Masala Idli Recipe: ಒಂದೇ ರೀತಿ ಇಡ್ಲಿ-ಸಾಂಬಾರ್​​ ತಿಂದು ಬೇಜಾರಾಗಿದ್ಯಾ? ಮಸಾಲಾ ಇಡ್ಲಿ ಟ್ರೈ ಮಾಡಿ
ಕನ್ನಡ ಸುದ್ದಿ  /  ಜೀವನಶೈಲಿ  /  Masala Idli Recipe: ಒಂದೇ ರೀತಿ ಇಡ್ಲಿ-ಸಾಂಬಾರ್​​ ತಿಂದು ಬೇಜಾರಾಗಿದ್ಯಾ? ಮಸಾಲಾ ಇಡ್ಲಿ ಟ್ರೈ ಮಾಡಿ

Masala Idli Recipe: ಒಂದೇ ರೀತಿ ಇಡ್ಲಿ-ಸಾಂಬಾರ್​​ ತಿಂದು ಬೇಜಾರಾಗಿದ್ಯಾ? ಮಸಾಲಾ ಇಡ್ಲಿ ಟ್ರೈ ಮಾಡಿ

Masala Idli Recipe In Kannada: ಎಂದಾದರೂ ಮಸಾಲಾ ಇಡ್ಲಿ ಟ್ರೈ ಮಾಡಿದ್ದೀರಾ? ಇಲ್ಲ ಅಂದ್ರೆ ಈಗ ಟ್ರೈ ಮಾಡಿ. ಅದನ್ನ ನೀವು ಬೆಳಗಿನ ಉಪಹಾರಕ್ಕೂ ಸೇವಿಸಬಹುದು ಇಲ್ಲವೇ ಸಂಜೆಯ ಸ್ನಾಕ್ಸ್‌ಗೂ ತಿನ್ನಬಹುದು. ದಕ್ಷಿಣ ಭಾರತದ ಫೇಮಸ್‌ ಸಾಂಪ್ರದಾಯಿಕ ತಿಂಡಿಗೆ ಸ್ವಲ್ಪ ಹೊಸ ಟಚ್‌ ನೀಡಿ ಮಸಾಲ ಇಡ್ಲಿ ತಯಾರಿಸಿ.

ಮಸಾಲ ಇಡ್ಲಿ (Chef Ranveer Brar)
ಮಸಾಲ ಇಡ್ಲಿ (Chef Ranveer Brar)

ದಕ್ಷಿಣ ಭಾರತದ ಸಾಂಪ್ರದಾಯಿಕ ತಿಂಡಿ ಇಡ್ಲಿ. ಉದ್ದಿನ ಬೇಳೆ ಮತ್ತು ಅಕ್ಕಿ ರವಾ ಸೇರಿಸಿ ರುಬ್ಬಿ ಹಬೆಯಲ್ಲಿ ಬೇಯಿಸಲಾಗುತ್ತದೆ. ಇದನ್ನು ಸಾಂಬಾರ್​ ಅಥವಾ ಚಟ್ನಿಯ ಜೊತೆ ಸವಿಯುತ್ತಾರೆ. ಈ ಸಾಂಪ್ರದಾಯಿಕ ಇಡ್ಲಿಗೆ ಒಂದಿಷ್ಟು ಮಸಾಲೆ ಸೇರಿಸಿ, ಹೊಸ ರುಚಿ ನೀಡಬಹುದು. ಇದನ್ನು ಬೆಳಗಿನ ಉಪಹಾರ ಆಥವಾ ಸಂಜೆಯ ಸ್ನಾಕ್ಸ್‌ಗಳಲ್ಲಿಯೂ ತಿನ್ನಬಹುದು. ಒಟ್ಟಾರೆಯಾಗಿ ಇದು ನಿಮ್ಮ ಬಾಯಿಚಪಲವನ್ನು ತೀರಿಸಬಲ್ಲ ಹೊಸ ರುಚಿ. ಕೆಲವೊಮ್ಮೆ ಮನೆಯಲ್ಲಿ ಬೆಳಗ್ಗಿನ ಉಪಹಾರಕ್ಕೆ ಮಾಡಿದ ಇಡ್ಲಿ ಮಿಕ್ಕಿ ಬಿಡುತ್ತದೆ. ಮತ್ತೆ ಅದನ್ನೇ ಮಧ್ಯಾಹ್ನಕ್ಕೋ ಅಥವಾ ಸಂಜೆಗೋ ತಿನ್ನವುದೆಂದರೆ ಬಹಳ ಬೇಸರವಾಗುವುದುಂಟು. ಹಾಗಂತ ಇಡ್ಲಿಯನ್ನು ವೇಸ್ಟ್‌ ಮಾಡಲು ಯಾರಿಗೂ ಮನಸ್ಸಾಗುವುದಿಲ್ಲ. ಅಂತಹ ಸಂದರ್ಭದಲ್ಲಿ ಮಸಾಲಾ ಇಡ್ಲಿಯನ್ನು ತಯಾರಿಸಬಹುದು. ನೀವು ತಯಾರಿಸಿದ ಇಡ್ಲಿಗೆ ಹೊಸ ಟಚ್‌ ನೀಡಿ ತಯಾರಿಸಬಹುದಾದ ಸಂಪೂರ್ಣ ಹೊಸ ರುಚಿ ಇದು.

