ವೆಜ್ ಸಾಂಬಾರ್‌ಗೆ ವಿಶೇಷ ರುಚಿ ನೀಡುತ್ತೆ ಈ ಮಸಾಲೆ ಪುಡಿ; ಇದನ್ನ ಮನೆಯಲ್ಲೂ ಸುಲಭವಾಗಿ ಮಾಡಿಟ್ಟುಕೊಳ್ಳಬಹುದು, ರೆಸಿಪಿ ಇಲ್ಲಿದೆ
ಎಲ್ಲಾ ರೀತಿಯ ವೆಜ್ ಸಾಂಬಾರ್‌ಗಳು ರುಚಿ ಎನ್ನಿಸುವುದಿಲ್ಲ. ಕೆಲವೊಮ್ಮೆ ಎಷ್ಟೇ ಟೇಸ್ಟಿ ಆಗಿ ಮಾಡಿದ್ರು ಬಾಯಿಗೆ ರುಚಿಸೊಲ್ಲ. ವೆಜ್ ಸಾಂಬಾರ್ ಸಖತ್ ಟೇಸ್ಟಿ ಆಗಿ ಇರ್ಬೇಕು ಅಂದ್ರೆ ಈ ಮಸಾಲೆ ಪುಡಿ ಸೇರಿಸಬೇಕು. ಇದರಿಂದ ವೆಜ್ ಕರಿಗಳಿಗೆ ಬೇರೇನೆ ರುಚಿ ಬರುತ್ತದೆ. ಈ ಮಸಾಲೆ ಪುಡಿಯನ್ನು ಮನೆಯಲ್ಲೇ ಸುಲಭವಾಗಿ ತಯಾರಿಸಬಹುದು.

ತರಕಾರಿ ಸಾಂಬಾರ್ ತಿನ್ನಲು ಇಷ್ಟವಿಲ್ಲ ಎನ್ನುವವರಿಗೂ ವೆಜ್ ಅಂದ್ರೆ ಇಷ್ಟ ಎನ್ನುವಂತೆ ಮಾಡಲು ಒಂದು ಐಡಿಯಾ ಇದೆ. ಈ ರೀತಿ ಮಾಡಿದ್ರೆ ಸಾಂಬಾರ್‌ಗೆ ಹೊಸ ರುಚಿ ಸಿಗುತ್ತೆ, ಅದೇನಪ್ಪಾ ಅಂತೀರಾ, ಅದುವೆ ಮಸಾಲೆ ಪುಡಿ. ವೆಬ್ ಕರಿ ಮಾಡುವಾಗ ಈ ಮಸಾಲೆ ಪುಡಿ ಸೇರಿಸಿದ್ರೆ ಸಖತ್ ಟೇಸ್ಟಿ ಆಗಿರುತ್ತೆ. ಇದನ್ನು ಒಮ್ಮೆ ಮಾಡಿಟ್ಟುಕೊಂಡರೆ ಮೂರ್ನಾಲ್ಕು ತಿಂಗಳು ಬಳಸಬಹುದು.
ತರಕಾರಿ ಸಾಂಬಾರ್ ಅಥವಾ ಕರಿ ಮಾಡುವಾಗ ಒಂದೇ ಒಂದು ಚಮಚ ಈ ಪುಡಿ ಸೇರಿಸಿದ್ರೆ ಅದರ ರುಚಿಯೇ ಬದಲಾಗುತ್ತೆ. ಇದನ್ನು ಎಲ್ಲಾ ರೀತಿಯ ತರಕಾರಿ ಸಾಂಬಾರ್‌ಗೂ ಬಳಸಬಹುದು. ತುಂಬಾ ಸುಲಭವಾಗಿ, ಕಡಿಮೆ ಸಾಮಗ್ರಿ ಬಳಸಿ ಮಾಡುವ ಈ ಮಸಾಲೆಯನ್ನು ಮನೆಯಲ್ಲೇ ಹೇಗೆ ಮಾಡೋದು ನೋಡಿ.
