ಪಂಜಾಬಿ ಶೈಲಿಯ 5 ಜನಪ್ರಿಯ ಪರೋಟ ರೆಸಿಪಿ ಇದು: ಉಪಹಾರಕ್ಕೂ ಬೆಸ್ಟ್, ಮಕ್ಕಳ ಲಂಚ್ ಬಾಕ್ಸ್‌ಗೂ ಉತ್ತಮ
ಕನ್ನಡ ಸುದ್ದಿ  /  ಜೀವನಶೈಲಿ  /  ಪಂಜಾಬಿ ಶೈಲಿಯ 5 ಜನಪ್ರಿಯ ಪರೋಟ ರೆಸಿಪಿ ಇದು: ಉಪಹಾರಕ್ಕೂ ಬೆಸ್ಟ್, ಮಕ್ಕಳ ಲಂಚ್ ಬಾಕ್ಸ್‌ಗೂ ಉತ್ತಮ

ಪಂಜಾಬಿ ಶೈಲಿಯ 5 ಜನಪ್ರಿಯ ಪರೋಟ ರೆಸಿಪಿ ಇದು: ಉಪಹಾರಕ್ಕೂ ಬೆಸ್ಟ್, ಮಕ್ಕಳ ಲಂಚ್ ಬಾಕ್ಸ್‌ಗೂ ಉತ್ತಮ

ಪ್ರತಿದಿನ ಬೆಳಿಗ್ಗೆ ಒಂದೇ ರೀತಿಯ ತಿಂಡಿ ಎಲ್ಲರಿಗೂ ಬೇಸರ ಮೂಡಿಸುತ್ತದೆ. ಅದಕ್ಕಾಗಿಯಾದರೂ ಕೆಲವೊಮ್ಮೆ ಬೇರೆ ರೀತಿಯ ತಿಂಡಿಯನ್ನು ಸವಿಯಬೇಕೆನಿಸುತ್ತದೆ. ಬೆಳಗಿನ ಉಪಹಾರಕ್ಕೆ ಪರಾಠಾ ಕೂಡಾ ಬೆಸ್ಟ್‌ ಐಡಿಯಾ. ಇಲ್ಲಿ ಹೇಳಿರುವ ಪಂಜಾಬಿ ಶೈಲಿಯ ಪರಾಠಾಗಳು ರುಚಿಯಾಗಿರುವುದರ ಜೊತೆಗೆ ಶಕ್ತಿಯನ್ನು ನೀಡುತ್ತವೆ.

ಬೆಳಗ್ಗಿನ ಉಪಹಾರಕ್ಕೆ ಪರಾಠಾ
ಬೆಳಗ್ಗಿನ ಉಪಹಾರಕ್ಕೆ ಪರಾಠಾ (PC: Freepik)

