Mango Lassi: ಬೇಸಿಗೆಯ ದಾಹ ನೀಗಿಸುವ ಮ್ಯಾಂಗೊ ಲಸ್ಸಿ ಪರ್ಫೆಕ್ಟ್ ರುಚಿ ಬರಲು ಈ ರೀತಿ ತಯಾರಿಸಿ
ಬೇಸಿಗೆಯಲ್ಲಿ ದಾಹ ನೀಗಿಸುವ ಪಾನೀಯಗಳು ದೇಹಕ್ಕೆ ಚೈತನ್ಯ ನೀಡುವುದು ಸುಳ್ಳಲ್ಲ. ಅದರಲ್ಲೂ ಬೇಸಿಗೆಯ ಹಣ್ಣಾದ ಮಾವಿನ ಹಣ್ಣಿನ ಲಸ್ಸಿ ದೇಹ ತಂಪು ಮಾಡಲು ಹೇಳಿ ಮಾಡಿಸಿದ್ದು. ಇದನ್ನು ಮನೆಯಲ್ಲೂ ಪರ್ಫೆಕ್ಟ್ ಆಗಿ ತಯಾರಿಸಿ ಸವಿಯಬಹುದು, ರೆಸಿಪಿ ಇಲ್ಲಿದೆ.
ಬೇಸಿಗೆಯಲ್ಲಿ ಸಿಗುವ ಹಣ್ಣುಗಳಲ್ಲಿ ಹಲವರಿಗೆ ಫೇವರಿಟ್ ಮಾವಿನಹಣ್ಣು. ಹಣ್ಣುಗಳ ರಾಜ ಎಂದೇ ಕರೆಸಿಕೊಳ್ಳುವ ಮಾವಿನ ರುಚಿಗೆ ಬೇರೆ ಸಾಟಿಯಿಲ್ಲ. ಇದನ್ನು ನೇರವಾಗಿ ತಿನ್ನಬಹುದು. ಜೊತೆಗೆ ಇದರಿಂದ ಬಗೆ ಬಗೆ ಪಾನೀಯ, ಖಾದ್ಯಗಳನ್ನೂ ತಯಾರಿಸಿ ಸವಿಯಬಹುದು. ಬೇಸಿಗೆಯ ದಾಹ ನಿಗಿಸುವ ವಿಚಾರಕ್ಕೆ ಬಂದರೆ ಮ್ಯಾಂಗೋ ಲಸ್ಸಿ ಹೇಳಿ ಮಾಡಿಸಿದ್ದು. ಕೆನೆಭರಿತ ಮಾವಿನ ಹಣ್ಣಿನಿಂದ ತಯಾರಿಸುವ ಲಸ್ಸಿ ಹಲವರಿಗೆ ಇಷ್ಟ. ಇದನ್ನು ರುಚಿಕರವಾಗಿ, ಪರ್ಫೆಕ್ಟ್ ಆದ ರುಚಿಯೊಂದಿಗೆ ಮನೆಯಲ್ಲೇ ತಯಾರಿಸಿ ಸವಿಯಬಹುದು.
ಮಾವಿನಹಣ್ಣಿನ ಲಸ್ಸಿ ಹೆಸರು ಕೇಳಿದ್ರೆ ನಿಮ್ಮ ಬಾಯಲ್ಲಿ ನೀರೂರಬಹುದು. ಸಾಂಪ್ರದಾಯಿಕ ಲಸ್ಸಿ ತಯಾರಿಸಲು ಮಾಗಿದ ಮಾವಿನಹಣ್ಣು ಅವಶ್ಯ. ಮಾವಿನಹಣ್ಣಿನ ತಿರುಳಿನೊಂದಿಗೆ ಮೊಸರು, ಸಕ್ಕರೆ ಹಾಗೂ ಹಾಲು ಸೇರಿಸಿ ಮಾವಿನ ಹಣ್ಣಿನ ಟೇಸ್ಟಿ ಲಸ್ಸಿ ತಯಾರಿಸಲಾಗುತ್ತದೆ. ಭಾರತದ ವಿವಿಧ ರಾಜ್ಯಗಳಲ್ಲಿ ಲಸ್ಸಿ ಬೇಸಿಗೆಗೆ ನೀಡುವ ತಂಪು ಪಾನಿಯಗಳಲ್ಲಿ ಅಗ್ರಸ್ಥಾನ ಪಡೆದಿರುತ್ತದೆ.
ಬೀದಿಬದಿಯಲ್ಲಿ, ಸ್ಟಾಲ್‌ಗಳಲ್ಲಿ, ಹೋಟೆಲ್‌ಗಳಲ್ಲಿ ಸಿಗುವ ಲಸ್ಸಿಯ ರುಚಿ ನಿಮಗೆ ಮನೆಯಲ್ಲಿ ಮಾಡಿದಾಗ ಸಿಗದೇ ಇರಬಹುದು. ಅದಕ್ಕಾಗಿ ಕೆಲವು ತಂತ್ರಗಳನ್ನು ಅನುಸರಿಸಬೇಕು. ಆ ಮೂಲಕ ಪರ್ಫೆಕ್ಟ್ ಮ್ಯಾಂಗೊ ಲಸ್ಸಿ ಮಾಡಬಹುದು. ಇದಕ್ಕಾಗಿ ಈ 7 ಟಿಪ್ಸ್‌ಗಳನ್ನು ಅನುಸರಿಸಿ.
ಕಳಿತ ಹಾಗೂ ಸುವಾಸನೆಭರಿತ ಮಾವು ಆರಿಸಿ
ಮಾವಿನಹಣ್ಣಿನ ಲಸ್ಸಿ ತಯಾರಿಸಲು ನೀವು ಕಳಿತ ಹಾಗೂ ಸುವಾಸನೆಭರಿತ ಮಾವಿನಹಣ್ಣನ್ನು ಆಯ್ಕ ಮಾಡಿ. ಆಗ ಲಸ್ಸಿಯ ರುಚಿ ಅದ್ಭುತವಾಗಿರುತ್ತದೆ. ರುಚಿ ಹಾಗೂ ಪರಿಮಳಕ್ಕೆ ಹೆಸರುವಾಸಿಯಾದ ಅಲ್ಫಾನ್ಸೋ ಹಾಗೂ ದಶೇರಿಯಂತಹ ಮಾವಿನಹಣ್ಣನ್ನು ಆರಿಸಿಕೊಳ್ಳಬೇಕು. ನಾರಿನಾಂಶ ಹೆಚ್ಚಿರುವ ಮಾವು ಲಸ್ಸಿಗೆ ಹೇಳಿಸಿದ್ದಲ್ಲ.
ಹುಳಿ, ಸಿಹಿ ಎರಡೂ ಅಂಶ ಇರಲಿ
ಪರಿಪೂರ್ಣವಾದ ಮ್ಯಾಂಗೊ ಲಸ್ಸಿ ಎಂದರೆ ಹುಳಿ ಹಾಗೂ ಸಿಹಿ ಎರಡೂ ರುಚಿ ಹೊಂದಿರಬೇಕು. ಕಳಿತ ಮಾವಿನ ಹಣ್ಣಿನ ತಿರುಳಿನೊಂದಿಗೆ ನೀರು, ಹಾಲು ಅಥವಾ ಮೊಸರು ಸೇರಿಸಬೇಕು. ಸಿಹಿ ಬೇಕಿದ್ದರೆ ಸಕ್ಕರೆ ಅಥವಾ ಜೇನುತುಪ್ಪ ಸೇರಿಸಬಹುದು. ಮಾವಿನಹಣ್ಣು ಸಿಹಿ ಇರುವ ಕಾರಣ ಅತಿಯಾಗಿ ಸಕ್ಕರೆಯಂಶ ಸೇರಿಸಿದರೆ ರುಚಿ ಕೆಡಬಹುದು.
ಕೆನೆಭರಿತ ಮೊಸರು ಸೇರಿಸಿ
ಮಾವಿನಹಣ್ಣಿನ ಲಸ್ಸಿ ತಯಾರಿಸಲು ಕೆನೆಭರಿತ ಮೊಸರು ಹಾಕಬೇಕು. ಇದರಿಂದ ರುಚಿ ಹಾಗೂ ಮಾಧುರ್ಯ ಎರಡೂ ಚೆನ್ನಾಗಿರುತ್ತದೆ. ಅತಿ ದಪ್ಪ ಬೇಡ ಎಂದರೆ ಗ್ರೀಕ್ ಕರ್ಡ್ ಬಳಸಬಹುದು.
