ಮಾಂಸಾಹಾರದಷ್ಟೇ ಪೋಷಕಾಂಶ ಹೊಂದಿರುವ ಸಸ್ಯಾಹಾರ ಖಾದ್ಯಗಳಿವು; ನಾನ್‌ವೆಜ್‌ಗೆ ಇವೇ ಪರ್ಯಾಯ
ಕನ್ನಡ ಸುದ್ದಿ  /  ಜೀವನಶೈಲಿ  /  ಮಾಂಸಾಹಾರದಷ್ಟೇ ಪೋಷಕಾಂಶ ಹೊಂದಿರುವ ಸಸ್ಯಾಹಾರ ಖಾದ್ಯಗಳಿವು; ನಾನ್‌ವೆಜ್‌ಗೆ ಇವೇ ಪರ್ಯಾಯ

ಮಾಂಸಾಹಾರದಷ್ಟೇ ಪೋಷಕಾಂಶ ಹೊಂದಿರುವ ಸಸ್ಯಾಹಾರ ಖಾದ್ಯಗಳಿವು; ನಾನ್‌ವೆಜ್‌ಗೆ ಇವೇ ಪರ್ಯಾಯ

ಭಾರತದ ಜನಸಂಖ್ಯೆಯ ಶೇ 40ರಷ್ಟು ಮಂದಿ ಸಸ್ಯಾಹಾರಿಗಳಿದ್ದಾರೆ. ಇನ್ನೂ ಕೆಲವು ಮಾಂಸಾಹಾರಿಗಳು ವಾರದಲ್ಲಿ ಒಂದು ದಿನ ಅಥವಾ ಎರಡ್ಮೂರು ದಿನ ನಾನ್‌ವೆಜ್ ಮುಟ್ಟಲ್ಲ. ಶ್ರಾವಣ, ಕಾರ್ತಿಕ ಮಾಸದಲ್ಲೂ ನಾನ್‌ವೆಜ್‌ನಿಂದ ದೂರವಿರುತ್ತಾರೆ. ಅಂತಹ ಸಮಯದಲ್ಲಿ ದೇಹಕ್ಕೆ ಪೋಷಕಾಂಶ ಒದಗಿಸಲು ನಾನ್‌ವೆಜ್‌ಗೆ ಪರ್ಯಾಯ ಆಹಾರ ಯಾವುದು ಎಂದು ನೀವು ಯೋಚಿಸುತ್ತಿದ್ದರೆ ಇಲ್ಲಿದೆ ಉತ್ತರ.

ಮಾಂಸಾಹಾರದಷ್ಟೇ ಪೋಷಕಾಂಶ ಹೊಂದಿರುವ ಸಸ್ಯಾಹಾರ ಖಾದ್ಯಗಳಿವು; ನಾನ್‌ವೆಜ್‌ಗೆ ಪರ್ಯಾಯ
ಮಾಂಸಾಹಾರದಷ್ಟೇ ಪೋಷಕಾಂಶ ಹೊಂದಿರುವ ಸಸ್ಯಾಹಾರ ಖಾದ್ಯಗಳಿವು; ನಾನ್‌ವೆಜ್‌ಗೆ ಪರ್ಯಾಯ

ಸ್ನೇಹಿತರು ಜೊತೆಗೂಡಿ ರೆಸ್ಟೋರೆಂಟ್‌ಗೆ ಹೋದಾಗ ನಿಮ್ಮಲ್ಲಿ ಕೆಲವರು ಸಸ್ಯಾಹಾರಿಗಳಿದ್ದರೆ, ಇನ್ನುಳಿದವರು ಮಾಂಸಾಹಾರಿಗಳಿರಬಹುದು. ಕೆಲವರು ಮಾಂಸಾಹಾರಿಗಳಾಗಿದ್ದರೂ ಸೋಮವಾರ, ಗುರುವಾರ, ಶುಕ್ರವಾರ, ಶನಿವಾರ ಅಂತೆಲ್ಲಾ ಮಾಂಸಾಹಾರ ಸೇವಿಸಲ್ಲ. ತಮ್ಮೆದುರು ತಮಗಿಷ್ಟವಾದ ನಾನ್‌ವೆಜ್ ಇಟ್ಟರೂ ವಾರ ಮಾಡುವವರು ಮುಟ್ಟುವುದೇ ಇಲ್ಲ. ಹೀಗಾಗಿ ಸ್ನೇಹಿತರ ಜೊತೆ ಊಟಕ್ಕೆ ಹೋದಾಗ ಸಸ್ಯಾಹಾರ ಮತ್ತು ಮಾಂಸಾಹಾರ ಎರಡೂ ಇರುವ ರೆಸ್ಟೋರೆಂಟ್ ಅನ್ನು ಬಹುಷಃ ನೀವು ಆಯ್ಕೆ ಮಾಡಬಹುದು. ಈ ವೇಳೆ ಮಾಂಸಹಾರಿಗಳು ಬಗೆ-ಬಗೆಯ ಭಕ್ಷ್ಯಗಳನ್ನು ಆರ್ಡರ್ ಮಾಡಿದ್ದರೆ, ಸಸ್ಯಾಹಾರಿಗಳಿಗೆ ಮಾತ್ರ ಕೆಲವೇ ಕೆಲವು ಬಗೆಯ ಆಹಾರಗಳಿರುತ್ತವೆ. ಹೀಗಾಗಿ ಯಾವುದು ಆರ್ಡರ್ ಮಾಡಬೇಕು ಅನ್ನೋ ಕನ್ಫ್ಯೂಷನ್ ಹಲವರದ್ದು.

