ತರಕಾರಿ ಕತ್ತರಿಸುವಂತಿಲ್ಲ, ಆಲೂಗಡ್ಡೆ ಪಲ್ಯ ಮಾಡುವಂತಿಲ್ಲ; ಈರುಳ್ಳಿ ಇದ್ರೆ ಆನಿಯಸ್ ಮಿನಿ ಸಮೋಸಾ ರೆಡಿ
Onion Samosa Recipe: ಸೂಪರ್ ಮಾರ್ಕೆಟ್‌ಗಲ್ಲಿ ದೊರೆಯುವ ಸಮೋಸಾ ಶೀಟ್ ಮನೆಯಲ್ಲಿದ್ದರೆ ಸಾಕು ಕರುಂ ಕುರಂ ಎನ್ನುವ ರುಚಿಯಾದ ಮಿನಿ ಸಮೋಸಾಗಳನ್ನು ತಯಾರಿಸಬಹುದು. ಈರುಳ್ಳಿ ಫಿಲ್ಲಿಂಗ್ ಇದ್ದರೆ ಸಾಕು.
Onion Samosa Recipe:ಸಂಜೆ 5 ಗಂಟೆ ಆಗ್ತಿದ್ದಂತೆ ನಾಲಗೆ ಏನಾದ್ರೂ ರುಚಿ ರುಚಿಯಾದ ತಿಂಡಿ ಕೇಳುತ್ತೆ ಅಲ್ವೇ? ಅದರಲ್ಲೂ ಈಗ ಚಳಿಗಾಲ, ಏನಾದರೂ ಕ್ರಿಸ್ಪಿ, ಸ್ಲೈಸಿ ತಿಂಡಿ ಇರಲೇಬೇಕು. ಅಂದಹಾಗೆ ನಿಮಗೆ ಸಮೋಸಾ ಇಷ್ಟಾನಾ? ಆ ಸಮೋಸಾ ಅಲ್ಲ, ಕುರು ಕುರು ಮಿನಿ ಸಮೋಸಾ ಬಗ್ಗೆ ನಾವು ಕೇಳ್ತಿರೋದು.
ಆಹಾ, ಹೆಸರು ಕೇಳ್ತಿದ್ದ ಹಾಗೇ ಬಾಯಲ್ಲಿ ನೀರು ಬಂತಾ? ಈ ಸಮೋಸಾ ಮಾಡಲು ನೀವು ತರಕಾರಿ ಕತ್ತರಿಸುವ ಹಾಗಿಲ್ಲ, ಆಲೂಗಡ್ಡೆ ಪಲ್ಯ ಮಾಡುವಂತಿಲ್ಲ. ಸೂಪರ್ ಮಾರ್ಕೆಟ್‌ಗಲ್ಲಿ ದೊರೆಯುವ ಸಮೋಸಾ ಶೀಟ್ ಮನೆಯಲ್ಲಿದ್ದರೆ ಸಾಕು ಕರುಂ ಕುರಂ ಎನ್ನುವ ರುಚಿಯಾದ ಮಿನಿ ಸಮೋಸಾಗಳನ್ನು ತಯಾರಿಸಬಹುದು. ಇದಕ್ಕೆ ಈರುಳ್ಳಿ ಫಿಲ್ಲಿಂಗ್ ಇದ್ದರೆ ಸಾಕು. ಬನ್ನಿ ಹಾಗಾದ್ರೆ ಈರುಳ್ಳಿ ಮಿನಿ ಸಮೋಸಾ ಮಾಡೋಣ.
ಈರುಳ್ಳಿ ಸಮೋಸಾ ತಯಾರಿಸಲು ಬೇಕಾಗುವ ಸಾಮಗ್ರಿಗಳು
- ಸಮೋಸಾ ಶೀಟ್ ತಯಾರಿಸಲು
- ಮೈದಾ ಹಿಟ್ಟು - 2 ಕಪ್
- ಕಾರ್ನ್ ಫ್ಲೋರ್ - 1 ಕಪ್
- ಉಪ್ಪು - ರುಚಿಗೆ ತಕ್ಕಷ್ಟು
ಸ್ಟಫಿಂಗ್‌ಗೆ
- ಈರುಳ್ಳಿ - 3
- ಹಸಿ ಮೆಣಸಿನಕಾಯಿ - 3
- ಕೊತ್ತಂಬರಿ ಸೊಪ್ಪು - 1/2 ಕಟ್ಟು
- ಅಚ್ಚ ಖಾರ ಪುಡಿ - 1 ಟೀ ಸ್ಪೂನ್
- ಗರಂ ಮಸಾಲೆ - 1/4 ಟೀ ಸ್ಪೂನ್
- ಜೀರ್ಗೆ - 1/4 ಟೀ ಸ್ಪೂನ್
- ಅವಲಕ್ಕಿ - 1 ಕಪ್
- ಉಪ್ಪು - ರುಚಿಗೆ ತಕ್ಕಷ್ಟು
ಈರುಳ್ಳಿ ಸಮೋಸಾ ತಯಾರಿಸುವ ವಿಧಾನ
- ಈರುಳ್ಳಿಯನ್ನು ಸಣ್ಣಗೆ ಕತ್ತರಿಸಿಕೊಂಡು ಒಂದು ಬೌಲ್‌ಗೆ ಸೇರಿಸಿ, ಇದಕ್ಕೆ ಸ್ವಲ್ಪ ಉಪ್ಪು, ಹಸಿಮೆಣಸಿನಕಾಯಿ, ಕೊತ್ತಂಬರಿ ಸೊಪ್ಪು ಸೇರಿಸಿ.
