ಇಡ್ಲಿ, ದೋಸೆ ಜೊತೆ ನೆಂಜಿಕೊಳ್ಳಲು ಏನ್‌ ಮಾಡೋದು ಅನ್ನೋ ಚಿಂತೆ ಬಿಡಿ, ಇಲ್ಲಿವೆ ನೋಡಿ 6 ವಿವಿಧ ಬಗೆಯ ಚಟ್ನಿ ರೆಸಿಪಿ
ಕನ್ನಡ ಸುದ್ದಿ  /  ಜೀವನಶೈಲಿ  /  ಇಡ್ಲಿ, ದೋಸೆ ಜೊತೆ ನೆಂಜಿಕೊಳ್ಳಲು ಏನ್‌ ಮಾಡೋದು ಅನ್ನೋ ಚಿಂತೆ ಬಿಡಿ, ಇಲ್ಲಿವೆ ನೋಡಿ 6 ವಿವಿಧ ಬಗೆಯ ಚಟ್ನಿ ರೆಸಿಪಿ

ಇಡ್ಲಿ, ದೋಸೆ ಜೊತೆ ನೆಂಜಿಕೊಳ್ಳಲು ಏನ್‌ ಮಾಡೋದು ಅನ್ನೋ ಚಿಂತೆ ಬಿಡಿ, ಇಲ್ಲಿವೆ ನೋಡಿ 6 ವಿವಿಧ ಬಗೆಯ ಚಟ್ನಿ ರೆಸಿಪಿ

Breakfast Recipes: ಉಪಹಾರಗಳ ರುಚಿ ದುಪ್ಪಟ್ಟಾಗಿಸುವುದೇ ಈ ಚಟ್ನಿಗಳು. ಹಾಗಾಗಿ ತರೇವಾರಿ ಚಟ್ನಿಗಳನ್ನು ನಾವು ಕಾಣಬಹುದು. ತೆಂಗಿನಕಾಯಿ, ಶೇಂಗಾ, ಟೊಮೆಟೊ, ಹುಣಸೆಹಣ್ಣು, ಈರುಳ್ಳಿ ಹೀಗೆ ಬಗೆಬಗೆಯ ಚಟ್ನಿಗಳನ್ನು ಮಾಡಲಾಗುತ್ತದೆ. ಇಡ್ಲಿ ಮತ್ತು ದೋಸೆಗೆ ಬೆಸ್ಟ್‌ ಕಾಂಬಿನೇಷನ್‌ ಎನಿಸುವ 6 ರುಚಿಕರ ಚಟ್ನಿ ಇಲ್ಲಿದೆ.

ನಾಳೆ ನಿಮ್ಮನೆಲಿ ಬೆಳಗ್ಗಿನ ತಿಂಡಿ ದೋಸೆ ಅಥವಾ ಇಡ್ಲಿನಾ? ಅದಕ್ಕೆ ಕಾಂಬಿನೇಷನ್‌ ಆಗಿ ಚಟ್ನಿ ಮಾಡಬೇಕೆಂದಿದ್ದರೆ ಇಲ್ಲಿದೆ ರುಚಿಕರ 6 ಚಟ್ನಿಗಳು
ನಾಳೆ ನಿಮ್ಮನೆಲಿ ಬೆಳಗ್ಗಿನ ತಿಂಡಿ ದೋಸೆ ಅಥವಾ ಇಡ್ಲಿನಾ? ಅದಕ್ಕೆ ಕಾಂಬಿನೇಷನ್‌ ಆಗಿ ಚಟ್ನಿ ಮಾಡಬೇಕೆಂದಿದ್ದರೆ ಇಲ್ಲಿದೆ ರುಚಿಕರ 6 ಚಟ್ನಿಗಳು (PC: Freepik)

