ಬೇಸಿಗೆಯಲ್ಲಿ ದೇಹ ತಂಪಾಗಿಸುವ ತಂಬುಳಿಗಳ ರುಚಿ ನೋಡಿದ್ದೀರಾ, ಇಲ್ಲಿದೆ 10 ಬಗೆಯ ತುಂಬಳಿ ರೆಸಿಪಿ, ನೀವೂ ಮನೆಯಲ್ಲಿ ಟ್ರೈ ಮಾಡಿ
ಬೇಸಿಗೆಯ ಧಗೆಯಿಂದಾಗಿ ದೇಹದಲ್ಲಿ ಉಷ್ಣತೆ ಹೆಚ್ಚಾದಾಗ ತಕ್ಷಣವೇ ಅದನ್ನು ತಂಪು ಮಾಡಲು, ಜೊತೆಗೆ ನಿರ್ಜಲೀಕರಣವನ್ನು ತಡೆಯುವುದಕ್ಕಾಗಿ ವಿಭಿನ್ನ ಬಗೆಯ ತಂಬುಳಿಗಳನ್ನು ನಿತ್ಯವೂ ನಿಮ್ಮ ಊಟದಲ್ಲಿ ಸೇರಿಸಿಕೊಳ್ಳಿ. 10 ವಿಭಿನ್ನ ಬಗೆಯ ತಂಬುಳಿಗಳನ್ನು ತಯಾರಿಸುವ ವಿಧಾನ ಇಲ್ಲಿದೆ. (ಬರಹ: ಭಾಗ್ಯ ದಿವಾಣ)

ಬೇಸಿಗೆಕಾಲದಲ್ಲಿ ಭರ್ಜರಿ ಊಟ ಬೇಕೆನ್ನಿಸುವುದೇ ಇಲ್ಲ. ಅದಕ್ಕೆ ಬದಲಾಗಿ ನೀರು, ಮಜ್ಜಿಗೆ, ಪಾನಕ, ಜ್ಯೂಸ್ ಇಲ್ಲವಾದರೆ ಹೊಟ್ಟೆಗೆ ತಂಪೆನ್ನೆಸುವ ಗಂಜಿ ಇದ್ದರೆ ಸಾಕು ಎನ್ನಿಸಿಬಿಡುತ್ತದೆ. ಹಸಿವೆಯಂತೂ ತೀರಾ ಕಡಿಮೆ. ಅನ್ನದೊಂದಿಗೆ ಸಾಂಬಾರು ಬೆರೆಸಿ ತಿನ್ನುವುದಕ್ಕಿಂತ ದೇಹವನ್ನು ತಂಪು ಮಾಡುವ ತಂಬುಳಿಗಳೇ ಹಿತವನ್ನಿಸುತ್ತದೆ. ಮಸಾಲೆ ಪದಾರ್ಥಗಳನ್ನು ಬಳಸದೆ, ಮನೆಯಲ್ಲೇ ಲಭ್ಯವಿರುವ ಸೊಪ್ಪುಗಳಿಂದ, ತರಕಾರಿಗಳಿಂದ ಸುಲಭವಾಗಿ ತಯಾರಿಸಬಲ್ಲ ಈ ಆರೋಗ್ಯಕರ ತಂಬುಳಿಗಳನ್ನು ಬೇಡವೆನ್ನಲು ಸಾಧ್ಯವೇ ಇಲ್ಲ.
ಮುಖ್ಯವಾಗಿ ಬೇಸಿಗೆಯಲ್ಲಿ ದೇಹದಲ್ಲಿನ ನೀರಿನಾಂಶ ಕಡಿಮೆಯಾಗುತ್ತದೆ. ಇದರ ಜೊತೆಗೆ ಉಷ್ಣವೂ ಹೆಚ್ಚಾಗುವುದಿದೆ. ಈ ಎರಡೂ ಸಮಸ್ಯೆಗಳಿಗೆ ಪರಿಹಾರ ಕಾಣಲು ತಂಬುಳಿಗಳನ್ನು ನಿತ್ಯವೂ ಊಟದಲ್ಲಿ ಬಳಕೆ ಮಾಡಿಕೊಳ್ಳಬಹುದು.
