ಮಕ್ಕಳ ಲಂಚ್‌ಬಾಕ್ಸ್‌ಗೆ ಏನು ಪ್ಯಾಕ್ ಮಾಡುವುದು ಅನ್ನೋ ಗೊಂದಲನಾ: ಈ ಪರೋಟ ರೆಸಿಪಿ ಟ್ರೈ ಮಾಡಿ, ಇಷ್ಟಪಟ್ಟು ತಿಂತಾರೆ
ಕನ್ನಡ ಸುದ್ದಿ  /  ಜೀವನಶೈಲಿ  /  ಮಕ್ಕಳ ಲಂಚ್‌ಬಾಕ್ಸ್‌ಗೆ ಏನು ಪ್ಯಾಕ್ ಮಾಡುವುದು ಅನ್ನೋ ಗೊಂದಲನಾ: ಈ ಪರೋಟ ರೆಸಿಪಿ ಟ್ರೈ ಮಾಡಿ, ಇಷ್ಟಪಟ್ಟು ತಿಂತಾರೆ

ಮಕ್ಕಳ ಲಂಚ್‌ಬಾಕ್ಸ್‌ಗೆ ಏನು ಪ್ಯಾಕ್ ಮಾಡುವುದು ಅನ್ನೋ ಗೊಂದಲನಾ: ಈ ಪರೋಟ ರೆಸಿಪಿ ಟ್ರೈ ಮಾಡಿ, ಇಷ್ಟಪಟ್ಟು ತಿಂತಾರೆ

ಬೆಳಗ್ಗೆ ಎದ್ದು ಅಡುಗೆ ಮಾಡಿ ಲಂಚ್ ಬಾಕ್ಸ್ ತುಂಬಿ ಮಕ್ಕಳನ್ನು ಶಾಲೆಗೆ ಕಳುಹಿಸುವಷ್ಟರಲ್ಲಿ ತಾಯಂದಿರು ಸುಸ್ತಾಗಿ ಬಿಡುತ್ತಾರೆ. ಆದರೆ, ಸಂಜೆ ಬರುತ್ತಲೇ ಮಕ್ಕಳ ಲಂಚ್‌ಬಾಕ್ಸ್‌ ಖಾಲಿ ಆಗದಿದ್ದನ್ನು ನೋಡಿ ಚಿಂತೆಗೊಳಗಾಗುವುದು ಸಾಮಾನ್ಯ. ಇನ್ಯಾವ ಊಟ ಕೊಟ್ಟು ಕಳುಹಿಸುವುದು ಅನ್ನೋ ಯೋಚನೆಯಲ್ಲಿದ್ದರೆ, ಇಲ್ಲಿದೆ ಸಿಂಪಲ್ ಪರೋಟ ರೆಸಿಪಿ.

ಮಕ್ಕಳ ಲಂಚ್‌ಬಾಕ್ಸ್‌ಗೆ ಈ ಐದು ಬಗೆಯ ಪರೋಟ ರೆಸಿಪಿ ಪ್ಯಾಕ್ ಮಾಡಿ.
ಮಕ್ಕಳ ಲಂಚ್‌ಬಾಕ್ಸ್‌ಗೆ ಈ ಐದು ಬಗೆಯ ಪರೋಟ ರೆಸಿಪಿ ಪ್ಯಾಕ್ ಮಾಡಿ.

ಮಕ್ಕಳಿಗೆ ಲಂಚ್ ಬಾಕ್ಸ್ ಕೊಟ್ಟು ಕಳುಹಿಸಿದರೆ, ಅದನ್ನು ವಾಪಸ್ ಹಾಗೆಯೇ ತರುತ್ತಾರೆ ಎಂಬ ಚಿಂತೆ ತಾಯಂದಿರಿಗೆ ಕಾಡುವುದು ಸಹಜ. ಮಕ್ಕಳಿಗಾಗಿ ಪ್ರತಿದಿನ ಏನು ಊಟ ಹಾಕಿ ಕಳುಹಿಸುವುದು ಅನ್ನೋ ಯೋಚನೆ ಕಾಡಬಹುದು. ನಿಮ್ಮ ಮಕ್ಕಳಿಗೆ ಆರೋಗ್ಯಕರ ಮತ್ತು ರುಚಿಕರವಾದ ಆಹಾರವನ್ನು ತಯಾರಿಸಿ ಲಂಚ್ ಬಾಕ್ಸ್ ಗೆ ಪ್ಯಾಕ್ ಮಾಡುವುದು ತಾಯಂದಿರ ದೈನಂದಿನ ಸವಾಲು. ಹಾಗಿದ್ದರೆ ವಿಭಿನ್ನವಾಗಿ, ರುಚಿಕರವಾಗಿ ಏನನ್ನು ಬಾಕ್ಸ್ ಗೆ ಕಳುಹಿಸಬಹುದು ಎಂದು ಯೋಚಿಸುತ್ತಿದ್ದರೆ, ಸ್ಟಫ್ಡ್ ಪರೋಟ ಉತ್ತಮ ಆಯ್ಕೆ. ಮಕ್ಕಳು ಇಷ್ಟಪಡುವ ಐದು ಆರೋಗ್ಯಕರ ಸ್ಟಫ್ಡ್ ಪರೋಟ ರೆಸಿಪಿಗಳು ಇಲ್ಲಿವೆ.

