Green Grape Recipe: ಸಲಾಡ್‌ನಿಂದ ಸ್ಪೆಷಲ್‌ ಗೋಡಂಬಿ ಕರಿವರೆಗೆ, ಹಸಿರು ದ್ರಾಕ್ಷಿಯಿಂದ ತಯಾರಿಸಬಹುದಾದ ವಿಶೇಷ ರೆಸಿಪಿಗಳಿವು
ಕನ್ನಡ ಸುದ್ದಿ  /  ಜೀವನಶೈಲಿ  /  Green Grape Recipe: ಸಲಾಡ್‌ನಿಂದ ಸ್ಪೆಷಲ್‌ ಗೋಡಂಬಿ ಕರಿವರೆಗೆ, ಹಸಿರು ದ್ರಾಕ್ಷಿಯಿಂದ ತಯಾರಿಸಬಹುದಾದ ವಿಶೇಷ ರೆಸಿಪಿಗಳಿವು

Green Grape Recipe: ಸಲಾಡ್‌ನಿಂದ ಸ್ಪೆಷಲ್‌ ಗೋಡಂಬಿ ಕರಿವರೆಗೆ, ಹಸಿರು ದ್ರಾಕ್ಷಿಯಿಂದ ತಯಾರಿಸಬಹುದಾದ ವಿಶೇಷ ರೆಸಿಪಿಗಳಿವು

ದ್ರಾಕ್ಷಿ ಸೀಸನ್‌ ಆರಂಭವಾಗಿದೆ. ಈ ಬೇಸಿಗೆಯಲ್ಲಿ ದ್ರಾಕ್ಷಿ ಹಣ್ಣಿನಿಂದ ಏನಾದ್ರೂ ಸ್ಪೆಷಲ್‌ ರೆಸಿಪಿ ಮಾಡ್ಬೇಕು ಅನ್ನೋ ಆಸೆ ನಿಮಗೂ ಇದ್ರೆ ಈ ರೆಸಿಪಿಗಳನ್ನು ಟ್ರೈ ಮಾಡಿ. ಹೆಸರೂ ಕೂಡ ಡಿಫ್ರೆಂಟ್‌ ಆಗಿರೋ ಈ ಖಾದ್ಯಗಳನ್ನು ಮತ್ತೆ ಮತ್ತೆ ಬೇಕೆನ್ನಿಸೋದ್ರಲ್ಲಿ ಅನುಮಾನ ಬೇಡ.

ಸಲಾಡ್‌ನಿಂದ ಸ್ಪೆಷಲ್‌ ಗೋಡಂಬಿ ಕರಿವರೆಗೆ, ಹಸಿರು ದ್ರಾಕ್ಷಿಯಿಂದ ತಯಾರಿಸಬಹುದಾದ ವಿಶೇಷ ರೆಸಿಪಿಗಳಿವು
ಸಲಾಡ್‌ನಿಂದ ಸ್ಪೆಷಲ್‌ ಗೋಡಂಬಿ ಕರಿವರೆಗೆ, ಹಸಿರು ದ್ರಾಕ್ಷಿಯಿಂದ ತಯಾರಿಸಬಹುದಾದ ವಿಶೇಷ ರೆಸಿಪಿಗಳಿವು

ಬೇಸಿಗೆ ಎಂದರೆ ಕೇವಲ ಬಿಸಿಲು ಮಾತ್ರವಲ್ಲ, ಇದು ಹಣ್ಣುಗಳ ಸೀಸನ್‌ ಕೂಡ ಹೌದು. ಮಾರ್ಚ್‌, ಏಪ್ರಿಲ್‌ ಬಂತು ಎಂದರೆ ಕಲ್ಲಂಗಡಿ, ಕರ್ಜೂರ, ದ್ರಾಕ್ಷಿ, ದಾಳಿಂಬೆಯಂತಹ ಬಗೆ ಬಗೆಯ ಹಣ್ಣುಗಳು ಮಾರುಕಟ್ಟೆಯಲ್ಲಿ ರಾರಾಜಿಸುತ್ತವೆ. ಅದರಲ್ಲೂ ದ್ರಾಕ್ಷಿ ಹಣ್ಣಂತು ಗೊಂಚಲು ಗೊಂಚಲು ಕಾಣ ಸಿಗುತ್ತವೆ. ನಿಮಗೆ ದ್ರಾಕ್ಷಿ ತಿಂದು ತಿಂದು ಬೇಸರ ಆಗಿದ್ದರೆ ಇದರಿಂದ ಬಾಯಲ್ಲಿ ನೀರೂರಿಸುವ ರೆಸಿಪಿಯನ್ನು ಟ್ರೈ ಕೂಡ ಮಾಡಬಹುದು. ಹಸಿರು ದ್ರಾಕ್ಷಿಯನ್ನು ಹಲವು ಖಾದ್ಯಗಳಿಗೆ ಬಳಸುತ್ತಾರಾದರೂ ನಾವು ಇಲ್ಲಿ ಹೇಳಿರುವ ರೆಸಿಪಿಗಳು ನಿಮಗೆ ಡಿಫ್ರೆಂಟ್‌ ಅನ್ನಿಸೋದ್ರಲ್ಲಿ ಅನುಮಾನವಿಲ್ಲ. ಹುಳಿ, ಸಿಹಿ ರುಚಿಯ ದ್ರಾಕ್ಷಿಯಿಂದ ತಯಾರಿಸುವ ಖಾದ್ಯಗಳನ್ನು ನೀವು ಕಲಿಯಿರಿ.

