Sambar Powder: ಸಾಂಬಾರ್‌ಗೆ ಸಖತ್ ಟೇಸ್ಟ್ ಸಿಗುವ ಜೊತೆ ಘಮವೂ ಹೆಚ್ಚಬೇಕು ಅಂದ್ರೆ ಮನೆಯಲ್ಲಿ ಈ ರೀತಿ ಸಾಂಬಾರ್ ಪೌಡರ್ ತಯಾರಿಸಿ
ಮದುವೆಯಂತಹ ಕಾರ್ಯಕ್ರಮಗಳಲ್ಲಿ ಅನ್ನದ ಜೊತೆ ಸಾಂಬಾರ್ ತಿಂದಾಗ ಅದರ ರುಚಿಗೆ ನೀವು ಮಾರು ಹೋಗಿರುತ್ತೀರಿ. ವಾವ್ ಇಂತಹ ಸಾಂಬಾರ್ ಮನೆಯಲ್ಲೂ ಮಾಡಿದ್ರೆ ಹೇಗಿರುತ್ತೆ ಅಂತ ನೀವು ಯೋಚನೆ ಮಾಡಿರುತ್ತೀರಿ. ಈ ಸಾಂಬಾರ್ ಘಮ ಹೆಚ್ಚಿಸುವುದು ಸಾಂಬಾರ್ ಪುಡಿ. ಸಾಂಬಾರ್‌ಗೆ ರುಚಿ, ಪರಿಮಳ ಎರಡನ್ನೂ ನೀಡುವ ಸಖತ್ ಆಗಿರೋ ಸಾಂಬಾರ್ ಪೌಡರ್ ರೆಸಿಪಿ ಇದು.
ತರಕಾರಿ ಸಾಂಬಾರ್ ರುಚಿ ಆಗಬೇಕು ಅಂದ್ರೆ ಅದಕ್ಕೆ ಬಳಸುವ ಸಾಮಗ್ರಿಗಳು ಅಷ್ಟೇ ಮುಖ್ಯವಾಗುತ್ತದೆ, ರಸಂ ಪೌಡರ್ ಇದ್ರೆ ರಸಂ ಘಮ, ರುಚಿ ಹೇಗೆ ಹೆಚ್ಚುತ್ತೋ ಹಾಗೆಯೇ ಸಾಂಬಾರ್ ಪುಡಿ ಇದ್ರೆ ಸಾಂಬಾರ್‌ನ ರುಚಿ ಕೂಡ ಅಷ್ಟೇ ಹೆಚ್ಚುತ್ತೆ. ಯಾವುದೇ ತರಕಾರಿ ಸಾಂಬಾರ್ ಇರ್ಲಿ ಸಾಂಬಾರ್ ಪೌಡರ್ ಬಳಸಿದ್ರೆ ಸಾಂಬಾರ್ ರುಚಿ ಬದಲಾಗುತ್ತೆ. ಆ ದಿನ ಒಂದೆರಡು ತುತ್ತು ಅನ್ನ ಹೆಚ್ಚೇ ಸೇರುತ್ತೆ. ಮದುವೆ, ಗೃಹಪ್ರವೇಶದಂತಹ ಕಾರ್ಯಕ್ರಮಕ್ಕೆ ಹೋದಾಗ ಅಲ್ಲಿ ಅನ್ನ ಸಾಂಬಾರ್ ರುಚಿಗೆ ನೀವು ಫಿದಾ ಆಗಿರುತ್ತೀರಿ, ಅಂತಹ ಸಾಂಬಾರ್ ರುಚಿ ಮನೆಯಲ್ಲಿ ಮಾಡಿದಾಗಲೂ ಬರಬೇಕು ಅಂದ್ರೆ ಮನೆಯಲ್ಲೇ ಸಾಂಬಾರ್ ಪೌಡರ್ ತಯಾರಿಸಬೇಕು.
