ಬಿಸಿಬಿಸಿಯಾಗಿ, ಸಖತ್‌ ಟೇಸ್ಟಿ ಆಗಿರೋ ಹೋಟೆಲ್‌ ಶೈಲಿಯ ಬಿಸಿಬೇಳೆ ಬಾತ್ ರೆಸಿಪಿ ಇಲ್ಲಿದೆ, ನೀವೂ ಮನೆಯಲ್ಲಿ ಟ್ರೈ ಮಾಡಿ
ಕನ್ನಡ ಸುದ್ದಿ  /  ಜೀವನಶೈಲಿ  /  ಬಿಸಿಬಿಸಿಯಾಗಿ, ಸಖತ್‌ ಟೇಸ್ಟಿ ಆಗಿರೋ ಹೋಟೆಲ್‌ ಶೈಲಿಯ ಬಿಸಿಬೇಳೆ ಬಾತ್ ರೆಸಿಪಿ ಇಲ್ಲಿದೆ, ನೀವೂ ಮನೆಯಲ್ಲಿ ಟ್ರೈ ಮಾಡಿ

ಬಿಸಿಬಿಸಿಯಾಗಿ, ಸಖತ್‌ ಟೇಸ್ಟಿ ಆಗಿರೋ ಹೋಟೆಲ್‌ ಶೈಲಿಯ ಬಿಸಿಬೇಳೆ ಬಾತ್ ರೆಸಿಪಿ ಇಲ್ಲಿದೆ, ನೀವೂ ಮನೆಯಲ್ಲಿ ಟ್ರೈ ಮಾಡಿ

ಬೆಂಗಳೂರು, ಮೈಸೂರು ಭಾಗದಲ್ಲಿ ಹೆಚ್ಚು ಖ್ಯಾತಿ ಪಡೆದಿರುವ ಬೆಳಗಿನ ಉಪಾಹಾರದ ತಿನಿಸು ಬಿಸಿಬೇಳೆ ಬಾತ್‌. ಹೋಟೆಲ್‌ಗಳಲ್ಲಿ ಸಿಗುವ ಬಿಸಿಬೇಳೆ ಬಾತ್ ತಿಂದು ನಿಮಗೂ ಇಷ್ಟ ಆಗಿದ್ರೆ, ಅದೇ ಶೈಲಿಯ ಬಿಸಿಬೇಳೆ ಬಾತ್ ಅನ್ನು ಮನೆಯಲ್ಲೂ ಮಾಡಬಹುದು.8 ಸರಳ ವಿಧಾನಗಳನ್ನು ಅನುಸರಿಸಿದ್ರೆ ಸಖತ್ ಟೇಸ್ಟಿ ಆಗಿರೋ ಬಿಸಿಬೇಳೆ ಬಾತ್ ಮಾಡಬಹುದು, ಇಲ್ಲಿದೆ ರೆಸಿಪಿ ವಿವರ.

ಬಿಸಿಬೇಳೆ ಬಾತ್ ರೆಸಿಪಿ
ಬಿಸಿಬೇಳೆ ಬಾತ್ ರೆಸಿಪಿ (PC: Karnataka Tourism )

ಹಳೆ ಮೈಸೂರು ಭಾಗದ ಸಾಂಪ್ರದಾಯಿಕ ತಿನಿಸು ಬಿಸಿಬೇಳೆ ಬಾತ್‌. ಸಾಮಾನ್ಯವಾಗಿ ಬೆಳಗಿನ ಉಪಾಹಾರಕ್ಕೆ ತಯಾರಿಸುವ ತಿನಿಸು ಇದಾಗಿದೆ. ಅಕ್ಕಿ, ತರಕಾರಿ, ಬೇಳೆ, ವಿಶೇಷವಾದ ಮಸಾಲೆ ಹಾಕಿ ತಯಾರಿಸುವ ಈ ರುಚಿಯಾದ ತಿನಿಸು ಆರೋಗ್ಯಕ್ಕೂ ಉತ್ತಮ. ಬಿಸಿ ಬಿಸಿ ಬಿಸಿಬೇಳೆ ಬಾತ್‌ ಅನ್ನು ತುಪ್ಪ ಹಾಕಿ ತಿಂತಾ ಇದ್ರೆ ಆಹಾ, ಅದರ ರುಚಿಯನ್ನು ತಿಂದವರೇ ಬಲ್ಲರು. ಇದನ್ನು ಟೊಮೆಟೊ, ಈರುಳ್ಳಿ ಹಾಕಿ ತಯಾರಿಸಿದ ರಾಯಿತ ಜೊತೆ ಕೂಡ ತಿನ್ನಬಹುದು.