ಹಸಿರು ದ್ರಾಕ್ಷಿ ಕೂಲರ್‌

ಬೇಕಾಗುವ ಸಾಮಗ್ರಿಗಳು: ದ್ರಾಕ್ಷಿ - 2ಕಪ್‌, ನೆಲ್ಲಿಕಾಯಿ - 2, ಪುದಿನಾ ಎಲೆ - 12 ರಿಂದ 15, ನಿಂಬೆ ರಸ - 1 ನಿಂಬೆಹಣ್ಣಿನದ್ದು, ಒಣಶುಂಠಿ ಪುಡಿ - ಒಂದು ಕಾಲು ಚಮಚ, ಕಪ್ಪು ಉಪ್ಪು - ರುಚಿಗೆ, ಸಕ್ಕರೆ - ಅರ್ಧ ಕಪ್‌, ಚಾಟ್‌ ಮಸಾಲ - 2 ಚಮಚ

ತಯಾರಿಸುವ ವಿಧಾನ: ಮಿಕ್ಸಿ ಅಥವಾ ಜ್ಯೂಸ್‌ ಬ್ಲೆಂಡರ್‌ ಜಾರಿಗೆ ದ್ರಾಕ್ಷಿ ಹಣ್ಣುಗಳನ್ನು ಹಾಕಿ. ನೆಲ್ಲಿಕಾಯಿಗಳನ್ನು ಬೀಜ ತೆಗೆದು ಚಿಕ್ಕದಾಗಿ ಹೆಚ್ಚಿ ಜಾರಿಗೆ ಸೇರಿಸಿ. ಅದಕ್ಕೆ ಪುದಿನಾ ಎಲೆ, ನಿಂಬೆರಸ, ಶುಂಠಿ ಪುಡಿ, ಕಪ್ಪು ಉಪ್ಪು, ಸಕ್ಕರೆ ಹಾಗೂ ಐಸ್‌ ಕ್ಯೂಬ್‌ ಸೇರಿಸಿ ಎಲ್ಲವನ್ನೂ ಚೆನ್ನಾಗಿ ಮಿಶ್ರಣ ಮಾಡಿ. ನಂತರ 4 ಗ್ಲಾಸ್‌ ಇರಿಸಿ ಅರ್ಧ ಚಮಚ ಚಾಟ್‌ ಮಸಾಲ ಹಾಕಿ ಅದಕ್ಕೆ ರುಬ್ಬಿಕೊಂಡ ಮಿಶ್ರಣ ಸೇರಿಸಿ, ಈಗ ನಿಮ್ಮ ಮುಂದೆ ರುಚಿಯಾದ ಕೂಲರ್‌ ಕುಡಿಯಲು ಸಿದ್ಧ.

ಹಸಿರು ದ್ರಾಕ್ಷಿ-ಗೋಡಂಬಿ ಕರಿ

ಬೇಕಾಗುವ ಸಾಮಗ್ರಿಗಳು: ದ್ರಾಕ್ಷಿ - 1 ಕಪ್‌, ಗೋಡಂಬಿ - 1/4 ಕಪ್‌, ತುಪ್ಪು - 2 ಚಮಚ, ದಾಲ್ಚಿನ್ನಿ - 2 ತುಂಡು, ಲವಂಗ - 2, ಏಲಕ್ಕಿ -2, ಟೊಮಟೊ ಕೆಚಪ್‌ - 2 ಚಮಚ, ಅರಿಸಿನ ಪುಡಿ - ಕಾಲು ಚಮಚ, ಖಾರದ ಪುಡಿ - 1 ಚಮಚ, ಜೀರಿಗೆ ಪುಡಿ - 1 ಚಮಚ, ಗರಂ ಮಸಾಲೆ - 1/4 ಚಮಚ, ತಾಜಾ ಕ್ರೀಮ್‌ - 2ಚಮಚ, ಸಕ್ಕರೆ ಹಾಗೂ ಉಪ್ಪು - ರುಚಿಗೆ, ಹಾಲು - 1/4 ಕಪ್‌,