ಆರೋಗ್ಯ ಕಾಪಾಡಿಕೊಳ್ಳಲು ಸರಳವಾಗಿ ತಯಾರಿಸಬಲ್ಲ ತಂಬುಳಿಗಳಿವು
ಮೆಂತ್ಯ ತಂಬುಳಿ: ಮೆಂತ್ಯ ತಂಬುಳಿಯನ್ನು ಹಸಿಯಾಗಿ ಮಾಡಿಕೊಳ್ಳುವುದೂ ಇದೆ, ಇಲ್ಲವೇ ಹುರಿದುಕೊಂಡು ಮಾಡುವುದೂ ಇದೆ. ಇದಕ್ಕಾಗಿ ಮೊದಲಿಗೆ ಪಾತ್ರೆಯಲ್ಲಿ 1 ಚಮಚ ತುಪ್ಪ ಹಾಕಿಕೊಂಡು 1 ಚಮಚ ಮೆಂತ್ಯವನ್ನು ಹದವಾಗಿ ಹುರಿದುಕೊಳ್ಳಿ. ನಂತರ ಇದಕ್ಕೆ ನಿಮಗೆ ಖಾರ ಎಷ್ಟು ಬೇಕೋ ಅದಕ್ಕನುಸಾರವಾಗಿ ಹಸಿ ಮೆಣಸಿನಕಾಯಿ ಇಲ್ಲವೇ ಒಣ ಮೆಣಸಿನಕಾಯಿ, ಒಂದು ಹಿಡಿ ತೆಂಗಿನ ತುರಿ ಸೇರಿಸಿಕೊಂಡು ಚೆನ್ನಾಗಿ ರುಬ್ಬಿಕೊಳ್ಳಿ. ಈ ಮಿಶ್ರಣಕ್ಕೆ ಮಜ್ಜಿಗೆ, ರುಚಿಗೆ ತಕ್ಕಷ್ಟು ಉಪ್ಪು ಸೇರಿಸಿ ಸಾಸಿವೆಯ ಒಗ್ಗರಣೆ ಹಾಕಿಕೊಂಡರೆ ರುಚಿಕರ ಮೆಂತ್ಯ ತಂಬುಳಿ ಸಿದ್ಧವಾಗುತ್ತದೆ. ಇದು ಅಜೀರ್ಣ ಹಾಗೂ ಹೊಟ್ಟೆನೋವಿನ ಸಮಸ್ಯೆಯನ್ನು ನಿವಾರಿಸುವುದರ ಜೊತೆಗೆ ಹಸಿವೆಯನ್ನು ಹೆಚ್ಚಿಸುತ್ತದೆ.
ದೊಡ್ಡಪತ್ರೆ ಎಲೆಗಳ ತಂಬುಳಿ: 10 ದೊಡ್ಡಪತ್ರೆ ಎಲೆಗಳನ್ನು ಸಣ್ಣಗೆ ಹೆಚ್ಚಿಕೊಂಡು ತುಪ್ಪದಲ್ಲಿ ಹುರಿದುಕೊಳ್ಳಿ. ಅದೇ ಬಾಣಲೆಗೆ ಅರ್ಧ ಚಮಚ ಜೀರಿಗೆ, ಅರ್ಧ ಚಮಚ ಕಾಳುಮೆಣಸು ಹಾಕಿ ಹುರಿದುಕೊಳ್ಳಿ. ಜೀರಿಗೆ ಸಿಡಿದ ಕೂಡಲೇ ಕತ್ತರಿಸಿಟ್ಟುಕೊಂಡಿರುವ ದೊಡ್ಡಪತ್ರೆ ಸೊಪ್ಪುಗಳನ್ನು ಹಾಕಿ ಬಾಡಿಸಿಕೊಳ್ಳಿ. ಇದಕ್ಕೆ ಅರ್ಧ ಕಪ್ ತೆಂಗಿನ ತುರಿ ಹಾಕಿಕೊಂಡು ಉಪ್ಪು ಸೇರಿಸಿ ಚೆನ್ನಾಗಿ ರುಬ್ಬಿಕೊಳ್ಳಿ. ಈ ಮಿಶ್ರಣಕ್ಕೆ ಮಜ್ಜಿಗೆ ಸೇರಿಸಿಕೊಂಡು ತುಪ್ಪದಲ್ಲಿ ಜೀರಿಗೆಯ ಒಗ್ಗರಣೆ ಕೊಟ್ಟರೆ ದೊಡ್ಡಪತ್ರೆ ತಂಬುಳಿ ಸಿದ್ಧವಾಗುತ್ತದೆ. ಇದು ಹೊಟ್ಟೆಯ ಉಬ್ಬರ, ಹೊಟ್ಟೆಯ ಸಮಸ್ಯೆಗಳು ಮಾತ್ರವಲ್ಲದೇ ಜೀರ್ಣಶಕ್ತಿಯನ್ನು ಹೆಚ್ಚಿಸುವುದು, ಜ್ವರ ಹಾಗೂ ವಾತರೋಗಗಳಿಗೂ ರಾಮಬಾಣದಂತೆ ಕೆಲಸ ಮಾಡುತ್ತದೆ.