ಐದು ಆರೋಗ್ಯಕರ ಸ್ಟಫ್ಡ್ ಪರೋಟ ರೆಸಿಪಿಗಳು

ಆಲೂ ಸ್ಟಫ್ಡ್ ಪರೋಟ: ಆಲೂ ಪರೋಟ ಬಹುತೇಕರ ಅಚ್ಚುಮೆಚ್ಚು. ಮಕ್ಕಳು ಕೂಡ ಇದನ್ನು ಇಷ್ಟಪಟ್ಟು ಸವಿಯುತ್ತಾರೆ. ಈ ರೆಸಿಪಿ ಮಾಡುವುದು ತುಂಬಾನೇ ಸಿಂಪಲ್. ಬೇಯಿಸಿ, ಹಿಸುಕಿದ ಆಲೂಗಡ್ಡೆಗೆ ಜೀರಿಗೆ, ಕೊತ್ತಂಬರಿ ಮತ್ತು ಗರಂ ಮಸಾಲಾಯನ್ನು ಹಾಕಿ ಮಿಕ್ಸ್ ಮಾಡಬೇಕು. ನಂತರ ಚಪಾತಿಗೆ ಸ್ಟಫ್ಡ್ ಮಾಡಿ ತವಾದಲ್ಲಿ ಬೇಯಿಸಿದರೆ ಬಹಳ ಸುಲಭವಾಗಿ ತಯಾರಾಗುತ್ತದೆ ಈ ಖಾದ್ಯ. ಮೊಸರು ಅಥವಾ ಬೆಣ್ಣೆಯೊಂದಿಗೆ ಬಡಿಸಬಹುದು.

ಪನ್ನೀರ್ ಸ್ಟಫ್ಡ್ ಪರೋಟ: ಪನ್ನೀರ್ ಪರೋಟವು ಪ್ರೊಟೀನ್‌ನಿಂದ ತುಂಬಿದ ಪೌಷ್ಟಿಕಾಂಶದ ಆಯ್ಕೆಯಾಗಿದೆ. ಪನ್ನೀರ್ ಗೆ ಜೀರಿಗೆ, ಕೊತ್ತಂಬರಿ ಸೊಪ್ಪು ಮತ್ತು ಚಿಟಿಕೆ ಮೆಣಸಿನ ಪುಡಿಯನ್ನು ಬೆರೆಸಬೇಕು. ಇದು ಬಹಳ ಆರೋಗ್ಯಕರವಾಗಿದ್ದು, ಮಕ್ಕಳು ಖಂಡಿತಾ ಇಷ್ಟಪಟ್ಟು ತಿನ್ನುತ್ತಾರೆ.

ಮಿಶ್ರ ತರಕಾರಿ ಸ್ಟಫ್ಡ್ ಪರೋಟ: ಕ್ಯಾರೆಟ್, ಬಟಾಣಿ, ಹೂಕೋಸು ಮತ್ತು ದೊಣ್ಣೆ ಮೆಣಸಿನಕಾಯಿಯನ್ನು (ನಿಮಗೆ ಇಷ್ಟವಾದ ತರಕಾರಿ) ನುಣ್ಣಗೆ ಕತ್ತರಿಸಿ. ಈ ತರಕಾರಿಗಳು ನಾರಿನಾಂಶ, ವಿಟಮಿನ್‌ಗಳು ಮತ್ತು ಖನಿಜಗಳಲ್ಲಿ ಸಮೃದ್ಧವಾಗಿದೆ. ಕತ್ತರಿಸಿದ ತರಕಾರಿಗಳಿಗೆ ಮಸಾಲೆ, ಉಪ್ಪು ಸೇರಿಸಿ ಮಿಕ್ಸ್ ಮಾಡಿ. ನಂತರ ಚಪಾತಿಯ ಮಧ್ಯಕ್ಕೆ ಹಾಕಿ (ಸ್ಟಫ್ಡ್) ರೋಲ್ ಮಾಡಿ ತವಾದಲ್ಲಿ ಬೇಯಿಸಿ.

