Garlic Rice: ಅನ್ನ ಮಿಕ್ಕಿದೆ ಅಂತ ವೇಸ್ಟ್ ಮಾಡ್ಬೇಡಿ, ಈ ರೀತಿ ಗಾರ್ಲಿಕ್ ರೈಸ್ ಮಾಡಿಕೊಡಿ, ಎಲ್ರೂ ಇಷ್ಟಪಟ್ಟು ತಿಂತಾರೆ
ಅನ್ನ ಮಿಕ್ಕಿದಾಗ ಎಸಿಯೋಕೆ ಮನಸ್ಸು ಬರೋಲ್ಲ, ಹಾಗಂತ ಏನು ಮಾಡಬೇಕು ಅಂತ ತೋಚೋದು ಇಲ್ಲ. ಆಗ ನೀವು ಈ ರೀತಿ ಗಾರ್ಲಿಕ್ ರೈಸ್ ಮಾಡಿ. ಪುಳಿಯೋಗರೆ, ಚಿತ್ರಾನ್ನಕ್ಕಿಂತಲೂ ರುಚಿಯಾಗಿರುವ ಬೆಳುಳ್ಳಿ ರೈಸ್ ನಿಮ್ಮ ಮನೆಯವರಿಗೆಲ್ಲಾ ಇಷ್ಟ ಆಗೋದು ಪಕ್ಕಾ.
ಭಾರತೀಯ ಮಸಾಲೆ ಪದಾರ್ಥಗಳಲ್ಲಿ ಬೆಳ್ಳುಳ್ಳಿಗೆ ವಿಶೇಷ ಸ್ಥಾನವಿದೆ. ಹಲವು ಆರೋಗ್ಯ ಪ್ರಯೋಜನಗಳನ್ನು ಹೊಂದಿರುವ ಬೆಳ್ಳುಳ್ಳಿಯನ್ನು ವಿವಿಧ ಖಾದ್ಯಗಳ ತಯಾರಿಕೆಯಲ್ಲಿ ಬಳಸುತ್ತಾರೆ. ಇದರಿಂದ ರುಚಿಕರ ರೈಸ್ ಐಟಂ ತಯಾರಿಸಬಹುದು ಎಂಬುದು ಹಲವರಿಗೆ ತಿಳಿದಿಲ್ಲ. ಬೆಳ್ಳುಳ್ಳಿ ರೈಸ್ ಆರೋಗ್ಯಕ್ಕೆ ತುಂಬಾ ಒಳ್ಳೆಯದು. ಇದರ ರುಚಿ ಕೂಡ ಅದ್ಭುತ. ಮನೆಯಲ್ಲಿ ಮಾಡಿದ ಅನ್ನ ಉಳಿದಾಗ ಹೆಚ್ಚಿನವರು ಮಾಡುವ ಕೆಲಸವೆಂದರೆ ಲೆಮನ್ ರೈಸ್ ಅಥವಾ ಎಗ್ ರೈಸ್ ಮಾಡುವುದು. ಆದರೆ ಒಮ್ಮೆ ಗಾರ್ಲಿಕ್ ರೈಸ್ ಮಾಡಲು ಪ್ರಯತ್ನಿಸಿ. ಎಗ್‌ರೈಸ್, ಚಿತ್ರಾನ್ನ ಎರಡರ ರುಚಿಯನ್ನು ಇದು ಮೀರಿಸುವುದು ಖಂಡಿತ. ಬೆಳ್ಳುಳ್ಳಿಯಲ್ಲಿರುವ ಪೋಷಕಾಂಶಗಳು ದೇಹದಲ್ಲಿ ರೋಗನಿರೋಧಕ ವ್ಯವಸ್ಥೆಯನ್ನು ರಕ್ಷಿಸುತ್ತದೆ. ಆರೋಗ್ಯಕ್ಕೂ ರುಚಿಗೂ ಬೆಸ್ಟ್ ಅನ್ನುವಂತಿರುವ ಗಾರ್ಲಿಕ್ ರೈಸ್ ತಯಾರಿಸುವುದು ತುಂಬಾ ಸುಲಭ. ಇದನ್ನು ತಯಾರಿಸಲು ಏನೇನು ಬೇಕು, ತಯಾರಿಸುವ ವಿಧಾನದ ಕುರಿತ ವಿವರ ಇಲ್ಲಿದೆ.
