Summer Drinks: ಬೇಸಿಗೆಯ ದಾಹ ನೀಗಿಸುವ 6 ದೇಸೀ ಪಾನೀಯಗಳಿವು, ಒಮ್ಮೆ ರುಚಿ ನೋಡಿದ್ರೆ ಖಂಡಿತ ಮತ್ತೆ ಬೇಕೆನ್ನಿಸುತ್ತೆ
ಕನ್ನಡ ಸುದ್ದಿ  /  ಜೀವನಶೈಲಿ  /  Summer Drinks: ಬೇಸಿಗೆಯ ದಾಹ ನೀಗಿಸುವ 6 ದೇಸೀ ಪಾನೀಯಗಳಿವು, ಒಮ್ಮೆ ರುಚಿ ನೋಡಿದ್ರೆ ಖಂಡಿತ ಮತ್ತೆ ಬೇಕೆನ್ನಿಸುತ್ತೆ

Summer Drinks: ಬೇಸಿಗೆಯ ದಾಹ ನೀಗಿಸುವ 6 ದೇಸೀ ಪಾನೀಯಗಳಿವು, ಒಮ್ಮೆ ರುಚಿ ನೋಡಿದ್ರೆ ಖಂಡಿತ ಮತ್ತೆ ಬೇಕೆನ್ನಿಸುತ್ತೆ

ಬೇಸಿಗೆಕಾಲದ ಸುಡು ಬಿಸಿಲಿನಲ್ಲಿ ದಣಿದು, ಬಾಯಾರಿ ಮನೆಗೆ ಬಂದಾಗ ಮನಸ್ಸು, ದೇಹ ತಣ್ಣಗಾಗಲು ನೈಸರ್ಗಿಕ ಪದಾರ್ಥಗಳನ್ನು ಬಳಸಿ ತಯಾರಿಸಿದ ವಿಶಿಷ್ಟ ಪಾನೀಯಗಳು ಕುಡಿಯಲು ಸಿಕ್ಕರೆ ಎಷ್ಟು ನೆಮ್ಮದಿ ಅಲ್ವಾ? ನೀವೆಂದೂ ಟೇಸ್ಟ್‌ ಮಾಡಿರದ ವಿಶಿಷ್ಟ ಬಗೆಯ ದೇಸೀ ಪಾನೀಯಗಳ ಬಗ್ಗೆ ಇಲ್ಲಿದೆ ಮಾಹಿತಿ. ಇದನ್ನು ನೀವೂ ತಯಾರಿಸಿ ಕುಡಿಯೋಕೆ ಮರಿಬೇಡಿ.

ಬೇಸಿಗೆಯ ದಾಹ ನೀಗಿಸುವ 6 ದೇಸೀ ಪಾನೀಯಗಳು
ಬೇಸಿಗೆಯ ದಾಹ ನೀಗಿಸುವ 6 ದೇಸೀ ಪಾನೀಯಗಳು

ಈಗಂತೂ ಬಿಸಿಲಿನ ಅಬ್ಬರ ಬಹಳ ಜೋರಾಗಿಯೇ ಇದೆ. ಬೇಸಿಗೆಕಾಲದ ಮೊದಲ ತಿಂಗಳಿನಲ್ಲೇ ಸೆಖೆ, ಉರಿ, ತೀವ್ರ ಬಾಯಾರಿಕೆಗೆ ಜನ ಬೇಸತ್ತಿದ್ದಾರೆ. ಅದೆಷ್ಟು ಬಾರಿ ನೀರು ಕುಡಿದರೂ ದೇಹಕ್ಕೆ ಸಾಲುತ್ತಿಲ್ಲವೇನೋ, ಇದು ಅನಾರೋಗ್ಯಕ್ಕೆ ಎಡೆಮಾಡೀತೇ ಎಂಬ ಭಯ ಎಲ್ಲರನ್ನೂ ಕಾಡುತ್ತಲೇ ಇದೆ. ಮಾರುಕಟ್ಟೆಯಲ್ಲಿ ಲಭ್ಯವಾಗುವ ಕೃತಕ ಪಾನೀಯಗಳನ್ನು ಕುಡಿದರೆ ದೇಹಕ್ಕೆ ಒಳ್ಳೆಯದಲ್ಲ. ಹಾಗಾದರೆ ದೇಹವನ್ನು ತಂಪಾಗಿಸಲು ದೇಸೀ ಪಾನೀಯಗಳನ್ನು ಕುಡಿದರೆ ಹೇಗೆ? ನೈಸರ್ಗಿಕ ಪದಾರ್ಥಗಳನ್ನು ಬಳಕೆ ಮಾಡಿ ದೇಸೀ ಪಾನೀಯ ತಯಾರಿಸಿದರೆ, ನೀರಿನ ಅಂಶದ ಜೊತೆಗೆ ನಿಸರ್ಗದತ್ತ ಅಂಶಗಳೂ ದೇಹವನ್ನು ಸೇರಿದಂತಾಗುತ್ತದೆ ಅಲ್ವೇ?