ಸೌತೇಕಾಯಿ ತಂಬುಳಿ: ಒಂದು ಸೌತೆಕಾಯಿಯನ್ನು ಸಣ್ಣಗೆ ಹೆಚ್ಚಿಕೊಳ್ಳಬೇಕು. ಅದಕ್ಕೆ ನಿಮ್ಮ ಖಾರದ ಆಯ್ಕೆಗೆ ಬೇಕಾದಷ್ಟು ಹಸಿ ಅಥವಾ ಒಣಮೆಣಸನ್ನು ಸೇರಿಸಿಕೊಂಡು, ಅರ್ಧ ಕಪ್ ತೆಂಗಿನ ತುರಿಯೊಂದಿಗೆ ಚೆನ್ನಾಗಿ ರುಬ್ಬಿಕೊಳ್ಳಿ. ಇದಕ್ಕೆ ಮಜ್ಜಿಗೆ, ಉಪ್ಪು ಹಾಕಿ ಒಣಮೆಣಸು, ಸಾಸಿವೆಯ ಒಗ್ಗರಣೆ ಹಾಕಿದರೆ ದೇಹವನ್ನು ತಂಪಾಗಿಸುವ ಸೌತೇಕಾಯಿ ತಂಬುಳಿ ತಯಾರಾಗುತ್ತದೆ. ದೇಹವು ಉಷ್ಣವೆನ್ನಿಸಿದಾಗ ತಕ್ಷಣವೇ ತಂಪಾಗಿಸಲು ಸೌತೇಕಾಯಿ ತಂಬುಳಿ ಉತ್ತಮ ಆಯ್ಕೆ.
ಶುಂಠಿ ತಂಬುಳಿ: ಒಂದು ಇಂಚು ಶುಂಠಿಯನ್ನು ಚೆನ್ನಾಗಿ ತೊಳೆದುಕೊಂಡು, ಅರ್ಧ ಕಪ್ ತೆಂಗಿನ ತುರಿ ಹಾಗೂ ಹಸಿ ಮೆಣಸಿನ ಜೊತೆಗೆ ರುಬ್ಬಿಕೊಳ್ಳಿ. ಈಗ ತಂಬುಳಿಯ ಹದಕ್ಕೆ ಬೇಕಾದಷ್ಟು ಮಜ್ಜಿಗೆ ಸೇರಿಸಿ, ರುಚಿಗೆ ಬೇಕಾದಷ್ಟು ಉಪ್ಪನ್ನೂ ಸೇರಿಸಿ. ಸಾಸಿವೆ, ಇಂಗಿನ ಒಗ್ಗರಣೆ ಕೊಟ್ಟರೆ ಅಜೀರ್ಣ ಹಾಗೂ ಹೊಟ್ಟೆಯ ಉಬ್ಬರವನ್ನು ಶಮನ ಮಾಡಬಲ್ಲ ರುಚಿಕರ ಶುಂಠಿ ತಂಬುಳಿ ಸಿದ್ಧವಾಗುತ್ತದೆ.
