ಕನ್ನಡ ಸುದ್ದಿ  /  Lifestyle  /  Food Recipe Summer Drinks Healthy Panaka Recipes For Summer Health Benefits Of Desi Panaka Lemon Bela Amrutha Panaka Rst

Summer Drinks: ಬೇಲದ ಹಣ್ಣಿನಿಂದ ಅಮೃತಪಾನಕದವರೆಗೆ; ಬೇಸಿಗೆಯ ದಾಹ ತಣಿಸಿ ಆರೋಗ್ಯ ವೃದ್ಧಿಸುವ ಬಗೆ ಬಗೆ ಪಾನೀಯಗಳಿವು

ಬೇಸಿಗೆಯಲ್ಲಿ ಬಿಸಿಲಿನ ದಾಹ ಹೆಚ್ಚುವ ಕಾರಣ ಒಂದಿಲ್ಲೊಂದು ಸಮಸ್ಯೆ ಕಾಡುತ್ತದೆ. ಸುಸ್ತು, ನಿಶಕ್ತಿ, ತಲೆಸುತ್ತು ಬರುವುದು ಇಂತಹ ಸಮಸ್ಯೆಗಳಿಗೆ ಪಾನಕದಲ್ಲಿದೆ ಪರಿಹಾರ. ಈ ಬಗೆ ಬಗೆ ಪಾನಕಗಳು ನಾಲಿಗೆಗೆ ಸಿಹಿ ರುಚಿ ನೀಡುವುದು ಮಾತ್ರವಲ್ಲ, ಆರೋಗ್ಯಕ್ಕೂ ಉತ್ತಮ.

ಬೇಲದ ಹಣ್ಣಿನಿಂದ ಅಮೃತಪಾನಕದವರೆಗೆ ಬೇಸಿಗೆಯ ದಾಹ ತಣಿಸುವ ಪಾನಕಗಳು
ಬೇಲದ ಹಣ್ಣಿನಿಂದ ಅಮೃತಪಾನಕದವರೆಗೆ ಬೇಸಿಗೆಯ ದಾಹ ತಣಿಸುವ ಪಾನಕಗಳು

ಬೇಸಿಗೆ ಆರಂಭವಾಗಿ ಸುಡು ಬಿಸಿಲು ದೇಹವನ್ನು ದಣಿಸುತ್ತಿದೆ. ಅತಿಯಾದ ಬಿಸಿಲಿನ ಕಾರಣದಿಂದ ನಿಧಾನಕ್ಕೆ ಆರೋಗ್ಯ ಸಮಸ್ಯೆಗಳು ಕಾಡಲು ಆರಂಭಿಸಿವೆ. ಎಷ್ಟೇ ನೀರು ಕುಡಿದರೂ ದಾಹ ತೀರುತ್ತಿಲ್ಲ. ನಾಲಿಗೆ ಒಣಗಿ ಬರುತ್ತದೆ. ಇಂತಹ ಸಮಯದಲ್ಲಿ ದೇಹಾರೋಗ್ಯ ವೃದ್ಧಿಯಾಗುವ ಜೊತೆಗೆ ನಾಲಿಗೆ ರುಚಿ ಹೆಚ್ಚಿಸಿ, ಮನಸ್ಸಿಗೂ ಆಹ್ಲಾದ ನೀಡಲು ಪಾನಕಗಳನ್ನ ಟ್ರೈ ಮಾಡಬಹುದು.

ಬೇಸಿಗೆಗೆ ಹೇಳಿ ಮಾಡಿಸಿರುವ ಬೇಲದ ಹಣ್ಣಿನ ಪಾನಕ, ನಿಂಬೆ ಪಾನಕ, ಹೆಸರುಕಾಳಿನ ಪಾನಕ, ಪುನರ್ಪುಳಿ ಪಾನಕವನ್ನು ನೀವು ಮನೆಯಲ್ಲೂ ತಯಾರಿಸಿ ಕುಡಿಯಬಹುದು. ಇವು ಬೇಸಿಗೆಯಲ್ಲಿ ಕಾಡುವ ಹಲವು ರೀತಿಯ ಸಮಸ್ಯೆಗಳಿಗೂ ಪರಿಹಾರ ನೀಡುವುದರಲ್ಲಿ ಅನುಮಾನವಿಲ್ಲ. ಅಂತಹ ಕೆಲವು ಪಾನಕಗಳು ಹಾಗೂ ಅವುಗಳನ್ನು ತಯಾರಿಸುವ ವಿಧಾನ ಇಲ್ಲಿದೆ.

