ಕನ್ನಡ ಸುದ್ದಿ  /  ಜೀವನಶೈಲಿ  /  ಮಾವಿನ ಸೀಸನ್‌ ಮುಗಿಯುವ ಮುನ್ನ ಹಪ್ಪಳ, ಜಾಮ್‌, ಕ್ಯಾಂಡಿ ಮಾಡಿಟ್ಟುಕೊಳ್ಳಿ; ವರ್ಷಪೂರ್ತಿ ಮಾವಿನ ರುಚಿ ಸವಿಯಿರಿ, ತಯಾರಿಸೋದು ಹೇಗೆ ನೋಡಿ

ಮಾವಿನ ಸೀಸನ್‌ ಮುಗಿಯುವ ಮುನ್ನ ಹಪ್ಪಳ, ಜಾಮ್‌, ಕ್ಯಾಂಡಿ ಮಾಡಿಟ್ಟುಕೊಳ್ಳಿ; ವರ್ಷಪೂರ್ತಿ ಮಾವಿನ ರುಚಿ ಸವಿಯಿರಿ, ತಯಾರಿಸೋದು ಹೇಗೆ ನೋಡಿ

ಮಾವಿನಹಣ್ಣು ವರ್ಷಪೂರ್ತಿ ಸಿಗುವಂತಿದ್ದರೆ ಎಷ್ಟು ಚೆನ್ನಾಗಿರತ್ತೆ ಅಲ್ವಾ? ಸೀಸನ್‌ ಮುಗಿದ ಮೇಲೆ ಮಾವಿನ ಹಣ್ಣು ಸಿಗೋದೇ ಇಲ್ಲವಲ್ಲಾ ಅಂತ ಯೋಚಿಸಬೇಡಿ. ಯಾವಾಗ ಬೇಕಾದರೂ ಮಾವಿನಹಣ್ಣಿನ ರುಚಿಯನ್ನು ಸವಿಯಬೇಕೆಂದರೆ ಈ ವಿಭಿನ್ನ ಖಾದ್ಯಗಳನ್ನು ತಯಾರಿಸಿಟ್ಟುಕೊಳ್ಳಿ. ವರ್ಷಪೂರ್ತಿ ಮಾವಿನ ಸ್ವಾದ ಸವಿಯಬಹುದು. (ಬರಹ: ಭಾಗ್ಯ ದಿವಾಣ)

ಮಾವಿನ ಸೀಸನ್‌ ಮುಗಿಯುವ ಮುನ್ನ ಹಪ್ಪಳ, ಜಾಮ್‌, ಕ್ಯಾಂಡಿ ಮಾಡಿಟ್ಟುಕೊಳ್ಳಿ; ವರ್ಷಪೂರ್ತಿ ಮಾವಿನರುಚಿ ಸವಿಯಿರಿ,
ಮಾವಿನ ಸೀಸನ್‌ ಮುಗಿಯುವ ಮುನ್ನ ಹಪ್ಪಳ, ಜಾಮ್‌, ಕ್ಯಾಂಡಿ ಮಾಡಿಟ್ಟುಕೊಳ್ಳಿ; ವರ್ಷಪೂರ್ತಿ ಮಾವಿನರುಚಿ ಸವಿಯಿರಿ,

ಹಣ್ಣುಗಳ ರಾಜ ಮಾವಿನಹಣ್ಣನ್ನು ಪ್ರತಿದಿನ ತಿನ್ನುತ್ತಲೇ ಇದ್ದರೂ ಸಾಕು ಅನ್ನಿಸುವುದೇ ಇಲ್ಲ. ಹಣ್ಣು ತಿಂದು, ಅದರಿಂದ ಅನೇಕ ಬಗೆಯ ಸಿಹಿತಿನಿಸುಗಳನ್ನು ತಯಾರಿಸಿ ಸವಿದರೂ ಮಾವಿನಹಣ್ಣಿನಿಂದ ಇನ್ನಷ್ಟು ಮತ್ತಷ್ಟು ಹೊಸ ಬಗೆಯ ಖಾದ್ಯಗಳನ್ನು ಸವಿಯೋಣ ಅನ್ನಿಸುತ್ತಿರುತ್ತದೆ. ಹೌದು, ಮಾವಿನ ರುಚಿಯೇ ಹಾಗೆ. ಆರೋಗ್ಯದ ದೃಷ್ಟಿಯಿಂದ ಅತಿಯಾಗಿ ತಿನ್ನುವುದು ಬೇಡವೆಂದು ಅದೆಷ್ಟು ಬಾರಿ ನಿಯಂತ್ರಿಸಿದರೂ, ಮತ್ತೆ ಮತ್ತೆ ತಿನ್ನಬೇಕೆಂಬ ಹಂಬಲ ಕಾಡೋದಕ್ಕೆ ಶುರುವಾಗುತ್ತದೆ.

ಟ್ರೆಂಡಿಂಗ್​ ಸುದ್ದಿ

ಆದರೆ, ಇನ್ನೆರಡು ತಿಂಗಳು ಕಳೆದರೆ ಮಾವಿನ ಹಣ್ಣಿನ ಸೀಸನ್‌ ಮುಗಿದೇಬಿಟ್ಟಿರುತ್ತದೆ. ಮಳೆಗಾಲ ಶುರುವಾದ ಮೇಲಂತೂ ಮಾವಿನಹಣ್ಣು ಹುಡುಕಿದರೂ ಯಾವ ಮಾರುಕಟ್ಟೆಗಳಲ್ಲೂ ಸಿಗುವುದು ತುಸು ಕಷ್ಟವೇ ಹಾಗೂ ಹೀಗೂ ಸಿಕ್ಕೇಬಿಟ್ಟಿತೆಂದರೂ ಕೊಂಡುಕೊಳ್ಳಲು ಮಾವು ಬಲು ದುಬಾರಿಯೂ ಆಗಿರುತ್ತದೆ. ಹಾಗಾದರೆ ಮಾವಿನ ಹಣ್ಣಿನ ರುಚಿಯನ್ನು ಮಳೆಗಾಲ ಮುಗಿದ ಮೇಲೂ ಸವಿಯಬೇಕೆಂದರೆ ಏನು ಮಾಡೋದು? ಈ ಪ್ರಶ್ನೆ ಮಾವು ಪ್ರಿಯರನ್ನು ಕಾಡದೇ ಇರದು. ಹೌದು, ಮಾವಿನ ಹಣ್ಣಿನ ರುಚಿಯನ್ನು ಎಲ್ಲಕಾಲದಲ್ಲೂ ಸವಿಯುವುದಕ್ಕಾಗಿ ಅನೇಕ ವಿಧಾನಗಳನ್ನು ನಾವು ಅನುಸರಿಸಬಹುದು.

ಮಾವಿನಹಣ್ಣಿನ ಜಾಮ್‌

ಬೇಕಾಗುವ ಸಾಮಗ್ರಿಗಳು: ಅರ್ಧ ಕೆಜಿ ಮಾವಿನಹಣ್ಣು, ಕಾಲು ಕೆಜಿ ಸಕ್ಕರೆ, 1 ಚಮಚ ನಿಂಬೆ ಹಣ್ಣಿನ ರಸ

