ಹರಪ್ಪ ನಾಗರಿಕತೆಯ ಜನರಿಗೂ ಬದನೆಕಾಯಿ ಸಾಂಬಾರ್ ಇಷ್ಟವಂತೆ! ಇದು 4000 ಸಾವಿರಗಳ ವರ್ಷಗಳ ಹಿಂದಿನ ಕರಿ ಕಥೆ
ಸಾಂಬಾರ್‌ಗೂ ದಕ್ಷಿಣ ಭಾರತಕ್ಕೂ ಅವಿನಾಭಾವ ಸಂಬಂಧ. ಈ ಸಾಂಬಾರ್‌ನ ಇತಿಹಾಸ 4000 ವರ್ಷಗಳ ಹಿಂದಿನದ್ದು. ವಿಶ್ವದಲ್ಲೇ ಮೊದಲು ಸಾಂಬಾರ್ ತಯಾರಾಗಿದ್ದು ಎಲ್ಲಿ, ಯಾವ ತರಕಾರಿಯಿಂದ ಎಂಬ ಕುತೂಹಲ ನಿಮಗಿದ್ದರೆ ಮುಂದೆ ಓದಿ. (ಬರಹ: ಪ್ರಿಯಾಂಕ ಗೌಡ)

ಒಣಮೆಣಸು ಹಾಗೂ ಟೊಮೆಟೊದ ಮೂಲ ವಿದೇಶ. ಭಾರತ ಅದರಲ್ಲೂ ದಕ್ಷಿಣ ಭಾರತೀಯ ಅಡುಗೆಯಲ್ಲಿ ಈ ಎರಡು ಇಲ್ಲ ಎಂದಾದರೆ ಆ ಅಡುಗೆಯನ್ನು ಕಲ್ಪಿಸಿಕೊಳ್ಳಲು ಕೂಡ ಅಸಾಧ್ಯ. ಭಾರತೀಯರು ಹಲವಾರು ಬಗೆಯ ಖಾದ್ಯಗಳನ್ನು ತಯಾರಿಸುವುದರಲ್ಲಿ ನಿಪುಣರು. ದೇಶ, ರಾಜ್ಯ, ಜಿಲ್ಲೆಗಳಲ್ಲಿ ತಮ್ಮದೇ ಶೈಲಿಯ ಖಾದ್ಯಗಳನ್ನು ತಯಾರಿಸಲಾಗುತ್ತದೆ. ಅದರಲ್ಲೂ ಕೇವಲ ಸಾಂಬಾರ್ ಒಂದರಲ್ಲೇ ಹಲವಾರು ಬಗೆಗಳಿವೆ. ಪನ್ನೀರ್‌ನಿಂದ ಹಿಡಿದು ಬೆಂಡೆಕಾಯಿ, ತೊಂಡೆಕಾಯಿ ಮುಂತಾದ ತರಕಾರಿಗಳಿಂದ ಹಲವು ರೀತಿಯ ರುಚಿಕರವಾದ ಸಾಂಬಾರ್ ಅನ್ನು ತಯಾರಿಸಲಾಗುತ್ತದೆ. ಚಪಾತಿ, ರೊಟ್ಟಿ, ಅನ್ನದ ಜೊತೆ ಸಾಂಬಾರ್ ಅನ್ನು ಬಾಯಿ ಚಪ್ಪರಿಸಿಕೊಂಡು ಸವಿಯುತ್ತೇವೆ. ನೀವು ದಿನನಿತ್ಯ ಊಟದ ಜೊತೆ ಸೇವಿಸುವ ಸಾಂಬಾರ್ ಯಾವಾಗ ಅಸ್ತಿತ್ವಕ್ಕೆ ಬಂತು ಎಂಬುದನ್ನು ಎಂದಾದರೂ ಯೋಚಿಸಿದ್ದೀರಾ?
ಸೆಲೆಬ್ರಿಟಿ ಬಾಣಸಿಗ ಕುನಾಲ್ ಕಪೂರ್ ಅವರು ಇನ್‌ಸ್ಟಾಗ್ರಾಂನಲ್ಲಿ ವಿಡಿಯೊವೊಂದನ್ನು ಹಂಚಿಕೊಂಡಿದ್ದಾರೆ. ಅದರ ಪ್ರಕಾರ, ಬದನೆಕಾಯಿ ಸಾಂಬಾರ್ ಸುಮಾರು 4000 ವರ್ಷಗಳಷ್ಟು ಹಳೆಯದು ಎಂದು ಹೇಳಲಾಗಿದೆ. ಇದನ್ನು ಮಡಿಕೆಯಲ್ಲಿ ಮಾಡಲಾಗಿದ್ದು, ಬದನೆಕಾಯಿ, ಶುಂಠಿ ಮತ್ತು ಅರಿಶಿನದಿಂದ ತಯಾರಾದ ಸಾಂಬಾರ್ ಆಗಿದೆ ಎಂದು ವಿಡಿಯೊದಲ್ಲಿ ಹೇಳಿದ್ದಾರೆ.
