Watermelon Recipe: ಐಸ್‌ಕ್ಯಾಂಡಿಯಿಂದ ಸ್ಮೂಥಿವರೆಗೆ; ಬಿಸಿಲಿನ ದಾಹ ತಣಿಸುವ ಕಲ್ಲಂಗಡಿ ಹಣ್ಣಿನ ಸಿಂಪಲ್ ರೆಸಿಪಿಗಳಿವು
ಬೇಸಿಗೆ ಕಾಲ ಬಂತೆಂದರೆ ಬಿಸಿಲಿನ ದಾಹದ ಜೊತೆಗೆ ಕಲ್ಲಂಗಡಿ ಹಣ್ಣಿನ ಸೀಸನ್ ಕೂಡ ಆರಂಭವಾಗುತ್ತದೆ. ಕಲ್ಲಂಗಡಿ ಹಣ್ಣನ್ನು ಹಾಗೇ ತಿನ್ನುವುದಕ್ಕಿಂತ ಇದರಿಂದ ಬಗೆ ಬಗೆ ರೆಸಿಪಿಗಳನ್ನು ತಯಾರಿಸಿ ತಿನ್ನಬಹುದು. ಇದು ಮಕ್ಕಳಿಗೂ ಇಷ್ಟವಾಗೋದು ಖಂಡಿತ.
ಮಾರುಕಟ್ಟೆಯಲ್ಲಿ ಈಗ ಎಲ್ಲಿ ನೋಡಿದರೂ ಕಲ್ಲಂಗಡಿ ಹಣ್ಣಿನದೇ ಕಾರುಬಾರು. ಬಿರು ಬೇಸಿಗೆಯ ದಾಹ ತಣಿಸಲು ಕಲ್ಲಂಗಡಿ ಹಣ್ಣು ಬೆಸ್ಟ್. ಇದನ್ನು ತಿನ್ನುವುದರಿಂದ ದೇಹ ತಂಪಾಗುವುದು ಮಾತ್ರವಲ್ಲ, ಆರೋಗ್ಯಕ್ಕೂ ಸಾಕಷ್ಟು ಪ್ರಯೋಜನಗಳಿವೆ. ಸಿಹಿಯಾದ ಕಲ್ಲಂಗಡಿ ಹಣ್ಣು ತಿನ್ನುತ್ತಿದ್ದರೆ ಆಹಾ ಎನ್ನಿಸುವುದು ಸುಳ್ಳಲ್ಲ. ಆದರೆ ಕೆಲವೊಮ್ಮೆ ಕಲ್ಲಂಗಡಿ ಹಣ್ಣು ಅಷ್ಟೊಂದು ಸಿಹಿ ರುಚಿ ಇರುವುದಿಲ್ಲ, ತಿನ್ನಲು ರುಚಿಸುವುದಿಲ್ಲ. ಅಂತಹ ಸಂದರ್ಭದಲ್ಲಿ ಇದರಿಂದ ರುಚಿ ರುಚಿಯಾದ ಖಾದ್ಯಗಳನ್ನು ತಯಾರಿಸಿ ತಿನ್ನಬಹುದು. ಇದು ದೊಡ್ಡವರಿಂದ ಮಕ್ಕಳವರೆಗೆ ಪ್ರತಿಯೊಬ್ಬರಿಗೂ ಇಷ್ಟವಾಗುವುದರಲ್ಲಿ ಅನುಮಾನವಿಲ್ಲ.
ಕಲ್ಲಂಗಡಿ ಹಣ್ಣಿನ ಜ್ಯೂಸ್
ಇದು ಸರಳವಾಗಿ ಹಾಗೂ ಕಡಿಮೆ ಸಾಮಗ್ರಿಗಳಿಂದ ತಯಾರಿಸಬಹುದಾದ ರೆಸಿಪಿ. ಕಲ್ಲಂಗಡಿ ಹಣ್ಣಿನ ಜ್ಯೂಸ್ ಈ ಬೇಸಿಗೆಗೆ ಹೇಳಿ ಮಾಡಿಸಿದ್ದು, ಇದನ್ನು ಪ್ರತಿನಿತ್ಯ ಕುಡಿಯುವುದೂ ಉತ್ತಮ.
