ಇಡ್ಲಿ ಜತೆ ಸೂಪರ್ ಕಾಂಬಿನೇಷನ್ ದಕ್ಷಿಣ ಭಾರತದ ಸ್ಪೆಷಲ್ ಗರಿಗರಿ ವಡೆ: ಈ ರೆಸಿಪಿ ತಯಾರಿಸುವುದು ತುಂಬಾನೇ ಸಿಂಪಲ್
ಕನ್ನಡ ಸುದ್ದಿ  /  ಜೀವನಶೈಲಿ  /  ಇಡ್ಲಿ ಜತೆ ಸೂಪರ್ ಕಾಂಬಿನೇಷನ್ ದಕ್ಷಿಣ ಭಾರತದ ಸ್ಪೆಷಲ್ ಗರಿಗರಿ ವಡೆ: ಈ ರೆಸಿಪಿ ತಯಾರಿಸುವುದು ತುಂಬಾನೇ ಸಿಂಪಲ್

ಇಡ್ಲಿ ಜತೆ ಸೂಪರ್ ಕಾಂಬಿನೇಷನ್ ದಕ್ಷಿಣ ಭಾರತದ ಸ್ಪೆಷಲ್ ಗರಿಗರಿ ವಡೆ: ಈ ರೆಸಿಪಿ ತಯಾರಿಸುವುದು ತುಂಬಾನೇ ಸಿಂಪಲ್

ದಕ್ಷಿಣ ಭಾರತದ ಪಾಕಪದ್ಧತಿಯು ಬಹಳ ವಿಭಿನ್ನವಾಗಿದೆ. ಬೆಳಗಿನ ಉಪಹಾರಕ್ಕೆ ಇಲ್ಲಿ ಇಡ್ಲಿ, ದೋಸೆ, ವಡಾ, ಉಪ್ಪಿಟ್ಟು ಇತ್ಯಾದಿ ಭಕ್ಷ್ಯಗಳನ್ನು ತಯಾರಿಸಿ ತಿನ್ನಲಾಗುತ್ತದೆ. ಅದರಲ್ಲೂ ಇಡ್ಲಿಯನ್ನು ಸವಿಯುವಾಗ ವಡೆ ಇಲ್ಲದಿದ್ದರೆ ಅದರ ಮಜಾವೇ ಸಿಗುವುದಿಲ್ಲ. ಸಖತ್ ಫೇಮಸ್ ಹಾಗೂ ಟೇಸ್ಟಿಯಾಗಿರುವ ಈ ಮೆದು ವಡೆಯನ್ನು ತಯಾರಿಸುವುದು ತುಂಬಾನೇ ಸಿಂಪಲ್.

ಗರಿಗರಿ ವಡೆ ಮಾಡಲು ಇಲ್ಲಿದೆ ಪಾಕವಿಧಾನ.
ಗರಿಗರಿ ವಡೆ ಮಾಡಲು ಇಲ್ಲಿದೆ ಪಾಕವಿಧಾನ. (PC: Canva)