ಭಾರತದ ಪ್ರತಿ ಪ್ರದೇಶವೂ ವೈವಿಧ್ಯಮಯ ಆಹಾರಗಳಿಂದ ಪ್ರಸಿದ್ಧಿಯನ್ನು ಪಡೆದಿದೆ. ಇಲ್ಲಿನ ಊಟದ ತಟ್ಟೆಯಲ್ಲಿ ಪರಿಮಳ ಬೀರುವ ಅಡುಗೆಯಿಂದ ಹಿಡಿದು ಆರೋಗ್ಯದ ಕಾಳಜಿವಹಿಸುವವರೆಗೆ ಭಕ್ಷಗಳನ್ನು ಕಾಣಬಹುದು. ಭಾರತದ ಅಡುಗೆಯಲ್ಲಿ ಎರಡು ಶೈಲಿಗಳನ್ನು ಕಾಣಬಹುದು. ಒಂದು ಉತ್ತರ ಭಾರತ ಶೈಲಿಯ ಅಡುಗೆ ಮತ್ತೊಂದು ದಕ್ಷಿಣ ಭಾರತ ಶೈಲಿಯ ಅಡುಗೆ. ಇವೆರಡಲ್ಲೂ ಸ್ವಲ್ಪ ಮಟ್ಟಿಗೆ ವ್ಯತ್ಯಾಸವನ್ನು ಕಾಣಬಹುದು. ದಕ್ಷಿಣ ಭಾರತದಲ್ಲಿ ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ ಮತ್ತು ರಾತ್ರಿಯ ಊಟಗಳಲ್ಲಿ ಬೇರೆ ಬೇರೆ ರೀತಿಯ ಅಡುಗೆಗಳನ್ನು ಮಾಡಲಾಗುತ್ತದೆ. ದಕ್ಷಿಣ ಭಾರತದ ಫೇಮಸ್‌ ಉಪಹಾರಗಳೆಂದರೆ ದೋಸೆ ಮತ್ತು ಇಡ್ಲಿ. ಇದನ್ನು ಸವಿಯಲು ಚಟ್ನಿ ಬೇಕೇ ಬೇಕು. ಅವುಗಳ ರುಚಿ ದುಪ್ಪಟ್ಟಾಗಿಸುವುದೇ ಈ ಚಟ್ನಿಗಳು. ಇಲ್ಲಿ ಚಟ್ನಿಯನ್ನು ಹಲವು ಬಗೆಗಳಲ್ಲಿ ತಯಾರಿಸಲಾಗುತ್ತದೆ. ತೆಂಗಿನಕಾಯಿ ಚಟ್ನಿ, ಈರುಳ್ಳಿ ಚಟ್ನಿ, ಟೊಮೆಟೊ ಚಟ್ನಿ, ಹುಣಸೆಹಣ್ಣಿನ ಚಟ್ನಿ, ಶೇಂಗಾ ಚಟ್ನಿ ಒಂದೇ ಎರಡೇ. ಎಣಿಸುತ್ತಾ ಹೋದರೆ ಉದ್ದದ ಪಟ್ಟಿಯೇ ಆಗಬಹುದು. ಆಹಾರದ ರುಚಿ ಹೆಚ್ಚಿಸುವ ಇಂತಹ ಚಟ್ನಿಗಳನ್ನು ತಯಾರಿಸುವುದು ಕೂಡಾ ಅಷ್ಟೇ ಸುಲಭ. ಒಂದೇ ರೀತಿ ಚಟ್ನಿ ಮಾಡಿ ಮನೆಮಂದಿಗೆಲ್ಲಾ ಬೇಸರ ಮೂಡಿಸುವ ಬದಲಿಗೆ ಈ ವೆರೈಟಿ ಚಟ್ನಿಗಳನ್ನೊಮ್ಮೆ ಟ್ರೈ ಮಾಡಿ ನೋಡಿ.

ದೋಸೆ ಮತ್ತು ಇಡ್ಲಿಗೆ ಬೆಸ್ಟ್‌ ಕಾಂಬಿನೇಷನ್‌ ಆಗಿರುವ ಚಟ್ನಿಗಳು:

