Evening Snacks: ನಾರಿನಾಂಶ ಸಮೃದ್ಧ, ಕಡಿಮೆ ಕ್ಯಾಲೊರಿ ಹೊಂದಿರುವ ದೇಸಿ ಸ್ನ್ಯಾಕ್ಸ್‌ಗಳಿವು; ಸಂಜೆಯ ತಿಂಡಿಗೆ ಇವೇ ಬೆಸ್ಟ್
ದಿನಪೂರ್ತಿ ದುಡಿದು ದಣಿದು ಬಂದಾಗ ಏನಾದರೂ ಮಸಾಲೆಯುಕ್ತ ಸ್ನಾಕ್ಸ್ ತಿನ್ನಲು ಸಿಕ್ಕರೆ, ಅದಕ್ಕಿಂತ ಹೆಚ್ಚು ಸಂತೋಷ ಬೇರೆಲ್ಲೂ ಸಿಗುವುದಿಲ್ಲ. ಸಾಮಾನ್ಯವಾಗಿ ಸಂಜೆಗೆ ಏನಾದರೂ ಸ್ನಾಕ್ಸ್ ಸಿಗಬಹುದೇ ಎಂದು ಎಲ್ಲರೂ ಯೋಚಿಸುತ್ತಿರುತ್ತಾರೆ. ಫೈಬರ್ ಅಧಿಕವಾಗಿರುವ ಹಾಗೂ ಕಡಿಮೆ ಕ್ಯಾಲೋರಿಯ ದೇಸಿ ಸ್ನಾಕ್ಸ್‌ಗಳಿದ್ದರೆ ಸಂಜೆಯ ತಿಂಡಿಯ ಗಮ್ಮತ್ತೇ ಬೇರೆಯಾಗಿರುತ್ತದೆ.

ಸಂಜೆ ಮನೆಗೆ ಬಂದವರು ಮೊದಲು ಮಾಡುವು ಕೆಲಸವೇ ಬಾಯಿಚಪ್ಪರಿಸಲು ಏನಾದರೂ ತಿಂಡಿ ಇದೆಯೇ ಎಂದು ಹುಡುಕುವುದು. ಬಾಯಲ್ಲಿ ನೀರೂರಿಸುವ ಬಿಸಿ ಬಿಸಿ ತಿಂಡಿ ಜೊತೆ ಚಹಾ ಅಥವಾ ಕಾಫಿ ಇದ್ದರೆ ಸಾಕು ಆ ದಿನದ ಆಯಾಸವೆಲ್ಲ ಒಮ್ಮೆಲೆ ಮಾಯವಾಗಿಬಿಡುತ್ತದೆ. ಇದೇ ಕಾರಣಕ್ಕೆ ಇರಬೇಕು ಸಂಜೆಯ ಸ್ನಾಕ್ಸ್‌ಗೆ ಬಹಳಷ್ಟು ಬೇಡಿಕೆ ಬಂದಿರುವುದು. ಗರಿಗರಿಯಾದ, ಮಸಾಲೆಯುಕ್ತ ತಿಂಡಿಗಳನ್ನು ತಿಂದು ಆನಂದಿಸುವುದೆಂದರೆ ಸಾಮಾನ್ಯವಾಗಿ ಎಲ್ಲರಿಗೂ ಇಷ್ಟ. ಆದರೆ ಡಯಟ್ ಬಗ್ಗೆ ಕಾಳಜಿ ವಹಿಸುವವರಲ್ಲಿ ಏನೇನೋ ತಿಂದು ಕ್ಯಾಲೋರಿ ಹೆಚ್ಚಾಗಬಿಡಬಹುದೆಂದ ಭಯ ಕಾಡುತ್ತಿರುತ್ತದೆ. ಅವರೆಲ್ಲರೂ ಫೈಬರ್ ಹೆಚ್ಚಿರುವ, ಕಡಿಮೆ ಕ್ಯಾಲೊರಿ ಹೊಂದಿರುವ ತಿಂಡಿಗಳ ಹುಡುಕಾಟದಲ್ಲಿರುತ್ತಾರೆ. ವಾಸ್ತವದಲ್ಲಿ ದೇಸಿ ತಿಂಡಿಗಳು ರುಚಿಯಾಗಿ ಇರುವುದರ ಜೊತೆಗೆ ದೇಹಕ್ಕೆ ಉತ್ತಮವೂ ಆಗಿರುತ್ತದೆ. ಜೊತೆಗೆ ಇದು ಆರೋಗ್ಯಕರ ಜೀವನಶೈಲಿಯನ್ನು ಬೆಂಬಲಿಸುತ್ತದೆ.
