ಕೇವಲ ನಾಲ್ಕು ಸಾಮಗ್ರಿಗಳಿಂದ ತಯಾರಾಗುತ್ತೆ ಬಾಯಲ್ಲಿಟ್ಟರೆ ಕರಗುವ ಧಾರವಾಡ ಪೇಡ; ಇಲ್ಲಿದೆ ಸಿಂಪಲ್ ರೆಸಿಪಿ
ಪೇಡ ಎಲ್ಲರಿಗೂ ಇಷ್ಟವಾಗುವ ಜನಪ್ರಿಯ ಸಿಹಿ ತಿನಿಸು. ಕೆಲವು ಸಿಹಿ ತಿಂಡಿಗಳು ಎಲ್ಲಾ ವಯಸ್ಸಿನವರಿಗೂ ಇಷ್ಟವಾಗುತ್ತದೆ. ಅಂತಹವುಗಳಲ್ಲಿ ಧಾರವಾಡ ಪೇಡವೂ ಒಂದು. ಪ್ರತಿಸಲ ಬೇಕರಿಯಿಂದಲೇ ಕೊಂಡು ತರುವ ಬದಲಿಗೆ ನೀವೇ ಮನೆಯಲ್ಲಿ ಸುಲಭವಾಗಿ ತಯಾರಿಸಬಹುದು. ಕೇವಲ ನಾಲ್ಕು ಸಾಮಗ್ರಿಗಳಿಂದ ಬೇಕರಿ ರುಚಿಯಲ್ಲಿಯೇ ಧಾರವಾಡ ಪೇಡ ಹೀಗೆ ತಯಾರಿಸಬಹುದು.
ಪೇಡ ಅಂದ ತಕ್ಷಣ ಮೊದಲಿಗೆ ನೆನಪಾಗುವುದೇ ಧಾರವಾಡ ಪೇಡ. ಒಂದು ಊರಿನ ಹೆಸರಿನಿಂದ ಜನಪ್ರಿಯವಾದ ಸಿಹಿ ತಿಂಡಿಗಳಲ್ಲಿ ಇದೂ ಒಂದು. ಕರ್ನಾಟಕದ ಅವಳಿ ನಗರ ಖ್ಯಾತಿಯ ಧಾರವಾಡ ಪೇಡ, ಹಾಲಿನಿಂದ ತಯಾರಿಸುವ ಸಾಂಪ್ರದಾಯಿಕ ಸಿಹಿ ತಿಂಡಿ. ಉತ್ತರ ಕರ್ನಾಟಕದ ಗಿರ್ಮಿಟ್, ಜೋಳದ ರೊಟ್ಟಿ, ಮಿರ್ಚಿ ಬಜ್ಜಿ, ಎಣಗಾಯಿಯಷ್ಟೇ ಫೇಮಸ್ ಈ ಧಾರವಾಡ ಪೇಡ. ಹಾಲು, ತುಪ್ಪ ಮತ್ತು ಸಕ್ಕರೆ ಉಪಯೋಗಿಸಿ ತಯಾರಿಸುವ ಪೇಡ ಶುಭಕಾರ್ಯ, ಹಬ್ಬಗಳಿಗೆ ಪರ್ಫೆಕ್ಟ್ ಆಗಿರುವುದರ ಜತೆಗೆ ಶುಭಾಶಯಕೋರಲು ಬೆಸ್ಟ್ ಎನಿಸಿದೆ. ಕೇವಲ 4 ಸಾಮಗ್ರಿಗಳಿದ್ದರೆ ಸಾಕು ರುಚಿಕರವಾದ ಧಾರವಾಡ ಪೇಡ ತಯಾರಿಸಬಹುದು. ಸಕ್ಕರೆ ಪುಡಿಯಲ್ಲಿ ರೋಲ್ ಮಾಡಿದ ಪೇಡವನ್ನು ನಾಲಿಗೆ ಆಸ್ವಾದಿಸುವ ಮೊದಲೇ ಕಣ್ಣನ್ನು ಸೆಳೆಯುತ್ತದೆ. ಬೇಕರಿ ಶೈಲಿಯಲ್ಲಿಯೇ ಮನೆಯಲ್ಲಿ ಸುಲಭವಾಗಿ ಧಾರವಾಡ ಪೇಡ ತಯಾರಿಸುವುದು ಹೇಗೆ ಎಂದು ಇಲ್ಲಿದೆ.
ಧಾರವಾಡ ಪೇಡ ತಯಾರಿಸುವ ವಿಧಾನ
ಬೇಕಾಗುವ ಸಾಮಗ್ರಿಗಳು: ಹಾಲು- 2 ಲೀಟರ್, ನಿಂಬೆ ರಸ- 2 ಟೀ ಚಮಚ, ತುಪ್ಪ 1 ರಿಂದ 2 ಟೀ ಚಮಚ, ಸಕ್ಕರೆ- 6 ಟೀ ಚಮಚ, ಏಲಕ್ಕಿ- 1/4 ಚಮಚ.
