Veg Kheema Recipe: ಇಲ್ಲಿದೆ ವೆಜ್ ಕೀಮಾ ಮಸಾಲಾ ರೆಸಿಪಿ; ರೋಟಿ ಚಪಾತಿ ಅನ್ನದ ನೆಂಜಿಕೊಳ್ಳಲು ಇದು ಬೆಸ್ಟ್ ಕಾಂಬಿನೇಷನ್
ವೆಜ್ ಕೀಮಾ ಮಸಾಲಾವನ್ನು ನೀವು ಪಂಜಾಬಿ ಹೋಟೆಲ್‌ಗಳಲ್ಲಿ ತಿಂದಿರುತ್ತೀರಿ. ಇದು ರುಚಿಯಂತೂ ಸಖತ್ ಆಗಿರುತ್ತೆ. ಇದನ್ನು ಮನೆಯಲ್ಲೂ ಮಾಡಿಕೊಳ್ಳಬಹುದು, ರೆಸಿಪಿ ಇಲ್ಲಿದೆ.

ಕೀಮಾ ಎಂದಾಕ್ಷಣ ಮಟನ್ ನೆನಪಾಗುತ್ತೆ. ಆದರೆ ವೆಜ್‌ನಲ್ಲೂ ಕೀಮಾ ಮಾಡಬಹುದು. ಪಂಜಾಬಿ ಆಹಾರಗಳು ನಿಮಗೆ ಇಷ್ಟವಾದ್ರೆ, ಪಂಜಾಬಿ ಹೋಟೆಲ್‌ಗಳಲ್ಲಿ ತಿಂದಿದ್ರೆ ನಿಮಗೆ ವೆಜ್ ಕೀಮಾ ಮಸಾಲ ಪರಿಚಿತವಾಗಿರುತ್ತೆ. ವೆಜ್ ಕೀಮಾ ರುಚಿಗೆ ಮಾತ್ರವಲ್ಲ, ಆರೋಗ್ಯಕ್ಕೂ ಉತ್ತಮ. ಯಾಕೆಂದರೆ ಇದರಲ್ಲಿ ಸಾಕಷ್ಟು ತರಕಾರಿಗಳನ್ನು ಸೇರಿಸಲಾಗುತ್ತದೆ.
ಮಟನ್ ಕೀಮಾ ಹಾಗೂ ಚಿಕನ್ ಕೀಮಾಕ್ಕಿಂತ ದುಪ್ಪಟ್ಟು ಪೋಷಕಾಂಶ ವೆಜ್ ಕೀಮಾದಿಂದ ದೊರೆಯುತ್ತದೆ. ಈ ಪಂಜಾಬಿ ಖಾದ್ಯವನ್ನು ಮನೆಯಲ್ಲೂ ಸುಲಭವಾಗಿ ಮಾಡಿಕೊಳ್ಳಬಹುದು. ಇದನ್ನು ಅನ್ನ, ರೋಟಿ, ಚಪಾತಿ ಜೊತೆ ತಿನ್ನಲು ಸಖತ್ ಆಗಿರುತ್ತೆ. ಹಾಗಾದರೆ ಇದನ್ನು ಮಾಡಲು ಏನೆಲ್ಲಾ ಬೇಕು, ಮಾಡೋದು ಹೇಗೆ ಎಂಬ ವಿವರ ಇಲ್ಲಿದೆ.
ವೆಜ್ ಕೀಮಾ ಮಸಾಲ ರೆಸಿಪಿ
ಬೇಕಾಗುವ ಸಾಮಗ್ರಿಗಳು: ಚಿಕ್ಕದಾಗಿ ಹೆಚ್ಚಿದ ಕ್ಯಾಪ್ಸಿಕಂ – ಅರ್ಧ ಕಪ್, ಚಿಕ್ಕದಾಗಿ ಹೆಚ್ಚಿದ ಈರುಳ್ಳಿ – ಅರ್ಧ ಕಪ್, ಬೇಯಿಸಿದ ಫ್ರೆಂಚ್ ಬೀನ್ಸ್ – ಅರ್ಧ ಕಪ್, ಕ್ಯಾರೆಟ್ ಪ್ಯೂರಿ – ಅರ್ಧ ಕಪ್, ಬಟಾಣಿ – ಕಾಲು ಕಪ್, ಕೊತ್ತಂಬರಿ ಪುಡಿ – 1 ಚಮಚ, ಜೀರಿಗೆ ಪುಡಿ – 1 ಚಮಚ, ಗರಂ ಮಸಾಲ – ಅರ್ಧ ಚಮಚ, ಖಾರದ ಪುಡಿ – 1 ಚಮಚ, ಶುಂಠಿ – ಬೆಳ್ಳುಳ್ಳಿ ಪೇಸ್ಟ್ – 1ಚಮಚ, ಚಿಕ್ಕದಾಗಿ ಹೆಚ್ಚಿದ ಕೊತ್ತಂಬರಿ ಸೊಪ್ಪು – 1 ಚಮಚ, ಹಸಿಮೆಣಸು – 2, ಟೊಮೆಟೊ – 3, ಕಸೂರಿ ಮೇಥಿ – 1 ಚಮಚ, ಉಪ್ಪು – ರುಚಿಗೆ, ಬೆಳುಳ್ಳಿ ಪೇಸ್ಟ್ – 2 ಚಮಚ, ಎಣ್ಣೆ – ಬೇಕಾದಷ್ಟು, ತುಪ್ಪ – ಎರಡು ಚಮಚ, ನೀರು – ಸಾಕಷ್ಟು
ವೆಜ್ ಕೀಮಾ ಮಸಾಲಾ ಮಾಡುವ ವಿಧಾನ
