ದಸರಾಗೆ ವಿಶೇಷ ಸಿಹಿ ದೋಸೆ ನಿಮ್ಮ ಕುಟುಂಬದ ಸಂತೋಷವನ್ನು ಹೆಚ್ಚಿಸುತ್ತೆ; ಮಾಡುವ ವಿಧಾನ ತುಂಬಾ ಸಿಂಪಲ್ ನೋಡ್ರಿ
2024ರ ದಸರಾವನ್ನು ಅಕ್ಟೋಬರ್ 12 ರಂದು ಆಚರಿಸಲಾಗುತ್ತದೆ. ನಿಮ್ಮ ಕುಟುಂಬದಲ್ಲಿ ಈ ಹಬ್ಬದ ಸಂತೋಷವನ್ನು ಹೆಚ್ಚಿಸಲು ಬೆಳಗಿನ ತಿಂಡಿಗೆ ಸಿಹಿ ದೋಸೆಯನ್ನು ಟ್ರೈ ಮಾಡಿ. ಸಿಹಿ ದೋಸೆ ಮಾಡುವುದು ಹೇಗೆ ಅನ್ನೋದನ್ನು ಹಂತ ಹಂತವಾಗಿ ಇಲ್ಲಿ ತಿಳಿಸಿಕೊಡಲಾಗಿದೆ.
ನಾಡ ಹಬ್ಬ ಮೈಸೂರು ದಸರಾಗೆ ಸಿದ್ಧತೆಗಳು ನಡೆಯುತ್ತಿದ್ದು, ಕೊನೆಯ ಹಂತಕ್ಕೆ ಬಂದಿವೆ. ಸಾಂಸ್ಕೃತಿ ನಗರಿ ಮೈಸೂರಿನಲ್ಲಿ ವಿಶ್ವ ವಿಖ್ಯಾತ ಜಂಬುಸವಾರಿಯ ತಾಲೀಮು ಕೂಡ ಮುಂದುವರಿದೆ. ಈ ವರ್ಷ ಅಕ್ಟೋಬರ್ 12 ರಂದು ದಸರಾ ನಡೆಯಲಿದೆ. ರಾವಣನ ಮೇಲೆ ರಾಮನ ವಿಜಯ ಸಂಕೇತವೇ ದಸರಾ ಎಂದು ಭಾರತದ ಮಹಾಕಾವ್ಯ ರಾಮಾಯಣದಲ್ಲಿ ಹೇಳಲಾಗಿದೆ. ಈ ಹಬ್ಬವನ್ನು ವಿಜಯ ದಶಮಿ ಅಂತಲೂ ಕರೆಯಲಾಗುತ್ತದೆ. ನವರಾತ್ರಿಯ ಬಳಿಕ ದುರ್ಗಾ ಪೂಜೆಯ 10ನೇ ದಿನವಾಗಿದೆ. ಮತ್ತೊಂದು ಧಾರ್ಮಿಕ ಗ್ರಂಥಗಳ ಪ್ರಕಾರ, ರಾಕ್ಷಸ ಮಹಿಷಾಸುರ ಮೇಲೆ ದುರ್ಗೆಯ ವಿಜಯ ಅಂತಲೂ ಕರೆಯಲಾಗುತ್ತದೆ. ಹಬ್ಬದ ಸಂದರ್ಭದಲ್ಲಿ ಮನೆಗಳಲ್ಲಿ ವಿವಿಧ ಬಗೆಯ ಸಿಹಿ ತಿನಿಸುಗಳನ್ನು ತಯಾರು ಮಾಡಲಾಗುತ್ತದೆ. ಆದರೆ ಈ ಬಾರಿ ಸಿಹಿ ದೋಸೆಯನ್ನು ಟ್ರೈ ಮಾಡಿ. ನಿಮ್ಮ ಕುಟುಂಬ ಮತ್ತು ಸ್ನೇಹಿತರೊಂದಿಗೆ ಹಂಚಿಕೊಂಡು ತಿಂದರೆ ಹಬ್ಬದ ಸಂತೋಷವನ್ನು ಹೆಚ್ಚಿಸುತ್ತದೆ. ಇದಕ್ಕೂ ಮುನ್ನ ಸಿಹಿ ದೋಸೆ ಮಾಡಲು ಬೇಕಾಗಿರುವ ಪದಾರ್ಥಗಳು ಹಾಗೂ ಮಾಡುವ ವಿಧಾನವನ್ನು ಇಲ್ಲಿ ನೀಡಲಾಗಿದೆ.