ತೆಂಗಿನಕಾಯಿ ಚಟ್ನಿ: ತೆಂಗಿನಕಾಯಿ ಚಟ್ನಿ ತಯಾರಿಸಲು, ತಾಜಾ ತೆಂಗಿನಕಾಯಿ, ಪುಟಾಣಿ (ಹುರಿಗಡಲೆ), ಹಸಿರು ಮೆಣಸಿನಕಾಯಿ, ಶುಂಠಿ ಚೂರು, ಉಪ್ಪು ಮತ್ತು ನೀರು. ಒಂದು ಮಿಕ್ಸಿ ಜಾರ್‌ ತೆಗದುಕೊಂಡು ಅದರಲ್ಲಿ ತಾಜಾ ತೆಂಗಿನಕಾಯಿ ತುರಿ, 3-4 ಹಸಿರು ಮೆಣಸಿನಕಾಯಿ, 1-ಇಂಚು ತಾಜಾ ಶುಂಠಿ, ರುಚಿಗೆ ತಕ್ಕಷ್ಟು ಉಪ್ಪು ಮತ್ತು ಸ್ವಲ್ಪ ನೀರು ಸೇರಿಸಿ ಗಟ್ಟಿಯಾಗಿ ರುಬ್ಬಿಕೊಳ್ಳಿ. ಈಗ ಒಗ್ಗರಣೆ ಪಾತ್ರೆಗೆ ತೆಂಗಿನ ಎಣ್ಣೆ, ಸಾಸಿವೆ, ಉದ್ದಿನ ಬೇಳೆ, ಮತ್ತು ಕೆಂಪು ಮೆಣಸಿನಕಾಯಿ ಹಾಕಿ. ಸಾಸಿವೆ ಸಿಡಿದ ನಂತರ ಅದಕ್ಕೆ ಚಿಟಿಕೆ ಇಂಗು ಮತ್ತು ಕರಿಬೇವಿನ ಎಲೆ ಸೇರಿಸಿ ಚಟ್ನಿಗೆ ಒಗ್ಗರಣೆ ಕೊಡಿ. ಈಗ ರುಚಿಕರವಾದ ತೆಂಗಿನಕಾಯಿ ಚಟ್ನಿ ಸವಿಯಲು ರೆಡಿ.

ತೆಂಗಿನಕಾಯಿ–ಕೊತ್ತೊಂಬರಿ ಸೊಪ್ಪಿನ ಚಟ್ನಿ: ತುರಿದ ತಾಜಾ ತೆಂಗಿನಕಾಯಿಗೆ ಕೊತ್ತೊಂಬರಿ ಸೊಪ್ಪು, ಹಸಿರು ಮೆಣಸಿನಕಾಯಿ, ಉಪ್ಪು ಮತ್ತು ನೀರು ಸೇರಿಸಿ ರುಬ್ಬಿಕೊಳ್ಳಿ. ಚಟ್ನಿ ಗಟ್ಟಿಯಾಗಿರಲಿ. ಅದಕ್ಕೆ ಸಾಸಿವೆ ಕಾಳು, ಉದ್ದಿನ ಬೇಳೆ, ಕಡ್ಲೆ ಬೇಳೆ, ಕೆಂಪು ಮೆಣಸಿನಕಾಯಿ ಮತ್ತು ಕರಿಬೇವಿನ ಎಲೆಗಳನ್ನು ಸೇರಿಸಿ ಒಗ್ಗರಣೆ ಮಾಡಿ. ಹಸಿರು ಬಣ್ಣದ ಈ ಚಟ್ನಿ ಬೆಳಗ್ಗಿನ ದೋಸೆ, ಇಡ್ಲಿಗೆ ಸಖತ್‌ ಟೇಸ್ಟೀಯಾಗಿರುತ್ತದೆ.

ಶೇಂಗಾ ಚಟ್ನಿ: ತೆಂಗಿನಕಾಯಿಯಿಲ್ಲದೇ ಸುಲಭವಾಗಿ ತಯಾರಿಸಬಹುದಾದ ಸೂಪರ್‌ ಚಟ್ನಿ. ಮೊದಲಿಗೆ ಒಂದು ಈರುಳ್ಳಿ, 4–5 ಬೆಳ್ಳುಳ್ಳಿ ಎಸಳು, ಒಂದು ಲವಂಗ, ಸ್ವಲ್ಪ ಜೀರಿಗೆ, ಒಂದು ಚಮಚ ಉದ್ದಿನ ಬೇಳೆ ಮತ್ತು 2–3 ಕೆಂಪು ಮೆಣಸಿನಕಾಯಿ. ಇವುಗಳನ್ನು ಒಂದು ಚಮಚ ಅಡುಗೆ ಎಣ್ಣೆ ಬಳಸಿ ಹುರಿದುಕೊಳ್ಳಿ. ಈ ಮಿಶ್ರಣ ತಣ್ಣಗಾದ ಬಳಿಕ ಒಂದು ಮಿಕ್ಸರ್‌ ಜಾರ್‌ಗೆ ಹಾಕಿಕೊಳ್ಳಿ. ಅದಕ್ಕೆ ಒಂದು ಕಪ್‌ ಹುರಿದ ಶೇಂಗಾ ಬೀಜ, ಹುಣಸೆ ಹಣ್ಣು ಮತ್ತು ರುಚಿಗೆ ತಕ್ಕಷ್ಟು ಉಪ್ಪು ಸೇರಿಸಿ ನುಣ್ಣಗೆ ರುಬ್ಬಿಕೊಳ್ಳಿ. ನಂತರ ಇದಕ್ಕೆ ಸಿಂಪಲ್‌ ಆದ ಒಂದು ಒಗ್ಗರಣೆ ಕೊಡಿ. ರುಚಿಯಾದ ಶೇಂಗಾ ಚಟ್ನಿ ನೀವೊಮ್ಮೆ ಟ್ರೈ ಮಾಡಿ.

