1,2,3,4 ರೂಲ್ಸ್ ಫಾಲೋ ಮಾಡಿ ಮದುವೆ ಮನೆ ಶೈಲಿಯ ರುಚಿಯಾದ ಪೈನಾಪಲ್ ಕೇಸರಿಬಾತ್ ತಯಾರಿಸಿ; ರೆಸಿಪಿ ಇಲ್ಲಿದೆ
ಕರ್ನಾಟಕದ ಅಥೆಂಟಿಕ್ ರೆಸಿಪಿಗಳಲ್ಲಿ ಕೇಸರಿಬಾತ್ ಕೂಡಾ ಒಂದು. ಬಾಯಲ್ಲಿ ಇಟ್ಟರೆ ಕರಗುವ ಈ ಸಿಹಿತಿಂಡಿಗೆ ಒಂದಿಷ್ಟು ಪೈನಾಪಲ್ ಸೇರಿಸಿದರೆ ರುಚಿ ಇನ್ನಷ್ಟು ಹೆಚ್ಚುತ್ತದೆ. ಹೋಟೆಲ್, ಮದುವೆ ಮನೆ ಶೈಲಿಯಂತೆ ನೀವು ಕೇಸರಿಬಾತ್ ತಯಾರಿಸಬೇಕು ಎಂದಿದ್ದರೆ ಇಲ್ಲಿ ತಿಳಿಸಿರುವ 1,2,3,4 ರೂಲ್ಸ್ ಫಾಲೋ ಮಾಡಿ.
ಕೇಸರಿಬಾತ್ ಕರ್ನಾಟಕದ ಅಥೆಂಟಿಕ್ ರೆಸಿಪಿ. ಉಪ್ಪಿಟ್ಟು ಇರುವಲ್ಲಿ ಕೇಸರಿಬಾತ್ ಇಲ್ಲದಿದ್ದರೆ ಅದಕ್ಕೆ ಒಂದು ಕಳೆಯೇ ಇರೋದಿಲ್ಲ ಬಿಡಿ. ಉಪ್ಪಿಟ್ಟಿನ ಜೊತೆ ಮಾತ್ರವಲ್ಲ ಇಡ್ಲಿ, ಪೊಂಗಲ್, ಬಿಸಿಬೇಳೆ ಬಾತ್ ಹೀಗೆ ಉಪಹಾರದೊಂದಿಗೆ ಕೇಸರಿಬಾತ್‌ನಂಥ ಸಿಹಿ ಇದ್ದರೆ ತಿಂದವರಿಗೆ ದುಪ್ಪಟ್ಟು ತೃಪ್ತಿ ಸಿಗುತ್ತೆ.
ರವೆ, ತುಪ್ಪ, ಸಕ್ಕರೆ, ಹಾಲು ಬಳಸಿ ತಯಾರಿಸಲಾಗುವ ಈ ಸಿಹಿಗೆ ಪೈನಾಪಲ್ ಸೇರಿಸಿದರೆ ರುಚಿ ಇನ್ನಷ್ಟು ಹೆಚ್ಚಾಗುತ್ತದೆ. ಸಾಮಾನ್ಯವಾಗಿ ಹೋಟೆಲ್, ಮದುವೆ ಮನೆಗಳಲ್ಲಿ ಈ ರೀತಿ ಪೈನಾಪಲ್ ಕೇಸರಿಬಾತ್ ತಿಂದಿರುತ್ತೇವೆ. ಮನೆಯಲ್ಲೂ ಒಮ್ಮೆ ಟ್ರೈ ಮಾಡೋಣ ಅಂದ್ರೆ ಆ ರೀತಿ ರುಚಿ ಬರ್ತಾನೇ ಇಲ್ಲ ಅಂತ ಕೆಲವರು ಬೇಸರ ಮಾಡಿಕೊಳ್ತಾರೆ. ಆದ್ರೆ ನೀವು ಅದಕ್ಕೆ ಬೇಕಾದ ಎಲ್ಲಾ ಸಾಮಗ್ರಿಗಳನ್ನು ಇಂತಿಷ್ಟು ಅಳತೆಯಲ್ಲಿ ಬಳಸಿದರೆ ಹೋಟೆಲ್ ಹಾಗೂ ಮದುವೆ ಮನೆಯಷ್ಟೇ ರುಚಿಯಾದ ಕೇಸರಿ ಬಾತ್ ತಯಾರಿಸಬಹುದು. ನೀವು 1,2,3,4 ರೂಲ್ಸ್ ಫಾಲೋ ಮಾಡಿದರೆ ಸಾಕು, ನೀವು ಬಯಸಿದ ಕೇಸರಿ ಬಾತ್ ರೆಡಿಯಾಗುತ್ತದೆ. ಏನಿದು 1,2,3,4 ರೂಲ್ಸ್? ನೋಡೋಣ ಬನ್ನಿ.
