ಆಯಿಲ್ ಫ್ರೀಯಿಂದ ಮಸಾಲೆ ನಿಂಬು ಉಪ್ಪಿನಕಾಯಿಯವರೆಗೆ: ನಿಂಬೆಹಣ್ಣಿನಿಂದ ತಯಾರಿಸಬಹುದಾದ ಮೂರು ವಿಭಿನ್ನ ರುಚಿಯ ಉಪ್ಪಿನಕಾಯಿ ರೆಸಿಪಿ ಇಲ್ಲಿದೆ
Lemon Pickle: ಊಟದ ತಟ್ಟೆಯಲ್ಲಿ ಉಪ್ಪಿನ ಜೊತೆಗೆ ಜಾಗ ಪಡೆದುಕೊಂಡಿರುವ ಮತ್ತೊಂದು ಪ್ರಮುಖವಾದ ಆಹಾರ ಉಪ್ಪಿನಕಾಯಿ. ನಾಲಿಗೆಯ ರುಚಿ ಹೆಚ್ಚಿಸುವ ಈ ಉಪ್ಪಿನಕಾಯಿಗಳಲ್ಲಿ ಹಲವು ವಿಧಗಳಿವೆ. ಜೀರ್ಣಕ್ರಿಯೆಗೆ ಸಹಕಾರಿಯಾಗಿರುವ ನಿಂಬು ಉಪ್ಪಿನಕಾಯಿಯನ್ನು ಪ್ರಮುಖವಾಗಿ ಮೂರು ಬಗೆಗಳಲ್ಲಿ ತಯಾರಿಸಲಾಗುತ್ತದೆ. ಯಾವ ರೀತಿ? ವಿವಿರ ಇಲ್ಲಿದೆ.
ಚಳಿಗಾಲ ಪ್ರಾರಂಭವಾಗಿದೆ. ಅನ್ನ–ಸಾರು, ರೊಟ್ಟಿ–ಚಪಾತಿ ಇವೆಲ್ಲವನ್ನು ಬಿಸಿಬಿಸಿಯಾಗಿ ತಿನ್ನಲು ಮನಸ್ಸಾಗುತ್ತದೆ. ಇದರ ಜೊತೆಗೆ ನಾಲಿಗೆಯ ರುಚಿ ಹೆಚ್ಚಿಸುವ ಉಪ್ಪಿನಕಾಯಿ ಜೊತೆಗಿದ್ದರೆ ಊಟ ಸಂಪೂರ್ಣವಾಗುತ್ತದೆ. ಚಳಿಗಾಲದ ತಂಪು ವಾತಾವರಣಕ್ಕೆ ಉಪ್ಪಿನಕಾಯಿ ದೇಹಕ್ಕೆ ಚೈತನ್ಯ ನೀಡುತ್ತದೆ. ಅದರಲ್ಲೂ ನಿಂಬು ಉಪ್ಪಿನಕಾಯಿ ಆರೋಗ್ಯಕ್ಕೂ ಉತ್ತಮ. ಇದರಲ್ಲಿರುವ ವಿಟಮಿನ್ ಸಿ ಮತ್ತು ಖನಿಜಗಳು ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಿ, ದೇಹವನ್ನು ಬೆಚ್ಚಗಿರಿಸುತ್ತವೆ. ನಿಂಬೆ ಹಣ್ಣಿನಿಂದ ತಯಾರಿಸುವ ಉಪ್ಪಿನಕಾಯಿ ಬಹಳ ವಿಶೇಷವಾಗಿದೆ. ಏಕೆಂದರೆ ನಿಂಬೆಯಿಂದ ವಿವಿಧ ಬಗೆಗಳಲ್ಲಿ ಉಪ್ಪಿನಕಾಯಿಯನ್ನು ತಯಾರಿಸಲಾಗುತ್ತದೆ. ಪ್ರತಿಯೊಂದು ಉಪ್ಪಿನಕಾಯಿಯು ವಿಭಿನ್ನ ರುಚಿ ಮತ್ತು ಪರಿಮಳ ನೀಡುತ್ತದೆ. ನಿಂಬು ಉಪ್ಪಿನಕಾಯಿಯನ್ನು ಅಂಗಡಿಯಿಂದ ತರುವ ಬದಲಿಗೆ ಮನೆಯಲ್ಲಿಯೇ ಶುಚಿ ರುಚಿಯಾಗಿ ತಯಾರಿಸಬಹುದು. ಏಕೆಂದರೆ ಇದರಲ್ಲಿ ಯಾವುದೇ ರೀತಿಯ ಸಂರಕ್ಷಕಗಳನ್ನು ಬಳಸುವುದಿಲ್ಲ. ಆದ್ದರಿಂದ ಇದು ಆರೋಗ್ಯಕ್ಕೆ ಉತ್ತಮ. ನಿಂಬೆಹಣ್ಣಿನಿಂದ ಉಪ್ಪಿನಕಾಯಿ ತಯಾರಿಸಬೇಕೆಂದಿದ್ದರೆ ಇಲ್ಲಿ ಮೂರು ವಿದಧ ಉಪ್ಪಿನಕಾಯಿಯ ರೆಸಿಪಿ ಹೇಳಲಾಗಿದೆ. ಅದ್ಭುತ ರುಚಿ ಹೊಂದಿರುವ ಈ ಉಪ್ಪಿನಕಾಯಿಗಳನ್ನು ಸುಲಭವಾಗಿ ನೀವು ಮನೆಯಲ್ಲಿ ತಯಾರಿಸಬಹುದು.