ಮೆಂತ್ಯ ಸ್ಟಫ್ಡ್ ಪರೋಟ: ಮೆಂತ್ಯವನ್ನು ನುಣ್ಣಗೆ ಕತ್ತರಿಸಿ ಅದಕ್ಕೆ ಮಸಾಲೆ ಮತ್ತು ಉಪ್ಪನ್ನು ಬೆರೆಸಿ. ಮೆಂತ್ಯ ಸೊಪ್ಪು ಪೌಷ್ಠಿಕಾಂಶಗಳಿಂದ ಸಮೃದ್ಧವಾಗಿದೆ. ಇದು ಜೀರ್ಣಕ್ರಿಯೆ ಮತ್ತು ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುವುದು ಸೇರಿದಂತೆ ಹಲವಾರು ಆರೋಗ್ಯ ಪ್ರಯೋಜನಗಳಿಗೆ ಹೆಸರುವಾಸಿಯಾಗಿದೆ. ಈ ಪರೋಟಾ ಸ್ವಲ್ಪ ಕಹಿ ಇದ್ದಂತೆ ಭಾಸವಾದರೂ, ವಿಭಿನ್ನ ರುಚಿಯನ್ನು ಹೊಂದಿದೆ. ಮೊಸರು ಅಥವಾ ಉಪ್ಪಿನಕಾಯಿಯೊಂದಿಗೆ ಬಡಿಸಬಹುದು.

ದಾಲ್ ಸ್ಟಫ್ಡ್ ಪರೋಟ: ದಾಲ್ (ತೊಗರಿಬೇಳೆ, ಹೆಸರು ಬೇಳೆ ಇತ್ಯಾದಿ) ಅನ್ನು ಬೇಯಿಸಿ, ಇದಕ್ಕೆ ಮಸಾಲೆ ಹಾಗೂ ಉಪ್ಪನ್ನು ಸೇರಿಸಿ ಮಿಕ್ಸ್ ಮಾಡಬೇಕು. ಬಳಿಕ ಚಪಾತಿಯ ಮಧ್ಯಕ್ಕೆ ಹಾಕಿ ರೋಲ್ ಮಾಡಿ ತವಾದಲ್ಲಿ ಬೇಯಿಸಬೇಕು. ಬೇಳೆಗಳಲ್ಲಿ ಪೌಷ್ಠಿಕಾಂಶಗಳಿಂದ ಸಮೃದ್ಧವಾಗಿದ್ದು, ಆರೋಗ್ಯಕ್ಕೆ ಬಹಳ ಪ್ರಯೋಜನಕಾರಿಯಾಗಿದೆ. ರಾಯಿತಾ ಅಥವಾ ಚಟ್ನಿಯೊಂದಿಗೆ ಬಡಿಸಬಹುದು.

ಪರೋಟಗಳನ್ನು ಪ್ಯಾಕಿಂಗ್ ಮಾಡಲು ಸಲಹೆಗಳು

ತಾಜಾವಾಗಿರಲಿ: ಪರೋಟಗಳನ್ನು ಬೆಚ್ಚಗಾಗಿ ಮತ್ತು ತಾಜಾವಾಗಿಡಲು ಫಾಯಿಲ್ ಅಥವಾ ಬಟರ್ ಪೇಪರ್ ನಲ್ಲಿ ಸುತ್ತಿಡಬಹುದು.

ಸೈಡ್ ಡಿಶ್ ಸೇರಿಸಿ: ಸ್ಟಫ್ಡ್ ಪರೋಟದ ಜೊತೆಗೆ ಮೊಸರು, ಹಣ್ಣುಗಳು ಅಥವಾ ಚಟ್ನಿಯನ್ನು ಹಾಕಿ ಕಳುಹಿಸಬಹುದು.

ಮೋಜಿನ ಆಕಾರದಲ್ಲಿ ಕತ್ತರಿಸಿ: ಮಕ್ಕಳಿಗೆ ಇಷ್ಟವಾಗುವಂತೆ ವಿಭಿನ್ನ ಆಕಾರಗಳಲ್ಲಿ ಪರೋಟವನ್ನು ಕತ್ತರಿಸಿ. ಇದಕ್ಕಾಗಿ ಕುಕೀ ಕಟ್ಟರ್‌ಗಳನ್ನು ಬಳಸಬಹುದು. ಇದು ಮಕ್ಕಳಿಗೆ ಆಕರ್ಷಕವಾಗಿ ಕಾಣುತ್ತದೆ. ಹೀಗಾಗಿ ಇಷ್ಟಪಟ್ಟು ತಿನ್ನುತ್ತಾರೆ.

ಈ ಸ್ಟಫ್ಡ್ ಪರೋಟ ರೆಸಿಪಿಗಳೊಂದಿಗೆ, ಟೇಸ್ಟಿ ಮಾತ್ರವಲ್ಲದೆ ಆರೋಗ್ಯಕರವೂ ಆಗಿರುವ ಊಟವನ್ನು ಪ್ಯಾಕ್ ಮಾಡಬಹುದು.

Whats_app_banner