ಕನ್ನಡ ಸುದ್ದಿ  /  ಜೀವನಶೈಲಿ  /  Uttappa Recipe: ಮತ್ತೆ ಮತ್ತೆ ಬೇಕಪ್ಪಾ ಎನ್ನಿಸುವ 3 ಬಗೆಯ ಉತ್ತಪ್ಪ ರೆಸಿಪಿ ಇಲ್ಲಿದೆ, ನೀವೂ ಮನೆಯಲ್ಲಿ ಮಾಡಿ ತಿನ್ನಿ

Uttappa Recipe: ಮತ್ತೆ ಮತ್ತೆ ಬೇಕಪ್ಪಾ ಎನ್ನಿಸುವ 3 ಬಗೆಯ ಉತ್ತಪ್ಪ ರೆಸಿಪಿ ಇಲ್ಲಿದೆ, ನೀವೂ ಮನೆಯಲ್ಲಿ ಮಾಡಿ ತಿನ್ನಿ

ದಕ್ಷಿಣ ಭಾರತದ ತಿನಿಸುಗಳಲ್ಲಿ ರುಚಿಯ ಜೊತೆಗೆ ಹೆಸರಿನಲ್ಲೂ ಭಿನ್ನವಾಗಿರುವುದು ಉತ್ತಪ್ಪ. ಬೆಳಗಿನ ಉಪಾಹಾರಕ್ಕೆ ಹೇಳಿ ಮಾಡಿಸಿದ ಈ ರೆಸಿಪಿ ಮಕ್ಕಳಿಗೂ ಇಷ್ಟವಾಗುತ್ತದೆ. ಇಲ್ಲಿದೆ 3 ವಿಧದ ಉತ್ತಪ್ಪ ರೆಸಿಪಿ. ಇದನ್ನು ನೀವೂ ಮನೆಯಲ್ಲಿ ಟ್ರೈ ಮಾಡಿ, ಮತ್ತು ಮತ್ತು ಬೇಕಪ್ಪ ಅನ್ನದೇ ಇದ್ರೆ ಕೇಳಿ.

ಮತ್ತೆ ಮತ್ತೆ ಬೇಕಪ್ಪಾ ಎನ್ನಿಸುವ ಬಗೆ ಬಗೆ ಉತ್ತಪ್ಪ ರೆಸಿಪಿ
ಮತ್ತೆ ಮತ್ತೆ ಬೇಕಪ್ಪಾ ಎನ್ನಿಸುವ ಬಗೆ ಬಗೆ ಉತ್ತಪ್ಪ ರೆಸಿಪಿ

ದಕ್ಷಿಣ ಭಾರತದ ಪಾಕ ಪದ್ಧತಿಗೆ ಮರುಳಾಗದೇ ಇರುವವರು ಯಾರೂ ಇಲ್ಲ. ಆರೋಗ್ಯಕರ ಹಾಗೂ ರುಚಿ ರುಚಿಯಾದ ಭಕ್ಷ್ಯಗಳಿಗೆ ದಕ್ಷಿಣ ಭಾರತ ಎಂದಿಗೂ ಹೆಸರುವಾಸಿ. ಇಲ್ಲಿನ ತಿನಿಸುಗಳು ಒಂದಕ್ಕಿಂತ ಒಂದು ರುಚಿ ಹಾಗೂ ಭಿನ್ನ. ಇವುಗಳಲ್ಲಿ ಉತ್ತಪ್ಪ ಕೂಡ ಒಂದು. ದೋಸೆ ಅಥವಾ ಇಡ್ಲಿ ಹಿಟ್ಟಿನಿಂದ ಮಾಡುವ ದಪ್ಪ ಹಾಗೂ ಮೆತ್ತನೆಯ ಉತ್ತಪ್ಪಗಳು ಬೆಳಗ್ಗಿನ ಉಪಹಾರಕ್ಕೆ ಉತ್ತಮ ಆಯ್ಕೆ. ಉತ್ತಪ್ಪ ತಯಾರಿಸುವಾಗ ನೀವು ವಿವಿಧ ಮಸಾಲೆಗಳು ಹಾಗೂ ಹಸಿರು ತರಕಾರಿಗಳನ್ನೂ ಬಳಕೆ ಮಾಡಬಹುದಾದ್ದರಿಂದ ನಿಮಗೆ ಹೆಚ್ಚಿನ ಆರೋಗ್ಯ ಪ್ರಯೋಜನಗಳನ್ನು ಇವುಗಳು ನೀಡುತ್ತವೆ. ನಿಮ್ಮ ಬೆಳಗ್ಗಿನ ಉಪಹಾರದ ರುಚಿಯನ್ನು ಹೆಚ್ಚಿಸುವುದರ ಜೊತೆಯಲ್ಲಿ ಆರೋಗ್ಯಕ್ಕೂ ಲಾಭ ನೀಡುವ ಮೂರು ಬಗೆಯ ಉತ್ತಪ್ಪ ತಯಾರಿಸುವ ವಿಧಾನ ಇಲ್ಲಿದೆ ನೋಡಿ :