ಬೇಲದ ಹಣ್ಣಿನ ಪಾನಕ

ಬೇಸಿಗೆಗೆ ಬೇಲದ ಹಣ್ಣಿನ ಪಾನಕಕ್ಕಿಂತ ಉತ್ತಮ ಇನ್ನೊಂದಿಲ್ಲ. ಇದು ಬೇಲದ ಹಣ್ಣಿನ ಸೀಸನ್‌ ಕೂಡ ಹೌದು. ಸುಲಭವಾಗಿ ಸರಳವಾಗಿ ತಯಾರಿಸಬಹುದಾದ ಬೇಲದ ಹಣ್ಣಿನ ಪಾನಕ ಕುಡಿಯುವುದರಿಂದ ಆರೋಗ್ಯಕ್ಕೂ ಸಾಕಷ್ಟು ಪ್ರಯೋಜಗಳಿವೆ.

ಬೇಕಾಗುವ ಸಾಮಗ್ರಿಗಳು: ಬೇಲದ ಹಣ್ಣು - 2, ಬೆಲ್ಲ - ಸ್ವಲ್ಪ, ನೀರು - ಅಗತ್ಯವಿದ್ದಷ್ಟು, ಏಲಕ್ಕಿ ಪುಡಿ - ಚಿಟಿಕೆ, ಉಪ್ಪು - ಚಿಟಿಕೆ

ತಯಾರಿಸುವ ವಿಧಾನ: ಬೇಲದ ಹಣ್ಣಿನ ತಿರುಳನ್ನು ಮಿಕ್ಸಿಯಲ್ಲಿ ರುಬ್ಬಿಕೊಳ್ಳಿ. ಅದನ್ನು ಸೋಸಿ, ನಂತರ ತಯಾರಾದ ಪಾನೀಯಕ್ಕೆ ಅಗತ್ಯವಿದ್ದಷ್ಟು ನೀರು, ಬೆಲ್ಲ, ರುಚಿಗೆ ತಕ್ಕಷ್ಟು ಉಪ್ಪು ಹಾಗೂ ಏಲಕ್ಕಿ ಪುಡಿ ಸೇರಿಸಿದ್ರೆ ಸಖತ್‌ ಟೇಸ್ಟಿ ಹಾಗೂ ಹೆಲ್ತಿ ಬೇಲದ ಪಾನಕ ಕುಡಿಯಲು ರೆಡಿ.

ಬೇಲದ ಹಣ್ಣಿನ ಆರೋಗ್ಯ ಪ್ರಯೋಜನ: ಈ ಹಣ್ಣಿನಲ್ಲಿ ಹಲವು ಬಗೆಯ ಪೋಷಕಾಂಶಗಳಿವೆ. ಅಧಿಕರಕ್ತದೊತ್ತಡ, ಮೂತ್ರಪಿಂಡದ ಕಾಯಿಲೆ, ಆತಂಕದಂತಹ ಸಮಸ್ಯೆಗಳಿಗೆ ಇದು ಮದ್ದು.

ಹೆಸರು ಕಾಳಿನ ಪಾನಕ

ಹೆಸರುಕಾಳು ದೇಹಕ್ಕೆ ತಂಪು ನೀಡುತ್ತದೆ. ಇದರಲ್ಲಿ ಕ್ಯಾಲ್ಸಿಯಂ ಅಂಶವೂ ಸಮೃದ್ಧವಾಗಿದೆ. ಬೇಸಿಗೆಯಲ್ಲಿ ಕಾಡುವ ನಿಶಕ್ತಿ, ಸುಸ್ತು ಇಂತಹ ಸಮಸ್ಯೆಗಳಿಗೆ ಹೆಸರುಕಾಳಿನ ಪಾನಕವೇ ಮದ್ದು. ಇದನ್ನು ತಯಾರಿಸುವುದು ಸುಲಭ.