ದಕ್ಷಿಣ ಭಾರತದ ಆಹಾರ ಪದ್ಧತಿ ಉತ್ತರ ಭಾರತ, ಈಶಾನ್ಯ ಭಾರತಕ್ಕೆ ಹೋಲಿಸಿದರೆ ಬಹಳ ವಿಭಿನ್ನವಾಗಿದೆ. ದಕ್ಷಿಣ ಭಾರತೀಯರು ಸೇವಿಸುವ ಬೆಳಗ್ಗಿನ ಉಪಹಾರವು ಪ್ರತಿಯೊಂದು ವಿಶಿಷ್ಟ ಹಾಗೂ ವಿಭಿನ್ನವಾಗಿದ್ದು, ಅಷ್ಟೇ ರುಚಿಕರವಾಗಿರುತ್ತದೆ. ಇವುಗಳಲ್ಲಿ ಮೆದು ವಡೆ ಕೂಡ ಒಂದು. ಇದು ಹೊರಗಿಂದ ಗರಿಗರಿಯಾಗಿದ್ದರೆ, ಒಳಗಿಂದ ಮೃದುವಾಗಿದ್ದು, ಸುವಾಸನೆಭರಿತವಾಗಿದೆ. ಅದರಲ್ಲೂ ಇಡ್ಲಿ ಜತೆ ವಡೆ ಸವಿಯಲಿಲ್ಲ ಎಂದರೆ ಅದರ ಮಜಾವೇ ಸಿಗುವುದಿಲ್ಲ. ಉದ್ದಿನ ಬೇಳೆಯಿಂದ ತಯಾರಿಸಲಾಗುವ ಈ ವಡೆಯನ್ನು ತೆಂಗಿನಕಾಯಿ ಚಟ್ನಿ ಅಥವಾ ಸಾಂಬಾರ್ ಜತೆ ಸವಿಯಲು ಸಖತ್ ರುಚಿಕರವಾಗಿರುತ್ತದೆ. ಬೆಳಗ್ಗೆ ಇಡ್ಲಿ ಜತೆ ವಡೆಯನ್ನು ತಿಂದರೆ ತೃಪ್ತಿಕರವಾಗಿರುತ್ತದೆ. ಮೆದು ವಡೆ ದಕ್ಷಿಣ ಭಾರತದ ಶ್ರೀಮಂತ ಪಾಕಶಾಲೆಯ ಸಂಪ್ರದಾಯಗಳನ್ನು ಸಾಕಾರಗೊಳಿಸುವುದು ಮಾತ್ರವಲ್ಲದೆ ಅನೇಕರಿಗೆ ಉಪಹಾರ ಮೆಚ್ಚಿನ ತಿಂಡಿಯಾಗಿ, ಇನ್ನೂ ಕೆಲವರು ಸಂಜೆಯ ಸ್ನಾಕ್ಸ್ ಟೈಮ್ ತಿಂಡಿಯಾಗಿಯೂ ಇದನ್ನು ಸವಿಯುತ್ತಾರೆ. ಈ ಮೆದು ವಡೆಯನ್ನು ತಯಾರಿಸುವುದು ತುಂಬಾನೇ ಸಿಂಪಲ್. ನೀವಿನ್ನೂ ಇದನ್ನು ಮನೆಯಲ್ಲಿ ಮಾಡಿಲ್ಲವಾದರೆ ಇಲ್ಲಿ ರೆಸಿಪಿಯನ್ನು ನೀಡಲಾಗಿದ್ದು, ಖಂಡಿತಾ ಟ್ರೈ ಮಾಡಬಹುದು. ಹಾಗಿದ್ದರೆ, ಬಹಳ ಸರಳವಾದ ಮೃದು ವಡೆಯನ್ನು ಮಾಡುವುದು ಹೇಗೆ ಎಂಬುದನ್ನು ಇಲ್ಲಿ ತಿಳಿಯಿರಿ.

ಮೃದು ವಡೆ ಮಾಡುವುದು ಹೇಗೆ

ಬೇಕಾಗುವ ಸಾಮಗ್ರಿಗಳು: ಉದ್ದಿನ ಬೇಳೆ- 2 ಕಪ್, ಕರಿಮೆಣಸಿನ ಪುಡಿ- 1 ಟೀ ಚಮಚ, ಈರುಳ್ಳಿ- 1, ಹಸಿರು ಮೆಣಸಿನಕಾಯಿಗಳು- 2 ರಿಂದ 3, ಶುಂಠಿ- 1 ಟೀ ಚಮಚ, ಕರಿಬೇವಿನ ಎಲೆ- 1 ಹಿಡಿಯಷ್ಟು, ತೆಂಗಿನಕಾಯಿ ತುರಿ- ಅರ್ಧ ಕಪ್, ರುಚಿಗೆ ತಕ್ಕಷ್ಟು ಉಪ್ಪು, ಕರಿಯಲು ಎಣ್ಣೆ, ನೀರು.