ಸಂಜೆಯ ಸ್ನಾಕ್ಸ್‌ಗೆ ಏನು ಮಾಡುವುದು ಎಂದು ನೀವು ಯೋಚಿಸುತ್ತಿದ್ದರೆ, ಅದಕ್ಕೆ ಇಲ್ಲಿ ಕೆಲವು ಅಡುಗೆಗಳನ್ನು ಹೇಳಲಾಗಿದೆ. ಈ ಮಸಾಲೆಯುಕ್ತ, ಗರಿಗರಿ ತಿಂಡಿಗಳಿಗೆ ನೀವು ಡ್ರೈ ಫ್ರೂಟ್ಸ್, ನಟ್ಸ್‌ಗಳನ್ನು ಸೇರಿಸಿಕೊಳ್ಳಬಹುದಾಗಿದೆ. ಅವು ಪೊಷಕಾಂಶಗಳಿಂದ ಕೂಡಿದ್ದು ಆರೋಗ್ಯಕ್ಕೂ ಉತ್ತಮವಾಗಿದೆ. ಸಂಜೆಯ ಸ್ನಾಕ್ಸ್‌ಗೆ ನೀವೂ ಇವುಗಳನ್ನು ಟ್ರೈ ಮಾಡಿ.
ಮಸಾಲೆ ಕಡಲೆ
ಕಡಲೆಯು ಫೈಬರ್ ಮತ್ತು ಪ್ರೋಟೀನ್‌ಗಳಿಂದ ಸಮೃದ್ಧವಾಗಿದೆ. ಅದು ಹೊಟ್ಟೆ ತುಂಬುವುದರ ಜೊತೆಗೆ ದೇಹಕ್ಕೆ ಪೋಷಕಾಂಶಗಳನ್ನು ಒದಗಿಸುತ್ತದೆ. ಒಂದು ಅಗಲವಾದ ಪ್ಯಾನ್‌ನಲ್ಲಿ ಒಂದು ಚಮಚ ಆಲೀವ್ ಎಣ್ಣೆ ತೆಗೆದುಕೊಳ್ಳಿ. ಸ್ವಲ್ಪ ಬಿಸಿಯಾದ ನಂತರ ಅದಕ್ಕೆ ನೆನೆಸಿ, ಬೇಯಿಸಿದ ಕಡಲೆಯನ್ನು ಸೇರಿಸಿ, ಒಂದೆರಡು ನಿಮಿಷ ಹುರಿಯಿರಿ. ಅದಕ್ಕೆ ಅರಿಶಿಣಮ, ಅಚ್ಚಖಾರದಪುಡಿ, ಉಪ್ಪು ಮತ್ತು ಚಾಟ್ ಮಸಾಲಾ ಸೇರಿಸಿ. ಮತ್ತೆ ಒಂದೆರಡು ನಿಮಿಷಗಳ ಕಾಲ ಅದನ್ನು ಹುರಿಯಿರಿ. ರುಚಿಕರವಾದ ಗರಿಗರಿ ಮಸಾಲಾ ಕಡಲೆ ಅಥವಾ ರೋಸ್ಟೆಡ್ ಚನ್ನಾ ತಯಾರಿಸಿ.
ಇದನ್ನೂ ಓದಿ: Curry Leaves: ಅಡುಗೆಗೆ ಮಾತ್ರವಲ್ಲ ತೂಕ ಇಳಿಸಲೂ ಬೇಕು ಕರಿಬೇವಿನ ಎಲೆಗಳು; ಮಧುಮೇಹಿಗಳಿಗೂ ಸೂಪರ್ ಫುಡ್ ಇದು
ಗೆಣಸಿನ ಚಾಟ್
ಗೆಣಸನ್ನು ಚೌಕಾಕಾರವಾಗಿ ಕತ್ತರಿಸಿಕೊಳ್ಳಿ. ಅದಕ್ಕೆ ಆಲೀವ್ ಎಣ್ಣೆ, ಚಾಟ್ ಮಸಾಲಾ ಮತ್ತು ಲಿಂಬು ರಸ ಸೇರಿಸಿ. ಗೆಣಸು ಮೃದುವಾಗುವವರೆಗೂ ಬೇಯಿಸಿ. ಗೆಣಸು ಅತಿ ಹೆಚ್ಚಿನ ಪ್ರಮಾಣದ ಫೈಬರ್‌ನಿಂದ ಕೂಡಿದೆ. ಇದರಲ್ಲಿರುವ ವಿಟಮಿನ್ ಮತ್ತು ಪೋಷಕಾಂಶಗಳಿಂದ ಕೂಡಿರುವ ಗೆಣಸು ಸಂಜೆಯ ಸ್ನಾಕ್ಸ್‌ಗೆ ಬೆಸ್ಟ್ ತಿಂಡಿ.
ಹುರಿದ ಜೋಳ
ಕಾರ್ನ್, ಅಥವಾ ಬುಟ್ಟಾ ಎಂದು ಕರೆಯುವ ಜೋಳ ಸಂಜೆಗೆ ಹೇಳಿ ಮಾಡಿಸಿದ ಸ್ನಾಕ್ಸ್ ಆಗಿದೆ. ಚೆನ್ನಾಗಿ ರೋಸ್ಟ್ ಅಥವಾ ಗ್ರಿಲ್ ಮಾಡಿದ ಜೋಳಕ್ಕೆ ಲಿಂಬು ರಸ, ಚಾಟ್ ಮಸಾಲಾ, ಖಾರದ ಪುಡಿ ಮತ್ತು ಉಪ್ಪು ಉದುರಿಸಿ. ಉಪ್ಪು, ಹುಳಿ, ಖಾರದ ಬಿಸಿ ಬಿಸಿ ಜೋಳ ಬಾಯಲ್ಲಿ ನೀರೂರಿಸುವಂತೆ ಮಾಡುತ್ತದೆ. ಫೈಬರ್ ಅಂಶ ಹೆಚ್ಚಿರುವ ಜೋಳವು ಆಂಟಿಒಕ್ಸಿಡೆಂಟ್ ಆಗಿದ್ದು ಪೋಷಕಾಂಶಗಳನ್ನು ದೇಹಕ್ಕೆ ಪೂರೈಸುತ್ತದೆ.
ಮಿಕ್ಸ್ಡ್ ನಟ್ಸ್
ಇದೊಂದು ಉತ್ತಮ ಆರೋಗ್ಯಕರ ಸ್ನಾಕ್ಸ್. ಒಣ ಹಣ್ಣು ಮತ್ತು ಬೀಜಗಳು ಅತಿ ಹೆಚ್ಚಿನ ಪ್ರಮಾಣದಲ್ಲಿ ಫೈಬರ್, ಪೋಷಕಾಂಶಗಳನ್ನು ಹೊಂದಿದ್ದು ಅವು ದೇಹಕ್ಕೆ ಸಂಪೂರ್ಣ ಆರೋಗ್ಯ ನೀಡಬಲ್ಲವು. ಖರ್ಜೂರ, ದ್ರಾಕ್ಷಿ, ಗೊಡಂಬಿ, ಬಾದಾಮಿ, ಪಿಸ್ತಾ ಮುಂತಾದ ನಿಮ್ಮಿಷ್ಟದ ಡ್ರೈ ಪ್ರೂಟ್ಸ್‌ಗಳನ್ನು ತೆಗೆದುಕೊಳ್ಳಿ. ಅವೆಲ್ಲವನ್ನೂ ಮಿಕ್ಸ್ ಮಾಡಿ ಸವಿಯಿರಿ. ಇದು ಕ್ಯಾಲೋರಿ ನಿರ್ವಹಣೆಗೂ ಉತ್ತಮವಾಗಿದೆ.
ಹುರಿದ ಮಖಾನಾಗಳು
ಬಹಳ ಸುಲಭಕ್ಕೆ ತಯಾರಿಸಬೆಕೆಂದಿದ್ದರೆ, ಅದಕ್ಕೆ ಹುರಿದ ಮಖಾನಗಳು ಬೆಸ್ಟ್. ಮಖಾನವನ್ನು ಒಂದು ಪ್ಯಾನ್‌ಗೆ ಹಾಕಿ ಕ್ರಿಸ್ಪೀ ಆಗುವವರೆಗೂ ಹುರಿಯಿರಿ. ಅದಕ್ಕೆ ಚಾಟ್ ಮಸಾಲ, ಜೀರಿಗೆ ಪುಡಿ, ಸ್ವಲ್ಪ ಉಪ್ಪು ಸೇರಿಸಿ. ಕಡಿಮೆ ಕ್ಯಾಲೋರಿ ಮತ್ತು ಹೆಚ್ಚಿನ ಫೈಬರ್‌ನಿಂದ ಇದು ಕೂಡಿದೆ.

ವಿಭಾಗ