ಬೇಕಾಗುವ ಸಾಮಗ್ರಿಗಳು: ಕಲ್ಲಂಗಡಿ ಹಣ್ಣಿನ ಹೋಳು - 1 ಕಪ್, ಕಾಳುಮೆಣಸು - 2 ರಿಂದ 3, ಉಪ್ಪು ಚಿಟಿಕೆ, ಸಕ್ಕರೆ - 2 ಚಮಚ, ಪುದಿನಾ - 1, ಐಸ್‌ಕ್ಯೂಬ್
ತಯಾರಿಸುವ ವಿಧಾನ: ಐಸ್‌ಕ್ಯೂಬ್ ಹೊರತು ಪಡಿಸಿ ಮೇಲೆ ತಿಳಿಸಿದ ಎಲ್ಲಾ ಸಾಮಗ್ರಿಗಳನ್ನು ಮಿಕ್ಸಿ ಜಾರಿಗೆ ಹಾಕಿ ರುಚಿಕೊಳ್ಳಿ. ನಂತರ ಐಸ್ ಕ್ಯೂಬ್ ಸೇರಿಸಿ ಕುಡಿಯಲು ಕೊಡಿ.
ಕಲ್ಲಂಗಡಿ ಹಣ್ಣಿನ ಕ್ಯಾಂಡಿ
ಬೇಕಾಗುವ ಸಾಮಗ್ರಿಗಳು: ಕಲ್ಲಂಗಡಿ ಹಣ್ಣು - 1 ಕಪ್, ಸಕ್ಕರೆ - 3 ಚಮಚ
ತಯಾರಿಸುವ ವಿಧಾನ: ಕಲ್ಲಂಗಡಿ ಹಣ್ಣಿನ ತಿರುಳಿಗೆ ಸ್ವಲ್ಪ ನೀರು ಹಾಗೂ ಸಕ್ಕರೆ ಸೇರಿಸಿ ನುಣ್ಣಗೆ ರುಬ್ಬಿಕೊಳ್ಳಿ. ರುಬ್ಬುವ ಮೊದಲು ಕಲ್ಲಂಗಡಿ ಬೀಜಗಳನ್ನು ತೆಗೆಯಲು ಮರೆಯಬೇಡಿ. ರುಬ್ಬಿಕೊಂಡ ರಸವನ್ನು ಕ್ಯಾಂಡಿ ಮೇಕರ್ ಆಗಿ ಹಾಕಿ 4 ರಿಂದ 5 ಗಂಟೆಗಳ ಕಾಲ ಫ್ರೀಜರ್‌ನಲ್ಲಿ ಇರಿಸಿದರೆ ರುಚಿಯಾದ ಕಲ್ಲಂಗಡಿ ಕ್ಯಾಂಡಿ ತಿನ್ನಲು ಸಿದ್ಧ. ಕಲ್ಲಂಗಡಿ ಹಣ್ಣು ತಿನ್ನುವುದಿಲ್ಲ ಎನ್ನುವ ಮಕ್ಕಳಿಗೆ ಈ ರೀತಿಯ ಸುಲಭವಾಗಿ ಕ್ಯಾಂಡಿ ಮಾಡಿಕೊಡಬಹುದು.
ಕಲ್ಲಂಗಡಿ ಐಸ್‌ಕ್ರೀಮ್
ಬೇಕಾಗುವ ಸಾಮಗ್ರಿಗಳು: ಸಕ್ಕರೆ - 1ಕಪ್, ನೀರು - 1 ಕಪ್, ನಿಂಬೆರಸ - 2 ಚಮಚ, ತಾಜಾ ಕಲ್ಲಂಗಡಿ ಹಣ್ಣು - 3 ಕಪ್, ಕಿತ್ತಳೆರಸ - 2 ಚಮಚ
ತಯಾರಿಸುವ ವಿಧಾನ: ಪಾತ್ರೆಯೊಂದರಲ್ಲಿ ನೀರು ಹಾಕಿ, ಅದಕ್ಕೆ ಸಕ್ಕರೆ ಸೇರಿಸಿ ಸಕ್ಕರೆ ಪಾಕ ತಯಾರಿಸಿಕೊಳ್ಳಿ. ನಂತರ ಇದಕ್ಕೆ ನಿಂಬೆರಸ ಸೇರಿಸಿ. ಇದನ್ನು ಬೇರೊಂದು ಪಾತ್ರೆಗೆ ಹಾಕಿ, ತಣಿಯಲು ಇಡಿ. ಕಲ್ಲಂಗಡಿ ಹಣ್ಣು ಹಾಗೂ ಕಿತ್ತಳೆ ರಸವನ್ನು ಸೇರಿಸಿ ನುಣ್ಣಗೆ ರುಬ್ಬಿಕೊಳ್ಳಿ. ಈ ಪ್ಯೂರಿಯನ್ನು ರಸ ತೆಗೆದು ಬೇರ್ಪಡಿಸಿ. ಇದನ್ನು ಪಾತ್ರೆಯೊಂದಕ್ಕೆ ಹಾಕಿ 4 ಗಂಟೆಗಳ ಕಾಲ ಫ್ರಿಜ್‌ನಲ್ಲಿಡಿ. ಆಗ ಇದು ಐಸ್‌ನಂತಾಗಿರುತ್ತದೆ. ಇದನ್ನು ಚಮಚ ಅಥವಾ ಫೋರ್ಕ್ ಸಹಾಯದಿಂದಾ ಅಲ್ಲಲ್ಲಿ ಬಿರುಕು ಬರುವಂತೆ ಮಾಡಿ. ಅದರ ಮೇಲೆ ಮೊದಲೇ ತಯಾರಿಸಿಟ್ಟುಕೊಂಡ ಪಾಕ ಸುರಿಯಿರಿ. ಎಲ್ಲ ಕಡೆ ಸಕ್ಕರೆ ಪಾಕ ಹರಡುವಂತೆ ನೋಡಿಕೊಳ್ಳಿ. ಇದನ್ನು ಮತ್ತೆ 6 ರಿಂದ ಗಂಟೆಗಳ ಕಾಲ ಫ್ರಿಜ್‌ನಲ್ಲಿಡಿ. ನಂತರ ಫ್ರಿಜ್‌ನಿಂದ ಹೊರ ತೆಗೆದು 5 ನಿಮಿಷ ಬಿಟ್ಟು ಸ್ಕೂಪ್ ರೀತಿಯಲ್ಲಿ ಕಪ್‌ನಲ್ಲಿ ಹಾಕಿ ತಿನ್ನಲು ಕೊಡಬಹುದು.
ಕಲ್ಲಂಗಡಿ ಹಣ್ಣಿನ ಮೊಜಿಟೊ
ಬೇಕಾಗುವ ಸಾಮಗ್ರಿಗಳು: ಕಲ್ಲಂಗಡಿ ಹಣ್ಣು - ಅರ್ಧ ಕಪ್, ಸೋಡಾ - 1 ಗ್ಲಾಸ್, ನಿಂಬೆಹಣ್ಣು - 1,
ತಯಾರಿಸುವ ವಿಧಾನ: ಪುದಿನಾ ಸೊಪ್ಪನ್ನು ಜಜ್ಜಿಕೊಳ್ಳಿ. ನಂತರ ನಿಂಬೆಹಣ್ಣನ್ನು ಅಗಲ ಹೋಳಾಗಿ ಕತ್ತರಿಸಿಕೊಳ್ಳಿ. ಅದರಿಂದ ಬೀಜ ತೆಗೆದು ನಾಲ್ಕು ಚಿಕ್ಕ ತುಂಡುಗಳಾಗಿ ಮಾಡಿಕೊಳ್ಳಿ. ಈಗ ಕಲ್ಲಂಗಡಿ ಹಣ್ಣನ್ನು ಬೀಜ ತೆಗೆದು ಚಿಕ್ಕದಾಗಿ ಹೆಚ್ಚಿಕೊಂಡು ರುಬ್ಬಿಕೊಳ್ಳಿ. ಒಂದು ಗ್ಲಾಸ್‌ಗೆ ನಿಂಬೆರಸ ಸೇರಿಸಿ. ಅದಕ್ಕೆ 2 ರಿಂದ 3 ಚಮಚ ಸಕ್ಕರೆ, ಚಿಕ್ಕದಾಗಿ ಹೆಚ್ಚಿಕೊಂಡ ಕಲ್ಲಂಗಡಿ ಹಣ್ಣಿನ ತಿರುಳು, ಅಗಲವಾಗಿ ಕತ್ತರಿಸಿಟ್ಟುಕೊಂಡ ಎರಡು ನಿಂಬೆಹೋಳು, ಐಸ್‌ಪೀಸ್ ಹಾಕಿ ರುಬ್ಬಿಕೊಂಡ ಕಲ್ಲಂಗಡಿ ರಸವನ್ನು ಜಾಲರಿ ಹಿಡಿದು ಆ ಗ್ಲಾಸ್‌ಗೆ ಹಾಕಿ. ನಂತರ ಜಜ್ಜಿಕೊಂಡ ಪುದಿನಾ ಸೊಪ್ಪನ್ನು ಸೇರಿಸಿ, ಸೋಡಾ ಸೇರಿಸಿ. ಈಗ ನಿಮ್ಮ ಮುಂದೆ ಕಲ್ಲಂಗಡಿ ಮೊಜಿಟೊ ಕುಡಿಯಲು ಸಿದ್ಧ.
(This copy first appeared in Hindustan Times Kannada website. To read more like this please logon to kannada.hindustantimes.com)