ಮಾಡುವ ವಿಧಾನ: ದಕ್ಷಿಣ ಭಾರತದ ಸ್ಪೆಷಲ್ ವಡೆ ಮಾಡಲು, ಉದ್ದಿನಬೇಳೆಯನ್ನು ಕನಿಷ್ಟ ನಾಲ್ಕು ಗಂಟೆಗಳ ಕಾಲ ಅಥವಾ ರಾತ್ರಿಯಿಡೀ ನೆನೆಸಿಡಿ. ನಂತರ ನೆನೆಸಿದ ಬೇಳೆಯನ್ನು ನೀರು ಬಸಿಯಿರಿ. ಇದನ್ನು ಮಿಕ್ಸಿ ಜಾರಿಗೆ ಹಾಕಿ ಸ್ವಲ್ಪ ನೀರು ಸೇರಿಸಿ ಮೃದುವಾಗಿ ರುಬ್ಬಿಕೊಳ್ಳಿ. ಬ್ಯಾಟರ್ ತುಂಬಾ ತೆಳುವಾಗಿರಬಾರದು. ಸ್ವಲ್ಪ ದಪ್ಪವಾಗಿರಲಿ. ಇಲ್ಲದಿದ್ದರೆ ವಡಾ ಮಾಡಲು ಕಷ್ಟವಾಗುತ್ತದೆ. ಈ ಹಿಟ್ಟಿಗೆ ಕರಿಮೆಣಸಿನ ಪುಡಿ, ರುಚಿಗೆ ತಕ್ಕಷ್ಟು ಉಪ್ಪು, ಸಣ್ಣಗೆ ಕತ್ತರಿಸಿದ ಹಸಿರು ಮೆಣಸಿನಕಾಯಿಗಳು, ತೆಂಗಿನಕಾಯಿ ತುರಿ, ಸಣ್ಣಗೆ ಹೆಚ್ಚಿದ ಈರುಳ್ಳಿ, ಸಣ್ಣಗೆ ಕತ್ತರಿಸಿದ ಕರಿಬೇವಿನ ಎಲೆಗಳು ಹೀಗೆ ಎಲ್ಲಾ ಪದಾರ್ಥಗಳನ್ನು ಹಿಟ್ಟಿಗೆ ಸೇರಿಸಿ ಚೆನ್ನಾಗಿ ಮಿಕ್ಸ್ ಮಾಡಿಕೊಳ್ಳಿ.

ನಂತರ ಬಾಣಲೆಯಲ್ಲಿ ಎಣ್ಣೆಯನ್ನು ಹಾಕಿ ಕಾಯಲು ಬಿಡಿ. ಎಣ್ಣೆ ಚೆನ್ನಾಗಿ ಕಾದ ನಂತರ, ಕೈಯನ್ನು ಸ್ವಲ್ಪ ಒದ್ದೆ ಮಾಡಿ, ಹಿಟ್ಟನ್ನು ತೆಗೆದುಕೊಂಡು ಮಧ್ಯದ ಹಿಟ್ಟಿನಲ್ಲಿ ಸ್ವಲ್ಪ ರಂಧ್ರವನ್ನು ಮಾಡಿ ಕಾದ ಎಣ್ಣೆಯಲ್ಲಿ ಬಿಡಿ. ನೀವು ಇದನ್ನು ಮೊದಲ ಬಾರಿಗೆ ಮಾಡುತ್ತಿದ್ದರೆ, ಒಂದು ಬಾರಿಗೆ ಕೇವಲ ಒಂದು ವಡಾ ಮಾಡಿ ನೋಡಿ. ಎಣ್ಣೆಯಲ್ಲಿ ಬಿಟ್ಟ ವಡಾವನ್ನು ಹುರಿಯುವಾಗ ಅವನ್ನು ತಿರುಗಿಸಿ. ಅವು ಗೋಲ್ಡನ್ ಬ್ರೌನ್ ಆಗುವವರೆಗೆ ಹುರಿಯಿರಿ. ನಂತರ ಹೊರತೆಗೆದು ಚಟ್ನಿ ಅಥವಾ ಸಾಂಬಾರಿನೊಂದಿಗೆ ಬಡಿಸಿ. ಇಡ್ಲಿ ಜತೆ ತಿನ್ನಲು ಬಹಳ ರುಚಿಕರವಾಗಿರುತ್ತದೆ.

ಸಲಹೆ: ಒಂದು ವೇಳೆ ಮೆದು ವಡೆ ಮಾಡುವ ಮಿಶ್ರಣವು ತೆಳುವಾಗಿದ್ದರೆ, ಅದಕ್ಕೆ ರವೆ ಸೇರಿಸಿ ದಪ್ಪವಾಗಿಸಬಹುದು.