ಬೇಕಾಗುವ ಸಾಮಗ್ರಿಗಳು: ಹೆಸರುಕಾಳು - 1 ಕಪ್‌, ಬೆಲ್ಲ - ಕಾಲು ಕಪ್‌, ಏಲಕ್ಕಿ - 2, ಉಪ್ಪು - ರುಚಿಗೆ, ತೆಂಗಿನತುರಿ - 2 ಚಮಚ

ತಯಾರಿಸುವ ವಿಧಾನ: ಹೆಸರುಕಾಳನ್ನು ಚೆನ್ನಾಗಿ ತೊಳೆದು ಒಣಗಿಸಿಕೊಳ್ಳಿ. ನಂತರ ಬಾಣಲಿಯಲ್ಲಿ ಹಾಕಿ ಘಮ ಬರುವವರೆಗೂ ಹುರಿದುಕೊಳ್ಳಿ. ಯಾವುದೇ ಕಾರಣಕ್ಕೂ ಹೆಸರುಕಾಳು ಹಸಿಯಾಗಿರಬಾರದು ಅಥವಾ ಅತಿಯಾಗಿ ಹುರಿದುಕೊಳ್ಳುವುದು ಸರಿಯಲ್ಲ. ನಂತರ ಇದನ್ನು ನೀರಿನಲ್ಲಿ ತೊಳೆದುಕೊಳ್ಳಿ. ಈಗ ಹೆಸರುಕಾಳು, ಬೆಲ್ಲ, ತೆಂಗಿನತುರಿ, ಉಪ್ಪು ಹಾಗೂ ಏಲಕ್ಕಿ ಸೇರಿಸಿ ನುಣ್ಣಗೆ ರುಬ್ಬಿಕೊಳ್ಳಿ. ನಂತರ ಅಗತ್ಯವಿದ್ದಷ್ಟು ನೀರು ಸೇರಿಸಿ. ಬೇಕಿದ್ದರೆ ಪ್ರಿಜ್‌ನಲ್ಲಿಟ್ಟು ಕುಡಿಯಿರಿ.

ನಿಂಬೆಹಣ್ಣಿನ ಪಾನಕ

ಬೇಸಿಗೆಗೆ ನಿಂಬೆಹಣ್ಣು ಹೇಳಿ ಮಾಡಿಸಿದ್ದು. ಇದು ದೇಹದಲ್ಲಿ ರೋಗನಿರೋಧಕ ಶಕ್ತಿ ಹೆಚ್ಚಲು ಸಹಾಯ ಮಾಡುತ್ತದೆ. ಬೇಸಿಗೆಯಲ್ಲಿ ಕಾಡುವ ನಿಶಕ್ತಿ, ಪಿತ್ತದಂತಹ ಸಮಸ್ಯೆಗಳಿಗೆ ಇದು ಪರಿಹಾರ.

ಬೇಕಾಗುವ ಸಾಮಗ್ರಿ: ನಿಂಬೆಹಣ್ಣು - 2, ನೀರು - ಅಗತ್ಯವಿದ್ದಷ್ಟು, ಸಕ್ಕರೆ - 4 ಚಮಚ, ಉಪ್ಪು - ಚಿಟಿಕೆ, ಏಲಕ್ಕಿ ಪುಡಿ - ಚಿಟಿಕೆ,

ತಯಾರಿಸುವ ವಿಧಾನ: ನೀರಿಗೆ ನಿಂಬೆರಸ ಹಿಂಡಿಕೊಳ್ಳಿ. ನಂತರ ಇದನ್ನು ಮಿಕ್ಸಿ ಜಾರಿಗೆ ಹಾಕಿ ಅದಕ್ಕೆ ಸಕ್ಕರೆ, ಏಲಕ್ಕಿ ಪುಡಿ, ಉಪ್ಪು ಸೇರಿಸಿ ಒಂದೆರಡು ಸುತ್ತು ಹೊಡೆಸಿ. ನಿಂಬೆ ಪಾನಕವನ್ನು ನೀವು ಪ್ರತಿನಿತ್ಯ ಕೂಡ ತಯಾರಿಸಿ ಕುಡಿಯಬಹುದು.