ಸುವಾಸನೆ ವರ್ಧಕಗಳನ್ನು ಬಳಸಿ
ಲಸ್ಸಿ ಡಿಫ್ರೆಂಟ್ ಟೇಸ್ಟ್ ಬರಲು ಆರೊಮ್ಯಾಟಿಕ್ ಮಸಾಲೆ ಅಥವಾ ಸುವಾಸನೆ ವರ್ಧಕಗಳನ್ನು ಬಳಸಬಹುದು. ಇಂದು ಚಿಟಿಕೆ ಏಲಕ್ಕಿ ಪುಡಿ ಸೇರಿಸುವ ಮೂಲಕ ಮಾವಿನಹಣ್ಣಿನ ಲಸ್ಸಿಯ ರುಚಿಯನ್ನು ಬದಲಿಸಬಹುದು. ಹೆಚ್ಚುವರಿ ಪರಿಮಳ ಬೇಕೆಂದರೆ ರೋಸ್ ವಾಟರ್ ಅಥವಾ ಕೇಸರಿ ದಳ ಸೇರಿಸಬಹುದು. ಆದರೆ ಮಾವಿನಹಣ್ಣಿನ ಪರಿಮಳವನ್ನು ಅವು ಮೀರಿಸಬಾರದು.
ಚೆನ್ನಾಗಿ ರುಬ್ಬಿ
ನಯವಾಗಿ, ನೊರೆ ಬರುವವರೆಗೂ ರುಬ್ಬುವುದು ಬಹಳ ಮುಖ್ಯ. ಇದಕ್ಕಾಗಿ, ನೀವು ಹೈ-ಸ್ಪೀಡ್ ಬ್ಲೆಂಡರ್ ಅನ್ನು ಬಳಸಬಹುದು, 1 ರಿಂದ 2 ನಿಮಿಷ ಹೈ ಸ್ಪೀಡ್‌ನಲ್ಲಿ ರುಬ್ಬಬೇಕು. ಇದಕ್ಕೆ ಐಸ್‌ಕ್ಯೂಬ್ ಕೂಡ ಸೇರಿಸಿ ರುಬ್ಬಬಹುದು.
ಫ್ರಿಜ್‌ನಲ್ಲಿಡಲು ಮರೆಯಬೇಡಿ
ಬೇಸಿಗೆಯಲ್ಲಿ ಮಾವಿನಹಣ್ಣಿನ ಲಸ್ಸಿಯನ್ನು ಫ್ರಿಜ್‌ನಲ್ಲಿ ಇಡದೇ ಕುಡಿದರೇ ಚೆನ್ನಾಗಿರುವುದಿಲ್ಲ. ಅದಕ್ಕಾಗಿ ಕನಿಷ್ಠ 30 ನಿಮಿಷಗಳ ಕಾಲ ಫ್ರಿಜ್‌ನಲ್ಲಿಟ್ಟು ತಣ್ಣಗಾಗಲು ಬಿಡಿ. ಇದಕ್ಕೆ ಪುದಿನಾ ಎಲೆ, ಪಿಸ್ತಾದಿಂದ ಅಲಂಕರಿಸಿ ಕುಡಿಯಲು ಕೊಡಬಹುದು.
ಈ ಬೇಸಿಗೆಗೆ ಹೇಳಿ ಮಾಡಿಸಿದ ಮ್ಯಾಂಗೊ ಲಸ್ಸಿಯನ್ನು ಪರ್ಫೆಕ್ಟ್ ವಿಧಾನದಲ್ಲಿ ತಯಾರಿಸುವುದು ಹೇಗೆ ಎಂಬುದನ್ನು ನೋಡಿದ್ರಲ್ಲ. ಇನ್ಯಾಕೆ ತಡ, ನಿಮ್ಮ ಮನೆಯಲ್ಲೂ ಕಳಿತ ಮಾವಿನಹಣ್ಣು ಇದ್ರೆ ಮಾವಿನಹಣ್ಣಿ ಲಸ್ಸಿ ತಯಾರಿಸಿ ಕುಡಿಯಿರಿ.