ಮಾಡುವ ವಿಧಾನ: ಮಿಕ್ಸಿ ಜಾರಿಗೆ ಎರಡು ಕಪ್‌ ಅಳತೆಯ ಮಾವಿನ ಹಣ್ಣನ್ನು ಹಾಕಿ ನುಣ್ಣಗೆ ರುಬ್ಬಿಕೊಳ್ಳಿ. ನಂತರ ಒಂದು ಬಾಣಲೆಗೆ ಈ ಮಿಶ್ರಣವನ್ನು ಹಾಕಿ, ಒಂದು ಕಪ್‌ ಅಳತೆಯ ಸಕ್ಕರೆಯನ್ನೂ ಸೇರಿಸಿ, ಮಧ್ಯಮ ಉರಿಯಲ್ಲಿ ಅಂದಾಜು 20 ನಿಮಿಷಗಳ ಕಾಲ ಚೆನ್ನಾಗಿ ಬೇಯಿಸಿ. ನಂತರ ನೀರಿನ ಅಂಶ ಆರುತ್ತಾ ಬಂದಾಗ, ನಿಂಬೆ ಹಣ್ಣಿನ ರಸವನ್ನು ಇದಕ್ಕೆ ಸೇರಿಸಿ, ಚೆನ್ನಾಗಿ ಮಿಶ್ರ ಮಾಡಿಕೊಳ್ಳಿ. ನಂತರ 5 ನಿಮಿಷ ಸಣ್ಣ ಉರಿಯಲ್ಲಿ ಕುದಿಯಲು ಬಿಟ್ಟು ಸ್ಟೌವ್‌ ಆಫ್‌ ಮಾಡಿಕೊಳ್ಳಿ. ತಣ್ಣಗಾದ ನಂತರ ಈ ಮಾವಿನ ಹಣ್ಣಿನ ಜಾಮನ್ನು ಗಾಜಿನ ಬಾಟಲ್‌ನಲ್ಲಿ ಶೇಖರಿಸಿಕೊಂಡರೆ ವರ್ಷದವರೆಗೂ ಕೆಟ್ಟುಹೋಗುವುದಿಲ್ಲ. ಮಕ್ಕಳಿಗೆ ಬ್ರೆಡ್‌ ಮೇಲೆ ಹರಡಿ ತಿನ್ನುವುದಕ್ಕೆ, ದೋಸೆ, ಚಪಾತಿಯೊಂದಿಗೆ ನೆಚ್ಚಿಕೊಳ್ಳುವುದಕ್ಕೆ ಇದು ಸೂಕ್ತ ಆಯ್ಕೆ.

ಮಾವಿನಹಣ್ಣಿನ ಹಪ್ಪಳ

ಬೇಕಾಗುವ ಸಾಮಗ್ರಿಗಳು: ಮಾವಿನ ಹಣ್ಣು 2, ಸಕ್ಕರೆ 1ಕಪ್‌, ಒಂದು ಚಿಟಿಕೆ ಉಪ್ಪು

ತಯಾರಿಸುವ ವಿಧಾನ: ಎರಡು ಮಾವಿನ ಹಣ್ಣನ್ನು ಸಿಪ್ಪೆ ತೆಗೆದು ಸಣ್ಣಗೆ ಕತ್ತರಿಸಿಕೊಂಡು ಗ್ರೈಂಡ್‌ ಮಾಡಿಕೊಳ್ಳಿ. ಮತ್ತೊಂದು ಪ್ಯಾನ್‌ನಲ್ಲಿ ಈ ಮಿಶ್ರಣವನ್ನು ಹಾಕಿಕೊಂಡು ಇದಕ್ಕೆ ಬೇಕಾದಷ್ಟು ಸಕ್ಕರೆ ಹಾಗೂ ಒಂದು ಚಿಟಿಕೆ ಉಪ್ಪು ಹಾಕಿ ಮಿಶ್ರ ಮಾಡಿ ಚೆನ್ನಾಗಿ ಕುದಿಸಿಕೊಳ್ಳಿ. ನೀರಿನ ಅಂಶ ಬತ್ತುತ್ತಾ ಬಂದಾಗ ಇದಕ್ಕೆ ಅರ್ಧ ನಿಂಬೆ ಹಣ್ಣಿನ ರಸವನ್ನು ಹಾಕಿಕೊಂಡು ನೀರು ಆರಿದ ನಂತರ ಬಟರ್‌ ಫೇಪರ್‌ ಹಾಕಿದ ಬಟ್ಟಲಿಗೆ ಇದನ್ನು ಹಾಕಿ ಹರಡಿಕೊಳ್ಳಿ. ಎರಡು ದಿವಸ ಬಿಸಿಲಿನಲ್ಲಿ ಒಣಗಿಸಿಕೊಂಡು, ರೋಲ್‌ ಮಾಡಿಟ್ಟುಕೊಂಡರೆ ಮಾವಿನಹಣ್ಣಿನ ಹಪ್ಪಳವನ್ನು ವರ್ಷ ಪೂರ್ತಿ ಸವಿಯಬಹುದು.