ಗರಂ ಮಸಾಲೆಯ ಪರಿಮಳ ಇರುವ ಮಸಾಲೆ ಇಡ್ಲಿಯನ್ನು ನಿಮ್ಮಿಷ್ಟದಂತೆ ಅಂದರೆ ಖಾರಖಾರವಾಗಿ, ಉಪ್ಪು, ಹುಳಿ ಹದವಾಗಿ ಬೆರೆಸಿ ತಯಾರಿಸಬಹುದು. ಇದು ನಿಮ್ಮ ನಾಲಿಗೆಯ ರುಚಿ ಮೊಗ್ಗುಗಳನ್ನು ಹೆಚ್ಚಿಸುವುದರಲ್ಲಿ ಎರಡು ಮಾತಿಲ್ಲ. ಒಂದೇ ರೀತಿ ಉಪಹಾರ ತಿನ್ನವುದರ ಬದಲಿಗೆ ಅದರಲ್ಲೇ ಏನಾದರೂ ಸ್ಪಷಲ್‌ ಮಾಡಿ ತಿನ್ನುವುದು ನಿಮಗೂ ತೃಪ್ತಿಯನ್ನು ತರುತ್ತದೆ. ಪರಿಮಳಯುಕ್ತ ಮಸಾಲಾ ಇಡ್ಲಿ ಮಕ್ಕಳ ಟಿಫಿನ್ ಬಾಕ್ಸ್‌ಗೂ ಉತ್ತಮವಾಗಿದೆ. ಮಿಕ್ಕಿರುವ ಇಡ್ಲಿಯಿಂದ ಮಾತ್ರ ಮಸಾಲಾ ಇಡ್ಲಿ ತಯಾರಿಸಬೇಕೆಂದಿಲ್ಲ, ತಾಜಾ ಇಡ್ಲಿಯಿಂದಲೂ ಮಸಾಲಾ ಇಡ್ಲಿ ತಯಾರಿಸಬಹುದು.