ಹೌದು, ಭಾರತದಲ್ಲಿ ಬೇಸಿಗೆ ಪಾನೀಯಗಳಿಗಾಗಿ ನಾವು ಅನೇಕ ಸಾಂಪ್ರದಾಯಿಕ ಪಾಕವಿಧಾನಗಳನ್ನು ಅನುಸರಿಸುತ್ತೇವೆ. ಲಸ್ಸಿ, ಜಲ್ ಜೀರಾ, ಕೋಕಂ ಶರಬತ್, ಆಮ್ ಪನ್ನಾದಂತಹ ಪಾನೀಯಗಳು ಬಹಳ ಪ್ರಸಿದ್ಧವಾದವು. ಆದರೆ ಎಲೆಮರೆಯ ಕಾಯಿಯಂತೆ, ಕೆಲವು ನಿರ್ದಿಷ್ಟ ಪ್ರದೇಶಗಳಿಗೆ ಮಾತ್ರ ಜನಪ್ರಿಯವಾಗಿರುವ ಇನ್ನೂ ಅನೇಕ ಪಾನೀಯಗಳಿವೆ. ಅವುಗಳನ್ನು ಯಾವುವು ಎಂಬುದನ್ನು ನಾವಿಲ್ಲಿ ತಿಳಿಸಿಕೊಡುತ್ತೇವೆ.

ಈ ಬೇಸಿಗೆಕಾಲಕ್ಕೆ ಸೂಕ್ತವಾದ 6 ದೇಸೀ ಪಾನೀಯಗಳು ಇಲ್ಲಿವೆ

1. ಮಾವಿನ ಕುಲುಕ್ಕಿ

ಕೇರಳದ ಪ್ರಸಿದ್ಧ ತಂಪು ಪಾನೀಯವಿದು. ಇಲ್ಲಿನ ಸ್ಥಳೀಯ ಭಾಷೆಯಲ್ಲಿ "ಕುಲುಕ್ಕಿ" ಎಂದರೆ "ಅಲುಗಾಡಿಸು" ಎಂದು ಅರ್ಥ. ಕುಲುಕ್ಕಿಯನ್ನು ಗುಲಾಬಿ ಮತ್ತು ಕಿತ್ತಳೆಯಂತಹ ಇತರ ವಸ್ತುಗಳಿಂದಲೂ ತಯಾರಿಸಬಹುದಾದರೂ, ಮಾವಿನಕಾಯಿಯಿಂದ ತಯಾರಿಸುವ ಈ ಪಾನೀಯದ ಸ್ವಾದವೇ ಬೇರೆ. ಮಾವಿನಕಾಯಿ ರಸವನ್ನು ಹೊರತುಪಡಿಸಿ, ಈ ಶರಬತ್ತಿಗೆ ಹಸಿ ಮೆಣಸಿನಕಾಯಿ, ನಿಂಬೆ ರಸ, ಜೇನುತುಪ್ಪ ಅಥವಾ ಸಕ್ಕರೆ ಮತ್ತು ಸಬ್ಜಾ ಬೀಜಗಳು ಬೇಕಾಗುತ್ತವೆ. ಇದನ್ನು ಕೆಲವೇ ನಿಮಿಷಗಳಲ್ಲಿ ತಯಾರಿಸಬಹುದು ಮತ್ತು ತೂಕ ಇಳಿಸಲು ಬಯಸುವವರಿಗಿದು ಉತ್ತಮ ಆಯ್ಕೆ.