ಟ್ರೆಂಡಿಂಗ್​ ಸುದ್ದಿ

ಈರುಳ್ಳಿ- ಟೊಮೆಟೊ ಉತ್ತಪ್ಪ

ಬೇಕಾಗುವ ಸಾಮಗ್ರಿಗಳು: ದೋಸೆಹಿಟ್ಟು - 4 ಕಪ್, ಸಣ್ಣದಾಗಿ ಕತ್ತರಿಸಿ ಹಸಿಮೆಣಸಿನಕಾಯಿ - 1/2 ಕಪ್, ಸಣ್ಣದಾಗಿ ಕತ್ತರಿಸಿದ ಕೊತ್ತಂಬರಿ ಸೊಪ್ಪು - ಒಂದೂವರೆ ಕಪ್, ಸಣ್ಣದಾಗಿ ಕತ್ತರಿಸಿದ ಈರುಳ್ಳಿ - 3 ಕಪ್, ಸಣ್ಣದಾಗಿ ಕತ್ತರಿಸಿಕೊಂಡ ಟೊಮೆಟೊ - 3 ಕಪ್, ಸಣ್ಣದಾಗಿ ಕತ್ತರಿಸಿದ ಬೇವಿನ ಸೊಪ್ಪು - 2 ಚಮಚ, ತುರಿದುಕೊಂಡ ಶುಂಠಿ - 2 ಚಮಚ, ರುಚಿಗೆ ತಕ್ಕಷ್ಟು ಉಪ್ಪು, ಅಡುಗೆ ಎಣ್ಣೆ ಸ್ವಲ್ಪ,

ಮಾಡುವ ವಿಧಾನ: ಒಂದು ಪಾತ್ರೆಯನ್ನು ತೆಗೆದುಕೊಂಡು ಅದಕ್ಕೆ ಸ್ವಲ್ಪ ನೀರು ಮತ್ತು ಉಪ್ಪನ್ನು ಹಾಕಿ ಇದಕ್ಕೆ ದೋಸೆಹಿಟ್ಟನ್ನೂ ಸೇರಿಸಿ ಚೆನ್ನಾಗಿ ಕಲೆಸಿಕೊಳ್ಳಿ. ನಾನ್‌ಸ್ಟಿಕ್ ತವಾ ಬಿಸಿ ಮಾಡಿಕೊಂಡು ಇದಕ್ಕೆ ಸ್ವಲ್ಪ ನೀರು ಚಿಮುಕಿಸಿಕೊಳ್ಳಿ. ಬಳಿಕ ಸಣ್ಣ ಬಟ್ಟೆಯಿಂದ ಒರೆಸಿಕೊಳ್ಳಿ. ಈಗ ತವಾದ ಮೇಲೆ ಒಂದು ಸೌಟು ಹಿಟ್ಟನ್ನು ಸುರಿಯಿರಿ. ವೃತ್ತಾಕಾರವಾಗಿ ದೋಸೆಯಂತೆ ಸುತ್ತಲೂ ಹರಡಿ ಹಾಗೂ 45 ಸೆಕೆಂಡುಗಳ ಕಾಲ ಮಧ್ಯಮ ಉರಿಯಲ್ಲಿ ಬೇಯಿಸಿಕೊಳ್ಳಿ. ದೋಸೆಯ ಸುತ್ತಲೂ ಎಣ್ಣೆಯನ್ನು ಸುರಿಯಿರಿ. ದೋಸೆಯ ಮೇಲೆ ಸಣ್ಣದಾಗಿ ಕತ್ತರಿಸಿಕೊಂಡಿದ್ದ ಎಲ್ಲಾ ತರಕಾರಿಗಳನ್ನೂ ಹಾಕಿ. ಮಧ್ಯಮ ಉರಿಯಲ್ಲಿ ಎರಡು ನಿಮಿಷಗಳ ಕಾಲ ತಿಳಿಕಂದು ಬಣ್ಣಕ್ಕೆ ತಿರುಗುವವರೆಗೂ ಬೇಯಿಸಿಕೊಳ್ಳಿ. ಉತ್ತಪ್ಪದ ಎರಡೂ ಕಡೆ ಚೆನ್ನಾಗಿ ಕಾಯಿಸಿಕೊಳ್ಳಿ. ಬಿಸಿ ಬಿಸಿ ಉತ್ತಪ್ಪವನ್ನು ತೆಂಗಿನಕಾಯಿ ಚಟ್ನಿ ಇಲ್ಲವೇ ಸಾಂಬಾರಿನೊಂದಿಗೆ ಸವಿಯಿರಿ.

