ಕನ್ನಡ ಸುದ್ದಿ  /  Lifestyle  /  Food Sunday Special Recipe How To Make Appe Payasa Simple Uddina Vada Recipe Vdy

ಭಾನುವಾರ ಮನೆಯಲ್ಲೇ ಮಾಡಿ ತಿನ್ನಿ ಅಪರೂಪದ ಅಪ್ಪೆ ಪಾಯಸ, ಗರಿಗರಿ ಉದ್ದಿನವಡಾ; ಇಲ್ಲಿದೆ ತಯಾರಿಸುವ ವಿಧಾನ

ಭಾನುವಾರ ಮನೆಯಲ್ಲಿ ಏನಾದ್ರೂ ಸ್ಪೆಷಲ್‌ ಮಾಡ್ಬೇಕು ಅನ್ನೋ ಪ್ಲಾನ್‌ ಇದ್ರೆ ಈ ರೆಸಿಪಿ ನಿಮಗೆ ಇಷ್ಟ ಆಗೋದ್ರಲ್ಲಿ ಎರಡು ಮಾತಿಲ್ಲ. ಹೆಸರಿನಂತೆ ಈ ಪಾಯಸ ಕೂಡ ಅಪರೂಪದ್ದು ಅದುವೇ ಅಪ್ಪೆ ಪಾಯಸ, ಇದರ ಜೊತೆಗೆ ಗರಿಗರಿಯಾದ ಉದ್ದಿನವಡಾ ಕೂಡ ಮಾಡಿಕೊಟ್ರೆ ಮಕ್ಕಳಾದಿಯಾಗಿ ಮನೆಯವರೆಲ್ಲರ ದಿಲ್‌ಕುಶ್‌ ಆಗುವುದರಲ್ಲಿ ಅನುಮಾನವಿಲ್ಲ.

ಅಪ್ಪೆ ಪಾಯಸ, ಉದ್ದಿನವಡಾ
ಅಪ್ಪೆ ಪಾಯಸ, ಉದ್ದಿನವಡಾ

ಅಪರೂಪದ ರೆಸಿಪಿಗಳ ಬಗ್ಗೆ ಕೇಳಿದಾಗ ನಮಗೂ ಮಾಡಿ ತಿನ್ನಬೇಕು ಅನ್ನಿಸೋದು ಸಹಜ. ಇಂತಹ ವಿಶೇಷ ರೆಸಿಪಿಗಳ ಪೈಕಿ ಅಪ್ಪೆ ಪಾಯಸ ಕೂಡ ಒಂದು. ಪಾಯಸ ಪ್ರೇಮಿಗಳಂತೂ ಇದನ್ನು ಬಾಯಿ ಚಪ್ಪರಿಸಿಕೊಂಡು ತಿನ್ನೋದು ಖಂಡಿತ. ಸಿಹಿ ಜೊತೆ ಸ್ವಲ್ಪ ಖಾರವಾದ ಭಿನ್ನ ರುಚಿಯ ಖಾದ್ಯ ಕೂಡ ಇರಬೇಕು ಅನ್ನಿಸುತ್ತೆ. ಹಾಗಾಗಿ ನೀವು ಸಿಂಪಲ್‌ ಆಗಿ ಉದ್ದಿನವಡಾ ಕೂಡ ಮಾಡಿ ತಿನ್ನಬಹುದು. ಭಾನುವಾರ ಮನೆಯಲ್ಲಿ ಸ್ಪೆಷಲ್‌ ಮಾಡ್ಬೇಕು ಅನ್ನೋರಿಗೆ ಈ ಎರಡೂ ರೆಸಿಪಿಗಳು ಹೇಳಿ ಮಾಡಿಸಿದ್ದು. ಇಂದೇ ಟ್ರೈ ಮಾಡಿ.

ಅಪ್ಪೆ ಪಾಯಸ

ಬೇಕಾಗುವ ಸಾಮಗ್ರಿಗಳು: ಚಿರೋಟಿ ರವೆ - ಒಂದೂವರೆ ಕಪ್, ಮೈದಾ - 3 ಚಮಚ, ಉಪ್ಪು - ಚಿಟಿಕೆ, ತುಪ್ಪ - 5 ಚಮಚ, ಹಾಲು -1 ಲೀಟರ್, ಸಕ್ಕರೆ - 2 ಕಪ್, ಬಾದಾಮ್ ಪುಡಿ - 2 ಚಮಚ, ಏಲಕ್ಕಿ ಪುಡಿ - 1 ಚಮಚ

