ಕನ್ನಡ ಸುದ್ದಿ  /  Lifestyle  /  Food Summer Special Drinks Sesame Juice Butter Milk Ragi Juice Health Benefits Of Summer Drinks Vdy

Summer Drinks: ಬೇಸಿಗೆಯ ಬಿಸಿಗೆ ದೇಹ ತಂಪಾಗಿಸುವ ಪಾನೀಯಗಳಿವು, ಇವು ಆರೋಗ್ಯಕ್ಕೂ ಉತ್ತಮ

ಬೇಸಿಗೆಯಲ್ಲಿ ದೇಹ ತಂಪಾಗಿಸುವ ಪಾನೀಯಗಳನ್ನು ಸೇವಿಸಿದರೆ ಆಹಾ ಎನ್ನಿಸುವುದು ಸುಳ್ಳಲ್ಲ. ಈ ಕೆಲವು ಪಾನೀಯಗಳು ಬಿಸಿಲ ಧಗೆ ನೀಗಿಸುವ ಜೊತೆಗೆ ಆರೋಗ್ಯಕ್ಕೂ ಪ್ರಯೋಜನ ನೀಡುತ್ತವೆ. ಅಂತಹ ಪಾನೀಯಗಳ ವಿವರ ಇಲ್ಲಿದೆ.

ಬೇಸಿಗೆಯ ಬಿಸಿಗೆ ದೇಹ ತಂಪಾಗಿಸುವ ಪಾನೀಯಗಳಿವು
ಬೇಸಿಗೆಯ ಬಿಸಿಗೆ ದೇಹ ತಂಪಾಗಿಸುವ ಪಾನೀಯಗಳಿವು

ದಿನೇ ದಿನೇ ಬಿಸಿಲಿನ ತಾಪ ಏರಿಕೆಯಾಗುತ್ತಿದೆ. ಮನೆಯ ಒಳಗೂ ಕುಳಿತುಕೊಳ್ಳುವುದು ಕಷ್ಟವಾಗಿದೆ. ಬಿಸಿಲಿನ ತಾಪಕ್ಕೆ ದೇಹ ನಲುಗುತ್ತಿದೆ. ಈ ಸಮಯದಲ್ಲಿ ತಂಪಾದ ಪಾನೀಯಗಳನ್ನು ಕುಡಿಯುವ ಮೂಲಕ ದೇಹವನ್ನು ತಂಪಾಗಿಸಿಕೊಳ್ಳಬಹುದು, ಹಾಗಂತ ಕೋಲ್ಡ್‌ ಡ್ರಿಂಕ್ಸ್‌ಗಳನ್ನು ಕುಡಿದರೆ ಆರೋಗ್ಯಕ್ಕೆ ಒಂದಿಲ್ಲೊಂದು ಸಮಸ್ಯೆಗಳು ಎದುರಾಗುವುದು ಸಹಜ. ಹಾಗಾಗಿ ಆರೋಗ್ಯಕ್ಕೆ ಹಿತ ಎನ್ನಿಸುವ ಈ ಕೆಳಗಿನ ತಿಳಿಸಿರುವ ಪಾನೀಯಗಳನ್ನು ತಯಾರಿಸಿ ಕುಡಿಯಿರಿ. ಇದನ್ನು ತಯಾರಿಸುವುದು ಸುಲಭ.

ಎಳ್ಳು ಹಾಲು

ಬೇಕಾಗುವ ಸಾಮಗ್ರಿಗಳು: ಬಿಳಿ ಎಳ್ಳು - 1 ಕಪ್‌, ಬೆಲ್ಲ - 1 ಕಪ್‌, ಉಪ್ಪು - ರುಚಿಗೆ ತಕ್ಕಷ್ಟು,

ತಯಾರಿಸುವ ವಿಧಾನ: ಬಿಳಿ ಎಳ್ಳನ್ನು ಎರಡು ಬಾರಿ ಚೆನ್ನಾಗಿ ತೊಳೆದು ಒಂದು ತಾಸು ನೆನೆಸಿಡಿ. ನೆನೆಸಿದ ಎಳ್ಳನ್ನು ಮಿಕ್ಸಿಗೆ ಹಾಕಿ, ಸ್ವಲ್ಪ ನೀರು ಸೇರಿಸಿ ನುಣ್ಣಗೆ ರುಬ್ಬಿಕೊಂಡು ಒಂದು ಪಾತ್ರೆಗೆ ಹಾಕಿ. ರುಬ್ಬಿದ ಮಿಶ್ರಣಕ್ಕೆ ಒಂದು ಚಿಟಿಕೆ ಉಪ್ಪು, ಒಂದು ಕಪ್‌ ಬೆಲ್ಲ ಹಾಕಿ ಚೆನ್ನಾಗಿ ಕಲಕಿ. ಆ ಮಿಶ್ರಣಕ್ಕೆ ತಣ್ಣನೆಯ ನೀರನ್ನ ಸೇರಿಸ್ತಾ ಅದನ್ನು ತೆಳ್ಳಗೆ ಅಂದರೆ ಕುಡಿಯುವ ಹದಕ್ಕೆ ತಯಾರಿಸಿದರೆ ಎಳ್ಳು ಹಾಲು ರೆಡಿ. ಇದನ್ನು ನೀವು ಫ್ರಿಜ್‌ನಲ್ಲಿಟ್ಟು ಕುಡಿಯಬಹುದು.