ವಿಡಿಯೊದಲ್ಲಿ ಕುನಾಲ್ ಅವರು ಹೇಳಿರುವ ಪ್ರಕಾರ, ಹರಿಯಾಣದ ಫರ್ಮಾನಾದಲ್ಲಿ ಹರಪ್ಪ ನಾಗರಿಕತೆಯ ಉತ್ಖನನದ ಸಮಯದಲ್ಲಿ, ಸಮಾಧಿ ಸ್ಥಳಗಳಲ್ಲಿ ಕೆಲವು ಮಣ್ಣಿನ ಮಡಕೆಗಳು ಕಂಡುಬಂದಿವೆ. ಈ ಮಡಕೆಗಳನ್ನು ಪ್ರಯೋಗಾಲಯದಲ್ಲಿ ವಿಶ್ಲೇಷಣೆಗೆ ಒಳಪಡಿಸಿದಾಗ ಸುಮಾರು 4000 ವರ್ಷಗಳ ಹಿಂದೆ, ಈ ಪಾತ್ರೆಗಳಲ್ಲಿ ಅರಿಶಿನ, ಶುಂಠಿ, ಬೆಳ್ಳುಳ್ಳಿ ಮತ್ತು ಬದನೆಯನ್ನು ಒಟ್ಟಿಗೆ ಬೇಯಿಸಿರುವುದು ಕಂಡುಬಂದಿದೆ.
ಹರಪ್ಪ ನಾಗರಿಕತೆಯು ಆಧುನಿಕ ಗುಜರಾತ್ ಮತ್ತು ಮಹಾರಾಷ್ಟ್ರಕ್ಕೆ ಹತ್ತಿರವಾಗಿದೆ. ಅವರು ತಮ್ಮ ಆಹಾರದಲ್ಲಿ ಉಪ್ಪನ್ನು ಬಳಸುತ್ತಿದ್ದರು. ಆದ್ದರಿಂದ ಬದನೆಕಾಯಿ ಸಾಂಬಾರ್ ಪ್ರಪಂಚದ ಅತ್ಯಂತ ಹಳೆಯ ಸಾಂಬಾರ್ ಎಂದು ನಂಬಲಾಗಿದೆ. ಹಾಗಂತ ಆಳವಾದ ಸಂಶೋಧನೆಯಿಂದ ಇದರ ಸತ್ಯಾಸತ್ಯತೆ ಬಗ್ಗೆ ಇನ್ನೂ ಖಚಿತ ಮಾಹಿತಿ ಹೊರಬಂದಿಲ್ಲ. ಆದರೂ, 4000 ವರ್ಷಗಳ ಹಿಂದೆ ಮಾಡಲಾಗುತ್ತಿದ್ದ ಬದನೆಕಾಯಿ ಸಾಂಬಾರ್ ಈಗಲೂ ಹಲವರ ಅಚ್ಚುಮೆಚ್ಚು ಎಂದರೆ ತಪ್ಪಿಲ್ಲ.
ಹಾಗಿದ್ದರೆ ಬನ್ನಿ ವಿಶ್ವದ ಹಳೆಯ ಸಾಂಬಾರ್ ಎನ್ನಿಸಿಕೊಂಡ ಬದನೆಕಾಯಿ ಸಾಂಬಾರ್ ಮಾಡುವುದು ಹೇಗೆ ನೋಡೋಣ.
ಬದನೆಕಾಯಿ ಸಾಂಬಾರ್
ಬೇಕಾಗುವ ಸಾಮಗ್ರಿಗಳು: ಬದನೆಕಾಯಿ - 250 ಗ್ರಾಂ, ಸಾಸಿವೆ ಎಣ್ಣೆ - 2 ಚಮಚ, ಶುಂಠಿ - 2 ಚಮಚ, ಬೆಳ್ಳುಳ್ಳಿ ಎಸಳು - 4 ರಿಂದ 6, ಅರಿಶಿನ ಪುಡಿ - 1 ಚಮಚ, ಜೀರಿಗೆ - 1 ಚಮಚ, ರುಚಿಗೆ ತಕ್ಕಷ್ಟು ಉಪ್ಪು
ತಯಾರಿಸುವ ವಿಧಾನ: ಕಡಾಯಿಯಲ್ಲಿ ಎಣ್ಣೆಯನ್ನು ಬಿಸಿ ಮಾಡಿ ಜೀರಿಗೆ ಸೇರಿಸಿ. ಶುಂಠಿ, ಅರಿಶಿನ ಮತ್ತು ಬೆಳ್ಳುಳ್ಳಿಯ ಪೇಸ್ಟ್ ಮಾಡಿ ಇದನ್ನು ಎಣ್ಣೆಗೆ ಸೇರಿಸಿ 2 ನಿಮಿಷ ಬೇಯಿಸಿ. ಎಣ್ಣೆ ಬೇರ್ಪಟ್ಟ ನಂತರ, ತೊಳೆದು ಮತ್ತು ಕತ್ತರಿಸಿಕೊಂಡ ಬದನೆಕಾಯಿಗಳನ್ನು ಸೇರಿಸಿ ಮಿಕ್ಸ್ ಮಾಡಿ. ನಂತರ ರುಚಿಗೆ ತಕ್ಕಷ್ಟು ಉಪ್ಪು, ನೀರು ಸೇರಿಸಿ ಚೆನ್ನಾಗಿ ಬೇಯಿಸಿ. ಇಷ್ಟು ಮಾಡಿದ್ರೆ ಸಾಕು ಸುಲಭದಲ್ಲಿ ತಯಾರಾಗುತ್ತದೆ ಬದನೆಕಾಯಿ ಕರಿ.
ಬಹಳ ಹಳೆಯ ಸಾಂಬಾರ್ ಯಾವುದು ಅನ್ನೋದು ನಿಮಗೆ ಗೊತ್ತಾಯ್ತಲ್ವಾ. ಮಾಡುವ ವಿಧಾನ ಕೂಡ ಬಹಳ ಸುಲಭ. ಹಾಗಿದ್ದರೆ, ಇನ್ಯಾಕೆ ತಡ ಮನೆಯಲ್ಲಿಯೇ ಸರಳವಾಗಿ ಈ ರೆಸಿಪಿ ತಯಾರಿಸಿ, ಸವಿಯಿರಿ.

ವಿಭಾಗ