ಈ ಸಾಂಬಾರ್ ಪೌಡರ್ ಅನ್ನು ಒಮ್ಮೆ ತಯಾರಿಸಿ ಇಟ್ಟುಕೊಂಡರೆ 6 ತಿಂಗಳವರೆಗೆ ಬಳಸಬಹುದು. ಇದರ ರುಚಿ ಮಕ್ಕಳಿಗೂ ಅನ್ನ, ಸಾಂಬಾರ್ ತಿನ್ನುವಂತೆ ಮಾಡಬಹುದು. ಇದು ಮನೆಯಲ್ಲಿ ತಯಾರಿಸುವ ಕಾರಣ ಯಾವುದೇ ರಾಸಾಯನಿಕ ಬಳಸುವುದಿಲ್ಲ. ಆ ಕಾರಣಕ್ಕೆ ಆರೋಗ್ಯಕ್ಕೆ ಉತ್ತಮ. ಹಾಗಾದ್ರೆ ಈ ಸಾಂಬಾರ್ ಪೌಡರ್ ತಯಾರಿಸುವುದು ಹೇಗೆ ನೋಡಿ
ಸಾಂಬಾರ್ ಪೌಡರ್ ರೆಸಿಪಿ
ಬೇಕಾಗುವ ಸಾಮಗ್ರಿಗಳು: ಕಡಲೆಬೇಳೆ - ಒಂದೂವರೆ ಚಮಚ, ಸಿಪ್ಪೆ ಉದ್ದಿನಬೇಳೆ - ಒಂದೂವರೆ ಚಮಚ, ತೊಗರಿಬೇಳೆ - 1 ಚಮಚ, ಒಣಮೆಣಸು - 8 ರಿಂದ 12, ಕೊತ್ತಂಬರಿ ಕಾಳು - 1/4 ಕಪ್, ಮೆಂತ್ಯೆ - ಮುಕ್ಕಾಲು ಚಮಚ, ಕರಿಬೇವು - 10 ಎಸಳು, ಜೀರಿಗೆ - 2 ಚಮಚ, ಚಿಂಗು - ಚಿಟಿಕೆ, ಅರಿಸಿನ - ಕಾಲು ಚಮಚ
ತಯಾರಿಸುವ ವಿಧಾನ: ಪ್ಯಾನ್‌ವೊಂದನ್ನು ಮಧ್ಯಮ ಉರಿಯಲ್ಲಿ ಬಿಸಿ ಮಾಡಿ. ನಂತರ ಉರಿ ಸಣ್ಣ ಮಾಡಿ ಕಡಲೆಬೇಳೆ, ಉದ್ದಿನಬೇಳೆ, ತೊಗರಿಬೇಳೆ ಹಾಗೂ ಒಣಮೆಣಸನ್ನು ಹುರಿದುಕೊಳ್ಳಿ. ಕಡಲೆಬೇಳೆ, ಉದ್ದಿನಬೇಳೆ, ತೊಗರಿಬೇಳೆ ಹೊಂಬಣ್ಣಕ್ಕೆ ತಿರುಗಬೇಕು. ಕಡಿಮೆ ಮಾಡುವುದಿದ್ದರೆ ಎಲ್ಲವನ್ನೂ ಒಟ್ಟಿಗೆ ಹುರಿದುಕೊಳ್ಳಬಹುದು. ಹೆಚ್ಚಿಗೆ ಮಾಡುವವುದಿದ್ದರೆ ಎಲ್ಲವನ್ನೂ ಪ್ರತ್ಯೇಕವಾಗಿ ಹುರಿದುಕೊಳ್ಳಿ. ನಂತರ ಕೊತ್ತಂಬರಿ ಹಾಗೂ ಮೆಂತ್ಯ ಹುರಿದುಕೊಳ್ಳಿ. ಮೆಂತ್ಯೆ ಬಣ್ಣ ಬದಲಾಗಿ ಪರಿಮಳ ಬರುವವರೆಗೂ ಹುರಿದುಕೊಳ್ಳಬೇಕು. ಅದಕ್ಕೆ ಕರಿಬೇವು ಸೇರಿಸಿ ಚೆನ್ನಾಗಿ ಹುರಿದುಕೊಳ್ಳಬೇಕು. ಈ ಎಲ್ಲವನ್ನು ತೆಗೆದ ನಂತರ ಜೀರಿಗೆ ಹುರಿದುಕೊಳ್ಳಿ. ಬೇಳೆಗಳು, ಮೆಂತ್ಯೆ, ಧನಿಯಾ, ಮೆಣಸು, ಕರಿಬೇವು ಎಲ್ಲವೂ ಚೆನ್ನಾಗಿ ಹುರಿದಿರಬೇಕು. ಹಸಿ ಅಂಶ ಇರಬಾರದು. ಕೊನೆಯಲ್ಲಿ ಅರಿಸಿನ ಹಾಗೂ ಇಂಗು ಸೇರಿಸಿ. ಇದನ್ನು ಅಗಲವಾಗ ಪ್ಲೇಟ್‌ನಲ್ಲಿ ಹರಡಿ ಎಲ್ಲವನ್ನೂ ತಣ್ಣಗಾಗಲು ಬಿಡಿ. ಸಂಪೂರ್ಣ ತಣ್ಣದಾಗ ಮೇಲೆ ಮಿಕ್ಸಿ ಜಾರಿಗೆ ಬಾಕಿ. ನುಣ್ಣಗೆ ಪುಡಿ ಮಾಡಿ. ಇದನ್ನು ಗ್ಲಾಸ್ ಅಥವಾ ಸ್ಟೀಲ್ ಡಬ್ಬಿಯಲ್ಲಿ ಹಾಕಿಡಿ.
ಈ ರೀತಿ ಸಾಂಬಾರ್ ಪುಡಿ ಮಾಡಿಟ್ಟುಕೊಳ್ಳುವುದು ಕೆಲಸಕ್ಕೆ ಹೋಗುವ ಮಹಿಳೆಯರಿಗೆ ತುಂಬಾನೇ ಸಹಾಯವಾಗುತ್ತದೆ. ಇದು ಎಲ್ಲಾ ರೀತಿಯ ತರಕಾರಿ ಸಾಂಬಾರ್‌ಗೂ ಬಳಸಬಹುದು.
ವಿಭಾಗ