ಮೈಸೂರು ಮಸಾಲ ಉತ್ತಪ್ಪ

ಬೇಕಾಗುವ ಸಾಮಗ್ರಿಗಳು: ತಯಾರಿಸಿಟ್ಟುಕೊಂಡ ದೋಸೆ ಹಿಟ್ಟು - 4ಕಪ್, ಕತ್ತರಿಸಿದ ದೊಡ್ಡ ಮೆಣಸಿನಕಾಯಿ - 2 ಟೇಬಲ್ ಚಮಚ, ಕೆಂಪು ಮೆಣಸು ಹಾಗೂ ಬೆಳ್ಳುಳ್ಳಿ ಚಟ್ನಿ - 6 ಚಮಚ, ಕತ್ತರಿಸಿದ ಈರುಳ್ಳಿ - 8 ಚಮಚ, ಕತ್ತರಿಸಿದ ಟೊಮೆಟೊ - 8 ಚಮಚ, ಖಾರದಪುಡಿ - 2 ಚಮಚ, ಚಾಟ್ ಮಸಾಲಾ - 1 ಚಮಚ, ಕೊತ್ತಂಬರಿ ಸೊಪ್ಪು - 4 ಚಮಚ, ಕ್ಯಾರೆಟ್ - 1 ಚಿಕ್ಕದು, ಬೀಟ್ರೂಟ್ - 1/2, ತಯಾರಿಸಿಟ್ಟುಕೊಂಡ ಆಲೂ ಬಾಜಿ ಸ್ವಲ್ಪ, ಬೆಣ್ಣೆ - 4 ಚಮಚ, ಉಪ್ಪು ರುಚಿಗೆ ತಕ್ಕಷ್ಟು, ತುಪ್ಪ 4 ಚಮಚ, ಕಾಯಿ ಚಟ್ನಿ 6 ಚಮಚ,

ಮಾಡುವ ವಿಧಾನ: ದೋಸೆಹಿಟ್ಟಿಗೆ ನೀರು ಹಾಗೂ ಉಪ್ಪನ್ನು ಸೇರಿಸಿಕೊಂಡು ಚೆನ್ನಾಗಿ ಮಿಶ್ರಣ ಮಾಡಿಕೊಳ್ಳಿ. ಈಗ ಒಂದು ನಾನ್‌ಸ್ಟಿಕ್ ತವಾ ತೆಗೆದುಕೊಂಡು ಅದನ್ನು ಒಲೆಯ ಮೇಲೆ ಬಿಸಿ ಮಾಡಲು ಇಡಿ. ಈಗ ಬಿಸಿ ಮಾಡಿದ ತವಾಗೆ ಒಂದೆರಡು ಹನಿ ನೀರು ಚಿಮುಕಿಸಿಕೊಳ್ಳಿ. ಬಟ್ಟೆಯಿಂದ ತವಾವನ್ನು ಚೆನ್ನಾಗಿ ಉಜ್ಜಿಕೊಳ್ಳಿ. ಈಗ ಒಂದು ಸೌಟು ದೋಸೆ ಹಿಟ್ಟನ್ನು ತವಾದ ಮೇಲೆ ಹಾಕಿ ವೃತ್ತಾಕಾರದಲ್ಲಿ ಹರಡಿಕೊಳ್ಳಿ. ಈಗ ದೋಸೆಯ ಮೇಲೆ ಆಲೂ ಬಾಜಿ, 2 ಚಮಚ ಈರುಳ್ಳಿ, 2 ಚಮಚ ಟೊಮೆಟೊ, 1 ಚಮಚ ದೊಡ್ಡ ಮೆಣಸಿನಕಾಯಿ, ಮೆಣಸು ಬೆಳ್ಳುಳ್ಳಿ ಚಟ್ನಿ ಹಾಗೂ ಕಾಯಿ ಚಟ್ನಿ ಹಾಕಿಕೊಳ್ಳಿ. ಇದಾದ ಬಳಿಕ 1/2 ಚಮಚ ಚಾಟ್ ಮಸಾಲಾ ಹಾಗೂ 1 ಚಮಚ ಕೊತ್ತಂಬರಿಯನ್ನೂ ಸೇರಿಸಿ. ಕೊನೆಯಲ್ಲಿ ತುರಿದಿಟ್ಟುಕೊಂಡ ಈರುಳ್ಳಿ ಹಾಗೂ ಕ್ಯಾರಟ್‌ ಹರಡಿ. ಎರಡೂ ಕಡೆ ಚೆನ್ನಾಗಿ ಬೇಯಿಸಿದರೆ ನಿಮ್ಮ ಮುಂದೆ ಮೈಸೂರು ಮಸಾಲಾ ಉತ್ತಪ್ಪ ಸವಿಯಲು ಸಿದ್ಧ.