ಬೆಳ್ಳುಳ್ಳಿ ರೈಸ್ ರೆಸಿಪಿಗೆ ಬೇಕಾಗುವ ಸಾಮಗ್ರಿಗಳು
ಬೇಯಿಸಿದ ಅಕ್ಕಿ - 1 ಕಪ್, ಬೆಳ್ಳುಳ್ಳಿ - ಹತ್ತು ಲವಂಗ, ಜೀರಿಗೆ - ಅರ್ಧ ಚಮಚ, ಸಾಸಿವೆ - ಅರ್ಧ ಚಮಚ, ಮೆಣಸಿನಕಾಯಿ - ನಾಲ್ಕು, ಮೆಣಸು - ಮೂರು, ಉದ್ದಿನಬೇಳೆ - ಅರ್ಧ ಚಮಚ, ಶೇಂಗಾ - ಒಂದು ಮುಷ್ಟಿ, ನಿಂಬೆ - ಅರ್ಧ ಹೋಳು, ಈರುಳ್ಳಿ - 1, ಎಣ್ಣೆ - ಮೂರು ಚಮಚ, ಉಪ್ಪು - ರುಚಿಗೆ, ಅರಿಶಿನ - ಚಿಟಿಕೆ
ಬೆಳ್ಳುಳ್ಳಿ ರೈಸ್ ತಯಾರಿಸುವ ವಿಧಾನ
ಒಲೆಯ ಮೇಲೆ ಪ್ಯಾನ್ ಇಟ್ಟು ಎಣ್ಣೆ ಹಾಕಿ. ಎಣ್ಣೆಗೆ ಬೆಳ್ಳುಳ್ಳಿ ಸೇರಿಸಿ ಕೆಂಪಗೆ ಹುರಿದು ತೆಗೆದು ಪಕ್ಕಕ್ಕೆ ಇಡಿ. ಇದೇ ಎಣ್ಣೆ ಜೀರಿಗೆ, ಸಾಸಿವೆ ಸೇರಿಸಿ ಚಿಟಪಟ ಎನ್ನಿಸಿ. ನಂತರ ಸಣ್ಣಗೆ ಕತ್ತರಿಸಿದ ಹಸಿ ಮೆಣಸಿನಕಾಯಿ ಸೇರಿಸಿ ಫ್ರೈ ಮಾಡಿ. ನಂತರ ಈರುಳ್ಳಿ ಹಾಕಿ ಚೆನ್ನಾಗಿ ಫ್ರೈ ಮಾಡಿ. ಆ ಮಿಶ್ರಣದಲ್ಲಿ ಕರಿಮೆಣಸು, ಉದ್ದಿನಬೇಳೆ, ಕಡಲೆಬೇಳೆ, ಶೇಂಗಾ ಮತ್ತು ಮೆಣಸು ಹಾಕಿ ಹುರಿಯಿರಿ. ಒಂದು ಚಿಟಿಕೆ ಅರಿಶಿನ ಮತ್ತು ರುಚಿಗೆ ತಕ್ಕಷ್ಟು ಉಪ್ಪು ಸೇರಿಸಿ ಮಿಶ್ರಣ ಮಾಡಿ. ಈಗ ಮೊದಲೇ ಬೇಯಿಸಿದ ಅನ್ನವನ್ನು ಹಾಕಿ ಮಿಶ್ರಣ ಮಾಡಿ. ಹುರಿದ ಬೆಳ್ಳುಳ್ಳಿಯನ್ನು ನುಣ್ಣಗೆ ಕತ್ತರಿಸಿ ಈ ಅನ್ನದ ಮೇಲೆ ಹರಡಿ ಮತ್ತು ಚೆನ್ನಾಗಿ ಮಿಶ್ರಣ ಮಾಡಿ. ಕೊನೆಯಲ್ಲಿ ನಿಂಬೆ ರಸವನ್ನು ಹಿಂಡಿ. ಇದನ್ನು ಒಂದೆರಡು ನಿಮಿಷಗಳ ಕಾಲ ಕಡಿಮೆ ಉರಿಯಲ್ಲಿ ಫ್ರೈ ಮಾಡಿ. ಮೇಲೆ ಕೊತ್ತಂಬರಿ ಸೊಪ್ಪು ಉದುರಿಸಿ ಸ್ಟವ್ ಮುಚ್ಚಿ. ಅಷ್ಟೇ, ಬೆಳ್ಳುಳ್ಳಿ ಅನ್ನ ತಿನ್ನಲು ಸಿದ್ಧ.
ಎಲ್ಲಾ ಋತುವಿನಲ್ಲೂ ಆರೋಗ್ಯ ರಕ್ಷಣೆಗೆ ಬೆಳ್ಳುಳ್ಳಿ ಬಹಳ ಉತ್ತಮ. ಇದರಲ್ಲಿರುವ ಆ್ಯಂಟಿ ಆಕ್ಸಿಡೆಂಟ್, ವಿಟಮಿನ್ ಎ, ವಿಟಮಿನ್ ಬಿ ಇತ್ಯಾದಿಗಳು ಸಾಂಕ್ರಾಮಿಕ ರೋಗಗಳಿಂದ ರಕ್ಷಿಸುತ್ತದೆ. ಹೊಟ್ಟೆಯ ಬಳಿ ಸಂಗ್ರಹವಾಗಿರುವ ಕೊಬ್ಬನ್ನು ಕರಗಿಸಲು ಬೆಳ್ಳುಳ್ಳಿ ಸಹಾಯ ಮಾಡುತ್ತದೆ. ನಿಯಮಿತವಾಗಿ ಬೆಳ್ಳುಳ್ಳಿ ತಿನ್ನುವವರಿಗೆ ಬೊಜ್ಜಿನ ಸಮಸ್ಯೆ ಕಾಡುವುದಿಲ್ಲ. ನೀವು ತಯಾರಿಸುವ ಸಾಂಬಾರಿಗೆ ಬೆಳ್ಳುಳ್ಳಿ ಹಾಕುವುದು ಒಳ್ಳೆಯದು. ಬೆಳ್ಳುಳ್ಳಿಯ ಪುಡಿಯಿಂದ ತಯಾರಿಸಿದ ಬೆಚ್ಚಗಿನ ನೀರು ಕುಡಿಯುವುದು ಆರೋಗ್ಯಕ್ಕೆ ಉತ್ತಮ. ಯಾವಾಗಲೂ ಎಗ್‌ರೈಸ್, ಪುಳಿಯೋಗರೆ, ಚಿತ್ರಾನ್ನ ತಿಂದು ಬೇಸರ ಆಗಿದ್ರೆ ಇದನ್ನು ಟ್ರೈ ಮಾಡಿ, ಮನೆಮಂದಿಯೆಲ್ಲಾ ಇಷ್ಟಪಟ್ಟು ತಿನ್ನುವುದು ಖಂಡಿತ.
ವಿಭಾಗ