ಮಾಡುವ ವಿಧಾನ: ಮೊದಲಿಗೆ ಒಂದು ಪಾತ್ರೆಯಲ್ಲಿ ಹಾಲು ಹಾಕಿ ಕಾಯಲು ಇಡಿ. ಹಾಲು ಕಾದ ನಂತರ ನಿಂಬೆ ರಸ ಸೇರಿಸಿ. ಹಾಲು ಸಂಪೂರ್ಣವಾಗಿ ಒಡೆಯುವವರೆಗೆ ಮಧ್ಯಮ ಉರಿಯಲ್ಲಿ ಒಂದು ಚಮಚದ ಸಹಾಯದಿಂದ ತಿರುವುತ್ತಾ ಇರಿ. ನಂತರ ಅದನ್ನು ಬಟ್ಟೆಯ ಸಹಾಯದಿಂದ ಸ್ವಲ್ಪವೂ ನೀರಿಲ್ಲದಂತೆ ಶೋಧಿಸಿಕೊಳ್ಳಿ. ಬಳಿಕ ದಪ್ಪ ತಳದ ಪ್ಯಾನ್‌ಗೆ ಹಾಕಿ ಚೆನ್ನಾಗಿ ಪುಡಿ ಮಾಡಿಕೊಳ್ಳಿ. ಒಂದು ಚಮಚ ತುಪ್ಪ ಸೇರಿಸಿ ಸಣ್ಣ ಉರಿಯಲ್ಲಿ ಹುರಿದುಕೊಳ್ಳಿ. ಬಣ್ಣ ಸ್ವಲ್ಪ ಬದಲಾದ ನಂತರ ಸಕ್ಕರೆ ಮತ್ತು ಒಂದು ಚಮಚ ಹಾಲು ಸೇರಿಸಿ. ಚೆನ್ನಾಗಿ ಮಿಕ್ಸ್ ಮಾಡಿ.
ಈ ಮಿಶ್ರಣವನ್ನು ನಿರಂತರವಾಗಿ ತಿರುವುತ್ತಾ ಇರಿ. ತಳ ಹಿಡಿಯಲು ಬಿಡಬೇಡಿ. ಹತ್ತು ನಿಮಿಷ ಹಾಗೆ ಹುರಿಯಿರಿ. ನಂತರ ಮತ್ತೆ ಒಂದು ಟೀ ಚಮಚ ಹಾಲು ಸೇರಿಸಿ ತಿರುವುತ್ತಾ ಇರಿ. ಮಿಶ್ರಣ ಡ್ರೈ ಆಗಲು ಬಿಡಬೇಡಿ. ಬೇಕಿದ್ದರೆ ಸ್ವಲ್ಪ ಹಾಲನ್ನು ಸೇರಿಸಿಕೊಂಡು ಹುರಿಯಿರಿ. ಕಂದು ಬಣ್ಣಕ್ಕೆ ತಿರುಗಿದ ಮೇಲೆ ಅದನ್ನು ಸಂಪೂರ್ಣವಾಗಿ ತಣ್ಣಗಾಗಲು ಬಿಡಿ. ಈಗ ಒಂದು ಮಿಕ್ಸರ್ ಜಾರ್‌ಗೆ ವರ್ಗಾಯಿಸಿ, ಒಂದು ಸುತ್ತು ಮಿಕ್ಸಿ ಮಾಡಿಕೊಳ್ಳಿ. ಈ ಮಿಶ್ರಣದ ಪುಡಿಯನ್ನು ಪ್ಯಾನ್‌ಗೆ ವರ್ಗಾಯಿಸಿ, ಮೂರು ಚಮಚ ಹಾಲು ಸೇರಿಸಿ, ಸಣ್ಣ ಉರಿಯಲ್ಲಿ ಮತ್ತೊಮ್ಮೆ ಹುರಿಯಿರಿ. ತಳ ಹಿಡಿಯದಂತೆ ತಿರುವುತ್ತಾ ಇರಿ.
ಮಿಶ್ರಣವು ಕಂದು ಬಣ್ಣಕ್ಕೆ ತಿರುಗಿದ ಮೇಲೆ ಅದಕ್ಕೆ ಏಲಕ್ಕಿ ಪುಡಿ ಸೇರಿಸಿ. ಇನ್ನೊಮ್ಮೆ ಮಿಕ್ಸ್ ಮಾಡಿಕೊಳ್ಳಿ. ಮಿಶ್ರಣ ಸ್ವಲ್ಪ ಬಿಸಿಯಿರುವಾಗಲೇ ಪೇಡ ಮಾಡಲು ಪ್ರಾರಂಭಿಸಿ. ಧಾರವಾಡ ಪೇಡ ಸಿಲಿಂಡರ್ ಆಕಾರದಲ್ಲಿರುತ್ತದೆ. ಅದಕ್ಕಾಗಿ ನೀವೂ ಕೂಡಾ ಅದೇ ರೀತಿ ಮಿಶ್ರಣವನ್ನು ಕಟ್ಟಿ. ಒಂದು ಬಟ್ಟಲಿನಲ್ಲಿ ಪುಡಿ ಸಕ್ಕರೆ ತೆಗೆದುಕೊಂಡು ಅದರಲ್ಲಿ ಪೇಡಾವನ್ನು ರೋಲ್ ಮಾಡಿದರೆ ರುಚಿಕವಾದ ಧಾರವಾಡ ಪೇಡ ಸವಿಯಲು ಸಿದ್ಧ.
ಓದಿದ್ರಲ್ಲ ಎಷ್ಟು ಸುಲಭ ಅಂತ. ಅತಿ ಕಡಿಮೆ ಸಮಯದಲ್ಲಿ ಬೇಕರಿ ಪೇಡಾದ ರುಚಿಯಂತೆಯೇ ನೀವೂ ಧಾರವಾಡ ಪೇಡ ತಯಾರಿಸಬಹುದು. ನಿಮ್ಮ ಮನೆಗೆ ಅತಿಥಿಗಳು ಬಂದಾಗ ಇದನ್ನು ಮಾಡಿ ಕೊಡಿ, ಖಂಡಿತಾ ಇಷ್ಟಪಡುತ್ತಾರೆ.