ನಿಂಬು ಉಪ್ಪಿನಕಾಯಿಯ ಪ್ರಯೋಜನಗಳು
ನಿಂಬು ಉಪ್ಪಿನಕಾಯಿಯಿಂದ ಅನೇಕ ಪ್ರಯೋಜನಗಳಿವೆ. ಇದು ಜೀರ್ಣಕ್ರಿಯೆಗೆ ಸಹಕಾರಿಯಾಗಿದೆ. ಉಪ್ಪಿನಕಾಯಿಯಲ್ಲಿರುವ ಜೀರಿಗೆ, ಓಂಕಾಳು, ಸೋಂಪು ಮತ್ತು ಮುಂತಾದ ಮಸಾಲೆ ಪದಾರ್ಥಗಳು ಜೀರ್ಣಕ್ರಿಯೆಯನ್ನು ಉತ್ತೇಜಿಸುತ್ತವೆ. ನಿಂಬು ಉಪ್ಪಿನಕಾಯಿಯಲ್ಲಿರುವ ತಾಮ್ರ, ಪೊಟ್ಯಾಸಿಯಂ, ಕಬ್ಬಿಣ, ಕ್ಯಾಲ್ಸಿಯಂನಂತಹ ಖನಿಜಗಳು ರಕ್ತದ ಹರಿವನ್ನು ಸುಧಾರಿಸುತ್ತದೆ. ಇದರಿಲ್ಲಿರುವ ಪೋಷಕಾಂಶಗಳು ಮೂಳೆಯ ಆರೋಗ್ಯ ಹೆಚ್ಚಲು ಸಹಾಯ ಮಾಡುತ್ತದೆ. ನಿಂಬು ವಿಟಮಿನ್ ಸಿ ಯಿಂದ ಸಮೃದ್ಧವಾಗಿದೆ. ಆದ್ದರಿಂದ ಇದು ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ.
ನಿಂಬೆಹಣ್ಣಿನಿಂದ ತಯಾರಿಸಬಹುದಾದ 3 ವಿದಧ ಉಪ್ಪಿನಕಾಯಿಗಳು
1) ಆಯಿಲ್ ಫ್ರೀ ನಿಂಬೆ ಉಪ್ಪಿನಕಾಯಿ
ಬೇಕಾಗುವ ಪದಾರ್ಥಗಳು: ನಿಂಬೆಹಣ್ಣು 10, ಎರಡು ನಿಂಬೆ ಹಣ್ಣಿನ ರಸ, 1/4 ಕಪ್ ಕಲ್ಲುಪ್ಪು, 1 ಚಮಚ ಇಂಗು ಮತ್ತು 2 ಚಮಚ ಅಚ್ಚ ಖಾರದ ಪುಡಿ.