2. ಆಮ್ ಜೋಲ್

ಬೇಸಿಗೆಕಾಲ ಮಾವಿನಕಾಯಿ ಸೀಸನ್‌ ಕೂಡ ಆಗಿರುವುದರಿಂದ ಆಮ್ ಜೋಲ್ ಎನ್ನುವ ಇನ್ನೊಂದು ರೀತಿಯ ಮಾವಿನಕಾಯಿ ಪಾನೀಯವನ್ನೂ ದಾಹ ಶಮನಕ್ಕಾಗಿ ಬಳಕೆ ಮಾಡಲಾಗುತ್ತದೆ. ಬಂಗಾಳದ ಆಮ್ ಜೋಲ್ ಅನ್ನು ಸವಿಯನ್ನು ಹಲವು ಮಾರ್ಗಗಳಿವೆ. ಊಟದ ಜೊತೆಗೂ ಕೂಡ ಇದನ್ನು ಬಳಸಬಹುದು. ಅದಕ್ಕೂ ಹೆಚ್ಚಾಗಿ ಊಟದ ನಂತರವೂ ಇದನ್ನು ಸವಿಯುವವರಿದ್ದಾರೆ. ಇದು ಜೀರ್ಣಕ್ರಿಯೆಯನ್ನು ಉತ್ತಮಗೊಳಿಸುವ ಗುಣವನ್ನೂ ಹೊಂದಿದೆ.

3. ದಾಬ್ ಶರ್ಬತ್

ಈ ಬೇಸಿಗೆಯಲ್ಲಿ ಸವಿಯಬಲ್ಲ ಮತ್ತೊಂದು ಬಂಗಾಳಿ ಪಾನೀಯವೆಂದರೆ ದಾಬ್ ಶರ್ಬತ್. ಕೋಲ್ಕತ್ತಾದಲ್ಲಿ ಜನಪ್ರಿಯವಾಗಿರುವ ಈ ಪಾನೀಯವನ್ನು ನೀವೂ ಸಹ ಮನೆಯಲ್ಲಿಯೇ ಸುಲಭವಾಗಿ ತಯಾರಿಸಬಹುದು. ನಿಮಗೆ ಬೇಕಾಗಿರುವುದು ಹಸಿ ತೆಂಗಿನಕಾಯಿ, ನಿಂಬೆ ರಸ, ಸಕ್ಕರೆ, ಉಪ್ಪು ಮತ್ತು ಐಸ್ ಕ್ಯೂಬ್ಸ್. ಹವಾಮಾನದಲ್ಲಿ ಏರಿಕೆಯಿಂದಾಗಿ ದೇಹವೂ ಉಷ್ಣವೆನ್ನಿಸಿದಾಗ ಈ ದೇಸೀ ಪಾನೀಯ ನಿಮ್ಮ ಮೊದಲ ಆಯ್ಕೆಯಾಗಿರಲಿ.

4. ಎಳನೀರು ಮಿಲ್ಕ್ ಶೇಕ್

ಬೇಸಿಗೆ ಕಾಲದಲ್ಲಿ ಎಳನೀರನ್ನು ಕುಡಿಯದವರಿಲ್ಲ. ಆದರೆ ತೆಂಗಿನಕಾಯಿ ನೀರೂ ಸಹ ಬೇಸಿಗೆಗೆ ಬಹು ಬೇಡಿಕೆಯ ಪಾನೀಯ. ತೆಂಗಿನಕಾಯಿ ನೀರು ಮಾತ್ರವಲ್ಲದೆ ತೆಂಗಿನಕಾಯಿ ಹಾಲು, ತಿರುಳೂ ಸಹ ಪೋಷಕಾಂಶಗಳಿಂದ ತುಂಬಿರುತ್ತದೆ. ದಕ್ಷಿಣ ಭಾರತದಲ್ಲಿ ಈ ಋತುವಿನಲ್ಲಿ ಸಾಮಾನ್ಯವಾಗಿ ಎಳನೀರ್ ಮಿಲ್ಕ್‌ಶೇಕ್ ಸವಿಯುತ್ತಾರೆ (ಎಳನೀರ್ ವಾಸ್ತವವಾಗಿ ತೆಂಗಿನಕಾಯಿಯನ್ನು ಸೂಚಿಸುತ್ತದೆ). ಈ ವಿಶಿಷ್ಟವಾದ ಮಿಲ್ಕ್‌ಶೇಕ್ ಮಾಡಲು, ನಿಮಗೆ ಹಸಿ ತೆಂಗಿನಕಾಯಿ ತಿರುಳಿನ ಜೊತೆಗೆ ನೀರು, ಶೀತಲವಾಗಿರುವ ಹಾಲು ಮತ್ತು ಸಕ್ಕರೆ ಬೇಕಾಗುತ್ತದೆ. ತುಂಬಾ ಸರಳ, ಆದರೆ ಪೋಷಕಾಂಶಭರಿತವಾಗಿದೆ.

