ಒಂದೇ ರುಚಿಯ ರಸಂ ತಿಂದು ಬೇಸರ ಆಗಿದ್ರೆ ವೀಳ್ಯದೆಲೆ ರಸಂ ಮಾಡಿ ನೋಡಿ, ಪಟ್ ಅಂತ ರೆಡಿ ಆಗೋ ಈ ರೆಸಿಪಿ ರುಚಿಗಷ್ಟೇ ಅಲ್ಲ ಆರೋಗ್ಯಕ್ಕೂ ಉತ್ತಮ
ಟೊಮೆಟೊ ರಸಂ, ಕಾಳುಮೆಣಸಿನ ರಸಂ, ಜೀರಿಗೆ ರಸಂ ಅಂತೆಲ್ಲಾ ನೀವು ಕೇಳಿರುತ್ತೀರಿ, ರುಚಿ ನೋಡಿರುತ್ತೀರಿ. ಆದರೆ ವೀಳ್ಯದೆಲೆಯಿಂದಲೂ ರಸಂ ಮಾಡಬಹುದು ಎನ್ನುವುದು ಹಲವರಿಗೆ ತಿಳಿದಿಲ್ಲ. ಈ ರಸಂ ರುಚಿಗೆ ಮಾತ್ರವಲ್ಲ ಆರೋಗ್ಯಕ್ಕೂ ಬಹಳ ಉತ್ತಮ. ವೀಳದ್ಯೆಲೆ ರಸಂ ಮಾಡೋದು ಹೇಗೆ, ಇದಕ್ಕೆ ಏನೆಲ್ಲಾ ಸಾಮಗ್ರಿಗಳು ಬೇಕು ಎನ್ನುವ ವಿವರ ಇಲ್ಲಿದೆ.
ಅನಾದಿ ಕಾಲದಿಂದಲೂ ಭಾರತದಲ್ಲಿ ಶುಭಕಾರ್ಯಗಳಲ್ಲಿ ವೀಳ್ಯದೆಲೆ ಬಳಸುವ ಪದ್ಧತಿ ಇದೆ. ಹಲವರು ಊಟದ ನಂತರ ಪಾನ್ ಅಥವಾ ಬೀಡಾ ಸೇವಿಸುತ್ತಾರೆ. ಇದರಿಂದ ಜೀರ್ಣಕ್ರಿಯೆ ಚೆನ್ನಾಗಿ ಆಗುತ್ತದೆ ಎಂದು ಹೇಳಲಾಗುತ್ತದೆ. ಹಲವಾರು ಆರೋಗ್ಯ ಗುಣಗಳನ್ನು ಹೊಂದಿರುವ ವೀಳದ್ಯೆಲೆಯಿಂದ ಕೆಲವೊಂದು ಖಾದ್ಯಗಳನ್ನೂ ತಯಾರಿಸಲಾಗುತ್ತದೆ. ಆದರೆ ವೀಳ್ಯದೆಲೆ ರಸಂ ಮಾಡಬಹುದು ಎನ್ನುವುದು ಹಲವರಿಗೆ ಗೊತ್ತಿಲ್ಲ.
ವೀಳ್ಯದೆಲೆ ರಸಂ ಊಟಕ್ಕೆ ಹೊಸ ರುಚಿ ನೀಡುವುದು ಮಾತ್ರವಲ್ಲ, ಶೀತ, ಕೆಮ್ಮ, ನೆಗಡಿಯಂತಹ ಸಮಸ್ಯೆಗಳನ್ನು ನಿವಾರಿಸಿ ದೇಹದಲ್ಲಿ ರೋಗನಿರೋಧಕ ಶಕ್ತಿ ಹೆಚ್ಚಲು ಸಹಾಯ ಮಾಡುತ್ತದೆ. ಇದು ಹಳೆಯ ಕಾಲದ ರೆಸಿಪಿ ಆದರೂ ಕೂಡ ಆರೋಗ್ಯಕ್ಕೆ ಉತ್ತಮವಾಗಿರುವ ಕಾರಣ ಋತುಮಾನ ಬದಲಾದಾಗ ಉಂಟಾಗುವ ಕಾಯಿಲೆಗಳಿಗೆ ಇದುವೇ ಮನೆಮದ್ದು ಎಂದರೂ ತಪ್ಪಲ್ಲ.
