ ಬರುವವರೆಗೆ ಬೇಯಿಸಿಕೊಳ್ಳಿ.
ನಂತರ ಈ ಮಿಶ್ರಣವನ್ನು ತಟ್ಟೆಗೆ ಹರಡಿಕೊಂಡು ಆರಲು ಬಿಡಿ. ಆರಿದ ನಂತರ ಕೈಯಿಂದ ಚೆನ್ನಾಗಿ ನಾದಿಕೊಳ್ಳಿ. ಹಾಗೆಯೇ ಚಿಕ್ಕದಾದ ಉಂಡೆಗಳನ್ನು ಮಾಡಿಕೊಂಡು ಇಲ್ಲವೇ ನಿಮಗೆ ಬೇಕಾದ ಆಕಾರವನ್ನು ನೀಡಿ, ನಿಮ್ಮ ಆಯ್ಕೆಯ ಡ್ರೈಫ್ರುಟ್ಸ್ ಪುಡಿಯನ್ನು ಇದರ ಮೇಲೆ ಹರಡಿಕೊಂಡರೆ ರುಚಿರುಚಿಯಾದ ಮಾವಿನಹಣ್ಣಿನ ಪೇಡ ಸವಿಯಲು ಸಿದ್ಧವಾಗುತ್ತದೆ.
ಇನ್ನೊಂದಷ್ಟು ಮಾಹಿತಿ
ಹಾಲಿನ ಪೌಡರ್ ಹಾಗೂ ಮಾವಿನ ಹಣ್ಣಿನಲ್ಲೇ ಸಿಹಿಯ ಅಂಶವಿರುವುದರಿಂದ ಹೆಚ್ಚಿಗೆ ಸಕ್ಕರೆಯ ಅಗತ್ಯವಿರುವುದಿಲ್ಲ. ಅಲ್ಲದೆ ಸಿಹಿತಿನಿಸುಗಳನ್ನು ಮಾಡುವ ವೇಳೆ ಆದಷ್ಟು ತಾಜಾ ಹಾಗೂ ಸಿಹಿ ಮಾವಿನ ಹಣ್ಣುಗಳನ್ನೇ ಬಳಕೆ ಮಾಡಿ. ತಳ ಹಿಡಿದೀತೆಂಬ ಚಿಂತೆಯಿದ್ದರೆ, ನಾನ್ ಸ್ಟಿಕ್ ಪ್ಯಾನ್ ಬಳಕೆ ಮಾಡುವುದು ಉತ್ತಮ.
ಇನ್ಯಾಕೆ ತಡ ಮಾಡುತ್ತೀರಿ. ಕಡಿಮೆ ಸಾಮಗ್ರಿಗಳನ್ನು ಬಳಸಿಕೊಂಡು, ಅತಿ ಕಡಿಮೆ ಸಮಯದಲ್ಲೇ ಮಾವಿನಹಣ್ಣಿನ ಪೇಡ ತಯಾರಿಸಿಕೊಂಡು ನೋಡಿ. ಮನೆಗೆ ಅತಿಥಿಗಳು ಬಂದರಂತೂ ಚಿಂತೆ ಬಿಡಿ. ದಿಢೀರ್ ಅಂತ ಈ ಹೊಸ ಬಗೆಯ ಫೇಡಾ ಮಾಡಿಕೊಟ್ಟರೆ ರೆಸಿಪಿ ಕೇಳದೇ ಉಳಿಯೋದೇ ಇಲ್ಲ.