ಮಾಂಸಾಹಾರಿಗಳಿಗೆ ಹೋಲಿಸಿದರೆ ಸಸ್ಯಾಹಾರಿಗಳು ರೆಸ್ಟೋರೆಂಟ್‌ಗಳಿಗೆ ಊಟಕ್ಕೆ ಹೋಗುವಾಗ ಕಡಿಮೆ ಆಯ್ಕೆಗಳನ್ನು ಹೊಂದಿರುತ್ತಾರೆ. ಇತರ ದೇಶಗಳಿಗೆ ಹೋಲಿಸಿದರೆ, ಭಾರತದಲ್ಲಿ ಅತಿ ಹೆಚ್ಚು ಸಸ್ಯಾಹಾರಿಗಳು ಇದ್ದಾರೆ. ಸಮೀಕ್ಷೆಗಳ ಪ್ರಕಾರ, ಜನಸಂಖ್ಯೆಯ ಸುಮಾರು ಶೇ 40 ರಷ್ಟು ಜನರು ಸಸ್ಯಾಹಾರಿ ಆಹಾರವನ್ನು ಅವಲಂಬಿಸಿದ್ದಾರಂತೆ.

ಬಹುತೇಕ ಮಂದಿ ಸಸ್ಯಾಹಾರಿ ಆಹಾರವನ್ನು ಆರಿಸಿಕೊಳ್ಳುತ್ತಾರೆ. ಆದರೆ, ಡೈರಿ ಉತ್ಪನ್ನಗಳಿಗೆ ಆದ್ಯತೆ ನೀಡುವುದಿಲ್ಲ. ಹಲವಾರು ಉತ್ಪನ್ನಗಳು ನಿಮ್ಮ ದೇಹಕ್ಕೆ ಪೋಷಕಾಂಶಗಳನ್ನು ಒದಗಿಸುತ್ತವೆ. ಇದರ ಬಗ್ಗೆ ಬಹುತೇಕ ಮಂದಿಗೆ ಮಾಹಿತಿ ತಿಳಿದಿರುವುದಿಲ್ಲ. ಮಾಂಸಾಹಾರಕ್ಕೆ ಪರ್ಯಾಯವಾಗಿ ಸೇವಿಸುವ ಖಾದ್ಯಗಳ ಬಗ್ಗೆ ಇಲ್ಲಿದೆ ಮಾಹಿತಿ:

