Vermicelli Upma: ರವೆ ಉಪ್ಪಿಟ್ಟನ್ನೇ ಎಷ್ಟ್ ದಿನ ಅಂತಾ ತಿಂತೀರಾ, ಸ್ಪೆಷಲ್ ಆಗಿ ಶಾವಿಗೆ ಉಪ್ಪಿಟ್ಟು ಟ್ರೈ ಮಾಡಿ; ರೆಸಿಪಿ ಇಲ್ಲಿದೆ
Vermicelli Upma: ಬೆಳಗಿನ ಉಪಾಹಾರಕ್ಕೆ ರವಾ ಉಪ್ಪಿಟ್ಟು ತಿಂದು ತಿಂದು ಬೇಜಾರಾಗಿದ್ಯಾ, ಉಪ್ಪಿಟ್ಟಲ್ಲೇ ಬೇರೆ ಏನಾದ್ರೂ ಟ್ರೈ ಮಾಡ್ಬೇಕು ಅನ್ನಿಸಿದ್ರೆ ಶಾವಿಗೆ ಉಪ್ಪಿಟ್ಟು ಮಾಡಬಹುದು. ಇದನ್ನು ಭಿನ್ನ ರುಚಿ ಇರುವ ಕಾರಣ ಮನೆಯವರೆಲ್ಲರಿಗೂ ಇಷ್ಟವಾಗುವುದ್ರಲ್ಲಿ ಎರಡು ಮಾತಿಲ್ಲ.
ದಕ್ಷಿಣ ಭಾರತದಲ್ಲಿನ ಪಾಕಪದ್ಧತಿ ವೈವಿಧ್ಯಮಯದಿಂದ ಕೂಡಿದೆ. ಇಲ್ಲಿನ ಸಾಂಪ್ರದಾಯಿಕ ಖಾದ್ಯಗಳು ಅಡುಗೆಯ ವೈಶಿಷ್ಟ್ಯವನ್ನು ಹೆಚ್ಚಿಸುವುದರ ಜೊತೆಗೆ ಸಂಸ್ಕೃತಿಯನ್ನು ಬಿಂಬಿಸುತ್ತವೆ. ಇಲ್ಲಿನ ವಿವಿಧ ಅಡುಗೆಗಳು ಬಾಯಿಚಪಲವನ್ನು ಹೆಚ್ಚಿಸಿ ತೃಪ್ತಿ ನೀಡುವುದಂತೂ ಖಂಡಿತ. ಶ್ಯಾವಿಗೆ ಉಪ್ಪಿಟ್ಟು ಬೆಳಗಿನ ಉಪಹಾರಕ್ಕೆ ಉತ್ತಮ ಆಯ್ಕೆಗಳಲ್ಲೊಂದಾಗಿದೆ. ಶಾವಿಗೆಯಿಂದ ತಯಾರಿಸುವ ಉಪ್ಪಿಟ್ಟು ದಕ್ಷಿಣ ಭಾರತದ ಸರಳ ಅಡುಗೆಯಾಗಿದೆ. ಯಾವಾಗಲೂ ರವಾ ಉಪ್ಪಿಟ್ಟು ತಿಂದು ಬೇಜಾರಾಗಿರುವ ಮನೆಮಂದಿಗೆಲ್ಲ ತರಕಾರಿಗಳನ್ನೆಲ್ಲಾ ಸೇರಿಸಿ ತಯಾರಿಸುವ ಶಾವಿಗೆ ಉಪ್ಪಿಟ್ಟು ರುಚಿಯಾದ ತಿಂಡಿಯಾಗಬಲ್ಲದು.