ಎಳ್ಳಿನ ತಂಬುಳಿ: ಬಾಣಲೆಯಲ್ಲಿ ಒಂದು ಚಮಚ ತುಪ್ಪ ಹಾಕಿಕೊಂಡು 1 ಚಮಚ ಎಳ್ಳನ್ನು ಕೆಂಪು ಬಣ್ಣ ಬರುವವರೆಗೂ ಹುರಿದುಕೊಳ್ಳಿ. ಇದಕ್ಕೆ ಒಂದು ಕಪ್ ಕಾಯಿ ತುರಿ ಹಾಕಿಕೊಂಡು ಉಪ್ಪು ಸೇರಿಸಿ ರುಬ್ಬಿಕೊಳ್ಳಿ. ಇದಕ್ಕೆ ಮಜ್ಜಿಗೆ ಸೇರಿಸಿ, ತುಪ್ಪದಲ್ಲಿ ಜೀರಿಗೆ, ಸಾಸಿವೆ, ಕರಿಬೇವಿನ ಎಲೆಗಳನ್ನು ಹಾಕಿ ಘಮ್ಮೆನ್ನುವ ಒಗ್ಗರಣೆ ಕೊಡಿ. ಈ ತಂಬುಳಿಯು ಆಹಾರ ಬೇಗನೆ ಜೀರ್ಣವಾಗುವಂತೆ ಮಾಡುತ್ತದೆ ಮಾತ್ರವಲ್ಲದೆ ಬಾಣಂತಿಯರಿಗಂತೂ ಬಹಳ ಒಳ್ಳೆಯದು.
ಪಾಲಕ್ ಸೊಪ್ಪಿನ ತಂಬುಳಿ: ತೊಳೆದು ಸ್ವಚ್ಛಗೊಳಿಸಿರುವ ಅರ್ಧ ಕಟ್ಟು ಪಾಲಕ್ ಸೊಪ್ಪುಗಳನ್ನು ನೀರಿನಲ್ಲಿ ಒಂದು ಕುದಿ ಬರುವಷ್ಟು ಹೊತ್ತು ಬಿಡಬೇಕು. ನಂತರ ಬಿಸಿ ನೀರನ್ನು ಸೋಸಿಕೊಂಡು, ತಣ್ಣಿರನ್ನು ಹಾಕಿ ಮತ್ತೆ ಸೋಸಿಕೊಳ್ಳಬೇಕು. ಇದಕ್ಕೆ 1 ಚಮಚ ಜೀರಿಗೆ, ಖಾರಕ್ಕೆ ಬೇಕಾದಷ್ಟು ಹಸಿ ಮೆಣಸು ಮತ್ತು ಒಂದು ಹಿಡಿ ತೆಂಗಿನತುರಿ ಸೇರಿಸಿ ರುಬ್ಬಿಕೊಳ್ಳಿ. ನಂತರ ಈ ಮಿಶ್ರಣಕ್ಕೆ ಬೇಕಾದಷ್ಟು ಮಜ್ಜಿಗೆ ಹಾಗೂ ಉಪ್ಪು ಸೇರಿಸಿಕೊಂಡರೆ ರುಚಿಕರ ಪಾಲಕ್ ಸೊಪ್ಪಿನ ತಂಬುಳಿ ಅನ್ನದ ಜೊತೆಗೆ ಸೇರಿಸಲು ಸಿದ್ಧವಾಗುತ್ತದೆ. ಈ ತಂಬುಳಿಯ ಸೇವನೆಯಿಂದ ದೇಹ ಬಲು ಬೇಗನೆ ತಂಪಾಗುವುದರ ಜೊತೆಗೆ ಮೆದುಳು ಚುರುಕಾಗುತ್ತದೆ. ಕಬ್ಬಿಣದ ಅಂಶವೂ ದೇಹವನ್ನು ಸೇರುತ್ತದೆ.