ಬಿಸಿಬೇಳೆ ಬಾತ್ ಪೌಡರ್ ಅನ್ನು ನೀವು ಮನೆಯಲ್ಲೂ ತಯಾರಿಸಿಟ್ಟುಕೊಳ್ಳಬಹುದು. ಇಲ್ಲದಿದ್ದರೆ ಅಂಗಡಿಯಲ್ಲಿ ಸಿಗುವ ಬಿಸಿಬೇಳೆ ಬಾತ್ ಪೌಡರ್ ಉಪಯೋಗಿಸಿ ಮಾಡಬಹುದು. ಇದರ ರುಚಿಯೂ ಅದ್ಭುತವಾಗಿದ್ದು, ಖಾರ ಕೊಂಚ ಕಡಿಮೆ ಹಾಕಿದ್ರೆ ಮಕ್ಕಳು ಕೂಡ ಖುಷಿಯಿಂದ ತಿಂತಾರೆ. ಖಾರ ಬೂಂದಿ ಜೊತೆ ಬಿಸಿಬೇಳೆ ಬಾತ್ ತಿನ್ನೋದು ಮಜವಾಗಿರುತ್ತೆ. ಹಾಗಾದರೆ ಬಿಸಿಬೇಳೆ ಬಾತ್ ಮಾಡೋದು ಹೇಗೆ, ಇದಕ್ಕೆ ಏನೆಲ್ಲಾ ಸಾಮಗ್ರಿ ಬೇಕು ಎಂಬ ವಿವರ ಇಲ್ಲಿದೆ.

ಬಿಸಿಬೇಳೆ ಬಾತ್ ರೆಸಿಪಿ

ಬೇಕಾಗುವ ಸಾಮಗ್ರಿಗಳು: ತೊಗರಿಬೇಳೆ – ಅರ್ಧ ಕಪ್‌, ಅಕ್ಕಿ – 1 ಕಪ್‌, ಹುಣಸೆಹಣ್ಣು – ನಿಂಬೆಗಾತ್ರದ್ದು, ಅರಿಸಿನ – ಚಿಟಿಕೆ, ಬೀನ್ಸ್ – ಐದಾರು, ಕ್ಯಾರೆಟ್ – 1, ಆಲೂಗೆಡ್ಡೆ– 1, ಈರುಳ್ಳಿ – 1, ನೆನೆಸಿದ ಬಟಾಣಿ – ಕಾಲು ಕಪ್‌, ತುಪ್ಪ – 3 ಚಮಚ, ಕೊಬ್ಬರಿ ತುರಿ – 2 ಚಮಚ, ಬಿಸಿಬೇಳೆ ಬಾತ್ ಪೌಡರ್ – 2 ಚಮಚ, ಗೋಡಂಬಿ – ಐದಾರು, ಸಾಸಿವೆ– ಒಗ್ಗರಣೆಗೆ, ಕರಿಬೇವು – ಐದಾರು ಎಸಳು, ಇಂಗು – ಚಿಟಿಕೆ

ಬಿಸಿಬೇಳೆ ಬಾತ್ ಮಾಡುವ ವಿಧಾನ

ಮೊದಲು ತೊಗರಿಬೇಳೆ ಹಾಗೂ ಅಕ್ಕಿಯನ್ನು ಚೆನ್ನಾಗಿ ತೊಳೆದುಕೊಳ್ಳಿ. ನಂತರ ಈ ಎರಡನ್ನೂ ಕುಕ್ಕರ್‌ಗೆ ಹಾಕಿ, ಚಿಟಿಕೆ ಅರಿಸಿನ ಸೇರಿಸಿ. ನಿಮ್ಮ ಬಳಿ ದೊಡ್ಡ ಕುಕ್ಕರ್ ಇಲ್ಲ ಎಂದರೆ ಎರಡನ್ನೂ ಬೇರೆ ಬೇರೆಯಾಗಿ ಬೇಯಿಸಿಕೊಳ್ಳಬಹುದು. ನಂತರ ಅಗತ್ಯ ಇರುವಷ್ಟು ನೀರು ಸೇರಿಸಿ. ಒಂದು ಚಿಕ್ಕ ಕಪ್‌ನಲ್ಲಿ ಹುಣಸೆಹಣ್ಣು ಹಾಕಿ ಅದಕ್ಕೆ ನೀರು ಸೇರಿಸಿ, ಕುಕ್ಕರ್‌ ಮಧ್ಯದಲ್ಲಿ ಇರಿಸಿ. ಈಗ ಕುಕ್ಕರ್ ಮೂರ್ನ್ಕಾಲು ವಿಶಲ್ ಕೂಗಿಸಿ. ತೊಗರಿಬೇಳೆಯನ್ನು ಬೇರೆ ಬೇಯಿಸಿದ್ದರೆ ಐದಾರು ವಿಶಲ್ ಕೂಗಿಸಿ, ತೊಗರಿಬೇಳೆ ಚೆನ್ನಾಗಿ ಸ್ಮ್ಯಾಶ್ ಆಗುವಂತೆ ಇರಬೇಕು. ಈ ಬೀನ್ಸ್‌, ಕ್ಯಾರೆಟ್ ಹಾಗೂ ಆಲೂಗೆಡ್ಡೆಯನ್ನು ಸ್ವಲ್ಪ ದೊಡ್ಡ ದೊಡ್ಡ ಹೆಚ್ಚಿಟ್ಟುಕೊಳ್ಳಿ. ನಂತರ ಈರುಳ್ಳಿಯನ್ನೂ ಹೆಚ್ಚಿಕೊಳ್ಳಿ. ನೆನೆಸಿದ ಬಟಾಣಿ ಕಾಳುಗಳನ್ನ ತೊಳೆದು ಇರಿಸಿ.