ಶಾವಿಗೆ ಉಪ್ಪಿಟ್ಟು ಕೇವಲ ಬೆಳಗಿನ ತಿಂಡಿಗಷ್ಟೇ ಅಲ್ಲ, ರಾತ್ರಿ ಏನಾದರೂ ಲೈಟ್ ಆಗಿ ತಿನ್ನಬೇಕೆನಿಸಿದಾಗಲೂ ಉತ್ತಮ ಆಯ್ಕೆಯಾಗಬಲ್ಲದು. ಜೀವಸತ್ವ, ಖನಿಜ, ತರಕಾರಿ, ಫೈಬರ್‌ಗಳಿಂದ ಕೂಡಿದ ಶಾವಿಗೆ ಉಪ್ಪಿಟ್ಟು ಪರ್ಫೆಕ್ಟ್ ಆಹಾರವಾಗಬಲ್ಲದು. ಕೆಲವು ಸಾಂಪ್ರದಾಯಿಕ ಅಡುಗೆಗಳನ್ನು ತಯಾರಿಸಲು ಬಹಳ ಸಮಯದ ಅಗತ್ಯವಿರುತ್ತದೆ. ಇದನ್ನು ನೀವು ಕಡಿಮೆ ಸಮಯದಲ್ಲಿ ತಯಾರಿಸಬಹುದು. ಭಾರವಾದ ಉಪಹಾರದ ಪ್ರತಿದಿನ ಆಯ್ದುಕೊಳ್ಳುವ ಬದಲಿಗೆ ಭಿನ್ನವಾಗಿ ಶಾವಿಗೆ ಉಪ್ಪಿಟ್ಟನ್ನು ಪ್ರಯತ್ನಿಸಬಹುದು. ಇದು ಹಗುರವಾಗಿದ್ದು, ಜೀರ್ಣಿಸಿಕೊಳ್ಳಲು ಸುಲಭವಾಗಿದೆ. ಇದು ಹೊಟ್ಟೆ ತುಂಬುವ ಆಹಾರವಾಗಿರುವುದರಲ್ಲಿ ಸಂಶಯವಿಲ್ಲ. ಬೆಳಿಗ್ಗೆ ಲೇಟ್ ಆಗಿ ಎದ್ದರೂ ಸಹ ಇದನ್ನು ಸುಲಭವಾಗಿ ತಯಾರಿಸಿ, ಲಂಚ್ ಬಾಕ್ಸ್‌ಗಳಿಗೂ ಹಾಕಿಕೊಳ್ಳಬಹುದು.
ಕಡಿಮೆ ಸಮಯದಲ್ಲಿ ಮನೆಯಲ್ಲಿಯೇ ದಕ್ಷಿಣ ಭಾರತದ ವಿಶೇಷ ಅಡುಗೆ ಶಾವಿಗೆ ಉಪ್ಪಿಟ್ಟನ್ನು ಹೀಗೆ ತಯಾರಿಸಿ
ಬೇಕಾಗುವ ಸಾಮಗ್ರಿಗಳು
ಶಾವಿಗೆ - 1 ಕಪ್
ಚಿಕ್ಕದಾಗಿ ಕತ್ತರಿಸಿದ ಈರುಳ್ಳಿ 1
ಚಿಕ್ಕದಾಗಿ ಕತ್ತರಿಸಿದ ಟೊಮೆಟೊ
ಹಸಿರುಮೆಣಸಿನಕಾಯಿ 1–2
ಚಿಕ್ಕದಾಗಿ ಕತ್ತರಿಸಿದ ಶುಂಠಿ
ಕ್ಯಾರೆಟ್, ಬೀನ್ಸ್, ಬಟಾಣಿ ಕಾಲು ಕಪ್
ಎಣ್ಣೆ 2–4 ಚಮಚ
ಸಾಸಿವೆ 1 ಚಮಚ
ಉದ್ದಿನ ಬೇಳೆ, ಕಡಲೆ ಬೇಳೆ ತಲಾ 1 ಚಮಚ
ಕರಿಬೇವಿನ ಎಲೆ 8–10
ಕೊತ್ತೊಂಬರಿ ಸೊಪ್ಪು
ರುಚಿಗೆ ತಕ್ಕಷ್ಟು ಉಪ್ಪು
ತಯಾರಿಸುವ ವಿಧಾನ
* ಶಾವಿಗೆಯು ಗೋಲ್ಡನ್ ಬ್ರೌನ್ ಆಗುವವರೆಗೆ ಮಧ್ಯಮ ಉರಿಯಲ್ಲಿ ಹುರಿದುಕೊಳ್ಳಿ.