5. ಇಮ್ಲಿ ಕಾ ಆಮ್ಲಾನಾ

ರಾಜಸ್ಥಾನ ಮಾರ್ವಾನ್‌ ಪ್ರದೇಶಗಳಲ್ಲಿ ಹೆಚ್ಚಾಗಿ ತಯಾರಿಸಲ್ಪಡುವ ಪಾನೀಯವಿದು. ಇಮ್ಲಿ ಅಂದರೆ ಹುಣಿಸೆಹಣ್ಣಿನಲ್ಲಿ ದೇಹವನ್ನು ತಂಪಾಗಿಸುವ ಅಂಶಗಳಿದ್ದು, ಬೇಸಿಗೆಕಾಲದಲ್ಲಿ ಇದಕ್ಕೆ ಹೆಚ್ಚಿನ ಬೇಡಿಕೆಯಿದೆ. ಹುಣಸೇಹಣ್ಣು, ಕರಿಮೆಣಸು ಇಲ್ಲವೇ ಹಸಿಮೆಣಸು, ಮೆಣಸು, ಏಲಕ್ಕಿ ಮತ್ತು ಪುದೀನದಂತಹ ವಸ್ತುಗಳನ್ನು ಬಳಸಿ ಈ ದೇಸೀ ಪಾನೀಯವನ್ನು ತಯಾರಿಸಲಾಗುತ್ತದೆ. ಈ ರಾಜಸ್ಥಾನಿ ಪಾನೀಯವು ಸಿಹಿ, ಹುಳಿ ಮತ್ತು ಸ್ವಲ್ಪ ಮಸಾಲೆಗಳಿಂದ ಕೂಡಿದ್ದು, ನಿಮಗೂ ಮೆಚ್ಚುಗೆಯಾಗುವುದರಲ್ಲಿ ಸಂಶಯವಿಲ್ಲ.

6. ಸತ್ತು ಶರಬತ್

ಬಿಹಾರ ರಾಜ್ಯವು ವಿಶೇಷವಾಗಿ ಸಾಂಪ್ರದಾಯಿಕ ಸತ್ತು ಶರಬತ್‌ಗೆ ಹೆಸರುವಾಸಿಯಾಗಿದೆ. ಈ ಪೌಷ್ಟಿಕ ಪಾನೀಯವನ್ನು ಹುರಿಗಡಲೆ ಬಳಸಿ ಮಾಡಿದ ಪುಡಿಯಿಂದ ತಯಾರಿಸಲಾಗುತ್ತದೆ. ತೂಕ ಇಳಿಸಲು ಬಯಸುವವರು ಇದನ್ನು ತಪ್ಪದೇ ಸವಿಯಬಹುದು. ಸತ್ತು ಪುಡಿಯನ್ನು ಸಾಮಾನ್ಯವಾಗಿ ಹುರಿದ ಜೀರಿಗೆ ಪುಡಿ, ಪುದೀನಾ, ನಿಂಬೆ ರಸ, ಉಪ್ಪು ಮತ್ತು ನೀರಿನೊಂದಿಗೆ ಬೆರೆಸಲಾಗುತ್ತದೆ. ಈ ಪಾನೀಯವು ದೇಹವನ್ನು ಹೈಡ್ರೀಕರಿಸುವಲ್ಲಿ ಪ್ರಮುಖ ಪಾತ್ರ ವಹಿಸುವುದಲ್ಲದ, ಇದು ಪ್ರೋಟೀನ್‌ನಿಂದ ಸಮೃದ್ಧವಾಗಿದೆ.

ಬೇಸಿಗೆಗೆ ನಿತ್ಯವೂ ಒಂದೇ ಬಗೆಯ ದೇಸೀ ಪಾನೀಯವನ್ನು ಮಾಡಿ, ಕುಡಿದು ಬೇಸರವಾಗಿದ್ದರೆ ಇಂತಹ ವಿರಳವಾದ ದೇಸೀ ಪಾನೀಯಗಳನ್ನೂ ತಯಾರಿಸಿ, ಕುಡಿದು ನೋಡಿ. ರುಚಿಕರ ಹಾಗೂ ಆರೋಗ್ಯಕರವಾದ ಈ ಪಾನೀಯಗಳು ದಾಹವನ್ನು ಶಮನಗೊಳಿಸುವುದರ ಜೊತೆಗೆ ದೇಹವನ್ನೂ ತಂಪಾಗಿಸುತ್ತವೆ.

Whats_app_banner