ಹುಣಸೆಹಣ್ಣಿನ ಚಟ್ನಿ: ಈ ಚಟ್ನಿ ತಯಾರಿಸಲು ಒಂದು ಕಪ್ ಹುಣಸೆಹಣ್ಣನ್ನು ಅರ್ಧ ಗಂಟೆಗಳ ಕಾಲ ಬಿಸಿ ನೀರಿನಲ್ಲಿ ನೆನೆಸಿ. ನಂತರ ಅದರ ರಸ ತೆಗೆದುಕೊಳ್ಳಿ. ಒಂದು ಬಾಣಲೆಗೆ ಒಂದು ಚಮಚ ಎಣ್ಣೆ ಹಾಕಿ. ಎಣ್ಣೆ ಬಿಸಿಯಾದ ನಂತರ ಅದಕ್ಕೆ ಒಂದು ಚಮಚ ಜೀರಿಗೆ ಹಾಕಿ. ಅದಕ್ಕೆ ಹುಣಸೆಹಣ್ಣಿನ ರಸ ಹಾಕಿ. ಈಗ 1 ಒಂದು ಕಪ್ ಬೆಲ್ಲ, ಒಂದು ಚಮಚ ಅಚ್ಚಖಾರದ ಪುಡಿ, ಉಪ್ಪು ಸೇರಿಸಿ ಸುಮಾರು 10 ರಿಂದ 12 ನಿಮಿಷಗಳವರೆಗೆ ಮಧ್ಯಮ ಉರಿಯಲ್ಲಿ ಕುದಿಸಿ. ತಣ್ಣಗಾದ ನಂತರ ಗಾಳಿಯಾಡದ ಡಬ್ಬದಲ್ಲಿ ಶೇಖರಿಸಿ. ಸಮೋಸಾ, ಪಕೋಡಾಗಳಿಗೆ ಬೆಸ್ಟ್‌ ಕಾಂಬಿನೇಷನ್‌ ಆಗಿರುವ ಹುಳಿ–ಖಾರ–ಸಿಹಿಯ ಈ ಚಟ್ನಿ ದೋಸೆ, ಇಡ್ಲಿಗೂ ಬೆಸ್ಟ್‌ ಕಾಂಬಿನೇಷನ್‌ ಆಗಿದೆ.

ಟೊಮೆಟೊ ಕಾಯಿ ಚಟ್ನಿ: ಸಾಮಾನ್ಯವಾಗಿ ಜೋಳ ಮತ್ತು ರಾಗಿ ರೊಟ್ಟಿ ಸವಿಯಲು ಬಳಸುವ ಈ ಚಟ್ನಿಯನ್ನು ಟೊಮೆಟೊ ಕಾಯಿಯಿಂದ ತಯಾರಿಸಲಾಗುತ್ತದೆ. ಇದು ದೋಸೆ ಮತ್ತು ಇಡ್ಲಿ ಸವಿಯಲು ಉತ್ತಮವಾಗಿದೆ. ಈ ಚಟ್ನಿ ತಯಾರಿಸಲು 2–3 ಟೊಮೆಟೊ ಕಾಯಿ, ಒಂದು ಈರುಳ್ಳಿಯನ್ನು ತೆಗೆದುಕೊಂಡು ಚಿಕ್ಕದಾಗಿ ಕತ್ತರಿಸಿಕೊಳ್ಳಿ. 4–5 ಬೆಳ್ಳುಳ್ಳಿ ಎಸಳು, ಹಸಿರು ಮೆಣಸಿನಕಾಯಿ, ಜೀರಿಗೆ, ಕರಿಬೇವಿನ ಎಲೆ ತೆಗೆದುಕೊಳ್ಳಿ. ಇವುಗಳನ್ನು ಒಂದು ಬಾಣಲೆಯಲ್ಲಿ ಸ್ವಲ್ಪ ಎಣ್ಣೆ ಸೇರಿಸಿ ಹುರಿದುಕೊಳ್ಳಿ. ಇದು ತಣ್ಣಗಾದ ಬಳಿಕ ಒಂದು ಮಿಕ್ಸರ್‌ ಜಾರ್‌ಗೆ ಈ ಮಿಶ್ರಣ ಹಾಕಿ ಅದಕ್ಕೆ ಒಣ ಕೊಬ್ಬರಿ, ಹುರಿದ ಶೇಂಗಾ ಬೀಜ, ಸ್ವಲ್ಪ ಬೆಲ್ಲ ಮತ್ತು ರುಚಿಗೆ ತಕ್ಕಷ್ಟು ಉಪ್ಪು ಸೇರಿಸಿ ನುಣ್ಣಗೆ ರುಬ್ಬಿಕೊಳ್ಳಿ. ಈಗ ಇದಕ್ಕೆ ಚಿಕ್ಕ ಒಗ್ಗರಣೆ ಕೊಡಿ.

