ಹೆಸರು ಕೇಳಿದ್ರೆ ಬಾಯಲ್ಲಿ ನೀರೂರುವ ನಿಂಬೆಹಣ್ಣಿನ ಗೊಜ್ಜು ರೆಸಿಪಿ ಇಲ್ಲಿದೆ, ಹಳೆಕಾಲದ ಖಾದ್ಯವಾದ್ರೂ ರುಚಿಯಂತೂ ಸಖತ್ ಆಗಿರುತ್ತೆ, ಟ್ರೈ ಮಾಡಿ
ಬಹಳ ದಿನ ಆಯ್ತು ಬಾಯಿಗೆ ರುಚಿನೇ ಇಲ್ಲ, ಏನೇ ತಿಂದ್ರು ಇಷ್ಟ ಆಗ್ತಿಲ್ಲ ಅಂತ ಚಿಂತೆ ಮಾಡ್ತಾ ಇದೀರಾ, ನಿಮ್ಮ ಬಾಯಿ ರುಚಿ ಹೆಚ್ಚಬೇಕು ಅಂದ್ರೆ ನಿಂಬೆ ಹಣ್ಣಿನ ಗೊಜ್ಜು ಮಾಡಿ ತಿನ್ನಿ. ಇದೇನಪ್ಪಾ ಇದು, ನಿಂಬೆಹಣ್ಣಿನಿಂದಲೂ ಗೊಜ್ಜು ಮಾಡಬಹುದಾ ಕೇಳ್ಬೇಡಿ, ಖಂಡಿತ ಮಾಡಬಹುದು. ಇಲ್ಲಿದೆ ರೆಸಿಪಿ.

ಚಳಿಗಾಲ ಶುರುವಾದ್ರೆ ಮೈ ಕೈಗೆ ಮಾತ್ರವಲ್ಲ ನಾಲಿಗೆಗೂ ಜಡ್ಡು ಹಿಡಿದಂತಾಗುತ್ತದೆ. ಏನೇ ತಿಂದ್ರು ನಾಲಿಗೆಗೆ ರುಚಿ ಅನ್ನಿಸೊಲ್ಲ, ಅಂತಹ ಸಂದರ್ಭದಲ್ಲಿ ನಾಲಿಗೆಯ ರುಚಿಯ ಹೆಚ್ಚಿಸುವ ಖಾದ್ಯಗಳನ್ನು ತಿನ್ನಬೇಕು. ಏನಿದೆ ಅಂತ ಖಾದ್ಯ ಅಂತ ಯೋಚ್ನೆ ಮಾಡ್ತಾ ಇದೀರಾ, ಖಂಡಿತ ಇದೆ. ಅದುವೇ ನಿಂಬೆಹಣ್ಣಿನ ಗೊಜ್ಜು.
ನಿಂಬೆಹಣ್ಣಿನ ಗೊಜ್ಜಿನ ಬಗ್ಗೆ ಬಹುತೇಕರಿಗೆ ತಿಳಿದಿಲ್ಲ. ಇದೊಂದು ಸಾಂಪ್ರದಾಯಿಕ ಗೊಜ್ಜಿನ ರೆಸಿಪಿಯಾಗಿದ್ದು, ಮಲೆನಾಡು ಭಾಗದಲ್ಲಿ ಹಿಂದೆಲ್ಲಾ ಮಾಡುತ್ತಿದ್ದರು. ನಿಂಬೆಹಣ್ಣಿನ ಉಪ್ಪಿನಕಾಯಿ ನೀವು ಕೇಳಿರಬಹುದು, ಆದರೆ ನಿಂಬೆಹಣ್ಣಿನ ಗೊಜ್ಜು ಖಂಡಿತ ಅಪರೂಪವೇ, ಇಂತಹ ಅಪರೂಪದ ರೆಸಿಪಿಯನ್ನು Santrupthi Kitchen ಎಂಬ ಫೇಸ್‌ಬುಕ್ ಪುಟದಲ್ಲಿ ಪೋಸ್ಟ್ ಮಾಡಲಾಗಿದೆ. ಅವರೇ ಹೇಳಿದಂತೆ ಇದೊಂದು ಹಳೆಯ ಕಾಲದ ರೆಸಿಪಿ. ಹಾಗಾದರೆ ಇದನ್ನ ಮಾಡೋದು ಹೇಗೆ ನೋಡಿ.