ರಾಗಿ ಪಾನಕ

ರಾಗಿ ಕೂಡ ಪೋಷಕಾಂಶ ಸಮೃದ್ಧವಾಗಿರುತ್ತದೆ. ಇದರಲ್ಲಿ ಕ್ಯಾಲ್ಸಿಯಂ ಅಂಶ ಕೂಡ ಹೇರಳವಾಗಿರುತ್ತದೆ. ಬೇಸಿಗೆಯಲ್ಲಿ ರಾಗಿ ಪಾನಕ ಕೂಡ ಆರೋಗ್ಯಕ್ಕೆ ಹಲವು ರೀತಿಯಲ್ಲಿ ಪ್ರಯೋಜನಗಳನ್ನು ನೀಡುತ್ತದೆ.

ಬೇಕಾಗುವ ಸಾಮಗ್ರಿಗಳು: ರಾಗಿ - 1 ಕಪ್‌, ಬೆಲ್ಲ - ಕಾಲು ಕಪ್‌, ಏಲಕ್ಕಿ ಪುಡಿ - ಚಿಟಿಕೆ, ಉಪ್ಪು- ಚಿಟಿಕೆ

ತಯಾರಿಸುವ ವಿಧಾನ: ರಾಗಿಯನ್ನು ಚೆನ್ನಾಗಿ ತೊಳೆಯಿರಿ. ಇದನ್ನು ಮಿಕ್ಸಿ ಜಾರಿಗೆ ಹಾಕಿ. ನಂತರ ಉಪ್ಪು, ಬೆಲ್ಲ, ಏಲಕ್ಕಿ ಸೇರಿಸಿ ನುಣ್ಣಗೆ ರುಬ್ಬಿಕೊಳ್ಳಿ. ನಂತರ ಸೋಸಿಕೊಂಡು ಪಾನಕವನ್ನ ಬೇರ್ಪಡಿಸಿ. ಇದನ್ನು ಪ್ರಿಜ್‌ನಲ್ಲಿಟ್ಟು ಕುಡಿದರೆ ಚೆನ್ನಾಗಿರುತ್ತದೆ.

ಅಮೃತಪಾನಕ

ಅಮೃತಪಾನಕ ಸರಳವಾಗಿ ಹಾಗೂ ಸುಲಭವಾಗಿ ತಯಾರಿಸುವ ಪಾನಕವಾಗಿದ್ದು, ಇದು ದೇಹಕ್ಕೆ ಹಲವು ರೀತಿಯ ಪ್ರಯೋಜನಗಳನ್ನು ಹೊಂದಿದೆ.

ಬೇಕಾಗುವ ಸಾಮಗ್ರಿಗಳು: ಅಕ್ಕಿ ತೊಳೆದ ನೀರು - 2 ಲೋಟ, ಹಾಲು - ಅರ್ಧ ಲೋಟ, ಬೆಲ್ಲ - ಕಾಲು ಕಪ್‌, ಏಲಕ್ಕಿ ಪುಡಿ

ತಯಾರಿಸುವ ವಿಧಾನ: ಅಕ್ಕಿ ತೊಳೆದ ನೀರಿಗೆ ಹಾಲು, ಬೆಲ್ಲ ಹಾಗೂ ಏಲಕ್ಕಿ ಪುಡಿ ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಬೇಕು. ಈ ಪಾನಕದ ರುಚಿಯೂ ಭಿನ್ನ.

ಈ ಪಾನಕಗಳನ್ನು ಬೇಸಿಗೆಯಲ್ಲಿ ಆಗಾಗ ಕುಡಿಯುವುದರಿಂದ ಸಾಕಷ್ಟು ಪ್ರಯೋಜನಗಳಿವೆ. ಇದನ್ನೂ ಮನೆಯಲ್ಲೂ ಸುಲಭವಾಗಿ ಹಾಗೂ ಕಡಮೆ ಖರ್ಚಿನಲ್ಲಿ ತಯಾರಿಸಿ ಕುಡಿಯಬಹುದು.

(This copy first appeared in Hindustan Times Kannada website. To read more like this please logon to kannada.hindustantimes.com)