ರುಬ್ಬಿಕೊಳ್ಳಲು: ಗೋಡಂಬಿ - 10 ರಿಂದ 15, ಹಸಿಮೆಣಸು - 2, ಫೈನಾಪಲ್‌ - 2 ಹೋಳು,

ತಯಾರಿಸುವ ವಿಧಾನ: ರುಬ್ಬಿಕೊಳ್ಳಲು ತಿಳಿಸಿದ ಸಾಮಗ್ರಿಗಳನ್ನು ಮಿಕ್ಸಿಗೆ ಹಾಕಿ ನುಣ್ಣಗೆ ರುಬ್ಬಿಕೊಳ್ಳಿ. ಪ್ಯಾನ್‌ ಬಿಸಿ ಮಾಡಿ ಅದಕ್ಕೆ ತುಪ್ಪ ಹಾಕಿ, ನಂತರ ದಾಲ್ಚಿನ್ನಿ, ಲವಂಗ ಹಾಗೂ ಏಲಕ್ಕಿ ಸೇರಿಸಿ. ಇವು ಬಣ್ಣ ಬದಲಾದ ನಂತರ ರುಬ್ಬಿಕೊಂಡ ಮಿಶ್ರಣವನ್ನು ಸೇರಿಸಿ. ಅದಕ್ಕೆ ಟೊಮೆಟೊ ಸಾಸ್‌, ಅರಿಸಿನ ಪುಡಿ, ಖಾರದ ಪುಡಿ, ಕಾಳುಮೆಣಸಿನ ಪುಡಿ, ಜೀರಿಗೆ ಪುಡಿ, ಉಪ್ಪು ಹಾಗೂ ಕ್ರೀಮ್‌ ಸೇರಿಸಿ. ತುಪ್ಪ ಬಿಡುವವರೆಗೂ ಈ ಎಲ್ಲವನ್ನೂ ಚೆನ್ನಾಗಿ ಕುದಿಸಿ. ಅದಕ್ಕೆ ಹಾಲು ಹಾಗೂ ಗೋಡಂಬಿ ಸೇರಿಸಿ ಪುನಃ ಕುದಿಸಿ. ಕೊನೆಯಲ್ಲಿ ದ್ರಾಕ್ಷಿ ಸೇರಿಸಿ. ಕೊತ್ತಂಬರಿ ಸೊಪ್ಪ ಅಲಂಕರಿಸಿ ತಿನ್ನಲು ಕೊಡಿ.

ದ್ರಾಕ್ಷಿ ಸಲಾಡ್‌

ಬೇಕಾಗುವ ಸಾಮಗ್ರಿಗಳು: ದ್ರಾಕ್ಷಿ - 25 ರಿಂದ 30 (ಅರ್ಧಕ್ಕೆ ತುಂಡರಿಸಿದ್ದು), ಡಿಜಾನ್ ಸಾಸಿವೆ (ಸಾಸಿವೆ ಪೇಸ್ಟ್‌) - 1 ಚಮಚ, ಮೇಪಲ್‌ ಸಿರಪ್‌ - ಒಂದೂವರೆ ಚಮಚ, ನಿಂಬೆಹಣ್ಣು - ಅರ್ಧ, ಉಪ್ಪು - ರುಚಿಗೆ, ಕಾಳುಮೆಣಸಿನ ಪುಡಿ - ಚಿಟಿಕೆ, ಬಾದಾಮಿ - 10 ರಿಂದ 12 (ಪುಡಿ ಮಾಡಿಕೊಂಡಿದ್ದು), ಲೆಟಿಸ್ ಎಲೆಗಳು - 10 ರಿಂದ 15, ಪಾಲಕ್‌ ಸೊಪ್ಪು - 10 ರಿಂದ 15, ವಾಲ್‌ನಟ್‌ - 6 ರಿಂದ 8, ತುರಿದಿಟ್ಟುಕೊಂಡ ಚೀಸ್‌ - 2 ಚಮಚ

ತಯಾರಿಸುವ ವಿಧಾನ: ಪಾತ್ರೆಯೊಂದರಲ್ಲಿ ಆಲಿವ್‌ ಎಣ್ಣೆ ಹಾಕಿ. ಅದಕ್ಕೆ ಡಿಜಾನ್‌ ಸಾಸಿವೆ ಹಾಗೂ ಮೇಪಲ್‌ ಸಿರಪ್‌ ಸೇರಿಸಿ. ನಿಂಬೆರಸ ಹಿಂಡಿ. ಅದಕ್ಕೆ ಉಪ್ಪು, ಕಾಳುಮೆಣಸಿನ ಪುಡಿ ಸೇರಿಸಿ ಈ ಎಲ್ಲವನ್ನೂ ಚೆನ್ನಾಗಿ ಮಿಶ್ರಣ ಮಾಡಿ. ಅದಕ್ಕೆ ದ್ರಾಕ್ಷಿ ಸೇರಿಸಿ, ಜೊತೆಗೆ ಬಾದಾಮಿ, ಹೆಚ್ಚಿಕೊಂಡ ಸೊಪ್ಪುಗಳು, ವಾಲ್‌ನಟ್‌, ಎಲ್ಲವನ್ನೂ ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿ. ಅದನ್ನು ಪ್ಲೇಟ್‌ವೊಂದಕ್ಕೆ ಹಾಕಿ, ಮೇಲಿಂದ ತುರಿದಿಟ್ಟುಕೊಂಡ ಚೀಸ್‌ ಉದುರಿಸಿ. ನಂತರ ತಿನ್ನಲು ಕೊಡಿ.

Whats_app_banner