* ಒಂದು ದಪ್ಪ ತಳದ ಪಾತ್ರೆಯಲ್ಲಿ ನೀರು ಕಾಯಿಸಿ, ಅದಕ್ಕೆ ಹುರಿದ ಶ್ಯಾವಿಗೆ ಹಾಕಿ ಮತ್ತು ಚಿಟಿಕೆ ಉಪ್ಪು ಸೇರಿಸಿ. ಶ್ಯಾವಿಗೆ ಅರಳಲು ಬಿಡಿ. ನಂತರ ಅದರ ನೀರನ್ನು ತೆಗೆಯಿರಿ.
* ಒಂದು ಕಡಾಯಿ ತೆಗೆದುಕೊಂಡು ಅದಕ್ಕೆ ಎಣ್ಣೆ ಹಾಕಿ. ಎಣ್ಣೆ ಬಿಸಿಯಾದ ಬಳಿಕ ಅದಕ್ಕೆ ಸಾಸಿವೆ, ಕರಿಬೇವಿನ ಸೊಪ್ಪು ಹಾಕಿ.
* ಸಾಸಿವೆ ಸಿಡಿದ ನಂತರ ಅದಕ್ಕೆ ಉದ್ದಿನ ಬೇಳೆ, ಕಡಲೆ ಬೇಳೆ ಸೇರಿಸಿ ಹುರಿದುಕೊಳ್ಳಿ.
* ಕತ್ತರಿಸಿಟ್ಟ ಶುಂಠಿ ಮತ್ತು ಈರುಳ್ಳಿಯನ್ನು ಸೇರಿಸಿ, ಹುರಿದುಕೊಳ್ಳಿ.
* ಈರುಳ್ಳಿ ಗೋಲ್ಡನ್ ಬ್ರೌನ್ ಆದನಂತರ ಅದಕ್ಕೆ ಕತ್ತರಿಸಿಟ್ಟ ಟೊಮೆಟೊ ಸೇರಿಸಿ. ಅದು ಮೃದುವಾಗುವವರೆಗೆ ಹುರಿಯಿರಿ.
* ಈಗ ಕತ್ತರಿಸಿಟ್ಟ ಬೀನ್ಸ್, ಕ್ಯಾರೆಟ್ ಮತ್ತು ಬಟಾಣಿ ಹಾಕಿ. ಅದನ್ನು ಹುರಿಯಿರಿ.
* ಬೇಯಿಸಿಟ್ಟುಕೊಂಡ ಶ್ಯಾವಿಗೆ ಸೇರಿಸಿ. ಅದಕ್ಕೆ ರುಚಿಗೆ ತಕ್ಕಷ್ಟು ಉಪ್ಪು ಸೇರಿಸಿ ಚೆನ್ನಾಗಿ ಮಿಕ್ಸ್ ಮಾಡಿ.
* ಕೊತ್ತಂಬರಿ ಸೊಪ್ಪಿನಿಂದ ಅಲಂಕರಿಸಿ.
ರುಚಿಯಾದ ಸೂಪರ್ ಶಾವಿಗೆ ಉಪ್ಪಿಟ್ಟು ಸವಿಯಲು ಸಿದ್ಧ. ಇದನ್ನು ಲಂಚ್ ಬಾಕ್ಸ್‌ಗೂ ಪ್ಯಾಕ್ ಮಾಡಿಕೊಂಡು ಹೋಗಬಹುದು.
(This copy first appeared in Hindustan Times Kannada website. To read more like this please logon to kannada.hindustantimes.com)