ವೆಲ್ಲಾ ದೋಸೆ ಅಂತಲೂ ಕರೆಯಲಾಗುವ ಈ ಸಿಹಿ ದೋಸೆ ಕರ್ನಾಟಕದ ಸಾಂಪ್ರದಾಯಿಕ ಆಹಾರಗಳಲ್ಲಿ ಒಂದಾಗಿದೆ. ಈ ಸಿಹಿ ದೋಸೆಯನ್ನು ಕೇವಲ 20 ನಿಮಿಷಗಳಲ್ಲಿ ತಯಾರಿಸಬಹುದು. ದೋಸೆ ಮಾಡಲು ಬೇಕಾಗಿರುವ ಪದಾರ್ಥಗಳು
- ಅಕ್ಕಿ ಹಿಟ್ಟು
- ಬೆಲ್ಲ
- ತೆಂಗಿನ ಕಾಯಿ ತುರಿ
- ಗೋದಿ ಹಿಟ್ಟು
- ಏಲಕ್ಕಿ ಪುಡಿ
ಸಿಹಿ ದೋಸೆ ತಯಾರಿಸುವ ವಿಧಾನ
- ಒಂದು ಪಾತ್ರೆಗೆ ಸ್ವಲ್ಪ ನೀರು ಹಾಕಿದ ನಂತರ ಅದಕ್ಕೆ ಬೆಲ್ಲವನ್ನು ಸೇರಿಸಬೇಕು. ಬೆಲ್ಲ ನೀರಿನಲ್ಲಿ ಕರಗಿದ ನಂತರ ಪಕ್ಕಕ್ಕೆ ಇಳಿಸಿಕೊಳ್ಳಿ
- ಬೆಲ್ಲದ ನೀರು ತಣ್ಣಾಗಾಗುವರೆಗೆ ಹಾಗೆ ಬಿಡಿ
- ಅಕ್ಕಿ ಹಿಟ್ಟು, ಸ್ವಲ್ಪ ಗೋದಿ ಹಿಟ್ಟು, ತೆಂಗಿನ ತುರಿ, ಬೆಲ್ಲದ ನೀರು ಹಾಗೂ ಏಲಕ್ಕಿ ಪುಡಿಯನ್ನು ಸೇರಿಸಿ ಮಿಶ್ರಣ ಮಾಡಿಕೊಳ್ಳಿ
- ದೋಸೆ ಹಿಟ್ಟನ್ನು ತಯಾರಿಸಿಕೊಳ್ಳಲು ಸ್ವಲ್ಪ ನೀರು ಹಾಕಿ
- ತವಾವನ್ನು ಬಿಸಿ ಮಾಡಿ ಅದಕ್ಕೆ ಸ್ವಲ್ಪ ತುಪ್ಪವನ್ನು ಸುರಿಯಿರಿ
- ಮಿಶ್ರಣ ಮಾಡಿಟ್ಟುಕೊಂಡಿರುವ ದೋಸೆ ಹಿಟ್ಟನ್ನು ಚೆನ್ನಾಗಿ ಮಿಶ್ರಣ ಮಾಡಿ ಸ್ವಲ್ಪ ಸ್ವಲ್ಪವೇ ತವಾ ಮೇಲೆ ಸುರಿದು ಕಡಿಮೆ ಉರಿಯಲ್ಲಿ ಬೇಯಿಸಿ
- ದೋಸೆ ಮೇಲೆ ಸ್ವಲ್ಪ ಎಣ್ಣೆ ಅಥವಾ ತುಪ್ಪವನ್ನು ಸುರಿದು ಎರಡೂ ಕಡೆ ಲೈಟ್‌ಆಗಿ ರೋಸ್ಟ್ ಮಾಡಿದರೆ ದೋಸೆ ಸಿದ್ಧವಾಗುತ್ತೆ.
- ಕೊಬ್ಬರಿ ಅಥವಾ ಶೇಂಗಾ ಚೆಟ್ನಿಯೊಂದಿಗೆ ಸಿಹಿ ದೋಸೆಯನ್ನು ಬಿಸಿ ಬಿಸಿಯಾಗಿ ಸವಿಯಿರಿ