ಪೈನಾಪಲ್ ಕೇಸರಿಬಾತ್ ತಯಾರಿಸಲು ಬೇಕಾಗುವ ಸಾಮಗ್ರಿಗಳು
- ತುಪ್ಪ - 1 ಕಪ್
- ಮೀಡಿಯಂ ರವೆ- 2 ಕಪ್
- ಸಕ್ಕರೆ - 3 ಕಪ್
- ಹಾಲು/ನೀರು - 4 ಕಪ್
- ದ್ರಾಕ್ಷಿ, ಗೋಡಂಬಿ - 2 ಟೇಬಲ್ ಸ್ಪೂನ್
- ಪೈನಾಪಲ್ ತುಂಡುಗಳು - 1 ಕಪ್
- ಕೇಸರಿ ದಳ - 1/2 ಟೀ ಸ್ಪೂನ್
- ಏಲಕ್ಕಿ ಪುಡಿ - 1/2 ಟೀ ಸ್ಪೂನ್
ಇದನ್ನೂ ನೋಡಿ: ಈ ಬಾರಿ ಚೌತಿಗೆ ಚಕ್ಕುಲಿ ಮಾಡೋದು ಹೇಗಪ್ಪ ಎಂಬ ಯೋಚನೆ ಬೇಡ; ತುಂಬಾ ಸುಲಭವಾಗಿ ಮಾಡಬಹುದಾದ ರೆಸಿಪಿ ಇಲ್ಲಿದೆ
ಪೈನಾಪಲ್ ಕೇಸರಿಬಾತ್ ತಯಾರಿಸುವ ವಿಧಾನ
- ಕೇಸರಿ ದಳಗಳನ್ನು ಒಂದೆರಡು ಚಮಚ ಹಾಲಿನಲ್ಲಿ ಸೇರಿಸಿ ನೆನೆಯಲು ಬಿಡಿ
- ಒಂದು ದಪ್ಪ ತಳದ ಪಾತ್ರೆಯಲ್ಲಿ ತುಪ್ಪ ಬಿಸಿ ಮಾಡಿ ಕರಗಲು ಬಿಡಿ, ಉರಿ ಕಡಿಮೆ ಇರಲಿ
- ತುಪ್ಪ ಕರಗಿದ ನಂತರ ಗೋಡಂಬಿ, ದ್ರಾಕ್ಷಿಯನ್ನು ಹುರಿದು ತೆಗೆದಿಟ್ಟುಕೊಳ್ಳ
- ಅದೇ ತುಪ್ಪಕ್ಕೆ ರವೆ ಸೇರಿಸಿ ಬಣ್ಣ ಬದಲಾಗಿ ಸುವಾಸನೆ ಬರುವರೆಗೂ ಹುರಿದುಕೊಳ್ಳಿ
- ರವೆ ಕಂದು ಬಣ್ಣಕ್ಕೆ ಬಂದ ನಂತರ ಸಕ್ಕರೆ ಸೇರಿಸಿ ಚೆನ್ನಾಗಿ ತಿರುವಿ ನಂತರ ಹಾಲಿನಲ್ಲಿ ನೆನೆಸಿದ ಕೇಸರಿ ಹಾಕಿ ಮಿಕ್ಸ್ ಮಾಡಿ
- ಸಕ್ಕರೆ ಕರಗಿದ ನಂತರ ಹಾಲು/ನೀರು ಸೇರಿಸಿ ತಿರುವಿ, ಒಂದೆರಡು ನಿಮಿಷದ ನಂತರ ಸಣ್ಣಗೆ ಕತ್ತರಿಸಿದ ಪೈನಾಪಲ್ ತುಂಡುಗಳನ್ನು ಸೇರಿಸಿ ಮತ್ತೆ ತಿರುವಿ