ಒಂದು ದಪ್ಪ ತಳದ ಪಾತ್ರೆಗೆ ಒಂದೆರಡು ಚಮಚ ತುಪ್ಪ ಹಾಕಿ. ಅದಕ್ಕೆ ಈರುಳ್ಳಿ ಸೇರಿಸಿ ಫ್ರೈ ಮಾಡಿ. ಇದಕ್ಕೆ ಉಳಿದ ತರಕಾರಿಗಳನ್ನೂ ಸೇರಿಸಿ ಫ್ರೈ ಮಾಡಿ, ಶೇ 50 ಭಾಗ ಬೇಯುವಂತೆ ನೋಡಿಕೊಳ್ಳಿ. ಈಗ ಕೊಬ್ಬರಿ ತುರಿಯನ್ನು ಒಂದೆರಡು ಸುತ್ತು ಚೆನ್ನಾಗಿ ರುಚಿಕೊಳ್ಳಿ. ನಂತರ ಬೇಯಿಸಿದ ತರಕಾರಿಗೆ ಬಿಸಿಬೇಳೆ ಬಾತ್ ಪೌಡರ್ ಹಾಗೂ ನಿಂಬೆರಸ, ಚಿಕ್ಕ ಬೆಲ್ಲದ ತುಂಡು ಸೇರಿಸಿ. ತೆಂಗಿನತುರಿಯನ್ನೂ ಸೇರಿಸಿ ಎಲ್ಲವನ್ನೂ ಚೆನ್ನಾಗಿ ಮಿಶ್ರಣ ಮಾಡಿ. ನಂತರ ಬೇಯಿಸಿಕೊಂಡ ಅಕ್ಕಿ ಹಾಗೂ ಬೇಳೆಯನ್ನು ತರಕಾರಿ ಜೊತೆ ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿ. ಬೇಕು ಎನ್ನಿಸಿದರೆ ಅಕ್ಕಿಯನ್ನೂ ಸ್ಮ್ಯಾಶ್ ಮಾಡಿಕೊಳ್ಳಬಹುದು. ನಂತರ ಅದಕ್ಕೆ ಅಗತ್ಯ ಇರುವಷ್ಟು ನೀರು ಸೇರಿಸಿ, ಪುನಃ ಬೇಯಿಸಿ. ಈಗ ಚಿಕ್ಕ ಪ್ಯಾನ್‌ವೊಂದರಲ್ಲಿ ತುಪ್ಪ ಹಾಕಿ, ಬಿಸಿ ಮಾಡಿ. ನಂತರ ಸಾಸಿವೆ, ಕರಿಬೇವು, ಇಂಗು ಹಾಗೂ ಗೋಡಂಬಿ ಸೇರಿಸಿ ಹುರಿಯಿರಿ. ಅದನ್ನು ಬಿಸಿಬೇಳೆ ಬಾತ್ ಮೇಲೆ ಸುರಿಯಿರಿ. ಈಗ ನಿಮ್ಮ ಮುಂದೆ ಸಖತ್ ಟೇಸ್ಟಿ ಆಗಿರೋ ಬಿಸಿಬೇಳೆ ಬಾತ್ ತಿನ್ನಲು ಸಿದ್ಧ. ಇದನ್ನು ಖಾರ ಬೂಂದಿ ಹಾಗೂ ರಾಯಿತ ಜೊತೆ ತಿನ್ನಲು ಕೊಡಿ. ಬಿಸಿಬೇಳೆ ಬಾತ್ ಹೆಸರೇ ಹೇಳುವಂತೆ ಇದನ್ನು ಬಿಸಿಯಾಗಿದ್ದಾಗಲೇ ತಿಂದರೆ ಚೆನ್ನ.

Whats_app_banner