ತಯಾರಿಸುವ ವಿಧಾನ: ಮೊದಲಿಗೆ ಒಂದು ಬಾಣಲೆಯಲ್ಲಿ ಒಂದೂವರೆ ಕಪ್ ಚಿರೋಟಿ ರವೆ, 3ಚಮಚ ಮೈದಾ, ಚಿಟಿಕೆ ಉಪ್ಪು, 2 ಚಮಚ ತುಪ್ಪ ಹಾಕಿ ನೀರು ಹಾಕದೆ ಮಿಕ್ಸ್ ಮಾಡಿಕೊಳ್ಳಿ. ನಂತರ ನೀರು ಹಾಕಿ ಚಪಾತಿ ಹಿಟ್ಟಿನ ಹದಕ್ಕೆ ಕಲಸಿಕೊಳ್ಳಿ. ಎಣ್ಣೆ ಕಾಯಲು ಇಟ್ಟು, ಕಲಸಿ ಇಟ್ಟಂತಹ ಹಿಟ್ಟನ್ನ ಉಂಡೆ ಮಾಡಿಕೊಂಡು ಚಪಾತಿ ರೀತಿ ಲಟ್ಟಿಸಿಕೊಂಡು ಅದರಿಂದ ಚಿಕ್ಕ ಚಿಕ್ಕ ತುಂಡುಗಳನ್ನಾಗಿಸಿಕೊಳ್ಳಿ. ಎಣ್ಣೆ ಬಿಸಿಯಾದ ಮೇಲೆ ಅದನ್ನು ಹಾಕಿ ಹೊಂಬಣ್ಣಕ್ಕೆ ಬರುವ ತನಕ ಕರಿದು ತೆಗೆಯಿರಿ.

ಪಾಯಸ ಮಾಡುವುದು: ಪಾಯಸ ಮಾಡಲು ಮೊದಲು ಒಂದು ಬಾಣಲೆಗೆ ತುಪ್ಪ ಹಾಕಿ ಬಿಸಿ ಮಾಡಿ. 10 ರಿಂದ 15 ಗೋಡಂಬಿ ಹಾಕಿ ಹುರಿದುಕೊಳ್ಳಿ. ನಂತರ ಅದಕ್ಕೆ ಬಾದಾಮಿ ಸೇರಿಸಿ ಹುರಿದಾದ ಮೇಲೆ ದ್ರಾಕ್ಷಿಯನ್ನು ಹಾಕಿ ಹುರಿದು ಒಂದು ಲೀಟರ್ ಹಾಲು ಸೇರಿಸಿ. ಹಾಲು ಕಾದ ನಂತರ 2 ಚಮಚ ಬಾದಾಮಿ ಪುಡಿಯನ್ನ ಸೇರಿಸಿ ನಂತರ 2 ಕಪ್ ಸಕ್ಕರೆಯನ್ನು ಹಾಕಿ ಚೆನ್ನಾಗಿ ಕುದಿಸಿ. ಸಕ್ಕರೆ ಹಾಕಿದ ಮೇಲೆ ತುಂಬಾ ಕುದಿಸಬಾರದು. 2 ನಿಮಿಷ ಕುದಿಸಿದರೆ ಸಾಕು. ಅಂದರೆ ಕುಡಿಯೊದಿಕ್ಕೆ ಚೆನ್ನಾಗಿ ಇರುತ್ತದೆ.

ಈ ಹಂತದಲ್ಲಿ ಗ್ಯಾಸ್ ಬಂದ್ ಮಾಡಿ ಚಿಟಿಕೆ ಏಲಕ್ಕಿ ಪುಡಿ ಹಾಕಿ, ಕರಿದಿಟ್ಟ ಪುರಿಯನ್ನ ಹಾಕಿ ಕಲಸಿ ಸ್ವಲ್ಪ ಹೊತ್ತು ನೆನೆಯಲು ಬಿಡಬೇಕು. 10 ನಿಮಿಷದ ನಂತರ ಸರ್ವಿಂಗ್ ಬೌಲ್‌ಗೆ ಹಾಕಿ ತಿನ್ನಲು ಕೊಟ್ಟರೆ ಬಾಯಿ ಚಪ್ಪರಿಸಿಕೊಂಡು ತಿನ್ನುತ್ತಾರೆ.