ತಯಾರಿಸುವ ವಿಧಾನ: ಎಲ್ಲಾ ನಿಂಬೆಹಣ್ಣುಗಳನ್ನು 8 ತುಂಡುಗಳಾಗಿ ಕತ್ತರಿಸಿಕೊಳ್ಳಿ. ಅದನ್ನು ಒಂದು ಅಗಲವಾದ ಬಟ್ಟಲಿಗೆ ಹಾಕಿಕೊಳ್ಳಿ. ಈಗ ಅದಕ್ಕೆ ನಿಂಬೆ ರಸ, ಅರಿಶಿಣ ಮತ್ತು ಕಲ್ಲುಪ್ಪು ಸೇರಿಸಿ. ಅವೆಲ್ಲವನ್ನು ಚೆನ್ನಾಗಿ ಮಿಕ್ಸ್ ಮಾಡಿ. ಈ ಉಪ್ಪಿನಕಾಯಿಯ ಮಿಶ್ರಣವನ್ನು ಗಾಳಿಯಾಡದ ಗಾಜಿನ ಡಬ್ಬಕ್ಕೆ ವರ್ಗಾಯಿಸಿಕೊಳ್ಳಿ. 5 ದಿನಗಳ ಕಾಲ ಪ್ರತಿದಿನ ಬಿಸಿಲಿನಲ್ಲಿ ಸುಮಾರು 4–5 ಗಂಟೆಗಳ ಕಾಲ ಬಿಸಿಲಲ್ಲಿಡಿ. ಪ್ರತಿದಿನ ಒಣಗಿದ ಒಂದು ಉದ್ದದ ಚಮಚದ ಸಹಾಯದಿಂದ ಮಿಕ್ಸ್ ಮಾಡಿ. 5 ದಿನ ಬಿಸಿಲಿಗೆ ಇಟ್ಟ ನಂತರ, ಅದಕ್ಕೆ ಅಚ್ಚ ಖಾರದ ಪುಡಿ, ಇಂಗು ಹಾಕಿ ಚೆನ್ನಾಗಿ ಮಿಕ್ಸ್ ಮಾಡಿ. ಆಯಿಲ್ ಫ್ರೀ ನಿಂಬೆ ಉಪ್ಪಿನಕಾಯಿ ಸವಿಯಲು ಸಿದ್ಧ.
2) ನಿಂಬು ಸಿಹಿ ಉಪ್ಪಿನಕಾಯಿ
ಬೇಕಾಗುವ ಪದಾರ್ಥಗಳು: ನಿಂಬೆಹಣ್ಣು 15, ಉಪ್ಪು 3 ಚಮಚ, ಬೆಲ್ಲ 500 ಗ್ರಾಂ, ಶುಂಠಿ ಪುಡಿ 1 ಚಮಚ, ಗರಂ ಮಸಾಲಾ ಪುಡಿ 1/2 ಚಮಚ, ಏಲಕ್ಕಿ ಪುಡಿ 1/2 ಚಮಚ.
ತಯಾರಿಸುವ ವಿಧಾನ: ನಿಂಬೆ ಹಣ್ಣನ್ನು ಚಿಕ್ಕ ಹೋಳುಗಳನ್ನಾಗಿ ಕತ್ತರಿಸಿಕೊಳ್ಳಿ. ಅದಕ್ಕೆ ಉಪ್ಪು ಸೇರಿಸಿ ಚೆನ್ನಾಗಿ ಮಿಕ್ಸ್ ಮಾಡಿ. ಇದನ್ನು ಗಾಜಿನ ಬಾಟಲಿಗೆ ವರ್ಗಾಯಿಸಿ. ಮುಚ್ಚಳ ಮುಚ್ಚಿ 7 ದಿನಗಳ ಕಾಲ ಹಾಗೆಯೇ ಬಿಡಿ. ಪ್ರತಿದಿನ ಚಮಚದ ಸಹಾಯದಿಂದ ಮಿಕ್ಸ್ ಮಾಡಿ. ಲಿಂಬು ಮೃದುವಾಗಿ ರಸ ಬಿಟ್ಟುಕೊಳ್ಳುತ್ತದೆ. ಬೆಲ್ಲಕ್ಕೆ ಅರ್ಧ ಕಪ್ ನೀರು ಸೇರಿಸಿ ಚೆನ್ನಾಗಿ ಕುದಿಸಿ. ಅದಕ್ಕೆ ನಿಂಬೆ ಹೋಳುಗಳು, ಶುಂಠಿ ಪುಡಿ, ಏಲಕ್ಕಿ ಪುಡಿ ಮತ್ತು ಗರಂ ಮಸಾಲಾ ಪುಡಿ ಸೇರಿಸಿ. ಬೆಲ್ಲದ ಪಾಕ ಬರುವವರೆಗೆ ಸಣ್ಣ ಉರಿಯಲ್ಲಿ ಬೇಯಿಸಿ. ಮಿಶ್ರಣ ಕಂದು ಬಣ್ಣಕ್ಕೆ ತಿರುಗುವುದನ್ನು ಗಮನಿಸಿ. ಸ್ಟವ್ ಆಫ್ ಮಾಡಿ. ನಿಂಬು ಸಿಹಿ ಉಪ್ಪಿನಕಾಯಿ ಸಂಪೂರ್ಣವಾಗಿ ತಣ್ಣಗಾಗಲು ಬಿಡಿ. ಅದನ್ನು ಗಾಳಿಯಾಡದ ಗಾಜಿನ ಬಾಟಲಿಯಲ್ಲಿ ಶೇಖರಿಸಿಡಿ. ಹುಳಿ ಸಿಹಿ ಹದವಾಗಿ ಬೆರೆತಿರುವ ನಿಂಬು ಸಿಹಿ ಉಪ್ಪಿನಕಾಯಿ ಅನ್ನ, ಚಪಾತಿಗೆ ಪರ್ಫೆಕ್ಟ್ ಕಾಂಬಿನೇಷನ್.