ಶಂಖಪುಷ್ಪದ ಎಲೆಗಳ ತಂಬುಳಿ: ಶಂಖಪುಷ್ಪದ 10-15 ಎಳೆಯ ಎಲೆಗಳನ್ನು ತೆಗೆದುಕೊಂಡು ನೀರಿನಲ್ಲಿ ತೊಳೆದುಕೊಂಡು ಸ್ವಚ್ಛಗೊಳಿಸಿ. ಇದನ್ನು 1 ಚಮಚ ತುಪ್ಪ ಹಾಗೂ 1 ಚಮಚ ಜೀರಿಗೆ ಹಾಕಿ ಚೆನ್ನಾಗಿ ಬಾಡಿಸಿಕೊಳ್ಳಿ. ನಂತರ 2 ಹಸಿ ಮೆಣಸಿನ ಕಾಯಿ, ಅರ್ಧ ಕಪ್ ತೆಂಗಿನತುರಿ ಸೇರಿಸಿ ನುಣ್ಣಗೆ ರುಬ್ಬಿಕೊಳ್ಳಿ. ರುಬ್ಬಿದ ಮಿಶ್ರಣಕ್ಕೆ ಮಜ್ಜಿಗೆ ಹಾಗೂ ಉಪ್ಪು ಸೇರಿಸಿಕೊಂಡು, ತುಪ್ಪದಲ್ಲಿ ಜೀರಿಗೆ ಒಗ್ಗರಣೆ ಹಾಕಿದರೆ ಮಕ್ಕಳಿಗೆ ಬುದ್ಧಿಶಕ್ತಿ ಚುರುಕುಗೊಳಿಸಬಲ್ಲ ಶಕ್ತಿಯುಳ್ಳ ಬಹುಉಪಯೋಗಿ ತಂಬುಳಿ ತಯಾರಾಗುತ್ತದೆ.
ಈರುಳ್ಳಿ ತಂಬುಳಿ: ಮಧ್ಯಮ ಗಾತ್ರದ ಈರುಳ್ಳಿಯನ್ನು ನಾಲ್ಕು ಭಾಗವಾಗಿ ತುಂಡರಿಸಿಕೊಂಡು ಅದಕ್ಕೆ 2 ಒಣ ಅಥವಾ ಹಸಿ ಮೆಣಸನ್ನು ಸೇರಿಸಿ, ಅರ್ಧ ಕಪ್ ತೆಂಗಿನ ತುರಿ ಹಾಗೂ ನೀರು ಹಾಕಿ ಚೆನ್ನಾಗಿ ರುಬ್ಬಿಕೊಳ್ಳಿ. ಈ ಮಿಶ್ರಣಕ್ಕೆ ಒಂದು ಲೋಟ ಮಜ್ಜಿಗೆ ಹಾಗೂ ರುಚಿಗೆ ತಕ್ಕಷ್ಟು ಉಪ್ಪು ಹಾಕಿ ಮಿಶ್ರಣ ಮಾಡಿಕೊಂಡು ಒಗ್ಗರಣೆ ಹಾಕಿಕೊಂಡರೆ ಈರುಳ್ಳಿ ತಂಬುಳಿ ಸವಿಯಲು ಸಿದ್ಧ. ಇದು ಜೀರ್ಣಕ್ರಿಯೆಯನ್ನು ಉತ್ತಮಗೊಳಿಸುವಲ್ಲಿ ಸಹಕಾರಿಯಾಗಿದೆ.
ಬಿಲ್ವಪತ್ರೆ ತಂಬುಳಿ: ಶಿವನಿಗೆ ಪ್ರಿಯವಾಗಿರುವ ಬಿಲ್ವಪತ್ರೆಗಳನ್ನು ಬಳಸಿಕೊಂಡು ರುಚಿಕರವಾದ ತಂಬುಳಿಯನ್ನು ತಯಾರಿಸಿಕೊಳ್ಳಬಹುದು. ಹೌದು, ಒಂದು ಹಿಡಿ ಬಿಲ್ವ ಪತ್ರೆಗಳನ್ನು 1 ಹಸಿಮೆಣಸು ಹಾಗೂ ಒಂದು ಕಪ್ ತೆಂಗಿನ ತುರಿಯನ್ನು ಸೇರಿಸಿಕೊಂಡು ಚೆನ್ನಾಗಿ ರುಬ್ಬಿಕೊಳ್ಳಿ. ಇದಕ್ಕೆ ಮಜ್ಜಿಗೆ ಹಾಗೂ ರುಚಿಗೆ ಬೇಕಾದಷ್ಟು ಉಪ್ಪು ಸೇರಿಸಿಕೊಂಡು ಘಮ್ಮೆನ್ನುವ ಒಗ್ಗರಣೆ ಹಾಕಿಕೊಂಡರೆ ಬಿಲ್ವಪತ್ರೆಯ ಆರೋಗ್ಯಕರ ತಂಬುಳಿ ತಯಾರಾಗುತ್ತದೆ. ಮಧುಮೇಹವುಳ್ಳವರಿಗಿದು ಬಹಳ ಒಳ್ಳೆಯ ಆಯ್ಕೆ. ಅಲ್ಲದೆ ಕೂದಲಿನ ಸಮಸ್ಯೆ ಹಾಗೂ ಅಧಿಕ ತೂಕದ ಸಮಸ್ಯೆಗಿದೂ ಇದು ಪರಿಹಾರ ನೀಡಬಲ್ಲದು.
