ಕರಾವಳಿ-ಮಲೆನಾಡು ಸ್ಪೆಷಲ್ ಮಾವಿನಕಾಯಿ ಅಪ್ಪೆ ಹುಳಿ ರೆಸಿಪಿ ಇಲ್ಲಿದೆ; ಇದು ನಿಮ್ಮ ಬಾಯಲ್ಲಿ ನೀರೂರಿಸೋದು ಪಕ್ಕಾ
ಮಾರ್ಚ್–ಏಪ್ರಿಲ್ ಬಂತೆಂದರೆ ಸಾಕು ಎಲ್ಲೆಡೆ ಮಾವಿನಕಾಯಿಯ ಪರಿಮಳ ಹರಡುತ್ತದೆ. ಕರಾವಳಿ, ಮಲೆನಾಡು ಭಾಗಗಳಲ್ಲಂತೂ ಮಾವಿನಕಾಯಿಯಿಂದ ಬಗೆ ಬಗೆಯ ಅಡುಗೆಗಳನ್ನು ತಯಾರಿಸುತ್ತಾರೆ. ಅಪ್ಪೆ ಹುಳಿ, ಮಾವಿನಕಾಯಿಯಿಂದ ತಯಾರಿಸುವ ಒಂದು ಸಾಂಪ್ರದಾಯಿಕ ಖಾದ್ಯ. ನೀವು ಮಾವು ಪ್ರಿಯರಾಗಿದ್ದರೆ ಅಪ್ಪೆ ಹುಳಿ ಖಂಡಿತ ಟ್ರೈ ಮಾಡಿ. (ಬರಹ: ಅರ್ಚನಾ ವಿ. ಭಟ್)
ಮತ್ತೆ ಬೇಸಿಗೆ ಪ್ರಾರಂಭವಾಗಿದೆ. ಎಲ್ಲೆಡೆ ರಣ ಬಿಸಿಲು. ಎಷ್ಟು ನೀರು ಕುಡಿದು, ನೀರಿನಾಂಶವಿರುವ ಹಣ್ಣು-ತರಕಾರಿಗಳನ್ನು ತಿಂದರೂ ಬಾಯಾರಿಕೆ ಮಾತ್ರ ಕಡಿಮೆಯಾಗುತ್ತಿಲ್ಲ. ಬೇಸಿಗೆ ಸೀಸನ್‌ನಲ್ಲಿ ಸಿಗುವ ಜನಪ್ರಿಯ ಹಣ್ಣಗಳಲ್ಲಿ ಮಾವಿನಹಣ್ಣಿಗೆ ಅಗ್ರಸ್ಥಾನ. ಅದರ ಭಿನ್ನ ರುಚಿಯಿಂದಾಗಿ ಅದು ಹಣ್ಣುಗಳ ರಾಜ ಎಂದು ಕರೆಸಿಕೊಂಡಿದೆ. ಮಾವಿನ ಹಣ್ಣಿನ ರುಚಿ ಹಾಗಿದೆ. ಬರೀ ಹಣ್ಣಷ್ಟೇ ಅಲ್ಲ, ಮಾವಿನ ಮಿಡಿ, ಕಾಯಿಯೂ ಬಹಳ ಫೇಮಸ್. ಮಾವಿನ ಮಿಡಿಯಿಂದ ಉಪ್ಪಿನಕಾಯಿ ತಯಾರಿಸಿದರೆ, ಮಾವಿನ ಕಾಯಿಯಿಂದ ಅನೇಕ ಬಗೆಯ ಅಡುಗೆಗಳನ್ನು ಮಾಡಲಾಗುತ್ತದೆ. ಮಾವಿನಕಾಯಿ ಬಳಸಿ ತಯಾರಿಸುವ ಸಾಂಪ್ರದಾಯಿಕ ಅಡುಗೆಗಳು ಎಲ್ಲರ ಬಾಯಲ್ಲೂ ನೀರೂರಿಸುತ್ತದೆ. ಅಂತಹುದೇ ಒಂದು ಸಾಂಪ್ರದಾಯಿಕ ಅಡುಗೆ ಇಲ್ಲಿದೆ. ಹದವಾಗಿ ಬಲಿತ ಮಾವಿನಕಾಯಿಯಿಂದ ತಯಾರಿಸುವ ಈ ಅಡುಗೆ ಉಪ್ಪು, ಹುಳಿ, ಖಾರ, ಸಿಹಿಯ ಮಿಶ್ರಣವಾಗಿದೆ. ಮಾವಿನಕಾಯಿ ಅಪ್ಪೆ ಹುಳಿ ಬೇಸಿಗೆಯ ಬಿಸಿಲಿಗೆ ಬೆಸ್ಟ್. ಬೇಸಿಗೆಯ ದಿನಗಳಲ್ಲಿ ಕರಾವಳಿ, ಮಲೆನಾಡು ಭಾಗಗಳಲ್ಲಿನ ಪ್ರತಿ ಮನೆಯಲ್ಲೂ ತಯಾರಿಸಲಾಗುತ್ತದೆ. ಅಷ್ಟೇ ಏಕೆ, ಮದುವೆ, ಉಪನಯನಗಳಂತಹ ಸಮಾರಂಭಗಳಲ್ಲೂ ಅಪ್ಪೆ ಹುಳಿ ಜಾಗ ಪಡೆದುಕೊಂಡಿದೆ. ಅನ್ನದ ಜೊತೆಗೆ ಬೆಸ್ಟ್ ಕಾಂಬಿನೇಷನ್ ಆಗಿರುವ ಇದನ್ನು ಕುಡಿಯುವ ಸಾರಿನಂತೆಯೂ ಸವಿಯಲಾಗುತ್ತದೆ. ಕೆಲವು ಭಾಗಗಳಲ್ಲಿ ಇದನ್ನು ನೀರು ಗೊಜ್ಜು, ಮಾವಿನಕಾಯಿ ತಿಳಿ ಸಾರು ಎಂದೂ ಕರೆಯುತ್ತಾರೆ. ಅಪ್ಪೆ ಹುಳಿಯನ್ನು ಅನೇಕ ವಿಧಗಳಲ್ಲಿ ತಯಾರಿಸಲಾಗುತ್ತದೆ. ನೀವು ಸುಲಭವಾಗಿ ತಯಾರಿಸಬಹುದಾದ ವಿಧಾನವನ್ನು ಇಲ್ಲಿ ಹೇಳಲಾಗಿದೆ.
ಬೇಕಾಗುವ ಸಾಮಗ್ರಿಗಳು: ಮಾವಿನಕಾಯಿ 1, ಹಸಿ ಮೆಣಸಿನಕಾಯಿ 2–3, ಸಾಸಿವೆ 1/4 ಚಮಚ, ಜೀರಿಗೆ - 1/4 ಚಮಚ, ಕೆಂಪು ಮೆಣಸಿನಕಾಯಿ - 1, ಕರಿಬೇವಿನ ಸೊಪ್ಪು 5–6 ಎಲೆಗಳು, ಇಂಗು, ಬೆಲ್ಲ - ಸ್ವಲ್ಪ, ಅಡುಗೆ ಎಣ್ಣೆ (ತೆಂಗಿನೆಣ್ಣೆ ಬಳಸಿದರೆ ಉತ್ತಮ)
ತಯಾರಿಸುವ ವಿಧಾನ:
* ಮಾವಿನಕಾಯಿ ಸಿಪ್ಪೆ ತೆಗೆದು ಚಿಕ್ಕದಾಗಿ ಕತ್ತರಿಸಿಕೊಳ್ಳಿ.