3) ಮಸಾಲಾ ನಿಂಬೆ ಉಪ್ಪಿನಕಾಯಿ
ಬೇಕಾಗುವ ಪದಾರ್ಥಗಳು: ನಿಂಬೆಹಣ್ಣು 15, ಎಣ್ಣೆ 4 ಚಮಚ, ಕಲ್ಲುಪ್ಪು 3 ಚಮಚ, ಮೆಂತೆ ಕಾಳು 2 ಚಮಚ, ಜೀರಿಗೆ 2 ಚಮಚ, ಸೋಂಪು 1 ಚಮಚ, ಅಚ್ಚ ಖಾರದ ಪುಡಿ, 2 ಚಮಚ, ಓಂ ಕಾಳು 2 ಚಮಚ, ಕಲೋಂಜಿ 1 ಚಮಚ.
ತಯಾರಿಸುವ ವಿಧಾನ: ಮೊದಲಿಗೆ ಪ್ಯಾನ್ ಬಿಸಿ ಮಾಡಿ ಅದಕ್ಕೆ ಸೋಂಪು, ಜೀರಿಗೆ ಮತ್ತು ಕಲೋಂಜಿಯನ್ನು ಹುರಿದು, ಪುಡಿ ಮಾಡಿಕೊಳ್ಳಿ. ಇದಕ್ಕೆ ಕಲ್ಲುಪ್ಪು, ಮೆಣಸಿನ ಪುಡಿ, ಓಂಕಾಳು ಸೇರಿಸಿ ಚೆನ್ನಾಗಿ ಮಿಕ್ಸ್ ಮಾಡಿ. ನಿಂಬೆ ಹಣ್ಣನ್ನು ಎರಡು ಭಾಗವಾಗಿ ಕತ್ತರಿಸಿ. ಬೀಜ ತೆಗೆಯಿರಿ. ಈಗ ಅದನ್ನು ಚಿಕ್ಕ ಹೋಳುಗಳನ್ನಾಗಿ ಕತ್ತರಿಸಿ. ಅದಕ್ಕೆ ಎಣ್ಣೆಯನ್ನು ಮಿಕ್ಸ್ ಮಾಡಿ. ಸಿದ್ದಪಡಿಸಿಟ್ಟುಕೊಂಡ ಮಸಾಲೆಯನ್ನು ಅದರ ಮೇಲೆ ಹರಡಿ ಚೆನ್ನಾಗಿ ಮಿಕ್ಸ್ ಮಾಡಿ. ಇದನ್ನು ಒಂದು ಗಾಳಿಯಾಡದ ಗಾಜಿನ ಬಾಟಲಿಗೆ ವರ್ಗಾಯಿಸಿ. ಆ ಬಾಟಲಿಯನ್ನು ಪ್ರತಿದಿನ 4–5 ಗಂಟೆಗಳ ಕಾಲ ಒಂದು ವಾರ ಬಿಸಿಲಿನಲ್ಲಿಡಿ. ಮಸಾಲಾ ನಿಂಬು ಉಪ್ಪಿನಕಾಯಿ ರೆಡಿ.