ಟೊಮೆಟೊ–ಈರುಳ್ಳಿ ಚಟ್ನಿ: ಇಡ್ಲಿ, ದೋಸೆ ಸವಿಯಲು ಹೊಸ ರುಚಿ ಹುಡುಕುತ್ತಿದ್ದರೆ ಈ ಚಟ್ನಿ ಫರ್ಫೆಕ್ಟ್‌ ಆಗಿದೆ. ಒಂದು ಬಾಣಲೆಗೆ ಸ್ವಲ್ಪ ಎಣ್ಣೆ ಹಾಕಿ. ಎಣ್ಣೆ ಬಿಸಿಯಾದ ನಂತರ ಒಂದು ಚಮಚ ಉದ್ದಿನಬೇಳೆ, ಕಡ್ಲೆ ಬೇಳೆ, ಕೆಂಪು ಮೆಣಸಿನಕಾಯಿ ಹಾಕಿ ಫ್ರೈ ಮಾಡಿ. ಅದಕ್ಕೆ 5–6 ಎಸಳು ಬೆಳ್ಳುಳ್ಳಿ, 1 ಲವಂಗ, 1 ಕತ್ತರಿಸಿದ ಈರುಳ್ಳಿ ಹಾಕಿ. ಈರುಳ್ಳಿ ಗೋಲ್ಡನ್‌ ಬ್ರೌನ್‌ ಆಗುವವರೆಗೆ ಹುರಿಯಿರಿ. ನಂತರ ಅದಕ್ಕೆ ಕತ್ತರಿಸಿದ ಟೊಮೆಟೊ ಹಾಕಿ ಅದು ಮೆತ್ತಗಾಗುವವರೆಗೆ ಹುರಿಯಿರಿ. ಈಗ ಅದಕ್ಕೆ ಚಿಟಿಕೆ ಅರಿಶಿಣ, 1 ಚಮಚ ಬೆಲ್ಲ ಮತ್ತು ರುಚಿಗೆ ತಕ್ಕಷ್ಟು ಉಪ್ಪು ಸೇರಿಸಿ ಸ್ಟವ್‌ ಆಫ್‌ ಮಾಡಿ. ಈ ಮಿಶ್ರಣವನ್ನು ಒಂದು ಮಿಕ್ಸರ್‌ ಜಾರ್‌ಗೆ ಹಾಕಿಕೊಂಡು ನುಣ್ಣಗೆ ರುಬ್ಬಿಕೊಳ್ಳಿ. ಅದಕ್ಕೆ ತೆಂಗಿನ ಎಣ್ಣೆ, ಉದ್ದಿನ ಬೇಳೆ, ಸಾಸಿವೆ ಮತ್ತು ಕೆಂಪು ಮೆಣಸಿನಕಾಯಿ, ಚಿಟಿಕೆ ಇಂಗು ಮತ್ತು ಕರಿಬೇವಿನ ಎಲೆ ಹಾಕಿ ಒಗ್ಗರಣೆ ಕೊಡಿ. ರುಚಿಕರವಾದ ಈರುಳ್ಳಿ–ಟೊಮೆಟೊ ಚಟ್ನಿ ಸವಿಯಲು ಸಿದ್ಧ.

Whats_app_banner