ವೆಜ್ ಕರಿ ಮಸಾಲೆ ಪುಡಿ
ಬೇಕಾಗುವ ಸಾಮಗ್ರಿಗಳು: ಕೊತ್ತಂಬರಿ - ಅರ್ಧ ಕಪ್, ಸಾಸಿವೆ - ಒಂದು ಚಮಚ, ಜೀರಿಗೆ - ಒಂದು ಚಮಚ, ಉದ್ದಿನಬೇಳೆ - ಒಂದು ಚಮಚ, ಶೇಂಗಾ ಬೀಜ – ಎರಡು ಚಮಚ, ಕಡಲೆಬೇಳೆ – 1 ಚಮಚ, ಎಳ್ಳು - ಎರಡು ಚಮಚ, ಎಣ್ಣೆ - ಒಂದು ಚಮಚ, ಮೆಣಸು – 100ಗ್ರಾಂ, ಉಪ್ಪು – 2 ಚಮಚ, ಅರಿಸಿನ – 1ಚಮಚ, ಬೆಳ್ಳುಳ್ಳಿ – 25 ಎಸಳು, ಹುಣಸೆಹಣ್ಣು - 1 ಸಣ್ಣ ತುಂಡು
ವೆಜ್ ಕರಿ ಮಸಾಲೆ ಪುಡಿ ಮಾಡುವ ವಿಧಾನ
ಒಲೆಯ ಮೇಲೆ ಬಾಣಲಿ ಇಟ್ಟು ಕೊತ್ತಂಬರಿ ಸೊಪ್ಪು ಹಾಕಿ ಹುರಿಯಿರಿ. ನಂತರ ಜೀರಿಗೆ, ಕಡಲೆಬೇಳೆ, ಶೇಂಗಾ, ಉದ್ದಿನಬೇಳೆ ಮತ್ತು ಸಾಸಿವೆ ಹಾಕಿ ಎಲ್ಲವನ್ನೂ ಚೆನ್ನಾಗಿ ಹುರಿದುಕೊಳ್ಳಿ. ಕೊನೆಯಲ್ಲಿ ಎಳ್ಳು ಸೇರಿಸಿ, ಕೈಯಾಡಿಸಿ. ಈ ಎಲ್ಲವನ್ನೂ ಪಕ್ಕಕ್ಕೆ ತೆಗೆದು ಇರಿಸಿ. ಈಗ ಅದೇ ಬಾಣಲೆಯಲ್ಲಿ ಎಣ್ಣೆ ಹಾಕಿ ಒಣಮೆಣಸನ್ನು ಹುರಿದುಕೊಂಡು ಸ್ಟೌ ಆಫ್ ಮಾಡಿ. ಹುರಿದ ಎಲ್ಲಾ ಪದಾರ್ಥಗಳನ್ನು ಮಿಕ್ಸಿ ಜಾರ್‌ಗೆ ಹಾಕಿ ಅದಕ್ಕೆ ಉಪ್ಪು, ಬೆಳ್ಳುಳ್ಳಿ ಎಸಳು ಮತ್ತು ಅರಿಸಿನ ಹಾಕಿ ನುಣ್ಣಗೆ ರುಬ್ಬಿಕೊಳ್ಳಿ. ಈ ಮಸಾಲೆ ಪುಡಿಯನ್ನು ಗಾಳಿಯಾಡದ ಡಬ್ಬದಲ್ಲಿ ಹಾಕಿ ಮುಚ್ಚಿಡಿ.
ಈ ವೆಜ್ ಕರಿ ಮಸಾಲೆ ಪುಡಿಯನ್ನು ಗಾಳಿಯಾಡದ ಡಬ್ಬದಲ್ಲಿ ಸಂಗ್ರಹಿಸಿದರೆ ಆರು ತಿಂಗಳವರೆಗೆ ಸಂಗ್ರಹಿಸಬಹುದು. ಫ್ರಿಜ್‌ನಲ್ಲಿಟ್ಟರೆ ಹೆಚ್ಚು ಕಾಲ ಫ್ರೆಶ್ ಆಗಿರುತ್ತದೆ. ಇದನ್ನು ಇಡ್ಲಿ ಹಾಗೂ ದೋಸೆ ಜೊತೆ ನೆಂಚಿಕೊಳ್ಳಲು ಬಳಸಬಹುದು. ಇದನ್ನು ಸಸ್ಯಾಹಾರಿ ಖಾದ್ಯಗಳಿಗೆ ಸೇರಿಸುವುದರಿಂದ ಹೊಸ ರುಚಿ ಸಿಗುತ್ತದೆ. ಸಾಂಬಾರಿ ಅಥವಾ ಕರಿಗೆ ಈ ಮಸಾಲೆ ಪುಡಿ ಸೇರಿಸಿದ ಮೇಲೆ 5 ನಿಮಿಷಗಳ ಚೆನ್ನಾಗಿ ಮಿಶ್ರಣ ಮಾಡಿ. ವಿಶೇಷವಾಗಿ ಸ್ಟಿರ್-ಫ್ರೈ ಮಾಡಿದ ಭಕ್ಷ್ಯಗಳಿಗೆ ಇದನ್ನು ಸೇರಿಸುವುದರಿಂದ ರುಚಿ ದುಪ್ಪಾಟ್ಟಾಗುವುದು ಖಂಡಿತ. ಆದರೆ ಒಮ್ಮೆಲೆ ರಾಶಿ ಮಾಡಬೇಡಿ. ಒಮ್ಮೆ ನಿಮಗೆ ರುಚಿ ಹಿಡಿಸಿದರೆ ನಂತರ ದಿನಗಳಲ್ಲಿ ಸಾಕಷ್ಟು ಮಾಡಿ ಡಬ್ಬಿಯಲ್ಲಿ ತುಂಬಿಟ್ಟುಕೊಳ್ಳಬಹುದು.

ವಿಭಾಗ