ಮಾಂಸಾಹಾರಕ್ಕೆ ಪರ್ಯಾಯವಾಗಿ ಸಸ್ಯಾಹಾರಿ ಭಕ್ಷ್ಯಗಳು

ಚಿಕನ್ ಕರಿ, ಮಟನ್ ಕರಿ, ಮೀನು ಸಾಂಬಾರ್, ಚಿಕನ್/ಮಟನ್ ಬಿರಿಯಾನಿ, ಕಬಾಬ್.. ಹೀಗೆ ಹೇಳುತ್ತಾ ಹೋದರೆ ಲಿಸ್ಟ್ ತುಂಬಾ ಉದ್ದವಾಗುತ್ತದೆ. ಈ ಭಕ್ಷ್ಯಗಳ ಹೆಸರು ಕೇಳಿದ್ರೆ ಸಾಕು ಮಾಂಸಾಹಾರಿಗಳ ಬಾಯಲ್ಲಿ ನೀರೂರುತ್ತದೆ. ಕಾಶ್ಮೀರದಿಂದ ಕನ್ಯಾಕುಮಾರಿಯವರೆಗೆ ಗುಜರಾತ್‌ನಿಂದ ಮಣಿಪುರದವರೆಗೆ ಭಾರತದಲ್ಲಿ ವಿಧ-ವಿಧವಾದ ಮಾಂಸಾಹಾರಿ ಭಕ್ಷ್ಯಗಳನ್ನು ತಯಾರಿಸಲಾಗುತ್ತದೆ. ಇವು ಬಾಯಿಗೆ ರುಚಿಕರವಾಗಿರುವುದು ಮಾತ್ರವಲ್ಲದೆ, ಪ್ರೊಟೀನ್ ಮತ್ತು ಫೈಬರ್ ಸೇರಿದಂತೆ ವಿವಿಧ ಅಗತ್ಯ ಪೋಷಕಾಂಶಗಳಿಂದ ಕೂಡಿದೆ. ನೀವು ಮಾಂಸವನ್ನು ತ್ಯಜಿಸಲು ಯೋಜಿಸಿದ್ದರೆ, ಅದೇ ರೀತಿ ರುಚಿ, ಮತ್ತು ಪೌಷ್ಟಿಕಾಂಶವನ್ನು ಪಡೆಯಲು ನೀವು ಹಲಸು ಮತ್ತು ಸೋಯಾವನ್ನು ಬಳಸಬಹುದು. ಹಲಸಿನ ಕಾಯಿಯನ್ನು ಕುಕ್ಕರ್‌ನಲ್ಲಿ ಎರಡು ವಿಶಲ್ ಕೂಗಿಸಿ, ಬಳಿಕ ಚಿಕನ್ ಕಬಾಬ್‌ಗೆ ಮಸಾಲೆ ಹಾಕಿದಂತೆ ಬೇಯಿಸಿದ ಹಲಸಿನ ಕಾಯಿಗೂ ಹಾಕಿ, ಎಣ್ಣೆಯಲ್ಲಿ ಕರಿದರೆ ರುಚಿಕರವಾದ ಹಲಸಿನಕಾಯಿ ಕಬಾಬ್ ಸವಿಯಬಹುದು.

ಮೀನಿಗೆ ಪರ್ಯಾಯವಾಗಿ ಸಸ್ಯಾಹಾರಿ ಭಕ್ಷ್ಯ

ಸುಲಭವಾಗಿ ಲಭ್ಯವಾಗುವ ಮತ್ತು ಸಮೃದ್ಧ ಪೋಷಕಾಂಶಗಳಿಂದ ಕೂಡಿರುವ ಮೀನಿನ ಆಹಾರ ಭಾರತದ ವಿವಿಧ ಭಾಗಗಳಲ್ಲಿ ಪ್ರಧಾನವಾಗಿದೆ. ಮೀನಿನಲ್ಲಿ ಒಮೆಗಾ -3 ಕೊಬ್ಬಿನಾಮ್ಲಗಳಿವೆ. ಇದು ನಮ್ಮ ಆರೋಗ್ಯಕ್ಕೆ ಪ್ರಯೋಜನಕಾರಿಯಾಗಿದೆ. ಹೀಗಾಗಿ ಸಸ್ಯಾಹಾರಿಗಳು ಮೀನಿನ ಬದಲು ರಾಜ್ಮಾ ಕರಿಯನ್ನು ಸವಿಯಬಹುದು. ಅದೇ ರೀತಿ ಬದನೆಕಾಯಿಯನ್ನು ತೆಳ್ಳಗೆ ಕತ್ತರಿಸಿ ಅದನ್ನು ಮೀನು ಫ್ರೈ ರೀತಿ ರವಾ ಫ್ರೀ ಮಾಡಿ ಸವಿಯಬಹುದು. ಹಾಗಲಕಾಯಿಯನ್ನು ಸಹ ತವಾ ಫ್ರೈ ಮಾಡಿ ಸವಿಯಬಹುದು.