ಒಂದೆಲಗ ತಂಬುಳಿ: ತಿಮರೆ, ಬಾಹ್ಮಿ ಹೀಗೆ ನಾನಾ ಹೆಸರುಗಳಿಂದ ಕರೆಯಲ್ಪಡುವ ಒಂದೆಲಗೆ ಸೊಪ್ಪಿನಿಂದ ತಂಬುಳಿ ಮಾಡಿಕೊಳ್ಳಬಹುದು. ಇದಕ್ಕಾಗಿ ಒಂದು ಹಿಡಿ ಒಂದೆಲಗವನ್ನು ಸ್ವಚ್ಛಗೊಳಿಸಿ, 1 ಚಮಚ ಜೀರಿಗೆ ಹಾಗೂ ಒಂದು ಚಮಚ ತುಪ್ಪ ಹಾಕಿ ಚೆನ್ನಾಗಿ ಬಾಡಿಸಿಕೊಳ್ಳಿ. ಇದಕ್ಕೆ 1-2 ಹಸಿಮೆಣಸು, 1 ಕಪ್ ತೆಂಗಿನ ತುರಿ ಸೇರಿಸಿ ರುಬ್ಬಿಕೊಳ್ಳಿ. ಈ ಮಿಶ್ರಣಕ್ಕೆ ಮಜ್ಜಿಗೆ ಹಾಗೂ ರುಚಿಗೆ ತಕ್ಕಷ್ಟು ಉಪ್ಪು ಸೇರಿಸಿ ಸಾಸಿವೆಯ ಒಗ್ಗರಣೆ ಹಾಕಿಕೊಳ್ಳಿ. ಮಕ್ಕಳಲ್ಲಿ ಏಕಾಗ್ರತೆ ಹಾಗೂ ಸ್ಮರಣ ಶಕ್ತಿ ವೃದ್ಧಿ, ಕಲಿಕೆಯ ಶಕ್ತಿ ಹೆಚ್ಚಿಸಲು, ದೊಡ್ಡವರಲ್ಲೂ ಮಾನಸಿಕ ಒತ್ತಡದ ನಿವಾರಣೆಗೆ ಇದು ಸಹಾಯಕಾರಿ.
ಬೇಸಿಗೆಕಾಲದಲ್ಲಿ ತಂಬುಳಿಗೆ ಬಹು ಬೇಡಿಕೆಯಿದೆ. ದಕ್ಷಿಣ ಕನ್ನಡ, ಉತ್ತರ ಕನ್ನಡ ಭಾಗಗಳಲ್ಲಂತೂ ನಿತ್ಯವೂ ಒಂದಿಲ್ಲೊಂದು ಬಗೆಯ ತಂಬುಳಿಗಳನ್ನು ಊಟದ ಜೊತೆಗೆ ಮಾಡುತ್ತಲೇ ಇರುತ್ತಾರೆ. ಆರೋಗ್ಯಕರವಾದ ಇಂತಹ ತಂಬುಳಿಗಳನ್ನು ನೀವೂ ಈ ಬೇಸಿಗೆಯಲ್ಲಿ ತಯಾರಿಸಿಕೊಂಡರೆ ದೇಹವನ್ನು ತಂಪಾಗಿಸಿಕೊಳ್ಳಬಹುದು.

ವಿಭಾಗ