* ಒಂದು ಪಾತ್ರೆಗೆ ನೀರು ಹಾಕಿ, ಕತ್ತರಿಸಿದ ಮಾವಿನಕಾಯಿ ಹಾಕಿ. ಅದಕ್ಕೆ ಹಸಿ ಮೆಣಸಿನಕಾಯಿ, ಉಪ್ಪು, ಬೆಲ್ಲ ಹಾಕಿ ಚೆನ್ನಾಗಿ ಕುದಿಸಿ.
* ಆರಿದ ನಂತರ ಅದನ್ನು ಸೋಸಿಕೊಳ್ಳಿ. ಮಾವಿನಕಾಯಿಯನ್ನು ರುಬ್ಬಿ ಕೊಳ್ಳಿ.
* ರುಬ್ಬಿದ ಮಿಶ್ರಣವನ್ನು ಸೋಸಿಟ್ಟುಕೊಂಡ ನೀರಿಗೆ ಬೆರೆಸಿ, ಚೆನ್ನಾಗಿ ಮಿಕ್ಸ್ ಮಾಡಿಕೊಳ್ಳಿ.
* ಒಗ್ಗರಣೆ ಸೌಟಿಗೆ ಎಣ್ಣೆ ಹಾಕಿ, ಅದಕ್ಕೆ ಸಾಸಿವೆ, ಜೀರಿಗೆ, ಇಂಗು, ಕೆಂಪು ಮೆಣಸಿನಕಾಯಿ, ಕರಿಬೇವಿನ ಸೊಪ್ಪು ಹಾಕಿ ಒಗ್ಗರಣೆ ಮಾಡಿ.
* ಈಗ ಅಪ್ಪೆ ಹುಳಿ ಸವಿಯಲು ಸಿದ್ಧ.
ನೋಡಿದ್ರಲ್ಲ ಎಷ್ಟು ಸುಲಭವಾಗಿ ಮಾವಿನಕಾಯಿ ಅಪ್ಪೆ ಹುಳಿ ತಯಾರಿಸಬಹುದು ಎಂದು. ಹಾಂ, ಮನೆಗೆ ದಿಢೀರ್ ಅಂತ ಊಟಕ್ಕೆ ಅತಿಥಿಗಳು ಬಂದಾಗ ಇದನ್ನು ತಯಾರಿಸಿ. ಊಟದ ರುಚಿ ಹೆಚ್ಚಿಸುವ ಮಾವಿನಕಾಯಿ ಅಪ್ಪೆ ಹುಳಿ ಅವರನ್ನು ಆಕರ್ಷಿಸುವುದಂತೂ ಖಚಿತ.
ಇದನ್ನೂ ಓದಿ
Watermelon Recipe: ಐಸ್‌ಕ್ಯಾಂಡಿಯಿಂದ ಸ್ಮೂಥಿವರೆಗೆ; ಬಿಸಿಲಿನ ದಾಹ ತಣಿಸುವ ಕಲ್ಲಂಗಡಿ ಹಣ್ಣಿನ ಸಿಂಪಲ್ ರೆಸಿಪಿಗಳಿವು
ಬೇಸಿಗೆ ಕಾಲ ಬಂತೆಂದರೆ ಬಿಸಿಲಿನ ದಾಹದ ಜೊತೆಗೆ ಕಲ್ಲಂಗಡಿ ಹಣ್ಣಿನ ಸೀಸನ್ ಕೂಡ ಆರಂಭವಾಗುತ್ತದೆ. ಕಲ್ಲಂಗಡಿ ಹಣ್ಣನ್ನು ಹಾಗೇ ತಿನ್ನುವುದಕ್ಕಿಂತ ಇದರಿಂದ ಬಗೆ ಬಗೆ ರೆಸಿಪಿಗಳನ್ನು ತಯಾರಿಸಿ ತಿನ್ನಬಹುದು. ಇದು ಮಕ್ಕಳಿಗೂ ಇಷ್ಟವಾಗೋದು ಖಂಡಿತ.