ಬಿಸಿ ಬಿಸಿಯಾದ ಪರೋಟ, ಅದರ ಮೇಲೆ ಘಂ ಎಂದು ಪರಿಮಳ ಬೀರುವ ತುಪ್ಪ, ಪಕ್ಕದಲ್ಲಿರುವ ಗಟ್ಟಿ ಮೊಸರು, ರುಚಿಯಾದ ಉಪ್ಪಿನಕಾಯಿ, ಆಹಾ! ಇದನ್ನು ನೆನಪು ಮಾಡಿಕೊಂಡರೆ ಸಾಕು ಬಾಯಲ್ಲಿ ನೀರೂರುವುದು ಖಂಡಿತ. ಪರೋಟ ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಲಂಚ್‌, ರಾತ್ರಿಯ ಊಟ ಎಲ್ಲದಕ್ಕೂ ಸೈ ಎನಿಸುವ ತಿನಿಸು. ಇದು ಚಿಕ್ಕ ಮಕ್ಕಳಿಂದ ಹಿಡಿದು ಹಿರಿಯರವರವರೆಗೂ ಎಲ್ಲರೂ ಇಷ್ಟಪಡುವ ಉಪಹಾರವಾಗಿದೆ. ಪರೋಟಗಳಲ್ಲಿ ಹಲವು ಬಗೆಗಳಿವೆ. ಆಲೂ ಪರೋಟ, ಗೋಬಿ ಪರೋಟ, ಪಾಲಕ್‌ ಪರೋಟ, ಪನೀರ್‌ ಪರೋಟ, ದಾಲ್‌ ಪಾರೋಟ ಇತ್ಯಾದಿ ಪರೋಟಗಳು ಇಂದಿನ ಜನರ ಬಾಯಿಚಪಲವನ್ನು ತಣಿಸಿದ್ದಂತೂ ಹೌದು. ಗರಿಗರಿಯಾದ, ಹೊಂಬಣ್ಣದಲ್ಲಿ ಕಂಡುಬರುವ ಪರೋಟಗಳಲ್ಲಿ ಪಂಜಾಬಿ ಶೈಲಿಯ ಪರೋಟಗಳು ಹೆಚ್ಚು ಜನಪ್ರಿಯವಾಗಿವೆ. ಬೆಣ್ಣೆ, ಚಟ್ನಿ ಅಥವಾ ಮೊಸರಿನೊಂದಿಗೆ ಸವಿಯುವ ಪರೋಟಗಳು ಹಸಿವನ್ನು ತಣಿಸುವುದರ ಜೊತೆಗೆ ದೇಹಕ್ಕೆ ಶಕ್ತಿಯನ್ನು ನೀಡುತ್ತವೆ. ಪಂಜಾಬಿ ಶೈಲಿಯ ಪರೋಟಗಳಲ್ಲಿರುವ ಮಸಾಲೆಗಳು ಅದ್ಭುತ ರುಚಿಯನ್ನು ನೀಡುತ್ತವೆ. ಹಾಗಾಗಿ ಪಂಜಾಬಿ ಪರೋಟಗಳನ್ನು ಒಮ್ಮೆಯಾದರೂ ಮಾಡಿ ಸವಿಯಬೇಕೆಂಬ ಆಸೆ ಎಲ್ಲರಲ್ಲೂ ಇದ್ದೇ ಇರುತ್ತದೆ. ಪಂಜಾಬಿ ಪರೋಟಗಳಲ್ಲಿ 5 ಬಗೆಯ ಪರೋಟಗಳು ಹೆಚ್ಚು ಜನಪ್ರಿಯವಾಗಿವೆ. ಪರೋಟ ಸವಿಯಬೇಕೆಂದಿದ್ದರೆ ಈ ಪಂಜಾಬಿ ಪರೋಟಗಳನ್ನೇ ಆಯ್ದುಕೊಳ್ಳಿ.

ಜನಪ್ರಿಯ ಪಂಜಾಬಿ ಪರೋಟಗಳು

ಆಲೂ ಪರೋಟ: ಉತ್ತರ ಭಾರತದವರು ಬಹಳ ಇಷ್ಟ ಪಟ್ಟು ತಿನ್ನುವ ಬೆಳಗಿನ ಉಪಹಾರ ಇದಾಗಿದೆ. ಅಲೂ ಪರೋಟವನ್ನು ಮ್ಯಾಶ್‌ ಮಾಡಿದ ಆಲೂಗೆ ಮಸಾಲೆ, ಸಣ್ಣದಾಗಿ ಕತ್ತರಿಸಿದ ಈರುಳ್ಳಿ, ಹಸಿ ಮೆಣಸಿನಕಾಯಿ ಸೇರಿಸಿ ತಯಾರಿಸಲಾಗುತ್ತದೆ. ಇದನ್ನು ಮೊಸರು ಅಥವಾ ಬೆಣ್ಣೆ ಜೊತೆ ಸವಿಯಲಾಗುತ್ತದೆ. ಇದು ಬೆಳಗಿನ ಉಪಹಾರಕ್ಕೆ ಪರ್ಫೆಕ್ಟ್‌ ಆಗಿದೆ.

ಪನೀರ್‌ ಪರೋಟ: ನಿಮಗೆ ಪನೀರ್‌ ಇಷ್ಟವಾಗಿದ್ದರೆ, ಇದರಿಂದ ಪಂಜಾಬಿ ಶೈಲಿಯಲ್ಲಿ ಪರೋಟ ಮಾಡಿ ಸವಿಯಬಹುದು. ಮೃದುವಾದ ಪನೀರ್ ತುರಿದು ಅದಕ್ಕೊಂದಿಷ್ಟು ಮಸಾಲೆ ಮತ್ತು ಕೊತ್ತೊಂಬರಿ ಸೊಪ್ಪು ಸೇರಿಸಿ ತಯಾರಿಸಲಾಗುತ್ತದೆ. ಗೋಲ್ಡನ್‌ ಬಣ್ಣದಲ್ಲಿರುವ ಮಸಾಲೆ ಭರಿತ ಪನೀರ್‌ ಪರೋಟವನ್ನು ತುಪ್ಪ ಅಥವಾ ಬೆಣ್ಣೆಯೊಂದಿಗೆ ಸವಿಯುತ್ತಿದ್ದರೆ ಅದರ ರುಚಿಗೆ ಬೇರೆ ಯಾವುದೂ ಸರಿಸಾಟಿಯೇ ಇಲ್ಲ ಅನಿಸುತ್ತದೆ.