ಉದ್ದಿನ ವಡೆ

ಬೇಕಾಗುವ ಸಾಮಗ್ರಿಗಳು: ಚಮಚ ಹಸಿ ಶುಂಠಿ - 2 ಚಮಚ, ಕರಿಬೇವು - 2 ಚಮಚ, ಹಸಿಮೆಣಸು - 4 ರಿಂದ 5, ಜೀರಿಗೆ - 1 ಚಮಚ, ಕಾಳುಮೆಣಸು - 1 ಚಮಚ, ಹಸಿ ತೆಂಗಿನಕಾಯಿ - 3 ಚಮಚ (ಚಿಕ್ಕದಾಗಿ ಹೆಚ್ಚಿಕೊಂಡಿದ್ದು), ಕೊತ್ತಂಬರಿ ಸೊಪ್ಪು - 2 ಚಮಚ, ಇಂಗು ಚಿಟಿಕೆ, ಉಪ್ಪು - ರುಚಿಗೆ ತಕ್ಕಷ್ಟು,

ತಯಾರಿಸುವ ವಿಧಾನ: ಅರ್ಧ ಕೆಜಿ ಉದ್ದಿನ ಬೇಳೆಯನ್ನು ಚೆನ್ನಾಗಿ ತೊಳೆದು 5 ಗಂಟೆಗಳ ತನಕ ನೆನೆಸಿಡಿ, ಅದರ ಜೊತೆಗ ಒಂದು ಮುಷ್ಠಿ ಅಕ್ಕಿಯನ್ನು ಸೇರಿಸಿ ನೆನೆಸಿಡಿ. ಇದರಿಂದಾಗಿ ವಡೆಯು ಗರಿಗರಿಯಾಗಿ ಬರುತ್ತದೆ. ನೆನಸಿದ ಉದ್ದಿನಬೇಳೆಯನ್ನು ಮಿಕ್ಸಿಗೆ ಹಾಕಿ ನುಣ್ಣಗೆ ನೀರು ಹಾಕಿ ರುಬ್ಬಿ ಒಂದು ಪಾತ್ರೆಗೆ ಹಾಕಿಕೊಳ್ಳಿ. ರುಬ್ಬಿದ ಹಿಟ್ಟಿಗೆ 2 ಚಮಚ ಹಸಿ ಶುಂಠಿ, 2 ಚಮಚ ಕರಿಬೇವು, 4 ರಿಂದ 5 ಹಸಿರು ಮೆಣಸಿನಕಾಯಿ ಸಣ್ಣಗೆ ಹಚ್ಚಿ ಸೇರಿಸಿ. 1 ಚಮಚ ಜೀರಿಗೆ , 1 ಚಮಚ ಕಾಳುಮೆಣಸು, ಚಿಕ್ಕ ಹೋಳು ಮಾಡಿದ ಹಸಿ ತೆಂಗಿನಕಾಯಿ ಒಂದು ಕಪ್, ಘಮಕ್ಕೆ ಸ್ವಲ್ಪ ಕೊತ್ತಂಬರಿ ಸೊಪ್ಪು, ರುಚಿಗೆ ತಕ್ಕಷ್ಟು ಉಪ್ಪು. ಎಲ್ಲವನ್ನೂ ಹಾಕಿ ಚೆನ್ನಾಗಿ ಕೈಯಲ್ಲಿ ಮಿಕ್ಸ್ ಮಾಡ್ಕೊಳಿ. ಕೊನೆಯಲ್ಲಿ ಚಿಟಿಕೆ ಇಂಗು ಹಾಕಿ ಕಲಸಿ ಹಿಟ್ಟನ್ನು ತಯಾರಿಸಿಕೊಳ್ಳಿ.

ಈಗ ಬಾಣಲೆಯಲ್ಲಿ ಎಣ್ಣೆ ಹಾಕಿ ಕಾಯಲು ಬಿಡಿ, ಎಣ್ಣೆ ಕಾದ ಮೇಲೆ ಕೈಯನ್ನು ನೀರಿನಲ್ಲಿ ಅದ್ದಿ ಹಿಟ್ಟನ್ನು ಗುಂಡಿನಾಕಾರದಲ್ಲಿ ತೆಗೆದುಕೊಂಡು ಮಧ್ಯ ಒಂದು ಹೊಲ್ ಮಾಡಿ ಬಿಸಿಯಾದ ಎಣ್ಣೆಯೊಳಗೆ ಬಿಡಿ. ಎಣ್ಣೆಯನ್ನು ತುಂಬಾ ಬಿಸಿಯಾಗಿಸಬಾರದು, ಉರಿಯನ್ನು ಸಣ್ಣದಾಗಿ ಇಟ್ಟುಕೊಂಡು ಬೇಯಿಸಿದರೆ ವಡೆ ಚೆನ್ನಾಗ ಬೇಯುತ್ತೆ. ಹಿಟ್ಟು ಚೆನ್ನಾಗಿ ಬೆಂದು ಹೊಂಬಣ್ಣಕ್ಕೆ ತಿರುಗಿದ ಮೇಲೆ ತೆಗೆದರೆ ಗರಿಗರಿಯಾದ ಉದ್ದಿನ ವಡೆ ತಿನ್ನಲು ಸಿದ್ದ.

ವಿಭಾಗ