ಮಸಾಲಾ ಇಡ್ಲಿ ತಯಾರಿಸಲು ಬೇಕಾಗುವ ಸಾಮಗ್ರಿಗಳು

ಇಡ್ಲಿ 8 ರಿಂದ 10

ಚಿಕ್ಕದಾಗಿ ಕತ್ತರಿಸಿದ ಈರುಳ್ಳಿ 1

ಚಿಕ್ಕದಾಗಿ ಕತ್ತರಿಸಿದ ಟೊಮೆಟೊ 1‌

ಚಿಕ್ಕದಾಗಿ ಕತ್ತರಿಸಿದ ಹಸಿರು ಮೆಣಸಿನಕಾಯಿ 1

ಶೇಂಗಾ 8–10

ಶುಂಠಿ 1 ಇಂಚು

ಬೆಳ್ಳುಳ್ಳಿ 2–3 ಎಸಳುಗಳು

ಸಾಸಿವೆ 1/2 ಚಮಚ

ಜೀರಿಗೆ 1/2 ಚಮಚ

ಅರಿಶಿಣ 1/4 ಚಮಚ‌

ಮೆಣಸಿನ ಪುಡಿ 1/2 ಚಮಚ

ಕೊತ್ತೊಂಬರಿ ಪುಡಿ 1/2 ಚಮಚ

ಗರಮ್‌ ಮಸಾಲಾ ಪುಡಿ 1/4 ಚಮಚ

ಕತ್ತರಿಸಿದ ಕೊತ್ತೊಂಬರಿ ಸೊಪ್ಪು 1 ಚಮಚ

ಎಣ್ಣೆ 3–4 ಚಮಚ

ಉಪ್ಪು ರುಚಿಗೆ ತಕ್ಕಷ್ಟು

ಮಸಾಲಾ ಇಡ್ಲಿ ಮಾಡುವ ವಿಧಾನ:

* ಮೊದಲು ಇಡ್ಲಿ ತಯಾರಿಸಿಕೊಳ್ಳಿ. ನಂತರ ಅದನ್ನು ಚಿಕ್ಕ ಚಿಕ್ಕ ತುಂಡುಗಳನ್ನಾಗಿ ಕತ್ತರಿಸಿ.

* ಒಂದು ಪ್ಯಾನ್‌ಗೆ ಎಣ್ಣೆ ಹಾಕಿ, ಸಾಸಿವೆ, ಜೀರಿಗೆ, ಶೇಂಗಾ ಹಾಕಿ.

* ಸಾಸಿವೆ ಸಿಡಿದ ನಂತರ ಅದಕ್ಕೆ ಹಸಿ ಮೆಣಸಿನಕಾಯಿ, ಶುಂಠಿ ಮತ್ತು ಬೆಳ್ಳುಳ್ಳಿ, ಈರುಳ್ಳಿ ಹಾಕಿ ಒಂದು ನಿಮಿಷ ಹುರಿಯಿರಿ.

* ಅದಕ್ಕೆ ಅರಿಶಿಣ, ಅಚ್ಚ ಖಾರದ ಪುಡಿ, ಕೊತ್ತೊಂಬರಿ ಪುಡಿ ಮತ್ತು ಗರಂ ಮಸಾಲಾ ಪುಡಿ ಸೇರಿಸಿ.

* ಈಗ ಅದಕ್ಕೆ ಕತ್ತರಿಸಿದ ಟೊಮೆಟೊ ಹಾಕಿ.

* ಇಡ್ಲಿ ತುಂಡುಗಳನ್ನು ಸೇರಿಸಿ, ಎಲ್ಲವನ್ನೂ ಚೆನ್ನಾಗಿ ಮಿಕ್ಸ್‌ ಮಾಡಿ.

* ಉಪ್ಪು, ಕೊತ್ತಂಬರಿ ಸೊಪ್ಪು ಸೇರಿಸಿ.

* ಬಿಸಿ ಬಿಸಿ ಮಸಾಲ ಇಡ್ಲಿ ರೆಡಿ. ಇದನ್ನು ಚಟ್ನಿ ಜೊತೆಗೂ ಸವಿಯಬಹುದು.

ನೋಡಿದ್ರಲ್ಲ ಎಷ್ಟು ಸುಲಭ ಅಂತ. ಇನ್ಮುಂದೆ ಇಡ್ಲಿ–ಸಾಂಬಾರ್​​ರ ತಿಂದು ಬೇಜಾರಾಗಿದ್ರೆ ಮಸಾಲಾ ಇಡ್ಲಿ ತಯಾರಿಸಿ.

Whats_app_banner