ಒಲೆಯ ಮೇಲೆ ಪ್ಯಾನ್ ಇಟ್ಟು ಅದಕ್ಕೆ ಎಣ್ಣೆ ಮತ್ತು ತುಪ್ಪ ಸೇರಿಸಿ. ಬಿಸಿಯಾದ ಮೇಲೆ ಹೆಚ್ಚಿಟ್ಟುಕೊಂಡ ಬೆಳ್ಳುಳ್ಳಿ, ಹೆಚ್ಚಿದ ಹಸಿ ಮೆಣಸು ಮತ್ತು ಜೀರಿಗೆ ಸೇರಿಸಿ ಹುರಿಯಿರಿ. ಜೀರಿಗೆ ಪರಿಮಳ ಬರುವಾಗ ಈರುಳ್ಳಿಯನ್ನೂ ಸೇರಿಸಿ ಹುರಿದುಕೊಳ್ಳಿ. ಈರುಳ್ಳಿ ಬಣ್ಣ ಬದಲಾಗುವವರೆಗೆ ಹುರಿದುಕೊಳ್ಳಿ. ಈಗ ಅದಕ್ಕೆ ಖಾರದಪುಡಿ, ಜೀರಿಗೆ ಪುಡಿ, ಗರಂ ಮಸಾಲ, ಕೊತ್ತಂಬರಿ ಪುಡಿ ಮತ್ತು ರುಚಿಗೆ ತಕ್ಕಷ್ಟು ಉಪ್ಪು ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿ. ಈ ಎಲ್ಲವನ್ನೂ ಹಸಿವಾಸನೆ ಹೋಗುವವರೆಗೂ ಹುರಿದುಕೊಳ್ಳಿ.
ಈಗ ಹೆಚ್ಚಿದ ಕ್ಯಾಪ್ಸಿಕಂ ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿ. ಟೊಮೆಟೊವನ್ನು ಮಿಶ್ರಣಕ್ಕೆ ಸೇರಿಸಿ, ಟೊಮೆಟೊ ಚೆನ್ನಾಗಿ ಬೆಂದು ಮೃದುವಾಗುವವರೆಗೂ ಬೇಯಿಸಿ. ನಂತರ ಹೆಚ್ಚಿಟ್ಟುಕೊಂಡ ಕ್ಯಾರೆಟ್, ಬೇಯಿಸಿಟ್ಟುಕೊಂಡ ಫ್ರೆಂಚ್ ಬೀನ್ಸ್ ಸೇರಿಸಿ. ಹಸಿರು ಬಟಾಣಿ ಸೇರಿಸಿ ಎಲ್ಲವನ್ನೂ ಚೆನ್ನಾಗಿ ಮಿಶ್ರಣ ಮಾಡಿ. ಈ ಮಿಶ್ರಣವನ್ನು ಕುದಿಸಲು ಅಗತ್ಯ ಇರುವಷ್ಟು ನೀರು ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿ. ಎಣ್ಣೆ ಮೇಲಕ್ಕೆ ತೇಲುವವರೆಗೆ ಮುಚ್ಚಿ ಕಡಿಮೆ ಉರಿಯಲ್ಲಿ ಬೇಯಿಸಿ. ಇದಕ್ಕೆ ಕಸೂರಿ ಮೇಥಿ ಮತ್ತು ಕೊತ್ತಂಬರಿ ಸೊಪ್ಪು ಸೇರಿಸಿ ಮಿಶ್ರಣ ಮಾಡಿ ನಂತರ ಒಲೆ ಆಫ್ ಮಾಡಿ. ಅಷ್ಟೇ, ರುಚಿಕರವಾದ ವೆಜ್ ಕೀಮಾ ಮಸಾಲಾ ಸಿದ್ಧವಾಗಿದೆ. ಇದನ್ನು ಅನ್ನದೊಂದಿಗೆ ಬೆರೆಸಿ ತಿನ್ನಲು ಅಥವಾ ರೊಟ್ಟಿ, ಚಪಾತಿಯೊಂದಿಗೆ ತಿಂದರೆ ರುಚಿಕರವಾಗಿರುತ್ತದೆ. ಇದರ ರುಚಿ ಎಲ್ಲರಿಗೂ ಇಷ್ಟವಾಗುತ್ತದೆ.
ಮಟನ್ ಕೀಮಾ ಮಸಾಲಾದಲ್ಲಿ ಆರೋಗ್ಯಕ್ಕೆ ಉತ್ತಮ ಎನ್ನಿಸುವ ಅನೇಕ ತರಕಾರಿ ಸೇರಿಸಲಾಗುತ್ತದೆ. ಇವುಗಳಿಂದ ದೇಹಕ್ಕೆ ಸಾಕಷ್ಟು ಪೋಷಕಾಂಶಗಳು ದೊರೆಯುತ್ತವೆ. ಟೊಮೆಟೊ, ಕ್ಯಾರೆಟ್, ಬೀನ್ಸ್, ಹಸಿರು ಮೆಣಸಿನಕಾಯಿ, ಈರುಳ್ಳಿ ಮತ್ತು ಕ್ಯಾಪ್ಸಿಕಂಗಳು ಸಹ ದೇಹಾರೋಗ್ಯಕ್ಕೆ ಉತ್ತಮ. ರುಚಿಯೂ ಅದ್ಭುತವಾಗಿರುವ ಈ ವೆಜ್ ಕೀಮಾ ಒಮ್ಮೆ ತಿಂದರೆ ಮತ್ತೆ ಮತ್ತೆ ತಿನ್ನಬೇಕು ಅನ್ನಿಸುತ್ತೆ.

ವಿಭಾಗ