ಮನೆಯಲ್ಲಿ ತರಕಾರಿ ಇಲ್ಲ ಎಂದಾಗ ಈರುಳ್ಳಿ ಮಸಾಲ ಕರಿ ಮಾಡಿ, ಇದರ ರುಚಿಗೆ ಊಟ ಎರಡು ತುತ್ತು ಹೆಚ್ಚು ಸೇರೋದು ಪಕ್ಕಾ
ಮನೆಯಲ್ಲಿ ತರಕಾರಿಯೆಲ್ಲಾ ಖಾಲಿಯಾದಾಗ ಏನ್ ಸಾಂಬಾರ್ ಮಾಡೋದು ಎಂಬ ಚಿಂತೆ ಎದುರಾಗೋದು ಸಹಜ. ನಿಮ್ಮಲ್ಲೂ ಈ ರೀತಿ ಪರಿಸ್ಥಿತಿ ಬಂದ್ರೆ ಈರುಳ್ಳಿ ಮಸಾಲ ಕರಿ ಮಾಡಿ ನೋಡಿ. ಇದರ ರುಚಿಗೆ ನಿಮಗೆ ಎರಡು ತುತ್ತು ಊಟ ಹೆಚ್ಚಿಗೆ ಸೇರೋದು ಖಂಡಿತ. ಇದನ್ನೂ ಮಾಡೋದು ಬಲು ಸುಲಭ. ಅನ್ನಕ್ಕೆ ಮಾತ್ರವಲ್ಲ ಚಪಾತಿ, ದೋಸೆಗೂ ಈ ಈರುಳ್ಳಿ ಕರಿ ಪಕ್ಕಾ ಹೊಂದುತ್ತೆ, ಟ್ರೈ ಮಾಡಿ ನೋಡಿ.
ಸಾಮಾನ್ಯವಾಗಿ ಎಲ್ಲರ ಮನೆಯಲ್ಲಿ ಸಾಂಬಾರಿಗೆ ಈರುಳ್ಳಿ ಬಳಸುತ್ತಾರೆ. ಆದರೆ ಈರುಳ್ಳಿಯಿಂದಲೇ ಸಾಂಬಾರ್ ಮಾಡಬಹುದು ಎಂಬುದು ಹಲವರಿಗೆ ತಿಳಿದಿಲ್ಲ. ನಿಮ್ಮ ಮನೆಯಲ್ಲಿ ತರಕಾರಿಗಳೇ ಇಲ್ಲ ಎಂದಾಗ ಏನಪ್ಪಾ ಸಾಂಬಾರ್ ಮಾಡ್ಲಿ ಎನ್ನುವ ಚಿಂತೆ ಕಾಡುತ್ತೆ. ಹೊರಗೆ ಹೋಗಿ ತಿನ್ನೋಣ ಅಂದ್ರೆ ಆರೋಗ್ಯ ಕೆಡುತ್ತೆ, ಅದಕ್ಕಾಗಿ ನೀವು ಚಿಂತಿಸುವ ಅಗತ್ಯವಿಲ್ಲ. ಈರುಳ್ಳಿ ಒಂದಿದ್ರೆ ಸಾಕು ರುಚಿಕರವಾದ ಈರುಳ್ಳಿ ಮಸಾಲ ಕರಿ ತಯಾರಿಸಬಹುದು.
ಈರುಳ್ಳಿ ಮಸಾಲಾ ಕರಿಯನ್ನು ಬಿಸಿ ಅನ್ನದೊಂದಿಗೆ ಬೆರೆಸಿ ತಿನ್ನುತ್ತಿದ್ದರೆ ಆಹಾ ಇದರ ರುಚಿಗೆ ನೀವು ಫಿದಾ ಆಗೋದು ಖಂಡಿತ. ಈರುಳ್ಳಿ ಮಸಾಲ ಕರಿಗೆ ನೀವು ಅಗತ್ಯವಿದ್ದರೆ ಟೊಮೆಟೊವನ್ನು ಕೂಡ ಬಳಸಬಹುದು. ಟೊಮೆಟೊ ಇಲ್ಲದಿದ್ದರೂ ಈ ಮೇಲೋಗರ ರುಚಿಕರವಾಗಿರುತ್ತದೆ.