- ಪಾತ್ರೆ ಮೇಲೆ ಮುಚ್ಚಳ ಮುಚ್ಚಿ 5 ನಿಮಿಷ ಬಿಡಿ, ನಂತರ ಏಲಕ್ಕಿ ಪುಡಿ, ಮೊದಲು ಹುರಿದುಕೊಂಡ ದ್ರಾಕ್ಷಿ, ಗೋಡಂಬಿ ಸೇರಿಸಿ ಮಿಕ್ಸ್ ಮಾಡಿದರೆ ಕೇಸರಿ ಬಾತ್ ರೆಡಿ
- 1 ಕಪ್ ತುಪ್ಪ, 2 ಕಪ್ ರವೆ, 3 ಕಪ್ ಸಕ್ಕರೆ, 4 ಕಪ್ ಹಾಲು/ನೀರು ಇದೇ ರುಚಿಯಾದ ಪೈನಾಪಲ್ ಕೇಸರಿಬಾತ್ ತಯಾರಿಸಲು ನಿಮಗೆ ಸಹಾಯ ಮಾಡುವ ಟಿಪ್ಸ್. ಇದನ್ನು ಫಾಲೋ ಮಾಡಿದರೆ ನೀವೂ ಕುಕಿಂಗ್ ಎಕ್ಸ್‌ಪರ್ಟ್ ಆಗಬಹುದು.
ಗಮನಿಸಿ: ಕೇಸರಿಬಾತ್ ತಯಾರಿಸಲು ದಪ್ಪ ತಳದ ಪಾತ್ರೆ ಬಳಸಿಕೊಳ್ಳಿ.
ನಿಮಗೆ ಸಂಪೂರ್ಣ ಹಾಲು ಬಳಸಲು ಇಷ್ಟವಿಲ್ಲದಿದ್ದರೆ 2 ಗ್ಲಾಸ್ ಹಾಲು , 2 ಗ್ಲಾಸ್ ನೀರನ್ನು ಸಮ ಪ್ರಮಾಣದಲ್ಲಿ ಸೇರಿಸಬಹುದು. ಅಥವಾ 4 ಕಪ್ ಬಿಸಿ ನೀರನ್ನೇ ಕೇಸರಿಬಾತ್ ಮಾಡಲು ಬಳಸಬಹುದು.
ದ್ರಾಕ್ಷಿ, ಗೋಡಂಬಿ ಜೊತೆಗೆ ಪಿಸ್ತಾ, ಬಾದಾಮಿ ಚೂರುಗಳನ್ನೂ ಸೇರಿಸಬಹುದು.
ಸಿಹಿ ಕಡಿಮೆ ಇರಲಿ ಎನಿಸಿದರೆ 3 ಕಪ್ ಬದಲಿಗೆ 2 ಕಪ್ ಹಾಕಿದರೆ ಸಾಕು.
ಮೀಡಿಯಂ ರವೆ ಇಷ್ಟವಿಲ್ಲದಿದ್ದರೆ ಚಿರೋಟಿ ರವೆ ಬಳಸಬಹುದು.
ಮತ್ತೇಕೆ ತಡ ಇಂದೇ ಈ ರೂಲ್ಸ್ ಫಾಲೋ ಮಾಡಿ ಮದುವೆ ಮನೆ ಶೈಲಿಯ ಬಾಯಲ್ಲಿ ನೀರೂರುವ ಪೈನಾಪಲ್ ಕೇಸರಿಬಾತ್ ತಯಾರಿಸಿ ನಿಮ್ಮ ಪ್ರೀತಿಪಾತ್ರರಿಗೆ ಸರ್ವ್ ಮಾಡಿ.
ವಿಭಾಗ