ಮಜ್ಜಿಗೆ ತಂಬುಳಿ

ಬೇಕಾಗುವ ಸಾಮಗ್ರಿಗಳು: ಮಜ್ಜಿಗೆ - ಒಂದು ಲೋಟ, ನೀರು - 3 ಲೋಟ, ಜೀರಿಗೆ- 1 ಚಮಚ, ಶುಂಠಿ - ಅರ್ಧ ಇಂಚು, ಇಂಗು ಸ್ವಲ್ಪ, ಹಸಿಮೆಣಸು - 1, ಕೊತ್ತಂಬರಿ ಸೊಪ್ಪು - 2 ದಂಟು, ನಿಂಬೆಹಣ್ಣು - 1, ಉಪ್ಪು

ತಯಾರಿಸುವ ವಿಧಾನ: ಒಂದು ದೊಡ್ಡ ಪಾತ್ರೆಯಲ್ಲಿ ಒಂದು ಲೋಟ ಮಜ್ಜಿಗೆಗೆ ಮೂರು ಲೋಟ ನೀರು ಹಾಕಿ ಎರಡು ಚಮಚ ಉಪ್ಪನ್ನ ಹಾಕಿ ಕಲಕಿ ಇಟ್ಟುಕೊಳ್ಳಬೇಕು. ಚಿಕ್ಕ ಮಿಕ್ಸಿ ಜಾರ್‌ಗೆ ಕೊತ್ತಂಬರಿ ಸೊಪ್ಪು, ಶುಂಠಿ, ಜೀರಿಗೆ ಸ್ವಲ್ಪ ಇಂಗು ಹಾಕಿ ರುಬ್ಬಲು ಬೇಕಾಗುವಷ್ಟು ನೀರು ಹಾಕಿ ರುಬ್ಬಿ.

ರುಬ್ಬಿದ ಮಿಶ್ರಣವನ್ನು ಮಜ್ಜಿಗೆಗೆ ಉಪ್ಪು ನೀರು ಹಾಕಿ ರೆಡಿ ಮಾಡಿಟ್ಟ ಪಾತ್ರೆಗೆ ಹಾಕಿ ಚೆನ್ನಾಗಿ ಕಲಕಿ ಆಮೇಲೆ ಒಂದು ಅರ್ಧ ಹೋಳು ಲಿಂಬು ರಸ ಹಾಕಿ ಕಲಕಿದರೆ ಮಜ್ಜಿಗೆ ತಂಬುಳಿ ಕುಡಿಯಲು ಸಿದ್ಧ.

ರಾಗಿ ಹಾಲು

ಬೇಕಾಗುವ ಸಾಮಗ್ರಿಗಳು: ರಾಗಿ - ಒಂದು ಕಪ್‌, ಬೆಲ್ಲ - ಒಂದು ಕಪ್‌, ಹಾಲು - ಎರಡು ಕಪ್‌

ತಯಾರಿಸುವ ವಿಧಾನ: ಒಂದು ಕಪ್‌ ರಾಗಿಯನ್ನು ಚೆನ್ನಾಗಿ ತೊಳೆದು ರಾತ್ರಿ ಇಡಿ ನೆನೆಸಿ ಇಡಬೇಕು. ಬೆಳಿಗ್ಗೆ ಅದನ್ನ ಸ್ವಲ್ಪ ನೀರು ಹಾಕಿ ನುಣ್ಣಗೆ ರುಬ್ಬಿ ತೆಳ್ಳಗಿನ ಬಟ್ಟೆಯಲ್ಲಿ ಒಂದು ಪಾತ್ರೆಗೆ ಸೋಸಿಕೊಳ್ಳಬೇಕು. ಅದಕ್ಕೆ ಸ್ವಲ್ಪ ಇನ್ನೂ ನೀರನ್ನು ಸೇರಿಸಿ ಮತ್ತೊಮ್ಮೆ ರುಬ್ಬಿ ಇನ್ನೊಮ್ಮೆ ರಾಗಿ ಹಾಲನ್ನು ಸೋಸಿ ಹಿಂಡಿ ತೆಗೆಯಬೇಕು. ಸೋಸಿ ತೆಗಿದಿಟ್ಟ ರಾಗಿ ಹಾಲಿಗೆ ಬೆಲ್ಲ ಹಾಕಿ ಅದನ್ನು ದಪ್ಪಗಾಗುವ ತನಕ ಕಾಯಿಸಬೇಕು. ನಂತರ ತಣ್ಣಗಾಗಲು ಬಿಡಬೇಕು, ಅದಕ್ಕೆ ಕುದಿಸಿ ಆರಿಸಿದ ಹಾಲನ್ನು ಸೇರಿಸಿ ಸ್ವಲ್ಪ ತೆಳ್ಳಗೆ ಮಾಡಿಕೊಂಡು ಕುಡಿದರೆ ಸ್ವರ್ಗ.

ವಿಭಾಗ