ಮಾವಿನಕಾಯಿಯ ಕ್ಯಾಂಡಿ

ಬೇಕಾಗುವ ಸಾಮಗ್ರಿಗಳು: 4 ತೋತಾಪುರಿ ಮಾವಿನಹಣ್ಣು, ಒಂದು ಕಪ್‌ ಸಕ್ಕರೆ, ಅರ್ಧ ಕಪ್‌ ನೀರು, ಚಿಟಿಕೆ ಅರಿಶಿನಪುಡಿ,

ತಯಾರಿಸುವ ವಿಧಾನ: ನಾಲ್ಕು ತೋತಾಪುರಿ ಮಾವಿನಕಾಯಿ ತೆಗೆದುಕೊಂಡು ಸಿಪ್ಪೆ ತೆಗೆದು ಉದ್ದುದ್ದಕ್ಕೆ ತುಂಡರಿಸಿಕೊಳ್ಳಿ. ಬಾಣಲೆಗೆ ಒಂದು ಕಪ್‌ ಸಕ್ಕರೆ, ಅರ್ಧ ಕಪ್‌ ನೀರು ಹಾಕಿ ಸಕ್ಕರೆ ಪಾಕ ಮಾಡಿಕೊಳ್ಳಿ. ಈ ಪಾಕಕ್ಕೆ ಕತ್ತರಿಸಿಟ್ಟುಕೊಂಡ ಮಾವಿನಕಾಯಿ ಹಾಕಿಕೊಂಡು, ಸ್ವಲ್ಪ ಅರಿಶಿನ ಪುಡಿ ಹಾಕಿ 5 ನಿಮಿಷ ಬೇಯಿಸಿಕೊಳ್ಳಿ. ಈಗ ಗ್ಯಾಸ್‌ ಆಫ್‌ ಮಾಡಿ ಆರಲು ಬಿಡಿ. 2 ದಿನ ಬಿಸಿಲಲ್ಲಿ ಒಣಗಿಸಿಕೊಳ್ಳಿ. ಎರಡು ದಿನಗಳ ನಂತರ ಒಣಗಿದ ಮಾವಿನ ಹೋಳುಗಳಿಗೆ ಬೇಕಾದಷ್ಟು ಸಕ್ಕರೆ ಪುಡಿ ಸೇರಿಸಿಕೊಂಡು ಗ್ಲಾಸ್‌ ಜಾರಿನಲ್ಲಿ ಹಾಕಿಕೊಂಡರೆ ವರ್ಷವರೆಗೂ ತಿನ್ನಬಹುದು.

ಇನ್ನೇತಕ್ಕೆ ಚಿಂತೆ. ಮಾವಿನ ಹಣ್ಣಿನ ಸೀಸನ್‌ ಇರುವಾಗಲೇ ಈ ರುಚಿಕರ ಹಪ್ಪಳ, ಕ್ಯಾಂಡಿ, ಜಾಮ್‌ ತಯಾರಿಸಿಟ್ಟುಕೊಳ್ಳಿ. ಮುಂದಿನ ವರ್ಷದವರೆಗೂ ಯಾವಾಗಬೇಕೆಂದರೂ ಮಾವಿನ ರುಚಿಯನ್ನು ಸವಿಯಬಹುದು.

ವಿಭಾಗ