ಲಚ್ಚಾ ಪರೋಟ: ಇದು ಪದರು ಪದರಾಗಿರುವ ವಿಶೇಷವಾದ ಪಂಜಾಬಿ ಪರೋಟ. ಬೆಣ್ಣೆ ಅಥವಾ ಚಟ್ನಿಯ ಜೊತೆ ಸವಿಯುವ ಗೋಧಿ ಹಿಟ್ಟಿನಿಂದ ತಯಾರಿಸುವ ಈ ಪರೋಟ ಗರಿಗರಿಯಾಗಿರುವುದರ ಜೊತೆಗೆ ಮೃದುವಾಗಿಯೂ ಇರುತ್ತದೆ. ಕತ್ತರಿಸಿದ ಹಸಿ ಈರುಳ್ಳಿ ಇದರ ಸ್ವಾದ ಹೆಚ್ಚಿಸುತ್ತದೆ. ಬೆಳಗಿನ ತಿಂಡಿಗೆ ಬೆಸ್ಟ್‌ ಎನಿಸುವ ಲಚ್ಚಾ ಪರೋಟ ಹಸಿದವರ ಹೊಟ್ಟೆ ತುಂಬಿಸುತ್ತದೆ.

ಗೋಬಿ ಪರೋಟ: ಬೆಳಗಿನ ಉಪಹಾರಕ್ಕೆ ಹೆಚ್ಚು ಮಹತ್ವ ನೀಡುತ್ತಿದ್ದರೆ ಅದಕ್ಕೆ ಗೋಬಿ ಪರೋಟ ಸರಿಯಾಗಿ ಹೊಂದಿಕೆಯಾಗುತ್ತದೆ. ಚಿಕ್ಕದಾಗಿ ಕತ್ತರಿಸಿದ ಗೋಬಿಗೆ ಮಸಾಲೆಗಳನ್ನು ಸೇರಿಸಿ ತಯಾರಿಸಲಾಗುತ್ತದೆ. ಗರಿಗರಿಯಾದ ಅಷ್ಟೇ ರುಚಿಯಾದ ಗೋಬಿ ಪರೋಟವನ್ನು ಪುದೀನಾ ಚಟ್ನಿ ಹಾಗೂ ಮೊಸರಿನ ಜೊತೆ ಸವಿಯಲಾಗುತ್ತದೆ.

ಈರುಳ್ಳಿ ಪರೋಟ: ನಿಮಗೆ ಈರುಳ್ಳಿಯ ಪರಿಮಳ ಇರುವ ಪರೋಟ ಬಹಳ ಇಷ್ಟವಾಗುತ್ತದೆ ಎಂದಾದರೆ ಪಂಜಾಬಿ ಸ್ಟೈಲ್‌ನಲ್ಲಿ ಈರುಳ್ಳಿ ಪರೋಟ ತಯಾರಿಸಿ. ಗಾಢ ಪರಿಮಳ ಬೀರುವ ಈ ಪರೋಟ ನೋಡಿದ ತಕ್ಷಣ ಬಾಯಲ್ಲಿ ನೀರೂರಿಸುತ್ತದೆ. ಚಿಕ್ಕದಾಗಿ ಕತ್ತರಿಸಿದ ಈರುಳ್ಳಿ, ಕೊತ್ತೊಂಬರಿ ಸೊಪ್ಪು, ಮಸಾಲೆಗಳನ್ನು ನಾದಿಟ್ಟುಕೊಂಡ ಗೋಧಿ ಹಿಟ್ಟಿನಲ್ಲಿ ಸ್ಟಫಿಂಗ್‌ ಮಾಡಿ, ಎಣ್ಣೆ ಅಥವಾ ತುಪ್ಪ ಸವರಿ ಹೊಂಬಣ್ಣ ಬರುವವರೆಗೆ ಬೇಯಿಸಲಾಗುತ್ತದೆ. ಇದಕ್ಕೆ ಬೆಣ್ಣೆಯ ಕಾಂಬಿನೇಷನ್‌ ಸಖತ್‌ ಟೇಸ್ಟ್‌ ನೀಡುತ್ತದೆ.