ಪನ್ನೀರ್ ಉತ್ತಪ್ಪ

ಬೇಕಾಗುವ ಸಾಮಗ್ರಿಗಳು: ಪನ್ನೀರ್ - 100 ಗ್ರಾಂ, ದೋಸೆಹಿಟ್ಟು - 2 ಕಪ್, ಸಣ್ಣಗೆ ಕತ್ತರಿಸಿದ ಈರುಳ್ಳಿ - 1, ಸಣ್ಣಗೆ ಕತ್ತರಿಸಿದ ಟೊಮೆಟೊ - 1 ಚಮಚ, ಬೇವಿನಸೊಪ್ಪು - 8-10 ಎಲೆಗಳು, ಕೊತ್ತಂಬರಿ ಸೊಪ್ಪು - 2 ಚಮಚ, ದೊಡ್ಡ ಮೆಣಸಿನಕಾಯಿ 1 ಚಮಚ, ಹಸಿ ಮೆಣಸಿನಕಾಯಿ 2-3 ಚಮಚ, ಕೊತ್ತಂಬರಿ ಪುಡಿ 1 ಚಮಚ, ಖಾರದ ಪುಡಿ 1 ಚಮಚ, ಸಾಂಬಾರ್ ಪುಡಿ, ತೆಂಗಿನ ಎಣ್ಣೆ, ರುಚಿಗೆ ತಕ್ಕಷ್ಟು ಉಪ್ಪು,

ಮಾಡುವ ವಿಧಾನ: ಒಂದು ಬೌಲ್ ತೆಗೆದುಕೊಂಡು ಈರುಳ್ಳಿ, ಟೊಮೆಟೊ, ಕರಿಬೇವಿನ ಸೊಪ್ಪು, ಕೊತ್ತಂಬರಿ ಸೊಪ್ಪು, ಹಸಿರು ಕ್ಯಾಪ್ಸಿಕಂ, ಹಸಿ ಮೆಣಸಿನಕಾಯಿ, ಧನಿಯಾ ಪುಡಿ, ಮೆಣಸಿನ ಪುಡಿ, ಸಾಂಬಾರ್ ಪುಡಿ, ತೆಂಗಿನ ಎಣ್ಣೆ, ಉಪ್ಪು ಮತ್ತು ಪನೀರ್ ಸೇರಿದಂತೆ ಎಲ್ಲಾ ಪದಾರ್ಥಗಳನ್ನು ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿ. ತವಾದಲ್ಲಿ ಎಣ್ಣೆ ಬಿಸಿ ಮಾಡಿ ಮತ್ತು ದೋಸೆ ಹಿಟ್ಟನ್ನು ವೃತ್ತಾಕಾರವಾಗಿ ಹರಡಿ. ಮೇಲಿನಿಂದ ಪನ್ನೀರು ಹಾಕಿ. ದೋಸೆಯ ತಳವು ಕಂದು ಬಣ್ಣಕ್ಕೆ ತಿರುಗುವವರೆಗೆ ಎರಡರಿಂದ ಮೂರು ನಿಮಿಷಗಳ ಕಾಲ ಉತ್ತಪ್ಪವನ್ನು ಬೇಯಿಸಿ. ಕೊತ್ತಂಬರಿ ಸೊಪ್ಪಿನಿಂದ ಉತ್ತಪ್ಪವನ್ನು ಅಲಂಕರಿಸಿ ತೆಂಗಿನಕಾಯಿ ಚಟ್ನಿಯೊಂದಿಗೆ ಸವಿಯಲು ನೀಡಿ.

ವಿಭಾಗ