Santrupthi Kitchen ಎನ್ನುವ ಫೇಸ್‌ಬುಕ್ ಪುಟ ನಿರ್ವಹಣೆ ಮಾಡುತ್ತಿರುವ ವಿಡಿಯೊವನ್ನು ಹಂಚಿಕೊಂಡಿದ್ದಾರೆ. ಹಾಗಾದರೆ ವೀಳ್ಯದೆಲೆ ರಸಂ ಮಾಡುವುದು ಹೇಗೆ, ಇದಕ್ಕೆ ಏನೆಲ್ಲಾ ಬೇಕು ಎನ್ನುವ ವಿವರ ಇಲ್ಲಿದೆ.
ವೀಳ್ಯದೆಲೆ ರಸಂ ಮಾಡಲು ಬೇಕಾಗುವ ಸಾಮಗ್ರಿಗಳು
ವೀಳ್ಯದೆಲೆ – 5 ರಿಂದ 6, ಟೊಮೆಟೊ – 2, ಜೀರಗೆ – ಒಂದೂವರೆ ಚಮಚ, ಕಾಳುಮೆಣಸು – 1 ಚಮಚ, ಹುಣಸೆರಸ – 1 ಚಮಚ, ಬೆಲ್ಲ – ಅರ್ಧ ಚಮಚ, ಉಪ್ಪು– ರುಚಿಗೆ, ನೀರು – ಹದಕ್ಕೆ, ಅರಿಸಿನ – ಚಿಟಿಕೆ, ರಸಂ ಪುಡಿ – 1 ಚಮಚ, ಕರಿಬೇವು – 1 ಎಸಳು, ಕೊತ್ತಂಬರಿ ಸೊಪ್ಪು – ಸ್ವಲ್ಪ,
ಒಗ್ಗರಣೆಗೆ: ತುಪ್ಪ/ ಎಣ್ಣೆ, ಸಾಸಿವೆ, ಜೀರಗೆ, ಇಂಗು, ಒಣಮೆಣಸು
ವೀಳ್ಯದೆಲೆ ರಸಂ ಮಾಡುವ ವಿಧಾನ
ಮೊದಲು ಐದಾರು ಎಳೆ ವೀಳ್ಯದೆಲೆಯನ್ನು ಚೆನ್ನಾಗಿ ತೊಳೆದು ಅದರ ಮೇಲ್ಭಾಗದ ತೊಟ್ಟಿನಿಂದ ನಾರನ್ನು ತೆಗೆದುಕೊಳ್ಳಿ. ಎರಡು ಟೊಮೆಟೊವನ್ನು ಸಣ್ಣದಾಗಿ ಹೆಚ್ಚಿ ಮಿಕ್ಸಿ ಜಾರಿಗೆ ಹಾಕಿಕೊಳ್ಳಿ, ಅದರ ಜೊತೆಗೆ ವೀಳ್ಯದೆಲೆಗಳನ್ನು ಕತ್ತರಿಸಿ ಮಿಕ್ಸಿ ಜಾರಿಗೆ ಹಾಕಿ ರುಬ್ಬಿಕೊಳ್ಳಿ. ಜೀರಿಗೆ ಹಾಗೂ ಕಾಳುಮೆಣಸನ್ನು ಕುಟ್ಟಾಣಿಯಲ್ಲಿ ಹಾಕಿ ತರಿತರಿಯಾಗಿ ರುಬ್ಬಿಕೊಳ್ಳಿ. ಬಾಟಲೆಯಲ್ಲಿ ಹುಣಸೆರಸ ಹಾಕಿ, ಅದಕ್ಕೆ ಮಿಕ್ಸಿಯಲ್ಲಿ ರುಬ್ಬಿಕೊಂಡ ಮಿಶ್ರಣ ಸೇರಿಸಬೇಕು, ನಂತರ ಮಿಕ್ಸಿ ಜಾರಿಗೆ ಸ್ವಲ್ಪ ನೀರು ಹಾಕಿ ಆ ನೀರನ್ನು ಬಾಣಲೆಗೆ ಸೇರಿಸಬೇಕು. ಈ ಎಲ್ಲವನ್ನೂ ಮಿಶ್ರಣ ಮಾಡಿ ಕುದಿಯಲು ಬಿಡಿ. ನಂತರ ರುಚಿಗೆ ತಕ್ಕಷ್ಟು ಉಪ್ಪು, ಬೆಲ್ಲ, ಅರಿಸಿನ ಪುಡಿ ಸೇರಿಸಿ. ನಂತರ ಕುಟ್ಟಿ ಪುಡಿ ಮಾಡಿಟ್ಟುಕೊಂಡ ಮಿಶ್ರಣ ಸೇರಿಸಿ. ಈ ಎಲ್ಲವನ್ನೂ ಮಿಶ್ರಣ ಮಾಡಿ, ರಸಂಗೆ ಅಗತ್ಯ ಇರುವಷ್ಟು ನೀರು ಸೇರಿಸಿ. ಕುದಿಯಲು ಆರಂಭಿಸಿದಾಗ ರಸಂ ಪುಡಿ ಹಾಕಿ ಮಿಶ್ರಣ ಮಾಡಿ. ಕುದಿಯುವಾಗಲೇ ಇದಕ್ಕೆ ಕರಿಬೇವು ಹಾಗೂ ಕೊತ್ತಂಬರಿ ಸೊಪ್ಪು ಸೇರಿಸಿ ಈ ಎಲ್ಲವನ್ನೂ ಚೆನ್ನಾಗಿ ಕುದಿಸಿ. ಕೊನೆಯಲ್ಲಿ ಒಗ್ಗರಣೆ ಕೊಡಿ, ಈಗ ನಿಮ್ಮ ಮುಂದೆ ರುಚಿಯಾದ ವೀಳ್ಯದೆಲೆ ರಸಂ ರೆಡಿ.
ವೀಳ್ಯದೆಲೆಯಲ್ಲಿ ಉತ್ಕರ್ಷಣ ನಿರೋಧಕ ಅಂಶ ಸಮೃದ್ಧವಾಗಿದ್ದು, ಇದು ಕಾಯಿಲೆಗಳಿಂದ ದೇಹವನ್ನು ರಕ್ಷಿಸುತ್ತದೆ. ಇದು ರಕ್ತದಲ್ಲಿನ ಸಕ್ಕರೆಯ ಪ್ರಮಾಣವನ್ನು ನಿಯಂತ್ರಿಸಲು ಸಹಕಾರಿ. ಲಿಪಿಡ್ ಪ್ರೊಪೈಲ್ ನಿಯಂತ್ರಣಕ್ಕೂ ಕೂಡ ವೀಳ್ಯದೆಲೆ ಉತ್ತಮ. ಇದರಲ್ಲಿ ಪೊಟ್ಯಾಶಿಯಂ, ಕ್ಯಾಲ್ಸಿಯಂನಂತಹ ಪೋಷಕಾಂಶಗಳು ಸಮೃದ್ಧವಾಗಿದೆ. ಉತ್ತಮ ಜೀರ್ಣಕ್ರಿಯೆಗೂ ವೀಳ್ಯದೆಲೆ ಉತ್ತಮ.
ಒಂದೇ ರುಚಿಯ ರಸಂ ಅಥವಾ ಸಾಂಬಾರ್ ತಿಂದು ನಾಲಿಗೆಗೆ ಬೇಸರ ಬಂದಿದ್ದರೆ ನೀವು ಈ ರಸಂ ಮಾಡಿಕೊಳ್ಳಬಹುದು. ಕಡಿಮೆ ಸಾಮಗ್ರಿ ಬಳಸಿ ಥಟ್ಟಂತ ಮಾಡಬಹುದಾದ ಈ ರೆಸಿಪಿ ವೈರಲ್ ಜ್ವರದಂತಹ ಕಾಯಿಲೆಗಳು ಬಂದಾಗ ಬೆಸ್ಟ್ ಎನ್ನಿಸುತ್ತವೆ. ಶೀತ ನೆಗಡಿ ನಿವಾರಣೆಗೆ ಇದು ರಾಮಬಾಣ ಎಂದರೂ ತಪ್ಪಲ್ಲ.
ವಿಭಾಗ