ಈರುಳ್ಳಿ ಮಸಾಲಾ ಕರಿಗೆ ಬೇಕಾಗುವ ಸಾಮಗ್ರಿಗಳು
ಈರುಳ್ಳಿ - ನಾಲ್ಕು, ತುರಿದ ತೆಂಗಿನಕಾಯಿ - ಅರ್ಧ ಕಪ್, ಅರಿಸಿನ - ಅರ್ಧ ಚಮಚ, ಬೆಳ್ಳುಳ್ಳಿ ಎಸಳು - ಹತ್ತು, ಮೆಣಸಿನಕಾಯಿ - ಒಂದು ಚಮಚ, ಉಪ್ಪು - ರುಚಿಗೆ, ಸಾಸಿವೆ - ಅರ್ಧ ಚಮಚ, ಕರಿಬೇವು - ಒಂದು ಮುಷ್ಟಿ, ಜೀರಿಗೆ - ಅರ್ಧ ಚಮಚ, ಕರಿಮೆಣಸು - ನಾಲ್ಕು, ಖಾರದಪುಡಿ – ಕಾಲು ಚಮಚ, ಮೆಂತ್ಯ - ಕಾಲು ಚಮಚ,ಎಣ್ಣೆ - ಸಾಕಷ್ಟು, ಕಾಳುಮೆಣಸು - ನಾಲ್ಕು,ಹುಣಸೆಹಣ್ಣು - ನಿಂಬೆಹಣ್ಣಿನ ಗಾತ್ರದ್ದು
ಈರುಳ್ಳಿ ಮಸಾಲಾ ಕರಿ ಮಾಡುವ ವಿಧಾನ
ಮೊದಲು ಮಸಾಲಾ ತಯಾರಿಸಿಕೊಳ್ಳಿ. ಅದಕ್ಕಾಗಿ ಒಲೆಯ ಮೇಲೆ ಬಾಣಲಿ ಇಟ್ಟು ತೆಂಗಿನತುರಿ ಹಾಕಿ ಹುರಿಯಿರಿ. ಕೊತ್ತಂಬರಿ, ಮೆಣಸು, ಕರಿಮೆಣಸು, ಮೆಂತ್ಯ ಮತ್ತು ಜೀರಿಗೆ ಹಾಕಿ ಹುರಿಯಿರಿ. ಇವೆಲ್ಲವನ್ನೂ ಮಿಕ್ಸಿ ಜಾರ್‌ನಲ್ಲಿ ಹಾಕಿ ಹುಣಸೆ ಹಣ್ಣನ್ನು ಸೇರಿಸಿ ರುಬ್ಬಿಕೊಳ್ಳಿ. ಅಗತ್ಯವಿದ್ದರೆ ನೀರು ಸೇರಿಸಿ ಅದು ನುಣ್ಣಗೆ ಮಸಾಲೆ ರುಬ್ಬಿಕೊಳ್ಳಿ. ಅದನ್ನು ಹೊರ ತೆಗೆದು ಪಕ್ಕಕ್ಕೆ ಇರಿಸಿ.ಈಗ ಒಲೆಯ ಪಾತ್ರೆ ಇಟ್ಟು ಎಣ್ಣೆ ಹಾಕಿ. ಬಿಸಿಯಾದ ಮೇಲೆ ಸಾಸಿವೆ ಸೇರಿಸಿ. ನಂತರ ಕಾಳುಮೆಣಸು ಮತ್ತು ಕರಿಬೇವಿನ ಎಲೆಗಳನ್ನು ಹಾಕಿ ಫ್ರೈ ಮಾಡಿ. ನಂತರ ಈರುಳ್ಳಿ ಚೂರುಗಳು ಮತ್ತು ಬೆಳ್ಳುಳ್ಳಿ ಎಸಳುಗಳನ್ನು ಹಾಕಿ ಫ್ರೈ ಮಾಡಿ. ಸಾಂಬಾರ್ ಈರುಳ್ಳಿ ಬಳಸುವುದಿದ್ದರೆ ಕತ್ತರಿಸುವ ಅಗತ್ಯವಿಲ್ಲ. ಅವುಗಳನ್ನು ಕತ್ತರಿಸದೆಯೇ ಸೇರಿಸಬಹುದು. ಸಾಮಾನ್ಯ ಈರುಳ್ಳಿಯನ್ನು ಸಣ್ಣ ತುಂಡುಗಳಾಗಿ ಕತ್ತರಿಸಬೇಕು. ಇವುಗಳು ಬೇಯಿಸುತ್ತಿರುವಾಗ, ಮೊದಲು ರುಬ್ಬಿದ ಮಸಾಲಾ ಪೇಸ್ಟ್ ಸೇರಿಸಿ ಮತ್ತು ಚೆನ್ನಾಗಿ ಮಿಶ್ರಣ ಮಾಡಿ. ರುಚಿಗೆ ತಕ್ಕಷ್ಟು ಉಪ್ಪು, ಮೆಣಸು ಮತ್ತು ಅರಿಸಿನ ಪುಡಿ ಸೇರಿಸಿ. ಹದಕ್ಕೆ ತಕ್ಕಂತೆ ನೀರು ಸೇರಿಸಿ. ಈಗ ಅದನ್ನು ಕಡಿಮೆ ಉರಿಯಲ್ಲಿ ಇಟ್ಟು ಮುಚ್ಚಳ ಮುಚ್ಚಿ ಕನಿಷ್ಠ ಕಾಲು ಗಂಟೆ ಹೊತ್ತು ಚೆನ್ನಾಗಿ ಕುದಿಸಿ. ಮುಚ್ಚಳ ತೆಗೆದ ನಂತರ ಈರುಳ್ಳಿ ಮಸಾಲಾ ಕರಿ ರೆಡಿ. ಈ ಮಸಾಲ ಕರಿ ಸಖತ್ ಟೇಸ್ಟಿ ಆಗಿರೋದು ಸುಳ್ಳಲ್ಲ.
ಈರುಳ್ಳಿ ಕರಿಬೇವು ನಮ್ಮ ದೇಹಕ್ಕೆ ತುಂಬಾ ಒಳ್ಳೆಯದು ಮಧುಮೇಹಿಗಳಲ್ಲಿ ರಕ್ತದಲ್ಲಿನ ಸಕ್ಕರೆ ಅಂಶವನ್ನು ನಿಯಂತ್ರಿಸುತ್ತದೆ. ಈರುಳ್ಳಿ ಸೇವನೆಯಿಂದ ಜೀರ್ಣಕ್ರಿಯೆಯು ಉತ್ತಮವಾಗುತ್ತದೆ.
ವಿಭಾಗ