ಹಾಲಿಗೆ ಪರ್ಯಾಯವಾಗಿ ಇದನ್ನು ಆಯ್ಕೆ ಮಾಡಿ

ಕೆಲವು ಸಿದ್ಧಾಂತಗಳ ಪ್ರಕಾರ, ಹಾಲನ್ನು ಮಾಂಸಾಹಾರಿ ಎಂದು ಹೇಳಲಾಗುತ್ತದೆ. ಹೀಗಾಗಿ ಜನರು ಇದಕ್ಕೆ ಪರ್ಯಾಯವಾಗಿ ತೆಂಗಿನ ಹಾಲು, ಬಾದಾಮಿ ಹಾಲು ಮತ್ತು ಸೋಯಾ ಹಾಲು ಮುಂತಾದ ಸಸ್ಯ ಆಧಾರಿತ ಹಾಲನ್ನು ಸೇವಿಸಬಹುದು. ಇದರಲ್ಲೂ ಪ್ರೊಟೀನ್‌ಗಳಿರುವುದರಿಂದ ದೇಹಕ್ಕೆ ಬೇಕಾದ ಅಗತ್ಯ ಪೋಷಕಾಂಶಗಳು ಸಿಗುತ್ತವೆ.

ಪನ್ನೀರ್‌ಗೆ ಪರ್ಯಾಯವಾಗಿ ತೋಫು:

ಡೈರಿ ಉತ್ಪನ್ನ ಪನೀರ್‌ಗೆ ಸಸ್ಯಾಹಾರಿ ಪರ್ಯಾಯವೆಂದರೆ ತೋಫು. ತೋಫು ಪನೀರ್ ಅನ್ನು ಹೋಲುತ್ತದೆ. ಇಂದು, ಇದು ಭಾರತದ ಹಲವೆಡೆ ಸುಲಭವಾಗಿ ಲಭ್ಯವಿದೆ. ಇದನ್ನು ಹಾಲಿನ ಬದಲಿಗೆ ಸೋಯಾ ಹಾಲಿನಿಂದ ತಯಾರಿಸಲಾಗುತ್ತದೆ. ಇದು ರುಚಿಕರವಾಗಿರುವುದು ಮಾತ್ರವಲ್ಲದೆ, ತುಂಬಾ ಆರೋಗ್ಯಕರವೂ ಆಗಿದೆ. ಇದರಲ್ಲಿ ಕೊಬ್ಬಿನಾಂಶ ಕಡಿಮೆಯಿದೆ.

ಮೊಸರಿಗೆ ಪರ್ಯಾಯ ಸಸ್ಯಾಹಾರ

ಹಾಲನ್ನು ಬಾದಾಮಿ, ಕಡಲೆಕಾಯಿ ಅಥವಾ ಅನ್ನದೊಂದಿಗೆ ತಯಾರಿಸಬಹುದು. ಇವುಗಳನ್ನು ರುಬ್ಬಿ, ಅದಕ್ಕೆ ಹಸಿರು ಮೆಣಸಿನಕಾಯಿಯನ್ನು ಸೇರಿಸಿ. ಇದು ಮೊಸರಾಗಲು ಕೆಲವು ಗಂಟೆಗಳ ಕಾಲ ಹಾಗೇ ಇರಿಸಿ. ಬಳಿಕ ಮೆಣಸಿನಕಾಯಿಯನ್ನು ತೆಗೆದುಹಾಕಿ, ಫ್ರಿಜ್‌ನಲ್ಲಿ ಇರಿಸಿ.

ಸಸ್ಯಾಧಾರಿತ ಆಹಾರವು ಎಲ್ಲರಿಗೂ ಸರಿಯಾದ ಪೋಷಣೆಯನ್ನು ಒದಗಿಸುತ್ತದೆ. ನಾಲಿಗೆಗೂ ರುಚಿಕರವಾಗಿರುತ್ತದೆ ಅಲ್ಲದೆ, ಈ ಭಕ್ಷ್ಯಗಳನ್ನು ಆನಂದಿಸುತ್ತಾ ಸವಿಯಬಹುದು. ಕೇವಲ ಮಾಂಸಾಹಾರಗಳಷ್ಟೇ ಅಲ್ಲ, ಸಸ್ಯಾಹಾರಗಳಲ್ಲೂ ಬಗೆ-ಬಗೆಯ ಭಕ್ಷ್ಯಗಳನ್ನು ತಯಾರಿಸಬಹುದು. ನಮ್ಮ ಆಹಾರದಲ್ಲಿ ಪ್ರಕೃತಿಯ ಈ ಅದ್ಭುತಗಳನ್ನು ಅಳವಡಿಸಿಕೊಳ್ಳೋಣ.

Whats_app_banner