ನಿಂಬೆಹಣ್ಣಿನ ಗೊಜ್ಜು
ಬೇಕಾಗುವ ಸಾಮಗ್ರಿಗಳು: ನಿಂಬೆಹಣ್ಣು – 1 (ಚೆನ್ನಾಗಿ ಹಣ್ಣಾಗಿರುವುದು), ತೆಂಗಿನಕಾಯಿ ತುರಿ – 1 ಕಪ್, ಒಣಮೆಣಸು – 3 ರಿಂದ 4, ಸಾಸಿವೆ – ಅರ್ಧ ಚಮಚ, ಅರಿಸಿನ – ಅರ್ಧ ಚಮಚ, ನೀರು – ಸ್ವಲ್ಪ, ಉಪ್ಪು – ರುಚಿಗೆ, ಬೆಲ್ಲ – 1 ಚಮಚ, ಮೊಸರು – 1ಸೌಟು
ಒಗ್ಗರಣೆ: ತೆಂಗಿನೆಣ್ಣೆ– ಅರ್ಧ ಚಮಚ, ಸಾಸಿವೆ – ಸ್ವಲ್ಪ, ಉದ್ದಿನಬೇಳೆ – ಸ್ವಲ್ಪ
ತಯಾರಿಸುವ ವಿಧಾನ: ಒಂದು ಪಾತ್ರೆಯಲ್ಲಿ ನೀರು ಹಾಕಿ ಅದರಲ್ಲಿ ನಿಂಬೆಹಣ್ಣು ಹಾಕಿ ಬೇಯಲು ಬಿಡಿ. ಒಂದು ಮಿಕ್ಸಿ ಜಾರಿಗೆ ತೆಂಗಿನತುರಿ, ಒಣಮೆಣಸು, ಸಾಸಿವೆ, ಅರಿಸಿನ ಹಾಗೂ ಸ್ವಲ್ಪ ನೀರು ಸೇರಿಸಿ ನುಣ್ಣಗೆ ರುಬ್ಬಿಕೊಳ್ಳಿ. ಬೇಯಸಿದ ನಿಂಬೆಹಣ್ಣನ್ನು ತಟ್ಟೆಯ ಮೇಲೆ ಹಾಕಿ ಚೆನ್ನಾಗಿ ಕಿವುಚಿ, ಇದರಿಂದ ಬೀಜ ಹೊರ ತೆಗೆಯಿರಿ. ನಂತರ ನಿಂಬೆಹಣ್ಣನ್ನು ಚಿಕ್ಕದಾಗಿ ಹೆಚ್ಚಿಕೊಳ್ಳಿ. ಒಂದು ಪಾತ್ರೆಯಲ್ಲಿ ಕಿವುಚಿ ಹೆಚ್ಚಿಕೊಂಡ ನಿಂಬೆಹಣ್ಣು, ರುಚಿಗೆ ತಕ್ಕಷ್ಟು ಉಪ್ಪು, ಬೆಲ್ಲ, ರುಬ್ಬಿಕೊಂಡ ಮಿಶ್ರಣ ಈ ಎಲ್ಲವನ್ನೂ ಹಾಕಿ ಚೆನ್ನಾಗಿ ಮಿಶ್ರಣ ಮಾಡಿ. ಈ ಎಲ್ಲವನ್ನೂ ಚೆನ್ನಾಗಿ ಮಿಶ್ರಣ ಮಾಡಿ ರುಚಿ ನೋಡಿ. ನಂತರ 1 ದೊಡ್ಡ ಚಮಚ ದಪ್ಪ ಮೊಸರು ಸೇರಿಸಿ ಮಿಶ್ರಣ ಮಾಡಿ. ಕೊನೆಯಲ್ಲಿ ತೆಂಗಿನೆಣ್ಣೆ ಒಗ್ಗರಣೆ ಹಾಕಿ. ಈಗ ನಿಮ್ಮ ಮುಂದೆ ರುಚಿಯಾದ ನಿಂಬೆಹಣ್ಣಿನ ಗೊಜ್ಜು ತಿನ್ನಲು ಸಿದ್ಧ.
ವಿಭಾಗ