2. ಜೊತೆಗೆ ಅಚ್ಚ ಖಾರದ ಪುಡಿ, ಜೀರ್ಗೆ ಪುಡಿ, ಗರಂ ಮಸಾಲೆ, ಅವಲಕ್ಕಿ ಸೇರಿಸಿ ಎಲ್ಲವನ್ನೂ ಮಿಕ್ಸ್ ಮಾಡಿ. ಈ ಮಿಶ್ರಣವನ್ನು ಒಂದು ಕಡೆ ಇಟ್ಟು ಸಮೋಸಾ ಶೀಟ್ ತಯಾರಿಸಿಕೊಳ್ಳಿ.
3. ಮೊದಲು ಸಮೋಶಾ ಶೀಟ್ ತಯಾರಿಸಿಕೊಳ್ಳಬೇಕು, ಇದು ಸೂಪರ್ ಮಾರ್ಕೆಟ್‌ಗಳಲ್ಲಿ ರೆಡಿ ದೊರೆಯುತ್ತದೆ. ನಿಮಗೆ ಹೊರಗೆ ತರುವುದು ಇಷ್ಟವಿಲ್ಲದಿದ್ದರೆ ಮನೆಯಲ್ಲೇ ತಯಾರಿಸಿಕೊಳ್ಳಬಹುದು.
4. ಒಂದು ಬೌಲ್‌ನಲ್ಲಿ ಮೈದಾ ಹಿಟ್ಟು, ಕಾರ್ನ್ ಫ್ಲೋರ್, ಉಪ್ಪು ಮಿಕ್ಸ್ ಮಾಡಿ ಸ್ವಲ್ಪ ಸ್ವಲ್ಪವೇ ನೀರು ಸೇರಿಸಿ ಚಪಾತಿ ಹಿಟ್ಟಿನ ಹದಕ್ಕೆ ಮಿಕ್ಸ್ ಮಾಡಿಕೊಳ್ಳಿ.
5. ಹತ್ತು ನಿಮಿಷದ ನಂತರ ಹಿಟನ್ನು ಸಣ್ಣ ಸಣ್ಣ ಉಂಡೆಗಳನ್ನಾಗಿ ಮಾಡಿಕೊಂಡು ರುಮಾಲ್ ರೋಟಿ ರೀತಿ ತೆಳುವಾಗಿ ಒತ್ತಿಕೊಳ್ಳಿ.
6. ಹೀಗೆ ಒತ್ತಿಕೊಂಡು ಚಪಾತಿಗಳನ್ನು ತವಾದಲ್ಲಿ ಎರಡೂ ಬದಿ 10-10 ಸೆಕೆಂಡ್ ಬೇಯಿಸಿಕೊಳ್ಳಿ ( ಚಪಾತಿಯಂತೆ ಬೇಯಿಸಬೇಡಿ) .
7. ನಂತರ ಈ ಚಪಾತಿಗಳನ್ನು ಸಮೋಸಾ ಶೀಟ್‌ಗಳಂತೆ ಕತ್ತರಿಸಿಕೊಳ್ಳಿ, ಶೀಟ್‌ಗಳು ಇದೇ ರೀತಿ ಮೆದುವಾಗಿರಬೇಕೆಂದರೆ ಒದ್ದೆ ಬಟ್ಟೆ ಮುಚ್ಚಿ ( ಒದ್ದೆ ಮಾಡಿ ಚೆನ್ನಾಗಿ ನೀರು ಹಿಂಡಿದ ಬಟ್ಟೆ)
8. ಎರಡು ಚಮಚ ಮೈದಾಹಿಟ್ಟಿಗೆ ಸ್ವಲ್ಪ ನೀರು ಸೇರಿಸಿ ಪೇಸ್ಟ್ ಮಾಡಿಕೊಳ್ಳಿ.
9. ಈ ಶೀಟ್‌ಗಳನ್ನು ಚುರುಮುರಿ ಕವರ್‌ನಂತೆ ಸುತ್ತಿಕೊಂಡು ಅದರಲ್ಲಿ ಈರುಳ್ಳಿ ಫಿಲ್ಲಿಂಗ್ ಸೇರಿಸಿ, ಅಂಚುಗಳು ಬಿಡದಂತೆ ಮೈದಾ ಪೇಸ್ಟ್ ಅಂಟಿಸಿ.
10. ಸಮೋಸಾಗಳನ್ನು ಬಿಸಿ ಎಣ್ಣೆಯಲ್ಲಿ ಕಂದು ಬಣ್ಣ ಬರುವರೆಗೂ ಕರಿಯಿರಿ.
ಗಮನಿಸಿ: ಈರುಳ್ಳಿ ಫಿಲ್ಲಿಂಗ್‌ಗೆ ಅವಲಕ್ಕಿ ಸೇರಿಸುವುದರಿಂದ ಅದು ಈರುಳ್ಳಿಯಲ್ಲಿ ಬಿಡುವ ನೀರನ್ನು ಹೀರಿಕೊಂಡು ಸಮೋಸಾ ಮೆತ್ತಗಾಗುವುದನ್ನು ತಡೆಯುತ್ತದೆ. ಆದ್ದರಿಂದ ಮರೆಯದೆ ಅವಲಕ್ಕಿ ಬಳಸಿ, ಇದರಿಂದ ಸಮೋಸಾ ಯಾವಾಗಲೂ ಕ್ರಿಸ್ಪಿಯಾಗಿರುತ್ತದೆ.
ವಿಭಾಗ